ಟ್ರೋಲಿಂಗ್‌ತಿರುಗುಬಾಣವಾದೀತು ಜೋಕೆ!

ಮಂಗಳವಾರ, ಏಪ್ರಿಲ್ 23, 2019
33 °C
ಬಯಲು ಮಾಡಬಂದವರೇ ಬಟಾಬಯಲಾದಾಗ...!

ಟ್ರೋಲಿಂಗ್‌ತಿರುಗುಬಾಣವಾದೀತು ಜೋಕೆ!

Published:
Updated:
Prajavani

ಇತ್ತೀಚೆಗೊಮ್ಮೆ ಕಚೇರಿಯಲ್ಲಿ ಟ್ವಿಟರ್‌ಗೆ ಲಾಗಿನ್‌ ಆದವಳು, ಒಮ್ಮೆಗೇ ಬೆಚ್ಚಿಬಿದ್ದು ತಕ್ಷಣವೇ ಸ್ಕ್ರೀನ್‌ ಮಿನಿಮೈಸ್‌ ಮಾಡಿದೆ. ಅಪ್ಪಿತಪ್ಪಿ ಯಾವುದಾದರೂ ಪೋರ್ನ್‌ಸೈಟ್‌ಗೆ ಬಂದುಬಿಟ್ಟೆನಾ ಎಂಬ ಸಂದೇಹ ಕಾಡಿತು. ಅಕ್ಕಪಕ್ಕ ಯಾರೂ ಇಲ್ಲದ್ದು ಖಾತ್ರಿಯಾದ ಮೇಲೆ ನಿಟ್ಟುಸಿರುಬಿಡುತ್ತಾ ಮತ್ತೆ ಖಾತೆ ತೆರೆದು ಸೂಕ್ಷ್ಮವಾಗಿ ಗಮನಿಸಿದರೆ, ಸಂದೇಹವೇ ಇಲ್ಲ ಅದು ಟ್ವಿಟರ್‌ ಅಕೌಂಟೇ ಆಗಿತ್ತು. ಆದರೆ ಕರ್ಸರ್‌ ಡೌನ್‌ ಮಾಡುತ್ತಾ ಹೋದಂತೆಲ್ಲಾ ಪರದೆಯುದ್ದಕ್ಕೂ ಪುರುಷ ಜನನಾಂಗದ ಚಿತ್ರಗಳು ಕಣ್ಣಿಗೆ ರಾಚುತ್ತಿದ್ದವು. ಅವು ಟಿ.ವಿ. ವರದಿಗಾರ್ತಿ ಬರ್ಖಾ ದತ್‌ ಅವರಿಗೆ ಅವರ ವಿರೋಧಿಯೊಬ್ಬ ಕಳುಹಿಸಿದ್ದ ಎಚ್ಚರಿಕೆಯ ಸಂದೇಶ ಸಹಿತದ ಚಿತ್ರಗಳಾಗಿದ್ದವು. ಆಕೆಯ ಮರ್ಯಾದೆ ಕಳೆಯುತ್ತೇನೆಂದು ಭಾವಿಸಿ ಅವರಿಗಷ್ಟೇ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ ಆ ಚಿತ್ರಗಳನ್ನು ಬರ್ಖಾ ಟ್ವಿಟರ್‌ ಮೂಲಕ ಜಗಜ್ಜಾಹೀರುಗೊಳಿಸಿ ಅವನ ಮಾನವನ್ನೇ ಹರಾಜು ಹಾಕಿದ್ದರು! ಬರ್ಖಾ ಬೆಂಬಲಾರ್ಥವಾಗಿ ಹಲವರು ಅವನ್ನು ಶೇರ್‌ ಮಾಡಿದ್ದರು!

ಇಲ್ಲಿ ಆತ ಅಂತಹ ಚಿತ್ರಗಳನ್ನು ಬರ್ಖಾಗೆ ಕಳುಹಿಸಿದ್ದರಲ್ಲಿ ಹೊಸದೇನೂ ಇಲ್ಲ. ಇದು ಹಿಂದಿನಿಂದಲೂ ಮಹಿಳೆಯರ ಆತ್ಮಸ್ಥೈರ್ಯ ಕುಗ್ಗಿಸಿ ಅವರ ಬಾಯಿ ಮುಚ್ಚಿಸುವ ಪುರುಷ ಸನ್ನಾಹದ ಮುಂದುವರಿದ ಭಾಗವಷ್ಟೇ. ಆಗ ಪತ್ರಮುಖೇನ, ಹಾದಿಬೀದಿಗಳ ಗೋಡೆಗಳಲ್ಲಿ ಸ್ಥಾನ ಪಡೆಯುತ್ತಿದ್ದ ಅಶ್ಲೀಲ ಪದಗು‌ಚ್ಛಗಳು, ಅಸಭ್ಯ ಚಿತ್ರಗಳು ಈಗ ಅತ್ಯಾಚಾರ– ಜೀವ ಬೆದರಿಕೆ, ಅಶ್ಲೀಲ ಚಿತ್ರಗಳಿಗೆ ಸಂತ್ರಸ್ತೆಯ ಮುಖದ ಚಿತ್ರಗಳ ಮಾರ್ಫಿಂಗ್‌, ಆಕೆಯ ಮನೆ ವಿಳಾಸ, ಮೊಬೈಲ್‌ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವಂತಹ ಕೃತ್ಯಗಳ ಮೂಲಕ ಕಂಪ್ಯೂಟರ್‌/ ಮೊಬೈಲ್‌ ಪರದೆಗಳನ್ನು ಆಕ್ರಮಿಸಿಕೊಂಡಿವೆ ಅಷ್ಟೆ. ಆದರೆ, ತನ್ನ ವಿರುದ್ಧದ ಇಂತಹ ಅಸ್ತ್ರಗಳನ್ನೆಲ್ಲ ನಿಶ್ಶಸ್ತ್ರಗೊಳಿಸಲು ಆಕೆಯೂ ಹತಾರಗಳನ್ನು ಹುರಿಗೊಳಿಸಿಕೊಳ್ಳುತ್ತಿರುವುದು ಮಾತ್ರ ಹೊಸ ಬೆಳವಣಿಗೆ.

ವಿಕೃತರ ಸನ್ನಾಹಕ್ಕೆ ಮಹಿಳೆಯರೇ ಹೆಚ್ಚು ಬಲಿ
ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಾಲ ಬಳಕೆದಾರರಿರುವ ಭಾರತದಲ್ಲಿ ಅತಿ ಹೆಚ್ಚು ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಇಂತಹ ಪಾಲ್ಗೊಳ್ಳುವಿಕೆಯೇ ಆಕೆಗೆ ಮುಳುವಾಗಿದ್ದು, ಅದರಲ್ಲೂ ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊರಗೆಡಹುವ ಮಹಿಳೆಯರಂತೂ ವಿಕೃತ ಮನಸ್ಕರ ಸನ್ನಾಹಕ್ಕೆ ಸುಲಭದ ತುತ್ತಾಗುತ್ತಿದ್ದಾರೆ.

ಪತ್ರಕರ್ತೆ ರಾಣಾ ಅಯೂಬ್‌, ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌, ಎಡಪಂಥೀಯ ವಿಚಾರಧಾರೆಯ ಕವಿತಾ ಕೃಷ್ಣಮೂರ್ತಿ, ನಟಿ ಸ್ವರಾ ಭಾಸ್ಕರ್‌ ಸೇರಿದಂತೆ ಹಲವರು ಇಂತಹ ಕಹಿ ಅನುಭವಿಸಿದವರೇ.

ಮರೀಚಿಕೆಯಾದ ಶಿಸ್ತುಕ್ರಮ
ಸೈಬರ್‌ ಅಪರಾಧಗಳಿಗೆ ತಕ್ಕ ಶಿಕ್ಷೆ ವಿಧಿಸಬಹುದಾದ ಸಮರ್ಥ ಕಾನೂನು ನಮ್ಮಲ್ಲಿ ಇದೆಯಾದರೂ ಅದು ಎಷ್ಟರಮಟ್ಟಿಗೆ ಜಾರಿಯಾಗುತ್ತಿದೆ ಎಂಬುದು ಪ್ರಶ್ನಾರ್ಹ. ಜಾಲತಾಣ ನಿರ್ವಹಿಸುವವರಿಂದಲೂ ಶಿಸ್ತುಕ್ರಮ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದನ್ನು ಹತ್ತಾರು ಸಮೀಕ್ಷೆಗಳು ದೃಢಪಡಿಸಿವೆ. 2016ರಲ್ಲಿ ದೇಶದಲ್ಲಿ 12,000 ಸೈಬರ್‌ ಅಪರಾಧಗಳು ದಾಖಲಾಗಿದ್ದರೆ, ಅದರ ಹಿಂದಿನ ವರ್ಷ ದಾಖಲಾಗಿದ್ದ ಸುಮಾರು ಅಷ್ಟೇ ಪ್ರಮಾಣದ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದುದು ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೊದಿಂದ ಬಹಿರಂಗವಾಗಿತ್ತು.

ಇಂತಹ ಸ್ಥಿತಿಯಲ್ಲಿ, ಕಾನೂನು ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವ ನಿರಂತರ ಪ್ರಯತ್ನಗಳ ಜೊತೆಜೊತೆಗೆ, ವಿಕೃತ ಮನಸ್ಕರ ಬಣ್ಣ ಬಯಲಿಗೆಳೆಯುವ ಮಹಿಳೆಯರ ಪ್ರಯತ್ನಗಳೂ ಅನಿರೀಕ್ಷಿತ ಯಶಸ್ಸು ತಂದುಕೊಡುತ್ತಿವೆ. ಇತ್ತೀಚೆಗಿನ ಮೀಟೂ ಅಭಿಯಾನ ಇದಕ್ಕೊಂದು ತಾಜಾ ಉದಾಹರಣೆ. ಜೊತೆಗೆ, ಈವರೆಗೆ ತೆರೆಮರೆಯಲ್ಲಿ ಇದ್ದುಕೊಂಡೇ ಸಂತ್ರಸ್ತೆಯನ್ನು ಗುರಿ ಮಾಡುತ್ತಿದ್ದವರು ಈಗ ತಮಗರಿವಿಲ್ಲದಂತೆ ತಾವೂ ಅನಾವರಣಗೊಳ್ಳುತ್ತಾ ಇಂತಹ ಅಭಿಯಾನಕ್ಕೆ ‘ಕಾಣಿಕೆ’ ಸಲ್ಲಿಸುತ್ತಿದ್ದಾರೆ!

ಕಳಚಿದ ಮುಖವಾಡ
ರಾಜಕೀಯ ನಂಟಿರುವ ಕನ್ನಡದ ನಟಿಯೊಬ್ಬರ ಸುಂದರವಾದ ಚಿತ್ರವೊಂದು ‘ಕನ್ನಡ ಮೂವೀಸ್‌’ ಹೆಸರಿನಲ್ಲಿ ಕಳೆದ ವಾರ ಫೇಸ್‌ಬುಕ್‌ನಲ್ಲಿ ಪ್ರಕಟವಾಗಿತ್ತು. ಆಕೆಯ ರಾಜಕೀಯ ವಿರೋಧಿಗಳಿಂದ ಅದಕ್ಕೆ ಬಂದ ಪ್ರತಿಕ್ರಿಯೆ ಮಾತ್ರವಲ್ಲ, ಅದನ್ನು ಪೋಸ್ಟ್‌ ಮಾಡಿದ್ದವರ ವಿವರ ಸಹ ಪ್ರಜ್ಞಾವಂತರನ್ನು ದಂಗುಬಡಿಸುವಂತಿದ್ದವು. ಏಕೆಂದರೆ ಆಕೆಯನ್ನು ಅಲ್ಲಿ ತುಚ್ಛವಾಗಿ ನಿಂದಿಸಿದ್ದವರಲ್ಲಿ ಯಾರದೂ ಫೇಕ್‌ ಅಕೌಂಟ್‌ ಆಗಿರಲಿಲ್ಲ. ನಿಜನಾಮಧೇಯದಲ್ಲಿ ತಮ್ಮ ಕುಟುಂಬದವರೊಟ್ಟಿಗೆ ಅಥವಾ ಮನೆ ದೇವರುಗಳ ಎದುರಲ್ಲಿ ನಿಂತ ತಮ್ಮ ಚಿತ್ರಗಳನ್ನು ಹಾಕಿಕೊಂಡಿದ್ದವರೇ ಎಗ್ಗಿಲ್ಲದೆ ಆಕೆಯ ದೇಹಕ್ಕೆ ಬೆಲೆ ಕಟ್ಟಿದ್ದರು, ಬೆಲೆವೆಣ್ಣಿಗೆ ಹೋಲಿಸಿದ್ದರು. ಅವರಲ್ಲಿ ಸಹಾಯಕ ಪ್ರಾಧ್ಯಾಪಕರು, ಎಂಜಿನಿಯರುಗಳು ಎಲ್ಲರೂ ಇದ್ದರು!

ಮೂರ್ನಾಲ್ಕು ವರ್ಷಗಳ ಹಿಂದೆ, ಶೈಕ್ಷಣಿಕ ವಲಯದಲ್ಲಿ ಹೆಸರು ಮಾಡಿದ್ದ, ಪತ್ರಿಕೆಗಳಿಗೆ ಸಾಕಷ್ಟು ಲೇಖನಗಳನ್ನು ಬರೆಯುತ್ತಿದ್ದ ಶಿವಮೊಗ್ಗದ ಯುವ ಉಪನ್ಯಾಸಕರೊಬ್ಬರು, ತಮ್ಮೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಮಹಿಳಾ ಸಹೋದ್ಯೋಗಿಯನ್ನು ಟೀಕಿಸಿ ವೈಯಕ್ತಿಕವಾಗಿ ಕಳುಹಿಸಿದ್ದ ಅಸಭ್ಯ ಸಂದೇಶವನ್ನು ಆಕೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಅಷ್ಟರಮಟ್ಟಿಗೆ ಆ ‘ಜಾಣ’ನನ್ನು ಸಾಮಾಜಿಕವಾಗಿ ಬೆತ್ತಲಾಗಿಸಿದ್ದರು ಆ ಮಹಿಳೆ.

ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಬಯಲು ಮಾಡಲು ಬಂದವನನ್ನೇ ಬಟಾಬಯಲಾಗಿಸುವ ಇಂತಹ ಪ್ರಕರಣಗಳು, ಟ್ರೋಲ್‌ಗೊಳಗಾಗುವ ಇತರ ಮಹಿಳೆಯರಿಗೆ ಮಾನಸಿಕ ಸ್ಥೈರ್ಯ ತಂದುಕೊಡಬಲ್ಲವು. ಇದರ ಜೊತೆಗೆ ಕಾನೂನಿನ ಕುಣಿಕೆಯೂ ಬಿಗಿಗೊಂಡರೆ, ಸಾಮಾಜಿಕ ಜಾಲತಾಣ ಮಹಿಳಾ ಸಬಲೀಕರಣಕ್ಕೆ ಸಮರ್ಥ ವೇದಿಕೆ ಆಗಬಲ್ಲದು.

ಆನ್‌ಲೈನ್‌ ಕಿರುಕುಳ ಅನುಭವಿಸುತ್ತಿದ್ದೀರಾ?

* ಇಂತಹ ಕೃತ್ಯಗಳ ವಿರುದ್ಧ ಆಯಾ ಸಾಮಾಜಿಕ ಜಾಲತಾಣದ ನೀತಿ ಏನು, ಅದರ ತಡೆಗೆ ಆ ಸಂಸ್ಥೆ ನಿಮಗೆ ಮಾಡಿರುವ ಶಿಫಾರಸುಗಳೇನು ಎಂಬು+ದನ್ನು ಮೊದಲು ಗಮನಿಸಿ, ಅವನ್ನು ಪಾಲಿಸಿ.

* ಅದರ ಫಲಿತಾಂಶದಿಂದ ನಿಮಗೆ ಸಮಾಧಾನವಾಗದಿದ್ದರೆ ಅಥವಾ ಸಂಸ್ಥೆಯ ಆಡಳಿತಗಾರರು ಸೂಕ್ತವಾಗಿ ಸ್ಪಂದಿಸದಿದ್ದರೆ ಸ್ಥಳೀಯ ಪೊಲೀಸ್‌ ಠಾಣೆ ಅಥವಾ ಸೈಬರ್‌ ತನಿಖಾ ಘಟಕದಲ್ಲಿ ನೀವು ದೂರನ್ನೂ ಸಲ್ಲಿಸಬಹುದು.

* ಐಪಿಸಿ– 1860 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ– 2000ರ ಪ್ರಕಾರ, ಖಾಸಗಿ ಚಿತ್ರಗಳನ್ನು ನಿಮ್ಮ ಅನುಮತಿ ಇಲ್ಲದೇ ಪೋಸ್ಟ್‌ ಮಾಡುವುದು ಅಪರಾಧ.

* ವೀಕ್ಷಿಸಲು ಇಷ್ಟವಿಲ್ಲದ ಮಹಿಳೆಗೆ ಅಶ್ಲೀಲ ಚಿತ್ರಗಳನ್ನು ತೋರಿಸುವುದು ಲೈಂಗಿಕ ಕಿರುಕುಳ ಎನಿಸಿಕೊಳ್ಳುತ್ತದೆ. ಇದಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದಾಗಿದೆ.

* ಅಸಭ್ಯ ಚಿತ್ರಗಳನ್ನು ಪ್ರಕಟಿಸಿದರೆ ಅಥವಾ ಹಂಚಿಕೊಂಡರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷದವರೆಗೆ ದಂಡ. ಆ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಇಂತಹ ಶಿಕ್ಷೆಗೆ ಒಳಗಾಗಿದ್ದರೆ ಜೈಲು ಶಿಕ್ಷೆಯ ಅವಧಿಯನ್ನು 5 ವರ್ಷಗಳವರೆಗೆ ಹೆಚ್ಚಿಸಬಹುದು ಮತ್ತು ₹ 10 ಲಕ್ಷದವರೆಗೂ ದಂಡ ವಿಧಿಸಬಹುದು.

* ಎಫ್‌ಐಆರ್‌ ದಾಖಲಿಸುವಾಗ ಅಪರಾಧಿಯ ಹೆಸರು ನಿಮಗೆ ತಿಳಿದಿರಲೇಬೇಕೆಂದೇನೂ ಇಲ್ಲ. ಅನಾಮಿಕರ ಬೆದರಿಕೆಗಳನ್ನೂ ನಿರ್ವಹಿಸಲು ಅಗತ್ಯವಾದ ಕಾನೂನು ನಮ್ಮಲ್ಲಿದೆ. 

* ಆನ್‌ಲೈನ್‌ನಲ್ಲಿ ಯಾರಾದರೂ ನಿಮ್ಮ ಬಗ್ಗೆ ನಿಂದನಾರ್ಹ ಭಾಷೆ ಬಳಸಿದ್ದರೆ, ಆ ಬಗೆಯ ಸಂದೇಶಕ್ಕೆ ಇಲ್ಲವೇ ಲೈಂಗಿಕ ದುರುದ್ದೇಶದ ಸಂದೇಶಕ್ಕೆ ನಿಮ್ಮ ಪ್ರೊಫೈಲ್‌ ಚಿತ್ರವನ್ನೇನಾದರೂ ಫೋಟೊಶಾಪ್‌ ಮಾಡಿದ್ದರೆ: ಮೊದಲ ಬಾರಿಯ ಅಪರಾಧಕ್ಕೆ ₹ 5 ಲಕ್ಷದವರೆಗೆ ದಂಡ ಸಹಿತ 3 ವರ್ಷದವರೆಗೆ ಜೈಲು ಶಿಕ್ಷೆ, ಎರಡನೇ ಬಾರಿ ಇಂತಹುದೇ ಅಪರಾಧ ಎಸಗಿದ್ದರೆ ಜೈಲು ಶಿಕ್ಷೆಯನ್ನು 5 ವರ್ಷಗಳವರೆಗೆ ಮತ್ತು ದಂಡದ ಮೊತ್ತವನ್ನು ₹ 10 ಲಕ್ಷದವರೆಗೆ ಹೆಚ್ಚಿಸಲು ಅವಕಾಶ ಇದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !