’ದೀಪಾವಳಿ’ ಟ್ವೀಟ್‌ಗಳಲ್ಲಿ ಹಿಂದೂಗಳನ್ನು ಮರೆತ ಟ್ರಂಪ್‌

7

’ದೀಪಾವಳಿ’ ಟ್ವೀಟ್‌ಗಳಲ್ಲಿ ಹಿಂದೂಗಳನ್ನು ಮರೆತ ಟ್ರಂಪ್‌

Published:
Updated:

ವಾಷಿಂಗ್ಟನ್‌: ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜಗತ್ತಿನಾದ್ಯಂತ ದೀಪಾವಳಿ ಆಚರಿಸುವ ಅತಿ ದೊಡ್ಡ ಸಮುದಾಯವಾದ ಹಿಂದೂಗಳನ್ನು ಪ್ರಸ್ತಾಪಿಸುವುದನ್ನೇ ಮರೆತು ಟ್ವೀಟಿಸಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಟ್ವೀಟಿಗರ ಪ್ರಕಟಣೆ ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದರು. 

ಶ್ವೇತ ಭವನದ ಐತಿಹಾಸಿಕ ಸ್ಥಳವಾದ ರೂಸ್‌ವೆಲ್ಟ್‌ ರೂಮ್‌ನಲ್ಲಿ ಟ್ರಂಪ್‌ ದೀಪಾವಳಿ ಕಾರ್ಯಕ್ರಮ ನಡೆಸಿಕೊಟ್ಟರು. ಭಾರತೀಯ–ಅಮೆರಿಕನ್ನರು, ಭಾರತೀಯ ಮೂಲದ ಆಡಳಿತಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಜಗತ್ತಿನಾದ್ಯಂತ ನವೆಂಬರ್‌ 7ರಂದು ದೀಪಾವಳಿ ಆಚರಿಸಲಾಗಿದೆ. 

ಕಾರ್ಯಕ್ರಮದ ಫೋಟೊಗಳನ್ನು ಪ್ರಕಟಿಸಿ, ಆಚರಣೆಯ ಬಗ್ಗೆ ಹೇಳಿರುವ ಟ್ರಂಪ್; ಬೌದ್ಧರು, ಜೈನರು, ಸಿಖ್ಖರ ಪವಿತ್ರದಿನವೆಂದು ಪ್ರಕಟಿಸಿದ್ದರು. ಅವರ ಮೊದಲ ಟ್ವೀಟ್‌ನಲ್ಲಿ ಹಿಂದೂಗಳಿಗೆ ಶುಭಕೋರುವುದನ್ನು ಮರೆತಿದ್ದರು. ’ಇಂದು ದೀಪಾವಳಿ ಆಚರಣೆಗಾಗಿ ನಾವೆಲ್ಲ ಇಲ್ಲಿ ಸೇರಿದ್ದೆವು. ಅಮೆರಿಕ ಹಾಗೂ ಜಗತ್ತಿನಾದ್ಯಂತ ಬೌದ್ಧರು, ಸಿಖ್ಖರು ಮತ್ತು ಜೈನರು ಪವಿತ್ರದಿನವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಲಕ್ಷಾಂತರ ಜನರು ಕುಟುಂಬ ಸಮೇತರಾಗಿ ಹಾಗೂ ಸ್ನೇಹಿರೊಂದಿಗೆ ಕೂಡಿ ದೀಪಗಳನ್ನು ಹಚ್ಚುತ್ತಾರೆ; ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ’ ಎಂದು ಟ್ವೀಟಿಸಿದ್ದರು. 

ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್‌ ಗಮನಿಸಿದ ಕೂಡಲೇ ಟ್ರಂಪ್‌ ಹಿಂದೂಗಳಿಗೆ ಶುಭಕೋರುವುದನ್ನೇ ಮರೆತಿರುವುದನ್ನು ಪ್ರಸ್ತಾಪಿಸಿದ್ದಾರೆ. ದೀಪಾವಳಿ ಹಿಂದೂಗಳಿಗೆ ಪ್ರಮುಖ ಹಬ್ಬ ಎಂದು ಸಾಕಷ್ಟು ಜನರು ಟ್ವೀಟಿಸಿದ್ದರು. ಈ ಪ್ರಕ್ರಿಯೆಗಳನ್ನು ಕಂಡು ತನ್ನ ಮೊದಲ ಟ್ವೀಟ್‌ ತೆಗೆದು ಮತ್ತೊಂದು ಟ್ವೀಟ್‌ ಪ್ರಕಟಿಸಿದರು. 

ಮತ್ತೆ ಮರೆತರು!

ಎರಡನೇ ಬಾರಿ ಪ್ರಕಟಿಸಿದ ಟ್ವೀಟ್‌ನಲ್ಲೂ ಅದೇ ಸಾಲುಗಳು ಹಾಗೂ ಇಲ್ಲೂ ‘ಹಿಂದೂ’ ಸೇರ್ಪಡೆಯಾಗಲೇ ಇಲ್ಲ. ಈ ಬಗ್ಗೆ ಸಿಎನ್‌ಎನ್‌ ಮಾಧ್ಯಮ ಪ್ರತಿನಿಧಿ ಮನು ರಾಜು ಸಹ ಟ್ವೀಟ್‌ ಹಂಚಿಕೊಂಡಿದ್ದಾರೆ. 

ಸರಿಪಡಿಸಿಕೊಳ್ಳದ ಟ್ರಂಪ್‌ ಟ್ವೀಟ್‌ ಬಗ್ಗೆ ಮತ್ತೆ ಟ್ವೀಟಿಗರು ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಂತೆ ಮೂರನೇ ಟ್ವೀಟ್‌ ಪ್ರಕಟಗೊಂಡಿದೆ. ’ದೀಪಾವಳಿ ಆಚರಣೆಯನ್ನು ಮುಂದೆ ನಿಂತು ನಡೆಸಿಕೊಟ್ಟದ್ದು ನನಗೆ ದೊರೆತ ಗೌರವ, ಹಿಂದೂಗಳ ಬೆಳಕಿನ ಹಬ್ಬ ರೂಸ್ವೆಲ್ಟ್‌ ರೂಮ್‌ನಲ್ಲಿ; ಈ ದಿನ ಮಧ್ಯಾಹ್ನ ಶ್ವೇತಭವನದಲ್ಲಿ...ಬಹಳ ವಿಶೇಷ ಜನರು!’ ಎಂದು ಬರೆದುಕೊಂಡಿದ್ದಾರೆ. 

ದೀಪಾವಳಿ ದಿನ, ನವೆಂಬರ್‌ 7ರಂದು ಟ್ರಂಪ್‌ ಮಾಡಿರುವ ಟ್ವೀಟ್‌ನಲ್ಲಿ ಹಿಂದೂಗಳನ್ನು ಸೇರಿಸಿಯೇ ದೀಪಗಳ ಹಬ್ಬದ ಶುಭಾಶಯಗಳನ್ನು ಕೋರಿದ್ದರು. ಅಧ್ಯಕ್ಷರ ಇವತ್ತಿನ ಸರಣಿ ಟ್ವೀಟ್ ಹಾಗೂ ವ್ಯಕ್ತವಾದ ಟೀಕೆಗಳ ಬಗ್ಗೆ ಶ್ವೇತ ಭವನಕ್ಕೆ ಕೇಳಲಾದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯ ದೊರೆತಿಲ್ಲ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !