ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ಟ್ರಂಪ್ ಆಪ್ತ ಬ್ರೆಟ್ ಆಯ್ಕೆ

7
ವಿವಾದಿತ ವ್ಯಕ್ತಿ ಆಯ್ಕೆಗೆ ಸೆನೆಟ್‌ ಅನುಮೋದನೆ

ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ಟ್ರಂಪ್ ಆಪ್ತ ಬ್ರೆಟ್ ಆಯ್ಕೆ

Published:
Updated:
Deccan Herald

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮನಿರ್ದೇಶನಗೊಂಡು ವಿವಾದಕ್ಕೆ ಕಾರಣವಾಗಿದ್ದ ಬ್ರೆಟ್ ಕನವಾಗ್ ಅವರು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ಶನಿವಾರ ಸಂಜೆ ಅಧಿಕಾರ ಸ್ವೀಕರಿಸಿದರು. ನವೆಂಬರ್ ಮಧ್ಯಭಾಗದಲ್ಲಿ ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳು ನಿಗದಿಯಾಗಿದ್ದು, ಇದನ್ನು ಟ್ರಂಪ್ ಅವರ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ.

ಬ್ರೆಟ್ (53) ಅವರ ಆಯ್ಕೆಗೆ ಸೆನೆಟ್‌ನಲ್ಲಿ ಭಿನ್ನಸ್ವರವಿತ್ತು. 50–48ರ ಅತ್ಯಂತ ನಿಕಟ ಅಂತರದಲ್ಲಿ ಅವರ ಆಯ್ಕೆಯನ್ನು ಸೆನೆಟ್ ಅನುಮೋದಿಸಿತು. 1881ರ ಬಳಿಕ ಕಡಿಮೆ ಅಂತರದ ಮತ ಪಡೆದು ಆಯ್ಕೆಯಾದ ನ್ಯಾಯಾಧೀಶ ಇವರಾಗಿದ್ದಾರೆ.

ಒಂಬತ್ತು ನ್ಯಾಯಾಧೀಶರಿರುವ ಅತ್ಯುನ್ನತ ನ್ಯಾಯಾಲಯದ ಮೇಲೆ ಪಕ್ಷದ ನಿಯಂತ್ರಣ ಸಾಧಿಸಲು ಇವರ ಆಯ್ಕೆ ಇನ್ನಷ್ಟು ಪುಷ್ಠಿ ನೀಡಿದೆ.

ನವೆಂಬರ್ 6ರ ಮಧ್ಯಂತರ ಚುನಾವಣೆ ಪ್ರಚಾರದಲ್ಲಿರುವ ಟ್ರಂಪ್, ಕನ್ಸಾಸ್‌ನಲ್ಲಿ ಬ್ರೆಟ್ ಅವರಿಗೆ ಶುಭಾಶಯ ಕೋರಿದರು. ಲೈಂಗಿಕ ಕಿರುಕುಳ ಆರೋಪದ ಮೇಲೆ ಈ ಹಿಂದೆ ಹಲವು ಬಾರಿ ಬ್ರೆಟ್ ಅವರ ಹೆಸರನ್ನು ಕೈಬಿಡಲಾಗಿತ್ತು. ಈ ಎಲ್ಲ ಆರೋಪಗಳನ್ನು ಬ್ರೆಟ್ ಅಲ್ಲಗಳೆದಿದ್ದರು.

ಕೆಲ ವಾರಗಳ ಹಿಂದಷ್ಟೇ ಮೂವರು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಬಳಿಕ ಬ್ರೆಟ್ ನಾಮನಿರ್ದೇಶನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಒತ್ತಡಕ್ಕೆ ಮಣಿದ ಟ್ರಂಪ್, ಕೊನೆ ಕ್ಷಣದಲ್ಲಿ ಎಫ್‌ಬಿಐ ತನಿಖೆಗೆ ಆದೇಶಿಸಿದ್ದರು.

ಸಂಸದೀಯ ಸಮಿತಿಗೆ ಗುರುವಾರ ವರದಿ ಸಲ್ಲಿಸಿದ್ದ ಎಫ್‌ಬಿಐ, ಬ್ರೆಟ್ ವಿರುದ್ಧ ಗುರುತರ ಆರೋಪಗಳಿಲ್ಲ ಎಂದು ತಿಳಿಸಿತ್ತು. ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದ ಟ್ರಂಪ್, ‘ಬ್ರೆಟ್ ಅವರು ದೀರ್ಘಕಾಲ ಈ ಸ್ಥಾನದಲ್ಲಿ ಇರಲಿದ್ದಾರೆ. ಅವರು ಬುದ್ಧಿವಂತ, ವಿದ್ವಾಂಸ, ಅದ್ಭುತ ವಕೀಲ, ಶ್ರೇಷ್ಠ ವ್ಯಕ್ತಿ’ ಎಂದು ಹಾಡಿ ಹೊಗಳಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !