‘ಸೈಕಲ್‌ ಮಳಿಗೆ’ಯಲ್ಲಿ ವಿದೇಶಿ ಪಿಜಾ ಸವಿ

7

‘ಸೈಕಲ್‌ ಮಳಿಗೆ’ಯಲ್ಲಿ ವಿದೇಶಿ ಪಿಜಾ ಸವಿ

Published:
Updated:

ಆ ಕೆಫೆಯ ಮುಂದಿರುವ ಆಳೆತ್ತರದ ಚಕ್ರ, ಅದರ ಬೆನ್ನಿಗೆ ಬಾಲಂಗೋಚಿಯಂತಹ ಪುಟಾಣಿ ಚಕ್ರ ಹಾದಿಹೋಕರ ಗಮನ ಹಿಡಿದಿಡುತ್ತದೆ. ನುರಿತ ಕಲಾವಿದನ ಕೈಯಲ್ಲಿ ಅರಳಿದ ಇನ್‌ಸ್ಟಾಲೇಶನ್‌ನಂತೆ ಕಾಣುವ, ಸೈಕಲ್‌ನ ಆ ಚಕ್ರಗಳು ಸಹಜವಾಗಿಯೇ ಕೆಫೆಯ ಹೆಸರು ಹುಡುಕುವಂತೆ ಪ್ರೇರೇಪಿಸುತ್ತವೆ. 

ಇಂದಿರಾನಗರದ ಅಪ್ಪಾರೆಡ್ಡಿಪಾಳ್ಯದಲ್ಲಿರುವ ‘ಸೀಕ್ಲೊ ಕೆಫೆ ಬಾರ್’ನ ಬಾಹ್ಯನೋಟವಿದು. ಕೆಫೆಯ ಒಳಗೆ ಬಗೆ ಬಗೆ ಬ್ರ್ಯಾಂಡ್‌ನ ಸೈಕಲ್‌ಗಳು ಗಾಜಿನ ಗೋಡೆಗೆ ನೇತುಬಿದ್ದಿವೆ. ಬಿಡಿಭಾಗ, ಹೆಲ್ಮೆಟ್‌, ಕೈಗವಸು, ಸಾಕ್ಸ್‌ ಹೀಗೆ ವಿವಿಧ ಆಕ್ಸೆಸರಿಗಳ ಮಾರಾಟ ವಿಭಾಗವಿದೆ.

ನಿಮ್ಮ ಊಹೆ ನಿಜ. ‘ಸೀಕ್ಲೊ’, ಸೈಕಲ್‌ ‍ಪರಿಕಲ್ಪನೆಯ ಕೆಫೆ ಹಾಗೂ ಮಾರಾಟ ಮಳಿಗೆ. ಮದ್ಯಪ್ರಿಯರಿಗೆ ಇಲ್ಲಿ ಯಥೇಚ್ಛ ಆಯ್ಕೆಗಳಿರುವ ಕಾರಣ ‘ಬಾರ್’. ಸೈಕಲ್‌ ವ್ಯಾಮೋಹಿಗಳು  ಇಲ್ಲಿ ಆಗಾಗ ಒಟ್ಟುಸೇರುತ್ತಾರೆ, ಸೈಕಲ್‌ ಖರೀದಿ, ರಿಪೇರಿ, ರ‍್ಯಾಲಿ, ಮಾರುಕಟ್ಟೆಗೆ ಬಂದ ಹೊಸ ಮಾದರಿಗಳ ಬಗ್ಗೆ ಚರ್ಚಿಸುತ್ತಾರೆ. ಇದ್ಯಾವುದರ ಅರಿವಿಲ್ಲದೆ, ಹೊರಗಿರುವ ಎರಡು ಚಕ್ರಗಳನ್ನು ನೋಡಿ ಹಾಗೇ ಸುಮ್ಮನೆ ಬಂದವರು ವಿಶಿಷ್ಟ ಸೈಕಲ್‌ಗಳನ್ನು ಕಂಡು ಪುಳಕಿತರಾಗುತ್ತಾರೆ. 

ಈ ಕೆಫೆಯಲ್ಲಿ ರಾತ್ರಿ 12 ಕಳೆದರೂ ಪಿಜಾಪ್ರಿಯರ ಗದ್ದಲ. ಹಂಗೇರಿ, ಜಪಾನ್‌, ಟರ್ಕಿ ಮತ್ತು ಇಟಾಲಿ ಶೈಲಿಯ ಪಿಜಾಗಳ ಉತ್ಸವ ನಡೆದಿರುವುದು ಇದಕ್ಕೆ ಕಾರಣ. ಅಲ್ಲಿನ ಪಿಜಾಗಳಿಗೆ ಇಲ್ಲಿನ ಗ್ರಾಹಕರ ಬಾಯಿಚಪಲಕ್ಕೆ ಒಗ್ಗುವಂತೆ ‘ಸೀಕ್ಲೊ’ ಸ್ವಾದ ನೀಡುತ್ತಾರೆ, ಶೆಫ್‌ ಮೃಣ್ಮಯ್.

ನಾನು ಮತ್ತು ಇಬ್ಬರು ಸ್ನೇಹಿತರು ಬೋನ್‌ಲೆಸ್‌ ಚಿಕನ್‌ ವಿಂಗ್ಸ್‌, ಗ್ರಿಲ್ಡ್‌ ಜಾಕೂನ್‌ ಚಿಕನ್‌, ಹಂಗೇರಿಯನ್‌ ಲಾಂಗೊಸ್‌ ಪಿಜಾ ಮತ್ತು ಜಪಾನೀಸ್‌ ಒಕೊನೊಮಿಯಾಕಿ ಪಿಜಾ, ಮಾಕ್‌ಟೇಲ್‌ ಮತ್ತು ಎರಡು ಡೆಸರ್ಟ್‌ಗಳನ್ನು ಹಂಚಿ ತಿಂದೆವು.

ಮೂಳೆ ಇಲ್ಲದ ಕೋಳಿ ರೆಕ್ಕೆ

ಊಟದ ಶುಭಾರಂಭಕ್ಕೆ (ಸ್ಟಾರ್ಟರ್‌) ಏನು ತಗೋತೀರಿ ಅಂದ ವೇಟರ್ ಆ್ಯಂಡ್ರಿಯನ್‌, ಬೋನ್‌ಲೆಸ್‌ ಚಿಕನ್‌ ವಿಂಗ್ಸ್‌ ಮತ್ತು ಗ್ರಿಲ್ಡ್‌ ಜಾಕೂನ್‌ ಚಿಕನ್‌ ಸಖತ್ತಾಗಿರುತ್ತದೆ ಅಂದರು. 10 ನಿಮಿಷ ಬಿಟ್ಟು ತಂದಿಟ್ಟರು. ಖಾರ, ಹುಳಿ ಮತ್ತು ಸ್ವಲ್ಪ ಸಿಹಿಯಾಗಿತ್ತು. ಖಾರದ್ದು ಮೇಲುಗೈ. 

ಹರಿತವಾದ ಚಾಕುವಿನಿಂದ ನಾಜೂಕಾಗಿ ಮೂಳೆಯಿಂದ ಬೇರ್ಪಡಿಸಿದ ಡೆಬನ್‌ ಶೈಲಿಯ ಕೋಳಿ ಮಾಂಸವನ್ನು ಬಾರ್ಬೆಕ್ಯೂ ಸಾಸ್‌, ಬ್ರೌನ್‌ ಸುಗರ್‌, ಸಾಸಿವೆ ಪುಡಿ ಮತ್ತು ಶುಂಠಿ ಪೇಸ್ಟ್‌ ಹಚ್ಚಿ ನೆನೆಯಲು ಬಿಡುತ್ತಾರೆ. ಆಮೇಲೆ ಅದನ್ನು ತವಾದಲ್ಲಿ ಬೇಯಿಸಿ ಒಂದಿಂಚು ಚೌಕಾಕಾರದಲ್ಲಿ ಕತ್ತರಿಸಿ ಸ್ವಲ್ಪ ಗ್ರೇವಿ ಇರುವಂತೆಯೇ ಉಣಬಡಿಸುತ್ತಾರೆ. ಅಲಂಕಾರಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಕೋಡು. ಬಾಯಿಗಿಡುತ್ತಿದ್ದಂತೆ ಖಡಕ್‌ ಮಸಾಲೆ ಪಂಚೇಂದ್ರಿಯಗಳನ್ನೂ ಜಾಗೃತಗೊಳಿಸುತ್ತದೆ. 


ಗ್ರಿಲ್ಡ್ ಕಾಜೂನ್‌ ಚಿಕನ್‌

ಕಾಜೂನ್‌ ಚಿಕನ್‌ ಸಲಾಡ್‌
ಮೆಣಸಿನ ಪುಡಿ, ಚಿಗುರೆಲೆಯುಳ್ಳ ಮೆಕ್ಸಿಕನ್‌ ಸೋಂಪು, ನಿಂಬೆ ರಸ, ಬೆಳ್ಳುಳ್ಳಿ ಪೇಸ್ಟ್‌, ಕತ್ತರಿಸಿ ಹಸಿ ಮೆಣಸು, ಸೆಲರಿ ದಂಟು ಮತ್ತು ಕಾರ್ನ್‌ಫ್ಲೋರ್‌, ಉಪ್ಪಿನ ಮಿಶ್ರಣದಲ್ಲಿ ನೆನೆಸಿಟ್ಟ ಕೋಳಿ ಮಾಂಸ. ಈ ಮಸಾಲೆಯನ್ನು ಕಾಜೂನ್‌ ಮಸಾಲೆ ಎಂದು ಕರೆಯುತ್ತಾರೆ. ‘ಡೆಬನ್‌ ಶೈಲಿಯಲ್ಲಿಯೇ ಮೂಳೆ ಬಿಡಿಸಿ ಚೌಕಾಕಾರವಾಗಿ ಕತ್ತರಿಸಿದ ಕೋಳಿ ಮಾಂಸ ಚೆನ್ನಾಗಿ ಮಸಾಲೆ ಹೀರಿಕೊಂಡ ನಂತರ ಗ್ರಿಲ್‌ ಮಾಡುತ್ತೇವೆ’ ಎಂದು ವಿವರಿಸಿದರು ಆ್ಯಂಡ್ರಿಯನ್‌.

ಕಾಜೂನ್‌ ಚಿಕನ್ ತುಂಡುಗಳ ಮೇಲೆ ಹೆಚ್ಚಿದ ಸೆಲರಿಯಿಂದಲೇ ಅಲಂಕಾರ ಮಾದ್ದರು. ರುಚಿಯಲ್ಲಿ ಚಿಕನ್‌ ವಿಂಗ್ಸ್‌ಗಿಂತಲೂ ಒಂದು ತೂಕ ಹೆಚ್ಚು ಎನ್ನುವಂತಿತ್ತು. ಈ ಎರಡೂ ಸ್ಟಾರ್ಟರ್‌ಗಳ ಖಾರಕ್ಕೆ ನಾಲಿಗೆಯಲ್ಲಿ ಚುರ್‌ ಅಂತ ಜೊಲ್ಲುರಸ ಸುರಿಯುತ್ತಲೇ ಇತ್ತು. ಹಾಗಾಗಿ, ತಮೀನಾಳ ಸಲಹೆಯಂತೆ ಮಾಕ್‌ಟೇಲ್‌ ಕುಡಿದು ನಾಲಿಗೆಯನ್ನು ಸಂತೈಸಬೇಕಾಯಿತು.

ಕಲ್ಲಂಗಡಿ ಹಣ್ಣಿನ ತಿರುಳಿನ ರಸಕ್ಕೆ ತುಳಸಿ ರಸ ಬೆರೆಸಿ ‘ವಾಟರ್‌ಮೆಲನ್‌ ಆ್ಯಂಡ್‌ ಬೇಸಿಲ್‌ ಬ್ರಾಂಬಲ್‌’ ಎಂದು ಹೆಸರಿಟ್ಟಿದ್ದರು. ಇದರ ಬೆಲೆ ₹230! ನನ್ನ ಸ್ನೇಹಿತರು, ‘ಪೊಮ್ಮ ಡ್ರಾಮ’ ಎಂಬ ಹೆಸರಿಗೆ ಫಿದಾ ಆಗಿದ್ದರು. ಅದು ದಾಳಿಂಬೆ ಹಣ್ಣಿನ ರಸ. ಪುದೀನಾ ಸೊಪ್ಪು ಮತ್ತು ನಿಂಬೆ ರಸ ಬೆರೆಸಿ ಪುದೀನಾ ಸೊಪ್ಪಿನಿಂದ ಅಲಂಕರಿಸಿ ಕೊಟ್ಟಿದ್ದರು.

ಮುಂದಿನ ಸರದಿ ಹಂಗೇರಿಯನ್‌ ಲಾಂಗೊಸ್‌ ಪಿಜಾದ್ದು. ಪಿಜಾದ ಬೇಸ್‌ಗೆ ಸಾಮಾನ್ಯವಾಗಿ ಮೈದಾದ್ದಾಗಿರುತ್ತದೆ. ಆದರೆ ಇಲ್ಲಿ ಇಡೀ ಗೋಧಿಯ ಹಿಟ್ಟು ಬಳಸಿ ಪಿಜಾವನ್ನೂ ಆರೋಗ್ಯಕರವಾಗಿಸುವ ಪ್ರಯತ್ನ ಮಾಡಿದ್ದಾರೆ. ರೋಸ್ಟ್‌ ಆದ ಬೇಸ್‌ನ ಮೇಲೆ ಗಾರ್ಲಿಕ್‌ ಬಟರ್‌, ಹುಳಿಮಿಶ್ರಿತ ಕ್ರೀಮ್‌, ಚೀಸ್‌ ಮತ್ತು ಕಾಜೂನ್‌ ಚಿಕನ್‌ ತುಣುಕುಗಳು ಸೇರಿ ಅತ್ಯುತ್ತಮ ರುಚಿ ನೀಡುತ್ತದೆ. ಹಂದಿ ಮಾಂಸ, ಸಿಗಡಿ ಮತ್ತು ಎಳೆಗರುವಿನ ಮಾಂಸದ ಕಾಂಬಿನೇಶನ್‌ ಕೂಡಾ ಲಭ್ಯ. ಸಸ್ಯಾಹಾರಿಗಳಿಗೆ ಇದೇ ಪಿಜಾವನ್ನು ಬೇರೆ ಬೇರೆ ತರಕಾರಿಗಳಿಂದ ಅಲಂಕರಿಸಿ ಕೊಡುತ್ತಾರೆ.

ಜಪಾನೀಸ್‌ ಪಿಜಾದಲ್ಲಿ ಇಂಡಿಯನ್‌ ಮತ್ತು ಜಪಾನಿ ಕ್ಯಾಬೇಜ್‌, ಈರುಳ್ಳಿ ಕೋಡು ಮತ್ತು ಚಿಕನ್‌ ಮಾಂಸದ ತುಣುಕು ಪ್ರಮುಖ ಹೂರಣ. ಸಿಗಡಿ, ಹಂದಿ, ಎಳೆಗರುವಿನ ಮಾಂಸದ ಕಾಂಬಿನೇಷನ್‌
ಕೂಡಾ ಇದೆ.

ಮಧ್ಯಾಹ್ನವಾಗುತ್ತಿದ್ದಂತೆ ‘ಸೀಕ್ಲೊ ಕೆಫೆ ಬಾರ್‌’ ಕಾರ್ಪೊರೇಟ್‌ ಸಿಬ್ಬಂದಿಯಿಂದ ತುಂಬಿಕೊಂಡಿತು. ಪಿಜಾ ಫೆಸ್ಟಿವಲ್‌ ನಡೆದಿರುವ ಕಾರಣ ಈಗ ಬಹುತೇಕ ಗ್ರಾಹಕರ ಆಯ್ಕೆ ಅದುವೇ ಆಗಿತ್ತು. ಇತರ ದಿನಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ ಹಲವು ವಿಧದ ಚಾಟ್‌ಗಳು ಹಾಗೂ ಖಾದ್ಯಗಳು ಇಲ್ಲಿ ಸಿಗುತ್ತವೆ. 


ಕಾಜೂನ್‌

ಡೆಸರ್ಟ್‌ಗೆ ವ್ಹಾವ್‌ ಅನ್ನಲೇಬೇಕು
‘ಇಲ್ಲಿ ಡೆಸರ್ಟ್‌ ಸವಿಯಲೆಂದೇ ವಾರದಲ್ಲಿ ಎರಡು ಬಾರಿಯಾದರೂ ಬರುತ್ತೇನೆ’ ಎಂದ ತಮೀನಾ  ವೇಟರ್‌ ಆ್ಯಂಡ್ರಿಯನ್‌  ತನ್ನಿಷ್ಟದ ಎರಡು ಡೆಸರ್ಟ್‌ ತರುವಂತೆ ಹೇಳಿದಳು.

ಒಂದು ಪುಡಿಂಗ್. ಬೂದು ಮತ್ತು ಬಿಳಿ ಬಣ್ಣದ ಸೆರಾಮಿಕ್‌ ತಟ್ಟೆಯನ್ನು ಮಾವಿನ ಹಣ್ಣಿನ ತಿರುಳಿನ ಮೇಲೆ ಕವುಚಿ ಹಾಕಿದಂತಿತ್ತು. ನೆನೆದ ಕಾಮಕಸ್ತೂರಿಯಂತಹ ಬೀಜಮಾಲೆ ಪುಡಿಂಗ್‌ನ ಒಟ್ಟು ವರ್ಣ ಸಂಯೋಜನೆಯನ್ನು ಇಮ್ಮಡಿಗೊಳಿಸಿತ್ತು. ಮೊದಲ ತುತ್ತು ಬಾಯಿಗಿಟ್ಟರೆ ನಾನೇ ಕರಗಿಹೋದ ಭಾವ! ನಾನು ಹೆಚ್ಚು ಹೇಳುವುದಕ್ಕಿಂತ ಅದನ್ನು ನೀವೇ ಸವಿದು ಅಹುದು ಅನ್ನುವುದು ಸೂಕ್ತ.

ಎರಡನೆಯ ಡೆಸರ್ಟ್‌ ಚಾಕೊಲೇಟ್‌ ಕೇಕ್‌ ವಿತ್‌ ಬೆಲ್ಲ! ಪುಡಿಂಗ್ ತಿಂದ ರಸಾನುಭವದ ಮುಂದೆ ಈ ಕೇಕ್‌ ಸಪ್ಪೆ ಎನಿಸುತ್ತದೆ. ಕೇಕ್‌ನ ಕೊನೆಯಲ್ಲಿ ಬೆಲ್ಲದ ಪಾಕದಿಂದ ಬಿಡಿಸಿದ್ದ ಸುಂದರ ಬಳೆಯೇ ಆ ಕೇಕ್‌ನ ಆಕರ್ಷಣೆಯಾಗಿತ್ತು. ಪುಡಿಂಗ್‌ ಸವಿಯದೇ ಇದ್ದಿದ್ದರೆ ಈ ಕೇಕ್‌ ಇಷ್ಟವಾಗುತ್ತಿತ್ತೇನೋ.

ಸೈಕಲ್‌ ವ್ಯಾಮೋಹಕ್ಕಾಗಿ...
‘ಸೈಕಲ್‌ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ಆರಂಭವಾಗಿರುವ ಭಾರತದ ಮೊದಲ ಕೆಫೆ ‘ಸೀಕ್ಲೊ’. ಚೆನ್ನೈ ಮತ್ತು ಹೈದರಾಬಾದ್‌ನ ನಂತರ ಬೆಂಗಳೂರಿನಲ್ಲಿ ಕೆಫೆ ತೆರೆದಿದ್ದೇನೆ. ನಾನು ದೂರದೂರುಗಳಿಗೆ ರ‍್ಯಾಲಿ ಹೋಗುತ್ತಿರುತ್ತೇನೆ. ಸೈಕ್ಲಿಂಗ್‌ನ್ನು ಗಂಭೀರವಾಗಿ ಪರಿಗಣಿಸಿರುವವರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸಿಗುತ್ತಾರೆ. ಸೈಕ್ಲಿಸ್ಟ್‌ ಅಲ್ಲದ ಗ್ರಾಹಕರೂ ದೊಡ್ಡ ಪ್ರಮಾಣದಲ್ಲಿ ನಮ್ಮಲ್ಲಿ ಬರುತ್ತಾರೆ. ಆರೋಗ್ಯಕರವಾದ ಆಹಾರ ಪೂರೈಸುವುದು ನಮ್ಮ ಧ್ಯೇಯ. ಈಗ ನಡೆದಿರುವ ಪಿಜಾ ಫೆಸ್ಟಿವಲ್‌ ನಂಬಲಸಾಧ್ಯವಾದ ರೀತಿಯಲ್ಲಿ ಯಶಸ್ಸಿಯಾಗುತ್ತಿದೆ.

–ಆಕಾಶ್ ತಾಡಾನಿ, ಮಾಲೀಕರು, ಸೀಕ್ಲೊ ಕೆಫೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !