ತುಳಜಾಪುರದತ್ತ ಭಕ್ತರ ಚಿತ್ತ; ತುಳಜಾ ಭವಾನಿ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ..!

7
ನಿತ್ಯವೂ ತಂಡೋಪ ತಂಡವಾಗಿ ಭೇಟಿ

ತುಳಜಾಪುರದತ್ತ ಭಕ್ತರ ಚಿತ್ತ; ತುಳಜಾ ಭವಾನಿ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ..!

Published:
Updated:
Deccan Herald

ತುಳಜಾಪುರ: ಶಕ್ತಿ ಪೀಠ ಎಂದೇ ಹೆಸರಾದ ತುಳಜಾಪುರದ ತುಳಜಾ ಭವಾನಿ (ಅಂಬಾ ಭವಾನಿ) ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಭ್ರಮ ಮನೆ ಮಾಡಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳ ಭಕ್ತರು, ದೇವಿ ದರ್ಶನಕ್ಕೆ ತಂಡೋಪ ತಂಡವಾಗಿ ಭೇಟಿ ನೀಡುತ್ತಿದ್ದಾರೆ.

ಬುಧವಾರದಿಂದ ನವರಾತ್ರಿಯು ಆರಂಭಗೊಂಡಿದ್ದು, ಎರಡನೇ ದಿನವಾದ ಗುರುವಾರ ನಸುಕಿನಿಂದಲೇ ದೇವಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಿತ್ತು. ಶುಕ್ರವಾರವಂತೂ ಕಿಕ್ಕಿರಿದ ಜನಸಂದಣಿ. ಈ ಒಂಭತ್ತು ದಿನಗಳಲ್ಲಿ ಕನಿಷ್ಠ ೫ ಲಕ್ಷ ಜನ ದರ್ಶನ ಪಡೆಯುವ ನಿರೀಕ್ಷೆಯಿದೆ.

ತುಳಜಾಪುರ ಬೆಟ್ಟ ಹತ್ತುವ ಮೊದಲೇ ಎಲ್ಲಾ ವಾಹನಗಳನ್ನು ಪ್ರತ್ಯೇಕವಾಗಿ ದಾರಿ ಮಾಡಿ, ಬೇರೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನ ಒಂದು ಕಿ.ಮೀ. ದೂರವಿದೆ ಎಂಬಲ್ಲೇ ವಾಹನ ಸಂಚಾರ ನಿಷೇಧಿಸಲಾಗಿದೆ. ಎಲ್ಲರೂ ನಡೆದೇ ಅಂಬಾಭವಾನಿಯ ದರ್ಶನಕ್ಕೆ ತೆರಳಬೇಕಿದೆ.

ಪ್ರತ್ಯೇಕ ಕೌಂಟರ್

ದೇವಸ್ಥಾನದ ಹಿಂಭಾಗ ಸುಮಾರು ಅರ್ಧ ಕಿ.ಮೀ. ಹಿಂದೆ ಹೊಸದಾಗಿ ತಾತ್ಕಾಲಿಕ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಅಲ್ಲಿಯೇ ಕ್ಲಾಕ್ ರೂಂ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಧರ್ಮ ದರ್ಶನ, ಮುಖ ದರ್ಶನ ಹಾಗೂ ಪೇಯ್ಡ್‌ ದರ್ಶನ ಎಂಬ ಮೂರು ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಧರ್ಮ ಹಾಗೂ ಮುಖ ದರ್ಶನಕ್ಕೆ ಯಾವುದೇ ಶುಲ್ಕವಿಲ್ಲ. ಆದರೆ ಪೇಯ್ಡ್‌ ದರ್ಶನಕ್ಕೆ ಪ್ರತಿಯೊಬ್ಬರಿಗೆ ₨ ೩೦೦ ನಿಗದಿಪಡಿಸಿದ್ದಾರೆ. ಪೊಲೀಸರ ತಪಾಸಣೆ ಕಟ್ಟುನಿಟ್ಟಾಗಿದೆ. ಪ್ರತಿಯೊಬ್ಬ ಭಕ್ತರ ಫೋಟೋ ತೆಗೆದು ದರ್ಶನ ಪ್ರವೇಶಪತ್ರ ನೀಡಲಾಗುತ್ತದೆ. ಅದಕ್ಕೆ ಕೋಡ್ ಮಾಡಲಾಗಿರುತ್ತದೆ. ನಂತರ ದೇವಸ್ಥಾನದ ಒಳ ಬಾಜು ಪ್ರತಿ ಪ್ರವೇಶ ಪತ್ರದ ಪರಿಶೀಲನೆ ನಡೆಯಲಿದೆ. ನಂತರವಷ್ಟೇ ದರ್ಶನ ಭಾಗ್ಯ ದೊರೆಯುತ್ತದೆ.

ಪೇಯ್ಡ್‌ ದರ್ಶನ ಹಾಗೂ ಅಭಿ಼ಷೇಕ ಸಲ್ಲಿಸುವವರಿಗೆ ಒಂದೇ ಸಾಲು ಕಲ್ಪಿಸಲಾಗಿದ್ದು, ನೇರವಾಗಿ ದೇವಸ್ಥಾನದ ದೇವಿ ಮೂರ್ತಿಯ ಸನಿಹದಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಧರ್ಮ ದರ್ಶನಕ್ಕೆ ಕನಿಷ್ಠ ಎರಡೂವರೆ ತಾಸು ಸರದಿ ಸಾಲಿನಲ್ಲಿ ನಿಲ್ಲಬೇಕು.

ನಾನಾ ಕಡೆ ವೈದ್ಯಕೀಯ ತಂಡವಿದ್ದು, ಉಚಿತ ಚಿಕಿತ್ಸೆ ದಿನದ ೨೪ ಗಂಟೆಯೂ ಲಭ್ಯವಿದೆ. ವಿವಿಧೆಡೆ ಮಾರ್ಗದರ್ಶಿ ಕೌಂಟರ್ ತೆರೆಯಲಾಗಿದೆ. ಮೊದಲಿದ್ದ ಗೋಮುಖದಿಂದ ನೀರು ಬೀಳುವ ಕಡೆ ಪ್ರವೇಶ ನಿಷೇಧಿಸಿದ್ದಾರೆ. ಇದೆಲ್ಲ ತಾತ್ಕಾಲಿಕ ವ್ಯವಸ್ಥೆ. ಮುಖ್ಯ ಪ್ರವೇಶದ್ವಾರದಿಂದಲೂ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಬಿಗಿ ಪೊಲೀಸ್ ಪಹರೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !