ತುಂಗಭದ್ರೆ ಬರೆದ ದೃಶ್ಯ ಕಾವ್ಯ..

ಶನಿವಾರ, ಮಾರ್ಚ್ 23, 2019
28 °C

ತುಂಗಭದ್ರೆ ಬರೆದ ದೃಶ್ಯ ಕಾವ್ಯ..

Published:
Updated:
Prajavani

ಅಬ್ಬಾ ಸುಳಿಗಳೇನು, ವಕ್ರಗಳೇನು, ಚಿಕ್ಕ ಮಗು ಬಿಡಿಸಿದ ಚಿತ್ರದಂತೆ ನೀರಿನ ಸೆಳೆತಕ್ಕೆ ಕೊರೆದ ಕಲ್ಲುಗಳು ಮೂಡಿಸುವ ಈ ದೃಶ್ಯ ಕಾವ್ಯ ಅಚ್ಚರಿ ಜೊತೆಗೆ ಪ್ರಕೃತಿಯ ವೈವಿಧ್ಯಕ್ಕೆ ಬೆರಗಾಗದವರೇ ಇಲ್ಲ.

ಬೇರೆ ಬೇರೆ ನದಿಗಳಿಗಿಂತ ತುಂಗಭದ್ರೆ ಅತ್ಯಂತ ವಿಶಿಷ್ಟ ಎಂಬ ಮಾತು ಹಂಪಿ, ಕಮಲಾಪುರ, ಸಣಾಪುರ, ಆನೆಗೊಪಂದಿ, ಕಡ್ಡಿರಾಂಪುರ, ವಿರೂಪಾಪುರ ಗಡ್ಡೆಯನ್ನು ನೋಡಿದವರಿಗೆ ಗೊತ್ತಾಗುತ್ತದೆ. ಏಕೆ ಇಷ್ಟೊಂದು ವಿದೇಶಿ ಪ್ರವಾಸಿಗರು ಸಂತೆಯಲ್ಲಿ ಸುತ್ತು ಹಾಕಿದ ಹಾಗೆ ಸುತ್ತುತ್ತಾರೆ ಎಂಬ ಪ್ರಶ್ನೆಗೆ ತುಂಗಭದ್ರೆಯೇ ಉತ್ತರ ನೀಡುತ್ತಾಳೆ.

ನದಿಮೂಲ, ಋಷಿ ಮೂಲ ಯಾರೂ ಕಂಡು ಹಿಡಿಯಲಾರದು ಎಂಬ ಮಾತಿಗೆ ಈ ನದಿಯೇ ಸಾಕ್ಷಿ. ನೆಲ ಕಾಣುವಷ್ಟು ನೀರು ಇದೆ ಎಂದರೆ ಸುಳಿ ಇರುತ್ತೆ. ಸುಳಿ ಇದೆ ಎಂದರೆ ಕಂದಕ ಇರುತ್ತೆ. ಜಲದ ಅಡಿ ಗವಿಯೇ ಇದೆ. ಎಂತಹ ಧೈರ್ಯಶಾಲಿ ಈಜುಗಾರರಿಗೂ ಈ ನದಿ ಭಯ ಹುಟ್ಟಿಸುತ್ತದೆ.

ಶತಮಾನಗಳಿಂದ ಜಲಪಾತದಂತೆ ಹರಿಯುವ ಈ ನದಿ ಗಂಗಾವತಿ ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿ ಕಲ್ಲುಗಳಲ್ಲಿ ಅನೇಕ ದೃಶ್ಯಗಳನ್ನು ಚಿತ್ರಿಸಿದೆ. 21 ಅಡಿ ಆಳದ ಕಂದಕದಲ್ಲಿ ನೀರು ಹರಿಯುತ್ತದೆ. ತೆಪ್ಪಗಳು 1 ಕಿ.ಮೀ ಸಾಗುವಷ್ಟು ಮಾತ್ರ ಈ ಕಂದಕ ಇದೆ. ಇದರ ಎಡ, ಬಲ ಹಿಮಾಲಯ ಪರ್ವತಕ್ಕೆ ಮಂಜು ಹೊದ್ದಂತೆ ಕಾಣುವ ದೃಶ್ಯ ನಯನ ಮನೋಹರ.

ಕಲ್ಲಿನಲ್ಲಿ ಗಣೇಶ, ಲಿಂಗ, ಪಿರಾಮಿಡ್ ಮಮ್ಮಿ ಆಕಾರ, ಸಣ್ಣ, ಸಣ್ಣ ಜಲಪಾತಗಳು ನಿಸರ್ಗದ ಚಿತ್ತಾರಕ್ಕೆ ಕಳಸ ಇಟ್ಟಂತೆ ಪ್ರವಾಸಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಸ್ಥಳೀಯರ ನೆರವಿನಿಂದ ಸಣಾಪುರ ಭಾಗದಲ್ಲಿ ಅಲೆದಾಡಿದರೆ ಅನೇಕ ನಿಗೂಢ. ಒಮ್ಮೊಮ್ಮೆ ಅಮೇಜಾನ್ ನದಿಯನ್ನು ನೆನಪಿಸುತ್ತದೆ ಎಂಬುವುದೇನೂ ಉತ್ಪ್ರೇಕ್ಷೆಯಲ್ಲ ಎನ್ನಿಸುತ್ತದೆ. . 

ಮೇಲಿನಿಂದ ನೋಡಿದರೆ ಬಾವಿಯ ಹಾಗೆ ಕಾಣುವ ಕುಳಿ, ಕೆಳಗೆ ಇಳಿದರೆ, ನದಿಯತ್ತ ಮುಖ ಮಾಡಿರುವ ಬಾಗಿಲು, ನೀರಿನ ತಟದಲ್ಲಿ ಕಾಲಿಟ್ಟರೆ ಜಾರಿ ಬೀಳುವಷ್ಟು ನುಣಪಾದ ಕಲ್ಲುಗಳು, ದಂಡೆಯ ಉದ್ದಕ್ಕೂ ಅಕ್ವೇರಿಯಂಗೆ ಹಾಕುವ ಬಣ್ಣ, ಬಣ್ಣದ ವಿವಿಧ ಆಕಾರದ ಕಲ್ಲುಗಳು ಗಮನಸೆಳೆಯುತ್ತವೆ. ನದಿಪಾತ್ರದ ಉದ್ದಕ್ಕೂ ಸುತ್ತಿದಷ್ಟು ಹೊಸ, ಹೊಸ ಅನುಭವ ಸಣಾಪುರದಲ್ಲಿ ಆಗುತ್ತದೆ.

ನದಿಪಾತ್ರದ ಎಡ ಮತ್ತು ಬಲಬದಿಗಳಲ್ಲಿ ವಿವಿಧ ಆಕಾರದಲ್ಲಿ ಕಲ್ಲುಗಳು ಚಿತ್ರಗಳು ನೋಡುಗರನ್ನು ಬಹುವಾಗಿ ಕಾಡುತ್ತವೆ. ನದಿಪಾತ್ರದಲ್ಲಿ ಅಳಿವಿ ನಂಚಿನಲ್ಲಿರುವ ನೀರು ನಾಯಿಗಳು ಅತ್ಯಂತ ಆಕರ್ಷಕ ನೋಡಲು ಸೀಲ್‌ಗಳಂತೆ ಇದ್ದರೂ ನಾಯಿಮುಖವನ್ನು ಹೋಲುವ ಮೃದುದೇಹದ ಅತ್ಯಂಚ ನಾಚಿಕೆ ಸಸ್ತನಿ ನೀರುನಾಯಿಗಳು. ಪೆಂಗ್ವಿನ್‌ ಗಳಂತೆ ಜೋಡಿಜೋಡಿಯಾಗಿ ಸಂಚರಿ ಸುವುದನ್ನು ನೋಡಿದರೆ ಮನಸ್ಸಿಗೆ ಆಹ್ಲಾದ ಉಂಟು ಮಾಡುತ್ತಿವೆ. ಛಾಯಾಗ್ರಾಹಕರಿಗೆ ಇವುಗಳನ್ನು ಸೆರೆಹಿಡಿಯುವುದು ಸವಾಲಿನ ಕೆಲಸ. ನೋಡನೋಡತ್ತಿದ್ದಂತೆ ನೀರಿನಲ್ಲಿ ಮಾಯವಾಗಿ ದೂರದಲ್ಲಿ ಮತ್ತೆ ತಲೆ ಎತ್ತಿ ಮುಳುಗುವುದನ್ನು ಕಂಡಾಗ ಎಂತಹ ಜೀವವೈವಿಧ್ಯ ಎಂಬ ಜಿಜ್ಞಾಸೆ ಮೂಡುತ್ತದೆ.

ಸಣಾಪುರದ 2 ಕಿ.ಮೀ ವ್ಯಾಪ್ತಿಯಲ್ಲಿ ಹರಿಯುವ ನದಿಪಾತ್ರದಲ್ಲಿ ಇಂತಹ ಅನೇಕ ಅಚ್ಚರಿಗಳು ಮೇಲಿಂದ ಮೇಲೆ ಎದುರಾಗುತ್ತವೆ. ಪರಿಸರಪ್ರೇಮಿಗಳು, ಪಿಕ್ನಿಕ್ ಪ್ರಿಯರು, ಸಾಹಸಿಗಳು, ಧ್ಯಾನಾಸಕ್ತರು, ಪ್ರವಾಸಿಗರು, ಭೂವಿಜ್ಞಾನಿಗಳಿಗೂ ಅಚ್ಚರಿಯ ತಾಣವಾಗಿದೆ ಎಂದರೆ ಈ ಸ್ಥಳದ ಮಹತ್ವವನ್ನು ಅರಿಯಬಹುದು.

ತೆಪ್ಪದವನಿಗೆ 50 ಕೊಟ್ಟರೆ ಒಂದು ಸುತ್ತು ಹಾಕಿಸಿಕೊಂಡು ಬರುತ್ತಾರೆ. ಮೇಲ್ನೋಟಕ್ಕೆ ಕುತೂಹಲದಿಂದ ವೀಕ್ಷಿಸಿದರೆ ಬರಬರುತ್ತಾ, ಈ ನದಿಯ ಸೊಬಗು ಅರಿಯಬೇಕು ಎಂಬ ಆಸೆ ತನ್ನಿಂದ ತಾನೇ ಮೂಡುತ್ತದೆ. ಇಲ್ಲಿಗೆ ಪ್ರತಿನಿತ್ಯ ಪ್ರವಾಸಿಗರೂ ಇದ್ದೇ ಇರುತ್ತಾರೆ. ಸಾಮಾನ್ಯವಾಗಿ ಹಂಪಿಯ ದರ್ಶನಕ್ಕೆ ಬರುವ ಸಾವಿರಾರು ಪ್ರವಾಸಿಗರಿಗೆ ಸನಿಹದಲ್ಲಿಯೇ ಇರುವ ಜಲಪಾತಗಳ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ.

ಹೊಸಪೇಟೆಯಿಂದ ಹೋಗುವರು ಅಂಜನಾದ್ರಿ ಪರ್ವತಕ್ಕೆ ಹೋಗುವ ದಾರಿಯಲ್ಲಿ 14 ಕಿ.ಮೀ ನಂತರ ಸಣಾಪುರ ಸಿಗುತ್ತದೆ. ಕೊಪ್ಪಳದಿಂದ 28 ಕಿ.ಮೀ ದೂರವಾಗುತ್ತದೆ. ಸಾಕಷ್ಟು ಬಸ್‌ಗಳಿವೆ, ಖಾಸಗಿ ವಾಹನದಲ್ಲೂ ಇಲ್ಲಿಗೆ ತಲುಪಬಹುದು.

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !