ಭಾನುವಾರ, ಆಗಸ್ಟ್ 25, 2019
21 °C
10 ಲಕ್ಷ ಮಂದಿ ಸ್ಥಳಾಂತರ: 14 ಮಂದಿ ನಾಪತ್ತೆ– 288 ವಿಮಾನಗಳ ಹಾರಾಟ ಸ್ಥಗಿತ

ಚೀನಾ: ಚಂಡಮಾರುತಕ್ಕೆ 32 ಸಾವು

Published:
Updated:
Prajavani

ಶಾಂಘೈ (ಎಎಫ್‌ಪಿ): ಪೂರ್ವ ಚೀನಾದಲ್ಲಿ ಸಂಭವಿಸಿದ ‘ಲೆಕಿಮಾ’ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಶನಿವಾರ ಬೆಳಿಗ್ಗೆ ವೆನ್ಲಿಂಗ್‌ ನಗರದಲ್ಲಿ ಚಂಡಮಾರುತ ಅಪ್ಪಳಿಸಿತು. ಗಂಟೆಗೆ ಸುಮಾರು 190 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಿದ್ದು, ಕರಾವಳಿಯುದ್ದಕ್ಕೂ ಹಲವು ಮೀಟರ್‌ ಎತ್ತರದ ಅಲೆಗಳನ್ನು ಉಂಟುಮಾಡಿತು. 

ಶಾಂಘೈ ದಕ್ಷಿಣಕ್ಕಿರುವ ವೆನ್‌ಜೋವು ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಉಂಟಾದ ಭೂಕುಸಿತದಲ್ಲಿ 18 ಮಂದಿ ಸಾವನ್ನಪ್ಪಿದ್ದರು. ಇನ್ನೂ 14 ಮಂದಿ ಮೃತಪಟ್ಟಿರುವುದಾಗಿ ಭಾನುವಾರ ಘೋಷಿಸಲಾಗಿದೆ. ಆದರೆ ಅವರು ಭೂಕುಸಿತದಿಂದಲೇ ಮೃತಪಟ್ಟಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. 

ಜೇಜಿಯಾಂಗ್‌ ಪ್ರಾಂತ್ಯದಲ್ಲಿ ಶನಿವಾರ 16 ಮಂದಿ ಕಾಣೆಯಾಗಿದ್ದಾರೆ. ಅವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಲವು ಮಂದಿ ಕಾಣೆಯಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಚಂಡಮಾರುತ ಅಪ್ಪಳಿಸುವ ಮುನ್ನ ಲಕ್ಷಾಂತರ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 1.10 ಲಕ್ಷ ಜನರು ಪುನರ್ವಸತಿ ಕೇಂದ್ರದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

 ಮುನ್ನೆಚ್ಚರಿಕೆ ಕ್ರಮವಾಗಿ 3,200 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. 

ಈ ಪ್ರಕೃತಿ ವಿಕೋಪದಿಂದ 2.2 ಶತಕೋಟಿ ಡಾಲರ್‌ (₹15,629 ಸಾವಿರ ಕೋಟಿ) ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

ಲಿನ್‌ಹೇ ನಗರದಲ್ಲಿಯೇ ಸುಮಾರು 30ಕೋಟಿ ಡಾಲರ್‌ (₹2131.2 ಸಾವಿರ ಕೋಟಿ) ನಷ್ಟವಾಗಿದೆ. ಇಲ್ಲಿ 183 ಮನೆಗಳು ಮತ್ತು 600ಕ್ಕೂ ಹೆಚ್ಚು ರಸ್ತೆಗಳು ಹಾನಿಗೊಳಗಾಗಿವೆ. 

Post Comments (+)