ಉಡುಪಿ ಜಯರಾಮ್ ಸ್ಮರಣೆಗೆ ನೃತ್ಯರೂಪಕ

7

ಉಡುಪಿ ಜಯರಾಮ್ ಸ್ಮರಣೆಗೆ ನೃತ್ಯರೂಪಕ

Published:
Updated:
Deccan Herald

ಒಂದು ಕಾಲದಲ್ಲಿ, ದಕ್ಷಿಣ ಭಾರತದ ಕನ್ನಡ, ತೆಲುಗು ತಮಿಳು ಹಾಗೂ ಮಲಯಾಳದ ನೂರಾರು ಸಿನಿಮಾಗಳ ಸಾವಿರಕ್ಕೂ ಅಧಿಕ ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಖ್ಯಾತರಾಗಿದ್ದ ಉಡುಪಿ ಜಯರಾಮ್. ಅಂದಿನ ಕಾಲದಲ್ಲಿ ಬಹುಬೇಡಿಕೆಯ ನೃತ್ಯ ಸಂಯೋಜಕರಾಗಿದ್ದ ಅವರು, ಗಳಿಸಿದ ಹೆಸರಿಗೆ ತಕ್ಕಂತೆ ಅದ್ಭುತವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ.

ಉಡುಪಿ ಜಯರಾಮ್ ಸ್ಮರಣಾರ್ಥವಾಗಿ ಅವರ ಮೊಮ್ಮಗಳಾದ ಅಭಿನಯ ರೋಹನ್ ಅವರು ಉಡುಪಿ ಜಯರಾಮ್ ಡಾನ್ಸ್ ಫೆಸ್ಟಿವಲ್ ಆಯೋಜಿಸಿದ್ದಾರೆ. ಇದೇ 7ರ ಸಂಜೆ 6.45ಕ್ಕೆ ನಗರದ ಜೆ.ಸಿ.ರಸ್ತೆ ಬಳಿ ಇರುವ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶ್ರೀಕೃಷ್ಣ ಕುರಿತ ನೃತ್ಯರೂಪಕವನ್ನು ಆಯೋಜಿಸಲಾಗಿದೆ. ಈ ನೃತ್ಯರೂಪಕವನ್ನು ಚಿತ್ರಾ ಸಿ. ದಶರಥಿ ಅವರು ಸಂಯೋಜಿಸಿದ್ದು, ಸಂಗೀತವನ್ನು ಪ್ರವೀಣ್ ಡಿ. ರಾವ್ ನೀಡಿದ್ದಾರೆ.

ಜಯರಾಮ್‌ ಅವರು ‘ಬಬ್ರುವಾಹನ’, ‘ಬಂಗಾರದ ಮನುಷ್ಯ’, ‘ಸನಾದಿ ಅಪ್ಪಣ್ಣ’, ‘ದೂರದ ಬೆಟ್ಟ’, ‘ಅಂತ’, ‘ಬಂಗಾರದ ಪಂಜರ’ ಸೇರಿದಂತೆ ಹಲವು ಸಿನಿಮಾಗಳಿಗೆ ಅವರು ನೃತ್ಯ ಸಂಯೋಜನೆ ಮಾಡಿದ್ದರು.

‘ಜಯರಾಮ್ ಅವರ ಸ್ಮರಣೆಯೊಂದೇ ಈ ಕಾರ್ಯಕ್ರಮದ ಉದ್ದೇಶವಲ್ಲ. ಡಿಮೆನ್ಷಿಯಾ ಕಾಯಿಲೆಯಿಂದ ಬಳಲುತ್ತಿರುವ ನೂರಾರು ಮಂದಿಗೆ ಆಸರೆಯನ್ನು ‘ನೈಟಿಂಗಲ್’ ಎಂಬ ಸರ್ಕಾರೇತರ ಸಂಸ್ಥೆ ನೀಡಿದೆ. ಆ ಸಂಸ್ಥೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ನೃತ್ಯರೂಪಕ ಆಯೋಜಿಸಲಾಗಿದೆ’ ಎನ್ನುತ್ತಾರೆ ಅಭಿನಯಾ.

ಮಾತನಾಡುತ್ತಲೇ ತಾತ ಜಯರಾಮ್ ಬಗ್ಗೆ ಪ್ರಸ್ತಾಪಿಸಿದ ಅವರು, ‘ನಾನು ಕಂಡಂತೆ ನನ್ನ ತಾತಾ ಅದ್ಭುತ ನೃತ್ಯಪಟು. ನೃತ್ಯವನ್ನು ಅವರು ದೈವಿ ಸ್ವರೂಪದಲ್ಲಿ ಕಂಡಿದ್ದರು. ನೃತ್ಯದ ಬಗೆಗಿದ್ದ ಅವರ ಆಸಕ್ತಿ ಹಾಗೂ ಶ್ರದ್ಧೆ ಇಂದಿನ ಕಾಲದ ಪ್ರತಿಯೊಬ್ಬರಿಗೂ ಮಾದರಿ’ ಎಂದರು.

 ‘ಅಲ್ಜಮೇರ್’ ಕಾಯಿಲೆಯಿಂದ ತಾತ ಬಳಲುತ್ತಿದ್ದರು.  ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಅಷ್ಟೇ ಏಕೆ ಊಟ ಮಾಡಬೇಕು ಎಂಬುದನ್ನೇ ಮರೆತುಬಿಟ್ಟಿದ್ದರು. ಆದರೆ, ನೃತ್ಯವನ್ನು ಮಾತ್ರ ಮರೆತಿರಲಿಲ್ಲ. ಶಾಸ್ತ್ರೀಯ ಸಂಗೀತ ಕೇಳಿದೊಡನೆ, ಅವರು ನೃತ್ಯ ಮಾಡುತ್ತಿದ್ದರು. ನೃತ್ಯ ಅವರಲ್ಲಿ ಎಷ್ಟರ ಮಟ್ಟಿಗೆ ಬೆರೆತಿತ್ತು ಎಂಬುದಕ್ಕೆ ಅದೊಂದು ಉದಾಹರಣೆಯಾಗಿತ್ತು’ ಎಂದು ನೆನೆದರು.

 ‘ನಾನು ಅಜ್ಜನ ನೃತ್ಯವನ್ನು ನೋಡಿಯೇ ಆಸಕ್ತಿ ಬೆಳೆಸಿಕೊಂಡೆ. ಭರತನಾಟ್ಯ ಕಲಿತೆ. ‘ನೀನು ಓದುವುದರ ಜೊತೆಗೆ ನೃತ್ಯದಲ್ಲೂ ತೊಡಗಿಕೊಳ್ಳಬೇಕು’ ಎಂದು ಅವರು ಹೇಳುತ್ತಿದ್ದರು. ಅಂತೆಯೇ ನಾನು ಶ್ರದ್ಧೆಯಿಂದ ನೃತ್ಯ ಕಲಿತೆ. ನನ್ನ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ತಾತ ಪಾಲ್ಗೊಂಡಿದ್ದರು. ನನ್ನ ನೃತ್ಯ ಕಂಡು ಖುಷಿ ಪಟ್ಟಿದ್ದರು. ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎನ್ನುವ ಅಭಿನಯಾ ಚಾರ್ಟೆಡ್ ಅಕೌಂಟೆಂಟ್ ಸಹ ಆಗಿದ್ದಾರೆ. ನೃತ್ಯ ಹಾಗೂ ವೃತ್ತಿ ಎರಡರಲ್ಲೂ ತೊಡಗಿಕೊಂಡಿರುವ ಅವರು ಭರತ್ ಚಂದ್ರ ಫೌಂಡೇಷನ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !