ಯುಜಿಡಿ ಎಡವಟ್ಟು; ಪ್ರವಾಸೋದ್ಯಮಕ್ಕೆ ಪೆಟ್ಟು..!

7
ಕಪ್ಪು ತಾಜ್ (ಇಬ್ರಾಹಿಂ ರೋಜಾ)ಗೆ ತೆರಳುವ ರಸ್ತೆ ಅಸ್ತವ್ಯಸ್ತ; ಪ್ರವಾಸಿಗರ ಹಿಡಿಶಾಪ

ಯುಜಿಡಿ ಎಡವಟ್ಟು; ಪ್ರವಾಸೋದ್ಯಮಕ್ಕೆ ಪೆಟ್ಟು..!

Published:
Updated:
Deccan Herald

ವಿಜಯಪುರ: ಐತಿಹಾಸಿಕ ಕಪ್ಪು ತಾಜ್‌ ವೀಕ್ಷಣೆಗೆ ಪ್ರವಾಸಿಗರು ಹರ ಸಾಹಸ ನಡೆಸಬೇಕು. ಮುಖ್ಯರಸ್ತೆಯಿಂದ ಸ್ಮಾರಕ ಸಂಪರ್ಕಿಸುವ ರಸ್ತೆ ಇನ್ನೂ ಸೌಂದರ್ಯೀಕರಣಗೊಂಡಿಲ್ಲ..! ಇದರ ಪರಿಣಾಮ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತಿದೆ.

ಪ್ರವಾಸೋದ್ಯಮ ಇಲಾಖೆ ಕಳುಹಿಸಿಕೊಟ್ಟಿರುವ ಪ್ರಸ್ತಾವನೆಗೆ ಇದೂವರೆಗೂ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಸಿಗದಿರುವುದರಿಂದ ಹಣವಿದ್ದರೂ; ರಸ್ತೆಯ ಸೌಂದರ್ಯೀಕರಣ ನಡೆದಿಲ್ಲ. ಜಿಲ್ಲಾಡಳಿತ ಪಾಥ್‌ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಸಭೆ ನಡೆಸಿದರೂ ಅನುಷ್ಠಾನಕ್ಕೆ ಬಂದಿಲ್ಲ.

ಇದು ಮುಖ್ಯರಸ್ತೆಯ ಕತೆಯಾದರೆ; ಬಬಲೇಶ್ವರ ನಾಕಾದಿಂದ ಇಬ್ರಾಹಿಂ ರೋಜಾ ಸಂಪರ್ಕಿಸುವ ಸಂಪರ್ಕ ರಸ್ತೆಯದ್ದು ಇನ್ನೊಂದು ಕತೆ. ಈ ರಸ್ತೆಯಲ್ಲೇ ಪಾಲಿಕೆ ಸದಸ್ಯ ಅಬ್ದುಲ್‌ ರಜಾಕ್ ಹೊರ್ತಿ ನಿವಾಸವಿದ್ದರೂ; ಜನ ಶಪಿಸಿಕೊಂಡು ಸಂಚರಿಸುವುದು ತಪ್ಪಿಲ್ಲ.

ಎಡಿಬಿ ಬ್ಯಾಂಕ್‌ನಿಂದ ಸಾಲ ಪಡೆದು ವಿಜಯಪುರದಲ್ಲಿ ಒಳಚರಂಡಿ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡು ವರ್ಷಗಳು ಉರುಳಿವೆ. ಸಂಬಂಧಿಸಿದ ಗುತ್ತಿಗೆದಾರರು, ಯೋಜನೆಯ ಮೇಲುಸ್ತುವಾರಿ ನಿರ್ವಹಣೆಯ ಹೊಣೆ ಹೊತ್ತಿರುವ ಸರ್ಕಾರಿ ಸ್ವಾಯತ್ತ ಸಂಸ್ಥೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ರಸ್ತೆ ಅಭಿವೃದ್ಧಿ ಸಂಪೂರ್ಣಗೊಂಡಿಲ್ಲ.

ವಿವಿಧ ಸ್ಮಾರಕ ವೀಕ್ಷಿಸಿಕೊಂಡು ಆಗ್ರಾದ ತಾಜ್‌ ಮಹಲ್‌ಗೆ ಪ್ರೇರಣೆಯಾದ ಸ್ಮಾರಕ ಇಬ್ರಾಹಿಂ ರೋಜಾ ವೀಕ್ಷಣೆಗೆ ಬರುವ ದೇಶ–ವಿದೇಶದ ಪ್ರವಾಸಿಗರು ಹಿಡಿಶಾಪ ಹಾಕಿಕೊಂಡೇ ಈ ರಸ್ತೆಯಲ್ಲಿ ಸಂಚರಿಸುವುದು ಇಂದಿಗೂ ತಪ್ಪಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ದೂರು.

‘ತಿಂಗಳುಗಟ್ಟಲೇ ಯುಜಿಡಿ ಸಂಪರ್ಕಕ್ಕಾಗಿ ರಸ್ತೆ ಅಗೆದರು. ಇದರ ಬೆನ್ನಿಗೆ ಸಿಮೆಂಟ್‌ ರಸ್ತೆ ನಿರ್ಮಿಸಿದರೂ; ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆ ತೀರದಾಗಿದೆ. ಆಗಾಗ್ಗೆ ಮ್ಯಾನ್‌ಹೋಲ್‌ ಓಪನ್‌ ಮಾಡುವುದು. ರಸ್ತೆಯಲ್ಲೇ ಪೈಪ್‌ ಅಡ್ಡ ಹಾಕಿ ಸಂಚಾರಕ್ಕೆ ಅಡ್ಡಿ ಮಾಡುವುದು ನಿರಂತರವಾಗಿದೆ. ನಮಗಂತೂ ಪಾಲಿಕೆ ಸದಸ್ಯರು, ಅಧಿಕಾರಿಗಳಿಗೆ ತಿಳಿಸಿ ಸಾಕಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಸ್ಥಳೀಯ ನಿವಾಸಿಯೊಬ್ಬರು ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನಮ್‌ ವಾರ್ಡ್‌ನ ಸದಸ್ಯರ ಮನೆ ಮುಂದಿನ ರಸ್ತೆಯೇ ಅಸ್ತವ್ಯಸ್ತಗೊಂಡಿದೆ. ಸಮಸ್ಯೆಯನ್ನು ಯಾರಿಗೆ ಹೇಳ್ಬೇಕು ತಿಳಿಯದಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !