ಸೊರಗುತ್ತಿವೆ ಐತಿಹಾಸಿಕ ದೇವಾಲಯಗಳು

ಮಂಗಳವಾರ, ಜೂನ್ 18, 2019
24 °C
ಉಮ್ಮತ್ತೂರು ಗ್ರಾಮದಲ್ಲಿ ಪಾಳೇಗಾರರು ನಿರ್ಮಿಸಿದ್ದ ದೇಗುಲಗಳು

ಸೊರಗುತ್ತಿವೆ ಐತಿಹಾಸಿಕ ದೇವಾಲಯಗಳು

Published:
Updated:
Prajavani

ಸಂತೇಮರಹಳ್ಳಿ: ಇತಿಹಾಸದ ಕಾಲಗರ್ಭದಲ್ಲಿ ಎಷ್ಟೋ ಸತ್ಯಗಳು ಹುದುಗಿಹೋಗಿವೆ. ಸ್ಮಾರಕ ಹಾಗೂ ದೇವಾಲಯಗಳು ಸಂರಕ್ಷಣೆ ಕೊರತೆಯಿಂದ ಸೊರಗುತ್ತಿವೆ ಎಂಬುದಕ್ಕೆ ಉಮ್ಮತ್ತೂರು ಗ್ರಾಮದ ದೇವಾಲಯಗಳು ಸಾಕ್ಷಿಯಾಗಿವೆ. ಈ ದೇವಾಲಯಗಳನ್ನು ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಸ್ಥಳೀಯರ ಒಕ್ಕೊರಲ ಆಗ್ರಹ.

ಉಮ್ಮತ್ತೂರು ಪಾಳೇಗಾರರ ಆಳ್ವಿಕೆಯ ನೆಲೆಯಾಗಿತ್ತು. ಕ್ರಿ.ಶ. 15ನೇ ಶತಮಾನದಲ್ಲಿ ಪಾಳೇಗಾರರು ಉಮ್ಮತ್ತೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ವಿಜಯನಗರದ ಅರಸರಿಗೆ ಸಾಮಂತರಾಗಿ ಆಡಳಿತ ನಡೆಸಿದ್ದರು. ಪಾಳೇಗಾರರ ಆಡಳಿತ ಕಾಲದಲ್ಲಿ ಭುಜಂಗೇಶ್ವರ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ಉರುಕಾತೇಶ್ವರಿ ಹಾಗೂ ಜೈನ ದೇವಾಲಯಗಳು ನಿರ್ಮಾಣಗೊಂಡಿವೆ.

ಗಂಗರ ಸಂತತಿ ಅವನತಿ ನಂತರ ಹೊಯ್ಸಳರು ಅಧಿಕಾರಕ್ಕೆ ಬಂದರು. ಅವರ ಅಧೀನದಲ್ಲಿ ಸಣ್ಣಪುಟ್ಟ ಪಾಳೇಗಾರರು ಇದ್ದರು. ಇಲ್ಲಿನ ದೊರೆ 2ನೇ ಗಂಗರಸನು ತನ್ನ ರಾಜ್ಯವನ್ನು ಶಿವನಸಮುದ್ರದವರೆಗೂ ವಿಸ್ತರಿಸಿ 33 ಹಳ್ಳಿಗಳ ಒಡೆಯನಾಗಿ ತನ್ನ ಆಳ್ವಿಕೆಯನ್ನು ವೈಭವದಿಂದ ನಡೆಸಿದ್ದನು. 2ನೇ ಗಂಗರಸನ ಆಳ್ವಿಕೆ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಉಮ್ಮತ್ತೂರು ಗ್ರಾಮವನ್ನು ಉತ್ತುಂಗಕ್ಕೇರಿಸಿದ್ದನು. ಇದಕ್ಕೆ ಇಲ್ಲಿನ ದೇವಾಲಯಗಳೇ ಸಾಕ್ಷಿ.

ಭುಜಂಗೇಶ್ವರ ದೇವಾಲಯ: ಈ ದೇವಾಲಯದ ಬಾಗಿಲು ಉತ್ತರಕ್ಕೆ ಇರುವುದರಿಂದ ಭುಜಂಗೇಶ್ವರ ಎಂದು ಕರೆಯಲಾಗಿದೆ. ಚೋಳರಾಜನು ಈ ದೇವಸ್ಥಾನವನ್ನು ನಿರ್ಮಿಸಿದನೆಂದು ತಿಳಿದು ಬಂದಿದೆ. ಈ ಹಿಂದೆ ದೇವಾಲಯವು ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿತ್ತು. ದೇವಸ್ಥಾನದ ಮುಂಭಾಗ ಗರುಡಗಂಭವಿದ್ದು, ಬಾಗಿಲಲ್ಲಿ ಇಬ್ಬರು ದ್ವಾರಪಾಲಕರನ್ನು ಕಾಣಬಹುದು. ಸನ್ನಿಧಾನದಲ್ಲಿ ವಿಷ್ಣುವಿನ ಪಾದವನ್ನು ಪ್ರತಿಷ್ಠಾಪಿಸಲಾಗಿದೆ.

ರಂಗನಾಥಸ್ವಾಮಿ ದೇವಸ್ಥಾನ: ಈ ದೇವಾಲಯವನ್ನು ಕೃಷ್ಣದೇವರಾಯ ಸ್ಥಾಪಿಸಿದ್ದನು. ಕ್ರಿ.ಶ. 1531ರಲ್ಲಿ ತಿರುಮಕೂಡಲು ದಳವಾಯಿ ರಂಗನಾಯ್ಕ ಈ ದೇವಾಲಯಕ್ಕೆ ಪೂಜೆ, ನೈವೇದ್ಯಗಳಿಗಾಗಿ ಬಯಲನ್ನು ದಾನವಾಗಿ ಕೊಟ್ಟಿದ್ದಾನೆಂದು ತಿಳಿದು ಬಂದಿದೆ. ಗರ್ಭಗುಡಿಯಲ್ಲಿ ರಂಗನಾಥಸ್ವಾಮಿ ವಿಗ್ರಹವನ್ನು ಸ್ಥಾಪಿಸಲಾಗಿದೆ. ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ.

ಉರುಕಾತೇಶ್ವರಿ, ಕೊಟ್ಟೂರು ಬಸವೇಶ್ವರ ದೇವಾಲಯ, ಕೊಳದ ಬಸವೇಶ್ವರ, ಮಕ್ಕಳ ಮಹದೇಶ್ವರ, ಸಿದ್ದೇಶ್ವರ, ಪಾತಾಳ ಲಿಂಗೇಶ್ವರ ಸ್ವಾಮಿ, ಮರುಳ ಲಿಂಗೇಶ್ವರ, ಮೂಡಲ ಬಸವೇಶ್ವರ... ಹೀಗೆ ಅನೇಕ ದೇವಾಲಯಗಳನ್ನು ಕಾಣಬಹುದು.

ಇತಿಹಾಸ ಪ್ರಸಿದ್ಧಿಯಾಗಿರುವ ಈ ದೇವಸ್ಥಾನಗಳನ್ನು ಸಂರಕ್ಷಿಸಲು ಜಿಲ್ಲಾಡಳಿತವು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜೈನ ದೇವಾಲಯ
ಉಮ್ಮತ್ತೂರಿನಲ್ಲಿ ಹಿಂದೂ ದೇವಾಲಯಗಳಲ್ಲದೆ, ಜೈನ ದೇವಾಲಯವೂ ನಿರ್ಮಾಣಗೊಂಡಿದೆ. ಶಾಸನಗಳ ಪ್ರಕಾರ, ಮೊದಲು ಈ ಗ್ರಾಮದಲ್ಲಿ ಜೈನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು. ಈ ದೇವಾಲಯ 13ನೇ ಶತಮಾನಕ್ಕೆ ಸೇರಿದ ದ್ರಾವಿಡ ಶೈಲಿಯಲ್ಲಿದೆ. ಕಂಬಗಳಲ್ಲಿ ಜೈನಧರ್ಮದ ತೀರ್ಥಂಕರರ ಮೂರ್ತಿಗಳನ್ನು ಕೆತ್ತಲಾಗಿದೆ. ಗರ್ಭಗುಡಿಯಲ್ಲಿ ಮಹಾವೀರ ಸ್ವಾಮಿ ನಿಂತಿರುವ ವಿಗ್ರಹವನ್ನು ಕಾಣಬಹುದು.

ಜೈನರು ಧರ್ಮಪ್ರವಚನ ಮಾಡುತ್ತಿದ್ದ ಬಸದಿಗಳು ಇಲ್ಲಿ ಕಂಡು ಬರುತ್ತವೆ. ಬಸದಿಯ ಮುಂದೆ ವಿಶಾಲವಾದ 4 ಕಲ್ಲಿನ ಮಂಟಪವಿದೆ. ಬಸದಿಯನ್ನು ಪ್ರವೇಶಿಸುತ್ತಿದ್ದಂತೆಯೇ ಎಡ ಮತ್ತು ಬಲ ಭಾಗದಲ್ಲಿ ಹಲವಾರು ತೀರ್ಥಂಕರರ ಮೂರ್ತಿಗಳು ಇವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !