ಬಹುಕೋಟಿ ವಂಚಕ ‘ಉಮ್ರಾ’ ಮಾಲೀಕ ಸೆರೆ

ಬುಧವಾರ, ಮೇ 22, 2019
24 °C
ಮನೆ, ಕಚೇರಿ ಮೇಲೆ ಸಿಸಿಬಿ ದಾಳಿ, ಜಮೀನುಗಳ ದಾಖಲೆ ಜಪ್ತಿ

ಬಹುಕೋಟಿ ವಂಚಕ ‘ಉಮ್ರಾ’ ಮಾಲೀಕ ಸೆರೆ

Published:
Updated:
Prajavani

ಬೆಂಗಳೂರು: ಸರ್ಕಾರಿ ಜಮೀನುಗಳನ್ನು ಹರಾಜಿನಲ್ಲಿ ಖರೀದಿ ಮಾಡಿರುವುದಾಗಿ ನಂಬಿಸಿ, ಅವುಗಳನ್ನು ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ‘ಉಮ್ರಾ ಡೆವಲಪರ್ಸ್’ ರಿಯಲ್ ಎಸ್ಟೇಟ್ ಸಂಸ್ಥೆಯ ಮುಖ್ಯಸ್ಥ ಯೂಸುಫ್ ಷರೀಫ್ ಅಲಿಯಾಸ್ ಸ್ಕ್ರಾಪ್‌ ಬಾಬುನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಹದೇವಪುರ ಸಮೀಪದ ಕಿತ್ತಗನೂರು ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಅಭಿವೃದ್ಧಿಪಡಿಸಿರುವುದಾಗಿ ‘ಇಂದ್ರಪ್ರಸ್ಥ ಶೆಲ್ಟರ್ಸ್‌’ ಕಂಪನಿ ಮಾಲೀಕ ಪ್ರಜ್ವಲ್ ಶೆನೇವಾ ಎಂಬುವರಿಗೆ ನಂಬಿಸಿದ್ದ ಆರೋಪಿ, ಅದನ್ನು ಮಾರಾಟ ಮಾಡುವುದಾಗಿ ₹ 7 ಕೋಟಿ ಪಡೆದು ವಂಚಿಸಿದ್ದ. ಈ ಸಂಬಂಧ ಅವರು ಅಶೋಕನಗರ ಠಾಣೆಗೆ ದೂರು ಕೊಟ್ಟಿದ್ದರು.

‘ಪ್ರಜ್ವಲ್ ಅವರಂತೆಯೇ ಹಲವು ಮಂದಿ ಉಮ್ರಾ ಡೆವಲಪರ್ಸ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದೂರು ಕೊಟ್ಟಿದ್ದರು. ಹೀಗಾಗಿ, ಕಮಿಷನರ್ ಈ  ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದರು. ವಿಶೇಷ ತಂಡಗಳನ್ನು ರಚಿಸಿಕೊಂಡು ಸೋಮವಾರ ಮಿಲ್ಲರ್ಸ್ ಟ್ಯಾಂಕ್ ಬಂಡ್
ರಸ್ತೆಯ ಯೂಸುಫ್‌ನ ಮನೆ, ಆತನ ಸಂಸ್ಥೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆವು. ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ದಾಖಲೆಗಳು ಪತ್ತೆಯಾದವು’ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.

ಹೀಗೆ ವಂಚನೆ: ‘ನಾನು ಕಿತ್ತಗೂರು ಗ್ರಾಮದಲ್ಲಿ ಸರ್ಕಾರಿ ಜಮೀನನ್ನು (ಸರ್ವೆ ಸಂಖ್ಯೆ 80) ಹರಾಜಿನಲ್ಲಿ ಖರೀದಿಸಿದ್ದೇನೆ. ಆ ಭೂಮಿಗೆ ಈಗಾಗಲೇ ಶೇ 25ರಷ್ಟು ಹಣ ಪಾವತಿಸಿದ್ದು, ಉಳಿದದ್ದನ್ನು ಕಟ್ಟಲು ಸಾಧ್ಯವಾಗಿಲ್ಲ. ಆ ಹಣವನ್ನು ಕೊಟ್ಟರೆ ಭೂಮಿಯನ್ನು ಅಭಿವೃದ್ಧಿಪಡಿಸಿ, ಅದರಲ್ಲಿ ತಮಗೂ ಒಂದು ಭಾಗವನ್ನು ಕೊಡುತ್ತೇನೆ’ ಎಂದು ನಂಬಿಸಿ 2011ರಲ್ಲಿ ಪ್ರಜ್ವಲ್ ಅವರೊಂದಿಗೆ ವ್ಯವಹಾರದ ಮಾತುಕತೆ ನಡೆಸಿದ್ದ.

ಆ ಪ್ರಸ್ತಾವಕ್ಕೆ ಒಪ್ಪಿದ್ದ ಅವರು, ಬಳಿಕ ಚೆಕ್‌ಗಳ ಮೂಲಕ ಹಂತ ಹಂತವಾಗಿ ₹ 7 ಕೋಟಿಯನ್ನು ಯೂಸುಫ್‌ಗೆ ನೀಡಿದ್ದರು. ಹಣ ಸಂದಾಯವಾದ ಬಳಿಕ ಭೂಮಿ ಖರೀದಿ ಸಂಬಂಧ ಅವರಿಬ್ಬರ  ನಡುವೆ ಒಡಂಬಡಿಕೆಯೂ ಆಗಿತ್ತು. ಆನಂತರ ಆರೋಪಿ ಪ್ರಜ್ವಲ್  ಅವರಿಗೆ ತಿಳಿಸದೇ, ಅದೇ ಜಮೀನನ್ನು  ನಾಗರಾಜ್ ಎಂಬುವರಿಗೆ ಅಡಮಾನ ಮಾಡಿ ₹ 3 ಕೋಟಿ ಸಾಲ ಪಡೆದಿದ್ದ. ಹಾಗೆಯೇ, ಸ್ವತ್ತಿನ ಅಸಲಿ ದಾಖಲೆಗಳನ್ನೂ ಅವರಿಗೇ ಕೊಟ್ಟಿದ್ದ.

ಯೂಸುಫ್ ಹಾಗೂ ನಾಗರಾಜ್ ನಡುವಿನ ವ್ಯವಹಾರದ ಬಗ್ಗೆ 2018ರಲ್ಲಿ ಮಹದೇವಪುರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಒಡಂಬಡಿಕೆ ಆಗಿತ್ತು. ಇತ್ತೀಚೆಗೆ ಈ ವಿಚಾರವನ್ನು ತಿಳಿದ ಪ್ರಜ್ವಲ್, ಅಶೋಕನಗರ ಠಾಣೆಯ ಮಟ್ಟಿಲೇರಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

ಆರು ಪ್ರಕರಣ: ‘ಉಮ್ರಾ ಡೆವಲಪರ್ಸ್ ವಿರುದ್ಧ ಜಯನಗರ, ವಿವೇಕನಗರ ಹಾಗೂ ಅಶೋಕನಗರ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಇವರಿಂದ ವಂಚನೆಗೆ ಒಳಗಾದವರು ಸಿಸಿಬಿ ಕಚೇರಿಗೆ ದೂರು ನೀಡಬಹುದು. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ’ ಎಂದು ಡಿಸಿಪಿ ಗಿರೀಶ್ ತಿಳಿಸಿದರು.

ಬಟ್ಟೆ ಬಿಚ್ಚಿಸಿ ನಿಲ್ಲಿಸ್ತೀನಿ; ಪೊಲೀಸರಿಗೇ ಧಮ್ಕಿ

‘ನನ್ನ ಮನೆ ಮೇಲೇ ದಾಳಿ ಮಾಡ್ತೀರಾ? ₹ 100 ಕೋಟಿಯಿಂದ ₹ 150 ಕೋಟಿ ಖರ್ಚಾದರೂ ಪರ್ವಾಗಿಲ್ಲ. ಇನ್ನು 2–3 ದಿನಗಳಲ್ಲಿ ಸಿಸಿಬಿ ಕಚೇರಿಯನ್ನೇ ಮುಚ್ಚಿಸ್ತೀನಿ. ನನ್ನ ಮನೆಗೆ ಬಂದಿದ್ದ ಎಲ್ಲ ಪೊಲೀಸರನ್ನೂ ಬಟ್ಟೆ ಬಿಚ್ಚಿಸಿ ರಸ್ತೆಯಲ್ಲಿ ನಿಲ್ಲಿಸ್ತೀನಿ...’

ಇದು, ಯೂಸುಫ್ ಷರೀಫ್ ಸೋಮವಾರ ರಾತ್ರಿ ಸಿಸಿಬಿ ಕಚೇರಿಯಲ್ಲಿ ಕೂಗಾಡಿದ ಪರಿ. ಈ ಸಂಬಂಧ ಸಿಸಿಬಿ ಹೆಡ್‌ಕಾನ್‌ಸ್ಟೆಬಲ್ ಸುನೀಲ್ ಕುಮಾರ್ ಅವರು ಕಾಟನ್‌ಪೇಟೆ ಠಾಣೆಗೆ ದೂರು ಕೊಟ್ಟಿದ್ದಾರೆ. ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ (ಐಪಿಸಿ 504) ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ (353) ಆರೋಪಗಳಡಿ ಯೂಸುಫ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ರಾತ್ರಿ 9 ಗಂಟೆ ಸುಮಾರಿಗೆ ಯೂಸುಫ್‌ನನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತರಲಾಯಿತು. ತನಿಖಾಧಿಕಾರಿಯಾದ ಎನ್‌.ಎಚ್.ರಾಮಚಂದ್ರಯ್ಯ ಅವರು ತಮ್ಮ ಕೊಠಡಿಯಲ್ಲೇ ಆರೋಪಿ ಪರ ವಕೀಲ ಇರ್ಫಾನ್ ನಜೀರ್ ವಾಸೀಂ ಹಾಗೂ ವೈದ್ಯ ಸೈಯದ್ ಅವರ ಸಮ್ಮುಖದಲ್ಲೇ ವಿಚಾರಣೆ ನಡೆಸಿದರು. ಆನಂತರ ಅಧಿಕೃತವಾಗಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸುವ ನಿರ್ಧಾರಕ್ಕೆ ಬಂದರು’ ಎಂದು ಸುನೀಲ್ ದೂರಿನಲ್ಲಿ ವಿವರಿಸಿದ್ದಾರೆ.

‘ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಏಕಾಏಕಿ ಗಲಾಟೆ ಪ್ರಾರಂಭಿಸಿದ ಯೂಸುಫ್, ‘ನನ್ನ ಮನೆಯಿಂದ ದಾಖಲೆಗಳನ್ನು ತರುವ ಅಧಿಕಾರ ನಿಮಗಿಲ್ಲ. ಏನು ಮಾಡ್ತೀನಿ ನೋಡ್ತಾ ಇರಿ. ನಿಮ್ಮೆಲ್ಲರನ್ನೂ ಅಮಾನತು ಮಾಡಿಸಿ, ನನ್ನ ತಾಕತ್ತು ಏನೆಂದು ತೋರಿಸುತ್ತೇನೆ’ ಎಂದು ಕೂಗಾಡಿದ. ಅಲ್ಲದೇ, ತನಿಖೆಯಿಂದ ತಪ್ಪಿಸಿಕೊಳ್ಳಲು ತಲೆಯನ್ನು ಗೋಡೆಗೆ ಗುದ್ದಿಕೊಂಡು, ಟೇಬಲ್‌ ಮೇಲಿದ್ದ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿಕೊಳ್ಳಲು ಯತ್ನಿಸಿದ.’

‘ನಾನು ಕತ್ತರಿ ಕಿತ್ತುಕೊಳ್ಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾಡಿಸಿ ಒದ್ದ. ಇಡೀ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಈ ತಳ್ಳಾಟದಲ್ಲಿ ಆರೋಪಿಯ ಹೊಟ್ಟೆಗೆ ಸಣ್ಣ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೆ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಹಾಗೂ ಇಲಾಖೆ ವಿರುದ್ಧ ಕೆಟ್ಟದಾಗಿ ಮಾತನಾಡಿದ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಸುನೀಲ್ ದೂರಿನಲ್ಲಿ ಕೋರಿದ್ದಾರೆ. 

‘ರೋಲ್ಸ್ ರಾಯ್’ನ ಒಡೆಯ

ಯೂಸುಫ್‌ನ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಯೂಸುಫ್‌ನ ವೈಭೋಗ ಕಂಡು ಬೆರಗಾಗಿದ್ದಾರೆ. ‘ನಗರದಲ್ಲಿ ರೋಲ್ಸ್‌ ರಾಯ್‌ ಕಾರನ್ನು ಇಟ್ಟುಕೊಂಡಿರುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಯೂಸುಫ್ ಸಹ ಒಬ್ಬ. ಅದು ಮಾತ್ರವಲ್ಲದೆ, ಬಿಎಂಡಬ್ಲ್ಯು ಸೇರಿದಂತೆ ದುಬಾರಿ ಬೆಲೆಯ ಇನ್ನೂ ಐದು ಕಾರುಗಳು ಆತನ ಬಳಿ ಇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !