ಜೆಯುಡಿ ಸ್ವತ್ತು ಎನ್‌ಎಸಿಟಿಎ ವಶಕ್ಕೆ

ಬುಧವಾರ, ಮಾರ್ಚ್ 27, 2019
26 °C
ಪಾಕಿಸ್ತಾನದಲ್ಲಿ ನಿಷೇಧಿತ ಸಂಘಟನೆಗಳ ವಿರುದ್ಧ ಕಠಿಣ ಕ್ರಮ

ಜೆಯುಡಿ ಸ್ವತ್ತು ಎನ್‌ಎಸಿಟಿಎ ವಶಕ್ಕೆ

Published:
Updated:
Prajavani

ಇಸ್ಲಾಮಾಬಾದ್ (ಪಿಟಿಐ): ನಿಷೇಧಿತ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪಾಕಿಸ್ತಾನ, ಬುಧವಾರವೂ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ. 

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್–ಉದ್–ದವಾ (ಜೆಯುಡಿ) ಹಾಗೂ ಫಲಾ–ಎ–ಇನ್ಸಾನಿಯತ್ (ಎಫ್ಐಎಫ್‌) ಸಂಘಟನೆಗೆ ಸೇರಿದ ಹಲವು ಸೆಮಿನರಿಗಳು ಹಾಗೂ ಸ್ವತ್ತುಗಳನ್ನು ಸರ್ಕಾರ ವಶಪಡಿಸಿಕೊಂಡಿದೆ. ಪಾಕಿಸ್ತಾನ ಭಯೋತ್ಪಾದನ ನಿಗ್ರಹ ಪ್ರಾಧಿಕಾರ (ಎನ್ಎಸಿಟಿಎ) ಈ ಮಾಹಿತಿ ನೀಡಿದೆ. 

ಜೆಯುಡಿ, ಎಫ್‌ಐಎಫ್‌ ಸೇರಿದಂತೆ 70 ಸಂಘಟನೆಗಳನ್ನು, ಆಂತರಿಕ ಸಚಿವಾಲಯ ಮಂಗಳವಾರವಷ್ಟೆ ಅಧಿಕೃತ
ವಾಗಿ ನಿಷೇಧಿತ ಪಟ್ಟಿಗೆ ಸೇರಿಸಿದೆ.

 ‘ಜೆಎಎಂ ಪಾಕಿಸ್ತಾನದಲ್ಲಿಲ್ಲ’: ಪುಲ್ವಾಮಾ ದಾಳಿ ಹೊಣೆ ಹೊತ್ತಿದ್ದ ಜೈಷ್‌–ಎ–ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಸೇನೆಯ ವಕ್ತಾರ ತಿಳಿಸಿದ್ದಾರೆ.

ವಿಶ್ವಸಂಸ್ಥೆ ಹಾಗೂ ಪಾಕಿಸ್ತಾನ ಸಹ ಈ ಸಂಘಟನೆ ನಿಷೇಧಿಸಿದೆ. ನಾವು ಯಾರ ಒತ್ತಡದಿಂದಲೂ ಯಾವುದೇ ಚಟುವಟಿಕೆ ಕೈಗೊಳ್ಳುತ್ತಿಲ್ಲ ಎಂದು ಮೇಜರ್ ಜನರಲ್ ಅಸಿಫ್ ಗಫೂರ್ ಹೇಳಿದ್ದಾರೆ.  ಆದರೆ ಇದಕ್ಕೂ ಮುನ್ನ ಜೆಎಎಂ ಮುಖ್ಯಸ್ಥ ಮಸೂದ್ ಅಜರ್‌ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಒಪ್ಪಿಕೊಂಡಿದ್ದರು. ಅಲ್ಲದೆ ಭಾರತ ಪ್ರಬಲ ಸಾಕ್ಷ್ಯ ನೀಡಿದರೆ ಪಾಕಿಸ್ತಾನ ಆತನ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದೂ ತಿಳಿಸಿದ್ದರು.

ಪ್ರಧಾನಿಗಳ ಜತೆ ಚರ್ಚಿಸಿಲ್ಲ’

ವಿಶ್ವಸಂಸ್ಥೆ (ಪಿಟಿಐ): ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಭಾರತ–ಪಾಕಿಸ್ತಾನ ನಡುವೆ ಹೆಚ್ಚಿರುವ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್, ಉಭಯ ರಾಷ್ಟ್ರಗಳ ಪ್ರಧಾನಿ ಜತೆ ಮಾತನಾಡಿಲ್ಲ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಸ್ಪಷ್ಟಪಡಿಸಿದ್ದಾರೆ. 

‘ಆದರೆ ಉಭಯ ರಾಷ್ಟ್ರಗಳ ಅಧಿಕಾರಿಗಳ ಬಳಿ ಗುಟೆರಸ್ ಅವರು ಈ ವಿಷಯ ಚರ್ಚಿಸಿದ್ದಾರೆ. ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಇದೆ. ದಾಳಿ ಕುರಿತು ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಪರಸ್ಪರ ಮಾತುಕತೆ ಮೂಲಕ ಉಭಯ ರಾಷ್ಟ್ರಗಳು ಶಾಂತಿ, ಸ್ಥಿರತೆ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕವಾಗಿ ಹಾಗೂ ವೈಯಕ್ತಿಕವಾಗಿಯೂ ಅವರು ಸಂದೇಶ ನೀಡಿದ್ದಾರೆ’ ಎಂದು ಡುಜಾರಿಕ್ ಹೇಳಿದ್ದಾರೆ.

ಚೀನಾ ಉಪವಿದೇಶಾಂಗ ಸಚಿವ ಪಾಕ್‌ಗೆ

ಬೀಜಿಂಗ್: ಭಾರತ–ಪಾಕಿಸ್ತಾನ ಬಿಕ್ಕಟ್ಟು ಚರ್ಚಿಸಲು ಉಪವಿದೇಶಾಂಗ ಸಚಿವ ಕಾಂಗ್ ಕ್ಸಾನ್ಯು ಅವರನ್ನು ಬುಧವಾರ ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಚೀನಾ ಹೇಳಿದೆ.  ‘ಉಭಯ ದೇಶಗಳ ನಡುವೆ ಶಾಂತಿ, ಸ್ಥಿರತೆ ಕಾಪಾಡಲು ಚೀನಾ ಯತ್ನಿಸುತ್ತಿದೆ. ಎರಡೂ ರಾಷ್ಟ್ರಗಳು ಸ್ನೇಹಯುತ ಬಾಂಧವ್ಯ ಹೊಂದಲಿವೆ ಎನ್ನುವ ಭರವಸೆ ಇದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ತಿಳಿಸಿದ್ದಾರೆ.

ಭಾರತಕ್ಕೆ ಪಾಕ್ ರಾಯಭಾರಿ ವಾಪಸ್‌

 ‘ಭಾರತಕ್ಕೆ ಪುನಃ ನಮ್ಮ ರಾಯಭಾರಿಯನ್ನು ಕಳುಹಿಸುತ್ತಿದ್ದು, ಉದ್ವಿಗ್ನತೆ ಕಡಿಮೆ ಮಾಡಲು ನಾವು ಮಾತುಕತೆಗೆ ಸಿದ್ಧರಾಗಿದ್ದೇವೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ತಿಳಿಸಿದ್ದಾರೆ. 

ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿನ ತನ್ನ ರಾಯಭಾರಿ ಸೊಹೈಲ್ ಮಹಮೂದ್ ಅವರನ್ನು ಪಾಕಿಸ್ತಾನ ವಾಪಸ್ ಕರೆಸಿಕೊಂಡಿತ್ತು.

‘ನಾವು ನಮ್ಮ ಬಿಕ್ಕಟ್ಟುಗಳನ್ನು ಪರಿಹರಿಸಿಕೊಂಡು ಶಾಂತಿ ಕಾಪಾಡುವ ಸಮಯ ಬಂದಿದೆ. ಈಗ ಉದ್ವಿಗ್ನ ಪರಿಸ್ಥಿತಿ ಕಡಿಮೆಯಾಗುತ್ತಿರುವಂತೆ ಇದೆ. ಇದು ಗುಣಾತ್ಮಕ ಬೆಳವಣಿಗೆ’ ಎಂದು ಖುರೇಷಿ ಹೇಳಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !