ಮಾರುಕಟ್ಟೆ ಅನಧಿಕೃತ ಮಳಿಗೆ ತೆರವು: ದ್ವಂದ್ವ ನೀತಿ ಸಲ್ಲ–ಹೈಕೋರ್ಟ್‌

ಸೋಮವಾರ, ಏಪ್ರಿಲ್ 22, 2019
33 °C

ಮಾರುಕಟ್ಟೆ ಅನಧಿಕೃತ ಮಳಿಗೆ ತೆರವು: ದ್ವಂದ್ವ ನೀತಿ ಸಲ್ಲ–ಹೈಕೋರ್ಟ್‌

Published:
Updated:

ಬೆಂಗಳೂರು: ‘ನಗರದ ಕೆ.ಆರ್. ಮಾರುಕಟ್ಟೆಯಲ್ಲಿನ ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆಗೆ ತಗಲುವ ವೆಚ್ಚವನ್ನು, ನಕ್ಷೆ ಮಂಜೂರು ಮಾಡಿದ ಅಧಿಕಾರಿಗಳೇ ಭರಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ಮೌಖಿಕವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಎಚ್ಚರಿಸಿದೆ.

‘ಮಾರುಕಟ್ಟೆ ಸಂಕೀರ್ಣದ ಅಗ್ನಿ ಅವಘಡ ತುರ್ತು ನಿರ್ಗಮನದ ಸ್ಥಳ ಮತ್ತು ಸಾರ್ವಜನಿಕ ಪಡಸಾಲೆಯಲ್ಲಿ ನಿರ್ಮಿಸಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಬೇಕು’ ಎಂದು ಕೋರಿ ‘ಬೆಂಗಳೂರು ಹೂವು ವ್ಯಾಪಾರಿಗಳ ಸಂಘ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಒಟ್ಟು 1,285 ಮಳಿಗೆಗಳಿಗೆ ನಕ್ಷೆ ಮಂಜೂರು ಮಾಡಲಾಗಿದೆ. ಮಾರುಕಟ್ಟೆಯ ಸಂಕೀರ್ಣದ ಮೊದಲ ಮಹಡಿಯಲ್ಲಿ 24 ಅನಧಿಕೃತ ಮಳಿಗೆಗಳಿವೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ನ್ಯಾಯಪೀಠ, ‘ನಿಮ್ಮದೇ ಮಾರುಕಟ್ಟೆಯಲ್ಲಿ ಅನಧಿಕೃತ ಮಳಿಗೆಗಳು ಬರಲು ಹೇಗೆ ಸಾಧ್ಯ, ಬಿಬಿಎಂಪಿ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸದೆ ಜನರಿಗೊಂದು ನ್ಯಾಯ, ಪಾಲಿಕೆಗೊಂದು ನ್ಯಾಯ ಎಂಬ ದ್ವಂದ್ವ ನೀತಿ ಅನುಸರಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಹೈಕೋರ್ಟ್ ನಿರ್ದೇಶನದಂತೆ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಬಿಬಿಎಂಪಿ ನಡೆಸಿರುವ ತೆರವು ಕಾರ್ಯಾಚರಣೆ ಪರಿಶೀಲನೆ ನಡೆಸಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಈ ಕುರಿತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿತು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !