ಶುಕ್ರವಾರ, ಡಿಸೆಂಬರ್ 6, 2019
24 °C
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ನವೀಕರಣ

ಪೂರ್ಣಗೊಳ್ಳದ ಕಾಮಗಾರಿ; ರಂಗಾಸಕ್ತರಿಗೆ ಕಿರಿಕಿರಿ

ಬಾಬುಗೌಡ ರೋಡಗಿ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ನವೀಕರಣ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದ್ದು, ಹಲವು ಸಮಾರಂಭ ಆಯೋಜನೆಗೆ ಅಡ್ಡಿಯಾಗಿದೆ.

‘ರಂಗಮಂದಿರದ ನವೀಕರಣ ವಿಳಂಬಗತಿಯಲ್ಲಿ ನಡೆದಿದೆ. ಕಾಮಗಾರಿ ಗಡುವು ಮುಗಿದು ನಾಲ್ಕೈದು ತಿಂಗಳು ಕಳೆದಿದೆ. ಇಂದಿಗೂ ಮುಕ್ತಾಯದ ಹಂತಕ್ಕೆ ಬಂದಿಲ್ಲ. ಈ ವಿಳಂಬದಿಂದ ಕಾರ್ಯಕ್ರಮ ಆಯೋಜಕರಿಗೆ ದೊಡ್ಡ ಹೊಡೆತ ಬೀಳಲಾರಂಭಿಸಿದೆ.

₹ 20,000ದಿಂದ ₹ 25,000ದೊಳಗೆ ಮುಗಿಯುವ ಕಾರ್ಯಕ್ರಮಕ್ಕೆ ಇದೀಗ ಕನಿಷ್ಠ ₹ 1 ಲಕ್ಷ ಬೇಕಿದೆ. ದುಬಾರಿ ಮೊತ್ತ ಖರ್ಚು ಮಾಡಿದರೂ; ಒಳಾಂಗಣದೊಳಗಿನ ಗಮ್ಮತ್ತು, ಕೆಲ ಕಾರ್ಯಕ್ರಮಗಳಿಗೆ ಹೊರಾಂಗಣದಲ್ಲಿ ಸಿಗಲ್ಲ’ ಎನ್ನುತ್ತಾರೆ ಜಿಲ್ಲಾ ಯುವ ಪರಿಷತ್‌ನ ಅಧ್ಯಕ್ಷ ಶರಣು ಸಬರದ.

‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯೇ ಕಾಮಗಾರಿ ವಿಳಂಬಕ್ಕೆ ಕಾರಣ. ಈಗಲಾದರೂ ಎಚ್ಚೆತ್ತುಕೊಂಡು ಸಂಬಂಧಿಸಿದವರು ಶೀಘ್ರ ಕಾಮಗಾರಿ ಮುಗಿಸಲು ಪ್ರಯತ್ನಿಸಬೇಕು’ ಎಂದು ಸಬರದ ಆಗ್ರಹಿಸುತ್ತಾರೆ.

‘ಕಂದಗಲ್ಲ ಹನುಮಂತರಾಯ ರಂಗಮಂದಿರ ಲಭ್ಯವಿಲ್ಲದಿದ್ದರಿಂದ ಕಳೆದ ನವೆಂಬರ್‌ನಲ್ಲಿ ಮೂರು ದಿನ ರಂಗಚೇತನ ಸಂಸ್ಥೆಯ ರಜತಮಹೋತ್ಸವವನ್ನು ರಂಗಮಂದಿರದ ಆವರಣದಲ್ಲಿ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಿರೀಕ್ಷೆಯಂತೆ ನಡೆಯಲಿಲ್ಲ.

ಉತ್ತಮ ವೇದಿಕೆಯಲ್ಲೂ ನಾಟಕಗಳ ಪ್ರದರ್ಶನಗಳು ಚೆನ್ನಾಗಿ ಮೂಡಿಬರಲಿಲ್ಲ. ಇದೀಗ ನಡೆಯುತ್ತಿರುವ ನವೀಕರಣ ಕೆಲಸ ಗಮನಿಸಿದರೆ, ಮುಂಬರುವ 2019ರ ಮಾರ್ಚ್‌ ಅಂತ್ಯಕ್ಕೂ ಮುಗಿಯುವುದು ಅನುಮಾನ. ರಂಗಮಂದಿರದ ಅಲಭ್ಯದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ನಾಟಕ ಪ್ರದರ್ಶನ ಸಾಕಷ್ಟು ಕಡಿಮೆಯಾಗಿವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ನಗರದ ಹಿರಿಯ ಕಲಾವಿದರೊಬ್ಬರು ‘ಪ್ರಜಾವಾಣಿ’ ಬಳಿ ಆಕ್ರೋಶ ವ್ಯಕ್ತಪಡಿಸಿದರು.

‘ರಂಗಮಂದಿರದ ನವೀಕರಣಕ್ಕೆ ₹ 1.70 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್‌ನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದ್ದು, ಮೊದಲ ಹಂತದಲ್ಲಿ ₹ 60 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿರಬಹುದು. ಆದಷ್ಟು ಬೇಗ ಸಮಸ್ಯೆ ಪರಿಹರಿಸಿ, ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು’ ಎಂದು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಬಜಂತ್ರಿ ತಿಳಿಸಿದರು.

‘ಈಗಾಗಲೇ ಬಾಲ್ಕನಿ ಕೆಲಸ ಬಹುತೇಕ ಪೂರ್ಣಗೊಂಡಿದೆ. ಮುಖ್ಯ ದ್ವಾರದ ಮೆಟ್ಟಿಲು, ಬಾಗಿಲುಗಳ ದುರಸ್ತಿ ಮಾಡಲಾಗಿದೆ. ಮುಖ್ಯ ವೇದಿಕೆ ಹಾಗೂ ಚೇರ್‌ಗಳನ್ನು ಅಳವಡಿಸುವುದು ಮಾತ್ರ ಬಾಕಿ ಇದೆ. ಈಗಾಗಲೇ ಚೇರ್‌ಗಳ ತಯಾರಿಕೆಗೆ ಆರ್ಡರ್‌ ನೀಡಲಾಗಿದ್ದು, ಜನವರಿ ಅಂತ್ಯದೊಳಗಾಗಿ ಕೆಲಸ ಪೂರ್ಣಗೊಳಿಸಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಗೆ ಹಸ್ತಾಂತರಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಜುಂದಾರ್‌ ಹೇಳಿದರು.

ಪ್ರತಿಕ್ರಿಯಿಸಿ (+)