ಅಪೂರ್ವ ವಾಸ್ತುಶಿಲ್ಪದ ಈಶ್ವರನ ದೇವಾಲಯ

ಮಂಗಳವಾರ, ಏಪ್ರಿಲ್ 23, 2019
33 °C

ಅಪೂರ್ವ ವಾಸ್ತುಶಿಲ್ಪದ ಈಶ್ವರನ ದೇವಾಲಯ

Published:
Updated:
Prajavani

ಮಂಡ್ಯ ಜಿಲ್ಲೆಯ ಗೋವಿಂದನಹಳ್ಳಿ ಕಿಕ್ಕೇರಿ ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಹೊಯ್ಸಳ ಕಾಲದ ಅಪೂರ್ವ ದೇವಾಲಯಗಳಲ್ಲಿ ಒಂದಾದ ಪಂಚಲಿಂಗೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಐದು ವಿಮಾನಗೋಪುರಗಳಿರುವ ಹೊಯ್ಸಳ ಕಾಲದ ಒಂದೇ ಒಂದು ಪಂಚಕೂಟ ನಿರ್ಮಿತಿ ಎಂಬುದು ವಿಶೇಷ. ಹೊಯ್ಸಳ ಕಾಲದ ಪ್ರಸಿದ್ಧ ಶಿಲ್ಪಿ ಮಲ್ಲಿ ತಮ್ಮ ಇದರ ನಿರ್ಮಾತೃ. ಹೊಯ್ಸಳ ರಾಜನಾದ ವೀರ ಸೋಮೇಶ್ವರನ ಕಾಲದಲ್ಲಿ ಕ್ರಿ. ಶ. 1237-38 ರಲ್ಲಿ ನಿರ್ಮಾಣಗೊಂಡುದೆಂದು ಇತಿಹಾಸ ತಜ್ಞರ ಅಭಿಪ್ರಾಯ.

ಉತ್ತರ- ದಕ್ಷಿಣ ರೇಖೆಯಲ್ಲಿ ನಿಂತಿರುವ ಪ್ರಾಚೀನ ದೇವಳ ಪೂರ್ವಾಭಿಮುಖವಾಗಿದೆ. ಐದೂ ಲಿಂಗಗಳ ಎದುರು ಸುಂದರವಾದ ಐದು ನಂದಿಗಳಿವೆ. ಎರಡು ಮತ್ತು ಮೂರನೆಯ ಲಿಂಗಗಳ ಎದುರು ಪ್ರವೇಶ ದ್ವಾರಗಳಿವೆ. ಈ ಪ್ರವೇಶ ದ್ವಾರದ ಹೊರಗಡೆ ಇರುವ ಮಂಟಪಗಳು ಹೊಯ್ಸಳ ಕಾಲದಲ್ಲಿ ಕಡೆದವುಗಳೆಂದು ಸ್ಪಷ್ಟವಾಗಿ ಅರಿವಾಗುತ್ತದೆ. ಮಂಟಪದ ದ್ವಾರಗಳನ್ನು ಅಲಂಕರಿಸಿರುವ ದ್ವಾರಪಾಲಕರ ಕೆತ್ತನೆಗಳು ಸುಂದರವಾಗಿವೆ.

ದ್ವಾರಪಾಲಕಪೀಠದಲ್ಲಿ ಮಲ್ಲಿತಮ್ಮನ ಹೆಸರಿದೆ. ದೇವಾಲಯದ ಮುಂಭಾಗದ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಸಾಕಷ್ಟು ಕಲಾತ್ಮಕವಾದ ರಂಧ್ರಗಳಿವೆ. ಜತೆಗೆ ದಶಾವತಾರದ ಚಿತ್ರಗಳು, ವಿವಿಧ ಭಂಗಿಗಳ ದರ್ಪಣ ಸುಂದರಿಯರ ಶಿಲ್ಪಗಳಿವೆ. ಒಳಗೆ ಹೆಜ್ಜೆಯಿಟ್ಟಾಗ ಮತ್ತೆ ಮೂರು ಲಿಂಗಗಳ ದರ್ಶನವಾಗುತ್ತದೆ. ಕಂಬಗಳಿರುವ ನವರಂಗ ಎಲ್ಲಾ ಗರ್ಭಗುಡಿಗಳಿಗೂ ಒಂದೇ.

ಐದು ಪ್ರತ್ಯೇಕ ಗರ್ಭಗುಡಿಗಳಲ್ಲಿ ಅಘೋರ, ಈಶಾನ್ಯ, ವಾಮದೇವ, ಸದ್ಯೋಜಾತ, ತತ್ಪುರುಷ ಶಿವಲಿಂಗಗಳು ಸ್ಥಾಪಿಸಲಾಗಿದೆ. ಪ್ರತಿ ಗರ್ಭಗುಡಿಯ ಹೊರಗೂ ಇರುವ ಸುಕನಾಸಿ ನವರಂಗಕ್ಕೆ ದ್ವಾರವನ್ನು ಹೊಂದಿದೆ. ಸುಕನಾಸಿಯ ಗೋಡೆ, ಚಾವಣಿ, ಕಂಬಗಳು ವೈವಿಧ್ಯ ವಿನ್ಯಾಸಗಳನ್ನು ಹೊಂದಿದೆ. ಪೂಜಾಕೈಂಕರ್ಯಗಳು ಸಣ್ಣಮಟ್ಟದಲ್ಲಿ ಇನ್ನೂ ನಡೆಯುತ್ತಿವೆ. ಪ್ರತಿ ಸುಕನಾಸಿಯ ಹೊರಗೆ ಕೋಷ್ಟಕಗಳಲ್ಲಿ ಗಣೇಶ ಹಾಗೂ ದೇವಿಯರ ಸುಂದರವಾದ ವಿಗ್ರಹಗಳಿವೆ. ಒಂದೆರಡು ಕಡೆ ಈ ವಿಗ್ರಹಗಳು ಶಿಥಿಲವಸ್ಥೆಯಲ್ಲಿವೆ. ಅಘೋರೇಶ್ವರ ಲಿಂಗದ ಹೊರಗಡೆ ಶಿವ-ಪಾರ್ವತಿ, ಕಾರ್ತಿಕೇಯ ಹಾಗೂ ಗಣೇಶನ ವಿಗ್ರಹಗಳಿವೆ. ಒಟ್ಟು ಹದಿನೇಳು ಕೋಷ್ಟಕಗಳನ್ನೂ ನೋಡಿದಾಗ ಅಲ್ಲಿರುವ ಕಲಾವೈವಿಧ್ಯಅಚ್ಚರಿ ಹುಟ್ಟಿಸುತ್ತದೆ. ಇದಲ್ಲದೆ ಅಪರೂಪದ ಐದು ಹಾಗೂ ಏಳು ತಲೆಗಳ ಸರ್ಪಗಳ ಜೋಡಿಯ ಕೆತ್ತನೆ ಇಲ್ಲಿನ ಇನ್ನೊಂದು ವಿಶೇಷ. ಸಪ್ತಮಾತೃಕೆಯರ ಜೊತೆಗೆ ಗಣೇಶನೂ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ.

ದೇವಸ್ಥಾನದ ಹೊರಗೆ ಪ್ರದಕ್ಷಿಣೆ ಮಾಡುವಾಗ ಗೋಡೆಗಳ ತುಂಬಾ ಶಿವ-ಪಾರ್ವತಿ, ಬ್ರಹ್ಮ, ಗಣೇಶ, ನಾಟ್ಯಸರಸ್ವತಿ ಹಾಗೂ ಇತರ ಕೆತ್ತನೆಗಳು ಕಾಣುತ್ತವೆ. ಪ್ರತಿ ಗರ್ಭಗುಡಿಯ ಮೇಲೂ ಇರುವ ವಿಮಾನ ಗೋಪುರಗಳು ದೂರದಿಂದ ಒಂದೇ ತರಹ ಕಾಣಿಸಿದರೂ ಹತ್ತಿರ ಹೋದಾಗಲೇ ಅವುಗಳ ಭಿನ್ನತೆ ಗೋಚರವಾಗುತ್ತದೆ. ಗೋಪುರಗಳ ಮೇಲೆಯೂ ಕಲಾನೃತ್ಯ ಮುಂದುವರಿದಿದೆ. 


ಈಶ್ವರ ದೇವಾಲಯ

ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಈ ಸ್ಥಳದ ಹೊರಗಿನ ಜಾಗಗಳನ್ನು ಸ್ವಚ್ಛವಾಗಿಟ್ಟಿದ್ದಾರೆ. ಹುಲ್ಲು ಹಾಸು, ಹೂವಿನ ಗಿಡಗಳು ದೇವಾಲಯದ ಸೌಂದರ್ಯವನ್ನು ಇಮ್ಮಡಿಸಿವೆ. ಎದುರಿನ ರಸ್ತೆಯ ಮತ್ತೊಂದು ಬದಿಯಲ್ಲಿ ದೊಡ್ಡ ಸರೋವರವಿದೆ. ಬರಗಾಲದಿಂದಾಗಿ ಅದರಲ್ಲಿ ನೀರು ಹೆಚ್ಚಿರಲಿಲ್ಲ.

ಬೆಂಗಳೂರಿನಿಂದ ಕುಣಿಗಲ್, ಚೆನ್ನರಾಯಪಟ್ಟಣ, ಕಿಕ್ಕೇರಿ ಮಾರ್ಗವಾಗಿ ಗೋವಿಂದನ ಹಳ್ಳಿ ತಲುಪಬಹುದು. ಮೈಸೂರಿನಿಂದ ಶ್ರೀರಂಗಪಟ್ಟಣ, ಕೆ.ಆರ್. ಪೇಟೆ, ಕಿಕ್ಕೇರಿ ಮಾರ್ಗವಾಗಿ ಗೋವಿಂದನಹಳ್ಳಿ ತಲುಪಬಹುದು. ಒಂದೇ ದಿನದಲ್ಲಿ ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಸ್ಥಾನ, ಕಿಕ್ಕೇರಿಯ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಾಗೂ ಗೋವಿಂದನ ಹಳ್ಳಿಯ ಪಂಚಕೂಟಗಳನ್ನು ಸಂದರ್ಶಿಸಬಹುದು. ಮೂರು ಜಾಗಗಳೂ ಐತಿಹಾಸಿಕವಾಗಿ ಪ್ರಸಿದ್ಧವಾದವುಗಳು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !