‘ಅಪೂರ್ವ’ ಅನುಭವ ನೀಡುವ ‘ರೆಸಾರ್ಟ್‌’

ಶುಕ್ರವಾರ, ಏಪ್ರಿಲ್ 19, 2019
22 °C

‘ಅಪೂರ್ವ’ ಅನುಭವ ನೀಡುವ ‘ರೆಸಾರ್ಟ್‌’

Published:
Updated:
Prajavani

ದಾವಣಗೆರೆ: ‘ಗ್ರಾಹಕರು ಹಣದ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚು ಸ್ವಚ್ಛತೆ, ರುಚಿ ಮತ್ತು ಆರಾಮದಾಯಕ ವ್ಯವಸ್ಥೆ ಬಗ್ಗೆ ಯೋಚಿಸುತ್ತಾರೆ. ಅವುಗಳನ್ನು ನೀಡಲು ಸಾಧ್ಯವಾಗಿದ್ದರಿಂದಲೇ 33 ವರ್ಷಗಳಿಂದ ಹೋಟೆಲ್‌ ರಂಗದಲ್ಲಿದ್ದೇನೆ’

–ಅಪೂರ್ವ ಗ್ರೂಪ್‌ ಆಫ್‌ ಹೋಟೆಲ್‌ ವ್ಯವಸ್ಥಾಪಕ ನಿರ್ದೇಶಕ ಅಣಬೇರು ರಾಜಣ್ಣ ಅವರ ಅನುಭವದ ಮಾತುಗಳಿವು. ಈ ಮಾತಿನಂತೆಯೇ ಇವೆ ಅವರು ನಡೆಸುವ ಹೋಟೆಲ್‌ಗಳು.

ಕೃಷಿಕ ಕುಟುಂಬದಿಂದ ಬಂದಿರುವ ರಾಜಣ್ಣ ಬಿ.ಎ ಮುಗಿಸಿ ರೈಸ್‌ಮಿಲ್‌, ಲಾರಿ ದಲ್ಲಾಳಿ ಅಂಗಡಿ ಹೀಗೆ ಸಣ್ಣಪುಟ್ಟ ವ್ಯಾಪಾರಕ್ಕೆ ಕೈಹಚ್ಚಿದ್ದರು. ತಮಿಳುನಾಡು, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಬಾಕಿ ವಸೂಲಿಗೆ ಹೋಗುವಾಗ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಹೋಟೆಲ್‌ ನಡೆಸುವ ಚಿಂತನೆ ನಡೆಸಿದ ಅವರು 1986ರಲ್ಲಿ ನರಸರಾಜಪೇಟೆ ಹಳೆಸಿರಿಗೆರೆಯಲ್ಲಿ ಅಪೂರ್ವ ಹೋಟೆಲ್‌ ತೆರೆದಿದ್ದರು. ಅದರಲ್ಲಿ ಯಶಸ್ಸು ಪಡೆದ ಬಳಿಕ 10 ವರ್ಷಗಳ ಕೆಳಗೆ ತ್ರಿಶೂಲ್‌ ಟಾಕೀಸ್‌ ಬಳಿ ಪಿ.ಬಿ. ರಸ್ತೆಯಲ್ಲಿ ಅಪೂರ್ವ ರೆಸ್ಟೊರಂಟ್‌ ಆರಂಭಿಸಿದ್ದರು. ಇದಾಗಿ ಐದು ವರ್ಷಗಳ ನಂತರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಿಸ್ತಾರವಾದ ಅಪೂರ್ವ ರೆಸಾರ್ಟ್‌ ಆರಂಭಿಸಿದ್ದರು.

ಶುಚಿ, ರುಚಿಗೆ ಆದ್ಯತೆ:

ಅಪೂರ್ವ ಹೋಟೆಲ್‌ ಮತ್ತು ಅಪೂರ್ವ ರೆಸ್ಟೊರಂಟ್‌ಗಳು ಸಸ್ಯಾಹಾರಕ್ಕೆ ಪ್ರಸಿದ್ಧವಾಗಿವೆ. ಆರೋಗ್ಯದ ಕಾಳಜಿ ಇಟ್ಟುಕೊಂಡು ಬರುವ ಗ್ರಾಹಕರಿಗೆ ಆಹ್ಲಾದ ವಾತಾವರಣ, ಆರೋಗ್ಯಕರ ಆಹಾರ ನೀಡಲಾಗುತ್ತಿದೆ. ಗುಣಮಟ್ಟದಲ್ಲಿ ರಾಜೀ ಇಲ್ಲ. ಬಾಸುಂಡಿ ಇಲ್ಲಿಯ ಪ್ರಸಿದ್ಧ ಸಿಹಿ ತಿನಿಸು. ಬೋಂಡಾ ಸೂಪ್‌, ಟೊಮೆಟೊ ಭಾತ್‌, ರವೆ ಇಡ್ಲಿಯೂ ಅಷ್ಟೇ ಪ್ರಸಿದ್ಧ. ಇವಲ್ಲದೇ ಉಪಾಹಾರದ ಅನೇಕ ಬಗೆಯ ತಿನಿಸುಗಳಿವೆ. ಮಧ್ಯಾಹ್ನ ಮತ್ತು ರಾತ್ರಿ ನಾರ್ತ್‌, ಸೌತ್‌ ಊಟಗಳಿರುತ್ತವೆ.

ವಿಶಾಲ ರೆಸಾರ್ಟ್‌: 11 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಅಪೂರ್ವ ರೆಸಾರ್ಟ್‌ ಹಲವು ಹೊಸತನಗಳಿಗೆ ಹೆಸರಾಗಿದೆ. 40 ಹವಾನಿಯಂತ್ರಿತ ಕೊಠಡಿಗಳಿವೆ. 14 ಸ್ವೀಟ್‌ರೂಂಗಳು. ರೈನ್‌ಡ್ಯಾನ್ಸ್‌, ಸ್ವಿಮ್ಮಿಂಗ್‌ಪೂಲ್‌, ಬೋರ್ಡ್‌ರೂಂ, 150 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ, 500 ಕುಳಿತುಕೊಳ್ಳುವ ಹಾಲ್‌, ಸಾವಿರಾರು ಮಂದಿ ಭಾಗವಹಿಸಬಹುದಾದ ಬಯಲು ಮಂದಿರ, ಮಕ್ಕಳನ್ನು ಆಟವಾಡಿಸಲು ಅವಕಾಶಗಳೆಲ್ಲ ಇವೆ.

ಬಾರ್‌, ವೆಜ್‌, ನಾನ್‌ವೆಜ್‌ ರೆಸ್ಟೊರೆಂಟ್‌ ಹೊಂದಿರುವ ಈ ರೆಸಾರ್ಟ್‌ ತನ್ನ ವಿಶಾಲ ಜಾಗದಷ್ಟೇ ಹಲವು ಬಗೆಯ ಆಹಾರ ತಯಾರಿಗೂ ಹೆಸರುವಾಸಿಯಾಗಿದೆ. ಚಿಕನ್‌ ಒಂದರಲ್ಲಿಯೇ ಹತ್ತಾರು ಭಾರತೀಯ, 40ಕ್ಕೂ ಅಧಿಕ ಚೈನೀಸ್‌ ತಿನಿಸು ತಯಾರಿಸುತ್ತಾರೆ. ಹತ್ತಾರು ಘೀ ರೈಸ್‌, ಜೀರಾ ರೈಸ್‌, ಬಿರಿಯಾನಿ ರೈಸ್‌ ಹೀಗೆ ಹತ್ತಾರು ಬಗೆಯ ರೈಸ್‌ಗಳು, ಬೇರೆ ಬೇರೆ ಸೂಪ್‌ಗಳು, ವಿವಿಧ ಮಟನ್‌ ಐಟಂಗಳು, ಪಾಂಫ್ರೆಟ್‌ ಮತ್ತು ಅಂಜಲ್‌ ಮೀನು ಹೀಗೆ ನೂರಾರು ನಮೂನೆಯ ರುಚಿಗಳನ್ನು ಸವಿಯಲು ಇಲ್ಲೇ ಹೋಗಬೇಕು.

ರೈನ್‌ಡ್ಯಾನ್ಸ್‌, ಸ್ವಿಮ್ಮಿಂಗ್‌ ಪೂಲ್‌ ಸೌಲಭ್ಯಗಳು ಕೊಠಡಿ ಬುಕ್‌ ಮಾಡಿದವರಿಗಷ್ಟೇ ಸಿಗುತ್ತವೆ. ಇದರ ಜತೆಗೆ ರಂಗಶಿಬಿರ, ಬೇಸಿಗೆ ಶಿಬಿರಗಳನ್ನು ಮಾಡಲೂ ಅವಕಾಶ ಇದೆ.

ರಾಜಣ್ಣ ಅವರ ಒಬ್ಬ ಮಗ ನಂದಕುಮಾರ್‌ ಹೋಟೆಲ್‌ ನೋಡಿಕೊಂಡು ತಂದೆಗೆ ನೆರವಾಗುತ್ತಿದ್ದರೆ ಇನ್ನೊಬ್ಬ ಮಗ ಡಾ. ಪ್ರಸನ್ನ ಅಣಬೇರು ಮೂಳೆ ವಿಜ್ಞಾನದ ಪ್ರೊಫೆಸರ್‌ ಆಗಿದ್ದಾರೆ.

185 ಮಂದಿ ಕಾರ್ಮಿಕರು
‘ಓದದೇ ಇದ್ದರೂ ಕೆಲಸದ ಬಗ್ಗೆ ಶ್ರದ್ಧೆ ಇದ್ದರೆ ಕೆಲಸ ಕೊಡುವ ದೇಶದ ಏಕೈಕ ಬೃಹತ್‌ ಉದ್ಯಮ ಎಂದರೆ ಅದು ಹೋಟೆಲ್‌ ಉದ್ಯಮ’ ಎನ್ನುವ ರಾಜಣ್ಣ ಅವರ ಹೋಟೆಲ್‌ಗಳಲ್ಲಿ 185 ಮಂದಿ ಕೆಲಸ ಮಾಡುತ್ತಿದ್ದಾರೆ.

‘₹ 10 ಸಾವಿರದಿಂದ ₹ 35 ಸಾವಿರದ ವರೆಗೆ ವೇತನ ಪಡೆಯುತ್ತಿದ್ದಾರೆ. ಎಲ್ಲರಿಗೂ ಕಾರ್ಮಿಕ ಇಲಾಖೆಯ ಕಾನೂನಿನ ಅನ್ವಯ ಎಲ್ಲರಿಗೂ ಇಪಿಎಫ್‌, ಇಎಸ್‌ಐ, ರಜಾ ಸೌಲಭ್ಯಗಳಿವೆ. ಇಲ್ಲಿ ಬಿಟ್ಟು ಹೋದ ಕಾರ್ಮಿಕರು ಬೇರೆ ಕಡೆ ಇಲ್ಲಿನ ಸೌಲಭ್ಯ ಸಿಗದೇ ಮತ್ತೆ ನಮ್ಮ ಹೋಟೆಲ್‌ಗೆ ವಾಪಸ್ಸಾಗುತ್ತಾರೆ’ ಎನ್ನುತ್ತಾರೆ ಅಣಬೇರು ರಾಜಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !