ಶುಕ್ರವಾರ, ಸೆಪ್ಟೆಂಬರ್ 20, 2019
29 °C
ಐದು ವರ್ಷಗಳಿಂದ ಪಾಳು ಬಿದ್ದಿರುವ ಭವನ: ನಿರ್ವಹಣೆ, ಮೂಲಸೌಕರ್ಯದ ಕೊರತೆ

ನಿರುಪಯುಕ್ತ ಉಪ್ಪಾರ ಸಮುದಾಯ ಭವನ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಬಂಡಿಗೆರೆಯಲ್ಲಿ ಐದು ವರ್ಷಗಳ ಹಿಂದೆ ನಿರ್ಮಿಸಿರುವ ಉಪ್ಪಾರ ಸಮುದಾಯ ಭವನ ನಿರುಪಯುಕ್ತವಾಗಿ ಪಾಳು ಬಿದ್ದಿದೆ. 

ಸಮುದಾಯದವರಿಗೆ ಸಭೆ, ಸಮಾರಂಭ ಮತ್ತು ಮದುವೆಯಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ 2004–05ನೇ ಸಾಲಿನಲ್ಲಿ ಲೋಕಸಭಾ ಸದಸ್ಯರ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ, ಪಂಚಾಯತ್‌ ರಾಜ್‌ ಎಂಜಿನಿಯರ್‌ ವಿಭಾಗದಿಂದ ಸಮುದಾಯ ಭವನ ನಿರ್ಮಾಣ ಮಾಡಲಾಗಿತ್ತು. ಇದಕ್ಕಾಗಿ ₹5 ಲಕ್ಷ ವೆಚ್ಚಮಾಡಲಾಗಿತ್ತು. ಆದರೆ, ಭವನವು ಸರಿಯಾದ ನಿರ್ವಹಣೆ ಇಲ್ಲದೆ ನಿಷ್ಪ್ರಯೋಜಕವಾಗಿದೆ.

ಸಮುದಾಯ ಭವನಕ್ಕೆ ಹೊಂದಿಕೊಂಡಂತೆ 2010–11ನೇ ಸಾಲಿನಲ್ಲಿ ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಡುಗೆ ಮನೆಯೂ ಪಾಳು ಬಿದ್ದಿದೆ. ಅಡುಗೆ ಮನೆಯ ಗೋಡೆಗಳು ಸದೃಢವಾಗಿವೆ. ಆದರೆ, ಚಾವಣಿ ಕಿತ್ತು ಬಂದಿದ್ದು, ಇಡೀ ಕಟ್ಟಡ ಕಸ ಬಿಸಾಕುವ ಕೊಠಡಿಯಾಗಿ ಬದಲಾಗಿದೆ.

‘ಮಳೆ ಸುರಿದರೆ ಕೊಠಡಿ ಒಳಗೆ ನೀರು ನಿಲ್ಲುತ್ತದೆ. ಕಲ್ನರ್‌ ಶೀಟ್‌ ಹಾಕಿ ಬಿಸಿಲು, ಮಳೆಗೆ ರಕ್ಷಣೆ ಮಾಡಬೇಕು. ಅಡುಗೆ ಪದಾರ್ಥಗಳನ್ನು ಸಂಗ್ರಹಿಸಿಡಲು ಮತ್ತೊಂದು ಚಿಕ್ಕ ಕೊಠಡಿ ನಿರ್ಮಿಸಿದರೆ ಇಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಅಗತ್ಯಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ. 

ಗಿಡ ಗಂಟೆ ಬೆಳೆದಿದೆ: ‘ಸಮುದಾಯ ಭವನದ ಸುತ್ತಲೂ ಎಕ್ಕದ ಗಿಡ ಯಥೇಚ್ಛವಾಗಿ ಬೆಳೆದಿದೆ. ಗಿಡಗಂಟಿಗಳು ಬೆಳೆದು ಜನರು ತಿರುಗಾಡಲು ಕಷ್ಟವಾಗುತ್ತಿದೆ. ರಾತ್ರಿ ವೇಳೆ ಅರಿವಿಲ್ಲದ ಜನ ಆವರಣದಲ್ಲಿ ಅನೈರ್ಮಲ್ಯ ಮಾಡುತ್ತಿದ್ದಾರೆ. ಭವನದ ಮುಂಭಾಗ ಟ್ರಾಕ್ಟರ್‌ ಹಾಗೂ ಇನ್ನಿತರ ವಾಹನಗಳನ್ನು ನಿಲ್ಲಿಸುವ ತಾಣವಾಗಿದೆ’ ಎಂದು ಗ್ರಾಮದ ನಿವಾಸಿ ಮಾದೇವ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಮೂಲಸೌಕರ್ಯ: ‘ಭವನ ನಮ್ಮ ಸಮುದಾಯದವರ ಹೆಸರಿನಲ್ಲಿದೆ. ನಿರ್ವಹಣೆ ಕೂಡ ನಮಗೆ ಸೇರುತ್ತದೆ. ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಭವನದ ಎದುರು ಒಂದು ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಪಕ್ಕದಲ್ಲೇ ಮಹದೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣ ಹಂತದಲ್ಲಿದೆ. ಅಡುಗೆ ಮನೆ ಮಳೆ ಬಂದರೆ ಸೋರುತ್ತದೆ. ಎಲ್ಲವನ್ನು ದುರಸ್ತಿಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ’ ಎಂದು ಉಪ್ಪಾರ ಸಮುದಾಯದ ಯಜಮಾನರಾದ ಜಯಸ್ವಾಮಿ ಹೇಳಿದರು.

ಶೌಚಾಲಯ ಅಗತ್ಯ

‘ಭವನಕ್ಕೆ ಶೌಚಾಲಯ ವ್ಯವಸ್ಥೆ ಇಲ್ಲ. ಹಾಗಾಗಿ, ಆವರಣದಲ್ಲಿ ಅನೈರ್ಮಲ್ಯ ಸೃಷ್ಟಿಯಾಗಿದೆ. ಊರಿನಲ್ಲಿ  ಅನೇಕ ಕುಟುಂಬಗಳು ಶೌಚಾಲಯವಿಲ್ಲ. ಆದ್ದರಿಂದ ಕೆಲವರು  ಭವನದ ಸುತ್ತಲೂ ಬಹಿರ್ದೆಸೆ ಮಾಡುತ್ತಾರೆ. ಜಿಲ್ಲಾಡಳಿತ ಸಾಮೂಹಿಕ ಶೌಚಾಲಯ ನಿರ್ಮಿಸಿಕೊಟ್ಟರೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಗಡಿ ಯಜಮಾನರಾದ ಜಯಸ್ವಾಮಿ ಅಭಿಪ್ರಾಯಪಟ್ಟರು.

‘ಸಮುದಾಯ ಭವನ ತ್ವರಿತವಾಗಿ ದುರಸ್ತಿಯಾದರೆ ಶುಭ ಸಮಾರಂಭಗಳನ್ನು ಭವನದಲ್ಲಿ ನಡೆಸಬಹುದು. ಇದರಿಂದ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಆರ್ಥಿಕವಾಗಿ ಸದೃಢರಲ್ಲದವರು ಹರದನಹಳ್ಳಿ ದೇವಸ್ಥಾನದಲ್ಲಿ ಮದುವೆ ಮಾಡುತ್ತಿದ್ದಾರೆ. ಕೆಲ ಮಂದಿ ನಗರ ಪ್ರದೇಶದ ಕಲ್ಯಾಣ ಮಂಟಪಗಳಲ್ಲಿ ಮಾಡುತ್ತಾರೆ. ನಮಗೆ ಸುಸಜ್ಜಿತ ಸಮುದಾಯ ಭವನದ ಅಗತ್ಯವಿದೆ. ನಿರ್ಮಿಸಿರುವ ಭವನಕ್ಕೆ ಶೌಚಾಲಯ, ನೀರು ಸೇರದಂತೆ ಮೂಲಸೌಕರ್ಯ ಕಲ್ಪಿಸಿ ಶುಭ ಸಮಾರಂಭ, ಸಭೆಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಬಂಡಿಗೆರೆ ನಿವಾಸಿ ಗೋವಿಂದ ಶೆಟ್ಟಿ ಒತ್ತಾಯಿಸಿದರು.

Post Comments (+)