ಯುಪಿಎಸ್‌ಸಿಯಲ್ಲಿ 307ನೇ ರ‍್ಯಾಂಕ್‌ ಗಳಿಸಿದ ಗಿರೀಶ ಕಲಗೊಂಡ ಯಶೋಗಾಥೆ

ಶನಿವಾರ, ಏಪ್ರಿಲ್ 20, 2019
31 °C
ಕನ್ನಡ ಮಾಧ್ಯಮದ ವಿದ್ಯಾರ್ಥಿಯ ಮೈಲುಗಲ್ಲು..!

ಯುಪಿಎಸ್‌ಸಿಯಲ್ಲಿ 307ನೇ ರ‍್ಯಾಂಕ್‌ ಗಳಿಸಿದ ಗಿರೀಶ ಕಲಗೊಂಡ ಯಶೋಗಾಥೆ

Published:
Updated:
Prajavani

ವಿಜಯಪುರ: ಎಂಜಿನಿಯರಿಂಗ್ ಪದವೀಧರ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಐಟಿ ಕಂಪನಿಯೊಂದರ ಉದ್ಯೋಗಿ. ಕೈ ತುಂಬಾ ಕಾಸು. ಯಾವುದಕ್ಕೂ ಕೊರತೆಯಿರಲಿಲ್ಲ. ನೆಮ್ಮದಿಯ ಬದುಕು ಸಿಕ್ಕಾಗಿತ್ತು...

ಆದರೂ ಪ್ರೌಢಶಾಲೆಯಲ್ಲಿದ್ದಾಗ ಮನದಲ್ಲಿ ಮೊಳೆತ ಕನಸು ಬೆಂಬಿಡದೆ ಕಾಡಿತು. ಇದರ ಸಾಕಾರಕ್ಕಾಗಿ ಬೆನ್ನತ್ತಿದ ಫಲವೇ ಇದೀಗ 2018ನೇ ಸಾಲಿನಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 307ನೇ ರ‍್ಯಾಂಕ್‌ನ ಫಲ...

ವಿಜಯಪುರ ತಾಲ್ಲೂಕಿನ ನಾಗಠಾಣದ ಅಪ್ಪಟ ಗ್ರಾಮೀಣ ಪ್ರತಿಭೆ ಗಿರೀಶ ಧರ್ಮರಾಜ ಕಲಗೊಂಡ ಯಶೋಗಾಥೆಯಿದು.

ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬಳಿಕ ಸ್ನೇಹಿತರು, ಆಪ್ತರ ಜತೆ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸಂಭ್ರಮದಲ್ಲಿ ಮುಳುಗಿದ್ದ ಸಂದರ್ಭವೇ ಗಿರೀಶ ‘ಪ್ರಜಾವಾಣಿ’ ಜತೆ ತಮ್ಮ ಯಶೋಗಾಥೆಯ ಹಾದಿಯನ್ನು ಬಿಚ್ಚಿಟ್ಟರು.

‘ನಾಲ್ಕನೇ ಯತ್ನದಲ್ಲಿ ಆಯ್ಕೆಯಾಗಿರುವೆ. ಈಗಿನ ರ‍್ಯಾಂಕಿಂಗ್‌ಗೆ ಐಆರ್‌ಎಸ್‌ ಅಥವಾ ಕಸ್ಟಮ್ಸ್‌ ಇಲಾಖೆಯಲ್ಲಿ ಅವಕಾಶ ದೊರೆಯಬಹುದು. ಇನ್ನೂ ಎರಡು ಅವಕಾಶ ನನಗಿವೆ. ಐಎಎಸ್‌ ಅಥವಾ ಐಪಿಎಸ್‌ ಕನಸು ದಿನದಿಂದ ದಿನಕ್ಕೆ ಬಲವಾಗುತ್ತಿದೆ. ಇನ್ನೊಂದೆರೆಡು ದಿನದಲ್ಲಿ ಆಪ್ತರೊಟ್ಟಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವೆ’ ಎಂದರು.

‘ಮೂರನೇ ಯತ್ನದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ 500ಕ್ಕೆ 380 ಅಂಕ ಗಳಿಸುವ ಮೂಲಕ ದೇಶದಲ್ಲೇ ಹೆಚ್ಚು ಅಂಕ ಗಳಿಸಿದ ಕೀರ್ತಿ ನನ್ನದಾಗಿತ್ತು. ಆದರೆ ಸಂದರ್ಶನದಲ್ಲಿ ವಿಫಲನಾಗಿದ್ದೆ. ಈ ಬಾರಿ ಅವಕಾಶ ಪಡೆಯಬೇಕು ಎಂಬ ಹಠದಿಂದ ಪ್ರಯತ್ನಿಸಿದೆ. ಯಶಸ್ಸು ಸಿಕ್ಕಿದೆ. ಭಾಳ ಖುಷಿಯಾಗಿದೆ. ನನ್ನ ಸಾಧನೆಯಲ್ಲಿ ಹಲವರ ಪರಿಶ್ರಮವಿದೆ. ಸಹಕಾರವಿದೆ’ ಎಂದು ಗಿರೀಶ ನೆನಪಿಸಿಕೊಂಡರು.

ಪ್ರೌಢಶಾಲೆಯಲ್ಲೇ ಕನಸು..!

‘ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ನಾನು ಓದಿದ್ದು ನಾಗಠಾಣ ಗ್ರಾಮದ ಸರ್ಕಾರಿ ಶಾಲೆಯಲ್ಲೇ. ಅದೂ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿ. ನನ್ನ ಗೆಲುವಿನ ಮೆಟ್ಟಿಲು ನಾಗಠಾಣ.

ಪಿಯುಸಿ ವ್ಯಾಸಂಗಕ್ಕಾಗಿ ವಿಜಯಪುರದ ಪಿಡಿಜೆ ಕಾಲೇಜು ಸೇರಿದೆ. ಪಿಯುಸಿ ಬಳಿಕ ಎಂಜಿನಿಯರಿಂಗ್ ಶಿಕ್ಷಣಕ್ಕಾಗಿ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು,ಹಳಕಟ್ಟಿ ಕಾಲೇಜಿಗೆ ಸೇರ್ಪಡೆಯಾದೆ. ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ವಿಭಾಗದ ವ್ಯಾಸಂಗ ಮುಗಿಯುವುದರೊಳಗಾಗಿಯೇ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಬೆಂಗಳೂರು ಸೇರಿದೆ.

ಎರಡು ವರ್ಷ ದುಡಿದೆ. ಆರ್ಥಿಕವಾಗಿ ಸಬಲನಾದೆ. ಇದರ ಬೆನ್ನಿಗೆ ಮನದೊಳಗಿದ್ದ ತುಡಿತ ಮತ್ತೆ ಚಿಗುರಿತು. ಯುಪಿಎಸ್‌ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದೆ. ವಿದ್ಯಾರ್ಥಿ ವೇತನವೂ ಸಿಕ್ಕಿತು. ಕರ್ನಾಟಕ ಸರ್ಕಾರದ ಸಹಕಾರವೂ ಎಲ್ಲ ಸಂದರ್ಭದಲ್ಲಿ ದೊರೆತಿತು.

ಜನರ ಸೇವೆ ಮಾಡಲು ಮನಸ್ಸು ಹಂಬಲಿಸಿದೆ. ಅದೇ ನನ್ನ ಜೀವನದ ಗುರಿಯೂ ಆಗಿದೆ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವೆ’ ಎಂದು ಗಿರೀಶ ‘ಪ್ರಜಾವಾಣಿ’ಯೊಟ್ಟಿಗೆ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡರು.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !