ಗುರುವಾರ , ಸೆಪ್ಟೆಂಬರ್ 16, 2021
29 °C
ಚೀನಾದ ಆರ್ಥಿಕ ಪ್ರಭಾವವನ್ನು ನಿಯಂತ್ರಣದಲ್ಲಿ ಇರಿಸುವ ಯತ್ನವನ್ನು ಟ್ರಂಪ್‌ ಆಡಳಿತ ಆರಂಭಿಸಿದೆ

ವಾಣಿಜ್ಯ ಸಮರ: ಸಾರ್ವಭೌಮತ್ವದ ಪ್ರಶ್ನೆ?

ಅನಾ ಸ್ವಾನ್ಸನ್, ಕೀತ್‌ ಬ್ರಾಡ್ಶರ್‌ Updated:

ಅಕ್ಷರ ಗಾತ್ರ : | |

Prajavani

ಜಾಗತಿಕ ಮಟ್ಟದಲ್ಲಿ ಆಧಿಪತ್ಯಕ್ಕಾಗಿ, ಪ್ರತಿಷ್ಠೆಗಾಗಿ ಮತ್ತು ಸಂಪತ್ತಿಗಾಗಿ ಚೀನಾ ಹಾಗೂ ಅಮೆರಿಕ ಸಂಗ್ರಾಮ ನಡೆಸಿವೆ. ಈ ಎರಡು ದೇಶಗಳ ನಡುವಿನ ವಾಣಿಜ್ಯ ಸಮರವು ದಶಕಗಳ ಕಾಲ ಮುಂದುವರಿಯಬಲ್ಲ ಆರ್ಥಿಕ ಸಂಘರ್ಷದ ಆರಂಭಿಕ ಹಂತವಾಗಿರುವುದು ನಿಜವೆಂಬಂತೆ ಕಾಣುತ್ತಿದೆ.

ಎರಡೂ ದೇಶಗಳು ತಮ್ಮ ತಮ್ಮ ನಿಲುವುಗಳನ್ನು ಸಡಿಲಿಸದ ಕಾರಣ, ವಾಣಿಜ್ಯ ಒಪ್ಪಂದದ ಕಡೆ ಸಾಗುತ್ತಿದ್ದ ಮಾತುಕತೆಯೊಂದು ಕಳೆದ ವಾರ ಬಹುತೇಕ ಮುರಿದುಬಿದ್ದಿದೆ. ಒಂದು ವೇಳೆ, ವಾಣಿಜ್ಯ ಒಪ್ಪಂದವೊಂದು ಸಾಧ್ಯವಾದರೂ ಅದು ವಿಶ್ವದ ಎರಡು ಅತಿದೊಡ್ಡ ಅರ್ಥ ವ್ಯವಸ್ಥೆಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ತಿಳಿಗೊಳಿಸಲು ಹೆಚ್ಚಿನ ಸಹಾಯ ಮಾಡಲಿಕ್ಕಿಲ್ಲ. ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಚೀನಾದ ಪಾತ್ರ ಹೆಚ್ಚುತ್ತಿರುವುದು, ವಿದೇಶದ ಕಂಪನಿಗಳ ವಿಚಾರದಲ್ಲಿ ಅದು ತಾರತಮ್ಯ ಎಸಗುವುದು, ಆಯಕಟ್ಟಿನ ಉದ್ಯಮಗಳಿಗೆ ಸಬ್ಸಿಡಿ ನೀಡುವುದು, ಅಮೆರಿಕ ಮತ್ತು ಯುರೋಪಿನ ಉನ್ನತ ತಂತ್ರಜ್ಞಾನದ ಕಂಪನಿಗಳನ್ನು ಖರೀದಿಸುತ್ತಿರುವುದು, ಪ್ರಭುತ್ವವೇ ಮುಂದಾಗಿ ಹ್ಯಾಕಿಂಗ್‌ ನಡೆಸುವುದು... ಇಂಥವೆಲ್ಲ ಕೃತ್ಯಗಳನ್ನು ಅಮೆರಿಕ ಎಚ್ಚರಿಕೆಯಿಂದ ಗಮನಿಸುತ್ತಿದೆ.

ಅಮೆರಿಕದಲ್ಲಿ ಮತ್ತು ಇತರ ಕಡೆಗಳಲ್ಲಿ ಚೀನಾದ ಆರ್ಥಿಕ ಪ್ರಭಾವವನ್ನು ನಿಯಂತ್ರಣದಲ್ಲಿ ಇರಿಸುವ ಯತ್ನವನ್ನು ಟ್ರಂಪ್‌ ಆಡಳಿತ ಆರಂಭಿಸಿದೆ. ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪಾಂಪಿಯೊ ಅವರು ಚೀನಾದ ಮಹತ್ವಾಕಾಂಕ್ಷೆಗಳನ್ನು ರಷ್ಯಾ ಮತ್ತು ಇರಾನ್‌ನ ಮಹತ್ವಾಕಾಂಕ್ಷೆಗಳ ಜೊತೆ ಹೋಲಿಸಿ ಮಾತನಾಡಿದ್ದಾರೆ. ‘ಚೀನಾ ಹೊಸ ಬಗೆಯ ಸವಾಲವನ್ನು ಸೃಷ್ಟಿಸಿದೆ. ಸರ್ವಾಧಿಕಾರಿ ಆಡಳಿತ ವ್ಯವಸ್ಥೆ ಹೊಂದಿರುವ ಚೀನಾ ದೇಶ, ಪಶ್ಚಿಮದ ಜಗತ್ತಿನ ಜೊತೆ ಆರ್ಥಿಕವಾಗಿ ಬೆಸೆದುಕೊಂಡಿದೆ– ಇಂತಹ ಬೆಸುಗೆಯನ್ನು ಸೋವಿಯತ್ ಒಕ್ಕೂಟ ಎಂದೂ ಹೊಂದಿರಲಿಲ್ಲ’ ಎಂದು ಪಾಂಪಿಯೊ ಹೇಳಿದ್ದಾರೆ.

ತನ್ನ ಕಂಪನಿಗಳಲ್ಲಿ ಚೀನಾದ ಹೂಡಿಕೆಯನ್ನು ಮಿತಿಯಲ್ಲಿ ಇರಿಸಲು ಅಮೆರಿಕವು ಕ್ರಮ ಕೈಗೊಳ್ಳುತ್ತಿದೆ, ಚೀನಾಕ್ಕೆ ಯಾವ ಬಗೆಯ ತಂತ್ರಜ್ಞಾನ ರಫ್ತು ಮಾಡಬಹುದು ಎಂಬುದನ್ನು ಮರುಪರಿಶೀಲಿಸುತ್ತಿದೆ, ಅಮೆರಿಕದ ಮುಂದಿನ ಪೀಳಿಗೆಯ ದೂರಸಂಪರ್ಕ ಜಾಲದ ನಿರ್ಮಾಣದಲ್ಲಿ ಚೀನಾದ ಪಾತ್ರವನ್ನು ಮಿತಿಯಲ್ಲಿ ಇರಿಸುತ್ತಿದೆ. ಅಮೆರಿಕದಲ್ಲಿ ಇರುವ ಚೀನಾದ ಸಂಶೋಧಕರು ಬೌದ್ಧಿಕ ರಹಸ್ಯಗಳನ್ನು ತಮ್ಮದಾಗಿಸಿಕೊಳ್ಳುತ್ತಿರಬಹುದು ಎಂಬ ಆತಂಕದಿಂದ ಎಫ್‌ಬಿಐ, ಈ ಸಂಶೋಧಕರ ಮೇಲಿನ ನಿಗಾ ಹೆಚ್ಚಿಸಿದೆ. ಅಮೆರಿಕದ ತಂತ್ರಜ್ಞಾನದ ವಾಣಿಜ್ಯಿಕ ಗೂಢಚರ್ಯೆಯ ಮೇಲೆ ನ್ಯಾಯಾಂಗ ಇಲಾಖೆ ಕಣ್ಣಿಟ್ಟಿದೆ. ಚೀನಾದ ದೂರಸಂಪರ್ಕ ಕ್ಷೇತ್ರದ ದೈತ್ಯ ಕಂಪನಿ ಹುಆವೆ, ವ್ಯಾಪಾರ ರಹಸ್ಯಗಳನ್ನು ಕದ್ದಿದೆ ಹಾಗೂ ಇರಾನ್ ವಿಚಾರದಲ್ಲಿ ತಾನು ಹೇರಿರುವ ನಿರ್ಬಂಧಗಳನ್ನು ಉಲ್ಲಂಘಿಸಿದೆ ಎಂದು ಅಮೆರಿಕ ಹೇಳಿದೆ.

ಭವಿಷ್ಯದ ಉದ್ದಿಮೆಗಳ ಮೇಲೆ ಪಾರಮ್ಯ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ ಇವೆಲ್ಲಕ್ಕೂ ತಿರುಗೇಟು ನೀಡುತ್ತಿದೆ. ‘ಚೀನಾದ ಶಕ್ತಿ, ಸಾಮರ್ಥ್ಯ ಮತ್ತು ಇಚ್ಛಾಶಕ್ತಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅಮೆರಿಕವು ಸುಂಕ ಹೆಚ್ಚಳದ ಮಾತನಾಡುತ್ತಿದೆ. ಇದು ಎರಡು ದೇಶಗಳ ನಡುವಿನ ವಾಣಿಜ್ಯ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುತ್ತಿದೆ’ ಎಂದು ಚೀನಾದ ಕಮ್ಯುನಿಸ್ಟ್ ಪಕ್ಷದ ಪತ್ರಿಕೆ ‘ಪೀಪಲ್ಸ್‌ ಡೈಲಿ’ಯ ಅಂಕಣವೊಂದರಲ್ಲಿ ಬರೆಯಲಾಗಿದೆ. ಈ ಬರಹವನ್ನು ‘ಚೀನಾದ ದನಿ’ ಎಂಬ ಹೆಸರಿನಲ್ಲಿ ಬರೆಯಲಾಗಿದ್ದು, ವಿದೇಶ ವಿದ್ಯಮಾನಗಳ ಬಗ್ಗೆ ಅಧಿಕಾರಯುತ ಅನಿಸಿಕೆಗಳನ್ನು ಪ್ರಕಟಿಸುವಾಗ ಈ ಹೆಸರು ಬಳಸಲಾಗುತ್ತದೆ.

ಚೀನಾದ ಮಹತ್ವಾಕಾಂಕ್ಷೆಗಳು ಹಾಗೂ ಅದರ ನಡೆಗಳಿಗೆ ಮಿತಿ ಹಾಕುವುದು ಸವಾಲಿನ ಕೆಲಸ. ಟ್ರಂಪ್‌ ಆಡಳಿತದ ಕ್ರಮಗಳು ಚೀನಾ ಮತ್ತು ಅದರ ಪ್ರಜೆಗಳು ತಾರತಮ್ಯಕ್ಕೆ ಗುರಿಯಾಗುವಂತೆ ಮಾಡಿ, ಅಂತಿಮವಾಗಿ ಅಮೆರಿಕಕ್ಕೇ ತೊಂದರೆ ತಂದಿಡಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ. ‘ದಶಕಗಳ ಕಾಲ ಚೀನಾ ಜೊತೆ ಮಾತುಕತೆ ನಡೆಸಬೇಕಾಗಬಹುದು. ವಾಣಿಜ್ಯ ಒಪ್ಪಂದ ಸಾಧ್ಯವಾದರೂ, ದೊಡ್ಡ ಬಿಕ್ಕಟ್ಟನ್ನು ನಿವಾರಿಸಲು ಅದು ಹೆಚ್ಚು ಸಹಾಯ ಮಾಡಲಿಕ್ಕಿಲ್ಲ. ಈಗ ನಡೆದಿರುವುದು ಸಾಗುತ್ತಿರುವ ಯುದ್ಧದ ನಡುವಿನ ಸಣ್ಣ ಚಕಮಕಿ’ ಎನ್ನುತ್ತಾರೆ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಚೀನಾ ವ್ಯವಹಾರಗಳ ವಿದ್ವಾಂಸ ಡೇವಿಡ್ ಲ್ಯಾಂಪ್ಟನ್.

ಒಪ್ಪಂದ ಸಾಧ್ಯವಾಗದೆ ಚೀನಾದ ಅಧಿಕಾರಿಗಳು ಕಳೆದ ವಾರ ಬೀಜಿಂಗ್‌ಗೆ ಮರಳಿದ್ದಾರೆ. ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವ ಒಪ್ಪಂದಕ್ಕೆ ಎರಡೂ ದೇಶಗಳು ಈಗಲೂ ಬರಬಹುದು. ಮಾತುಕತೆ ಮುಂದುವರಿಯುತ್ತದೆ ಎಂದು ಎರಡೂ ದೇಶಗಳ ಅಧಿಕಾರಿಗಳು ಹೇಳಿದ್ದಾರೆ. ಒಪ್ಪಂದ ಸಾಧ್ಯವಾಗದಿದ್ದುದನ್ನು ಚೀನಾದ ಉಪಾಧ್ಯಕ್ಷ ಲಿಯು ಹಿ ಅವರು, ‘ಸಣ್ಣ ಹಿನ್ನಡೆ’ ಎಂದು ಬಣ್ಣಿಸಿದ್ದಾರೆ. ಟ್ರಂಪ್ ಅವರು ಮಾತುಕತೆಯನ್ನು ‘ರಚನಾತ್ಮಕ, ಪ್ರಾಮಾಣಿಕ’ ಎಂದು ವ್ಯಾಖ್ಯಾನಿಸಿದ್ದಾರೆ.

ವಾಣಿಜ್ಯ ಒಪ್ಪಂದ ಏರ್ಪಟ್ಟರೆ ಎರಡು ದೇಶಗಳ ನಡುವಿನ ಬಿಗುವಿನ ಪರಿಸ್ಥಿತಿ ತುಸು ತಿಳಿಗೊಳ್ಳಬಹುದಾದರೂ, ಅದು ಅಮೆರಿಕದ ಆಡಳಿತ ರೂಪಿಸಿಕೊಂಡಿರುವ ಹಲವು ಮಹತ್ವಾಕಾಂಕ್ಷೆಯ ಗುರಿಗಳನ್ನು ತಲುಪಲು ನೆರವಾಗುವುದು ಅಸಂಭವ. ಟ್ರಂಪ್‌ ಅವರ ಸಲಹೆಗಾರರು, ಅದರಲ್ಲೂ ಮುಖ್ಯವಾಗಿ ಅಮೆರಿಕದ ವಾಣಿಜ್ಯ ವಲಯದ ಪ್ರತಿನಿಧಿ ರಾಬರ್ಟ್‌ ಲೈಟಿಜರ್ ಅವರು, ಚೀನಾದ ‘ಆರ್ಥಿಕ ಆಕ್ರಮಣ’ದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಆದರೆ, ಸಮಸ್ಯೆಯ ತೀವ್ರತೆಯನ್ನು ಒಪ್ಪಂದದ ಪಠ್ಯದಲ್ಲಿ ಅಳವಡಿಸುವುದಕ್ಕೆ ಅಮೆರಿಕದ ಆಡಳಿತ ಹೆಣಗಾಡುತ್ತಿದೆ. ಚೀನಾದ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲದ ಯಾವುದೇ ಅಂಶವನ್ನು ಹೇರುವ ಶಕ್ತಿ ಮಾತುಕತೆಯ ಭಾಗವಾಗಿರುವವರಿಗೆ ಇಲ್ಲ ಎಂಬಂತೆ ಕಾಣುತ್ತಿದೆ ಎಂದು ಅದನ್ನು ಹತ್ತಿರದಿಂದ ಗಮನಿಸುತ್ತಿರುವವರು ಹೇಳಿದ್ದಾರೆ.

ಮಾತುಕತೆಯಲ್ಲಿ ಚೀನಾ ತಂಡದ ನೇತೃತ್ವ ವಹಿಸಿರುವ ಲಿಯು ಅವರು ತಮ್ಮೆದುರು ಇರುವ ಭಾರಿ ಸವಾಲನ್ನು ಅಧಿಕೃತ ಸುದ್ದಿಸಂಸ್ಥೆ ಕ್ಸಿನ್‌ಹುವಾ ಮೂಲಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ‘ಹಲವು ವಿಷಯಗಳಲ್ಲಿ ಎರಡೂ ಕಡೆಯವರು ಒಮ್ಮತಕ್ಕೆ ಬಂದಿದ್ದಾರೆ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ, ಒಮ್ಮತ ಸಾಧ್ಯವಾಗದ ವಿಷಯಗಳೂ ಇವೆ. ಇಂತಹ ಮಹತ್ವದ ತಾತ್ವಿಕ ವಿಚಾರಗಳಲ್ಲಿ ನಾವು ನಿಲುವು ಸಡಿಲಿಸಲಾಗದು’ ಎಂದು ಅವರು ಹೇಳಿದ್ದಾರೆ.

ಚೀನಾದಿಂದ ಅಮೆರಿಕಕ್ಕೆ ರಫ್ತಾಗುವ ಸರಿಸುಮಾರು ಅರ್ಧದಷ್ಟು ಉತ್ಪನ್ನಗಳ ಮೇಲೆ ಅಮೆರಿಕ ಸುಂಕದ ಬರೆ ಎಳೆದಿದ್ದರೂ, ಅಮೆರಿಕದ ಆಡಳಿತ ಬಯಸುತ್ತಿರುವ ಹಲವು ಮಹತ್ವದ ಬದಲಾವಣೆಗಳನ್ನು ತಂದುಕೊಳ್ಳಲು ಚೀನಾ ಒಪ್ಪುತ್ತಿಲ್ಲ. ಉನ್ನತ ತಂತ್ರಜ್ಞಾನದ ತಯಾರಿಕಾ ಕೈಗಾರಿಕೆಗಳಿಗೆ ನೀಡಿರುವ ಸಬ್ಸಿಡಿಯನ್ನು ಹಿಂದಕ್ಕೆ ಪಡೆಯಲು, ಸೈಬರ್‌ ಕಳ್ಳತನ ತಡೆಯುವ ಬಗ್ಗೆ ಸಾರ್ವಜನಿಕವಾಗಿ ಬದ್ಧತೆ ವ್ಯಕ್ತಪಡಿಸಲು ಚೀನಾ ಮುಂದಾಗುತ್ತಿಲ್ಲ.

ವಾಣಿಜ್ಯ ತಿಕ್ಕಾಟ ತಡೆಯಲು ಚೀನಾದಲ್ಲಿನ ಹಲವರು ಪ್ರಯತ್ನಿಸಿದ್ದರು. ಈ ತಿಕ್ಕಾಟದಿಂದ ಅಮೆರಿಕದ ಆರ್ಥಿಕತೆ ಮೇಲೆ ಆಗುವ ಪರಿಣಾಮಕ್ಕಿಂತ ಚೀನಾ ಆರ್ಥಿಕತೆಯ ಮೇಲಿನ ಪರಿಣಾಮ ಹೆಚ್ಚಿರುವ ಸಾಧ್ಯತೆ ಇದೆ. ವಾಣಿಜ್ಯ ಒಪ್ಪಂದವನ್ನು ಚೀನಾ ಮುರಿದಿದೆ ಎಂದು ಟ್ರಂಪ್‌ ಆಡಳಿತ ಆರೋಪಿಸಿದೆ. ಆದರೆ, ಅಮೆರಿಕವು ಕೇಳುತ್ತಿರುವುದು ಹೆಚ್ಚು, ಹಿಂದಿರುಗಿ ಕೊಡುತ್ತಿರುವುದು ತೀರಾ ಕಡಿಮೆ ಎಂಬ ಭಾವನೆಯ ನೆಲೆಯ ಮೇಲೆ ಚೀನಾದ ಪ್ರತಿರೋಧ ನಿಂತಿದೆ. ಅಲ್ಲದೆ, ಟ್ರಂಪ್ ಆಡಳಿತದ ಕೆಲವು ಬೇಡಿಕೆಗಳು ಚೀನಾದ ಸಾರ್ವಭೌಮತ್ವದಲ್ಲಿನ ಹಸ್ತಕ್ಷೇಪ, ತಮ್ಮ ದೇಶದ ಅರ್ಥವ್ಯವಸ್ಥೆಯ ವಿಚಾರದಲ್ಲಿ ಅಮೆರಿಕಕ್ಕೆ ಅತಿಯಾದ ಅಧಿಕಾರ ಕೊಡುವುದಕ್ಕೆ ಸಮ ಎಂದೂ ಚೀನೀಯರು ಭಾವಿಸಿದ್ದಾರೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು