ಪ್ರವಾಹದ ದಿಕ್ಕು ಬದಲಿಸಿದ ಮೊದಲಿಗರು ‘ವಿ.ಧನಂಜಯ್‌ ಕುಮಾರ್‌’

ಶುಕ್ರವಾರ, ಮಾರ್ಚ್ 22, 2019
31 °C

ಪ್ರವಾಹದ ದಿಕ್ಕು ಬದಲಿಸಿದ ಮೊದಲಿಗರು ‘ವಿ.ಧನಂಜಯ್‌ ಕುಮಾರ್‌’

Published:
Updated:
Prajavani

ಪ್ರವಾಹ ಒಂದು ದಿಕ್ಕಿನಲ್ಲಿ ಸಾಗಿದರೆ ಅದಕ್ಕೆ ವಿರುದ್ಧವಾಗಿ ಈಜುವ ಪ್ರಯತ್ನವನ್ನು ಹಲವರು ಮಾಡುತ್ತಾರೆ. ಅಂತಹ ಪ್ರಯತ್ನ ಮಾಡಿದವರ ಸಾಲಿನಲ್ಲಿ ಹಿರಿಯ ರಾಜಕಾರಣಿ ವಿ. ಧನಂಜಯ್‌ ಕುಮಾರ್‌ ಒಬ್ಬರು. ದೇಶದ ರಾಜಕಾರಣದಲ್ಲಿ ಕಾಂಗ್ರೆಸ್‌ ತನ್ನ ಬುನಾದಿ ಭದ್ರಪಡಿಸಿಕೊಂಡಿದ್ದ ಕಾಲದಲ್ಲಿ ಚಿಗುರಿದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಚುನಾವಣೆ ಎದುರಿಸಿದವರು ಅವರು.

ಕರಾವಳಿಯಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯ ಇದ್ದ ಕಾಲದಲ್ಲಿ ಅಂದರೆ 1983ರಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಧನಂಜಯ್‌ ಕುಮಾರ್‌ ಅವರತ್ತ ಎಲ್ಲರೂ ಅಚ್ಚರಿಯ ನೋಟ ಬೀರಿದ್ದರು. ಬದಲಾವಣೆ ಬಯಸಿದ ಜನರು ಅವರನ್ನು ಆಯ್ಕೆ ಮಾಡಿದ್ದರು. ಹಾಗೆ ರಾಜಕೀಯ ಅಲೆಯಲ್ಲಿ ಒಮ್ಮೆ ಗುರುತಿಸಿಕೊಂಡ ಅವರು ಬಳಿಕದ ವರ್ಷಗಳಲ್ಲಿ ಹೆಚ್ಚೇನೂ ಗೆಲುವು ಕಾಣಲಿಲ್ಲ. ಮತ್ತೊಂದು (1985ರಲ್ಲಿ) ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರು.  ಮಗದೊಂದು ಲೋಕಸಭಾ ಚುನಾವಣೆಯಲ್ಲಿ ಅಂದರೆ 1989ರಲ್ಲಿ ಬಿ. ಜನಾರ್ದನ ಪೂಜಾರಿ ವಿರುದ್ಧವೂ ಸೋಲು ಕಂಡರು. ಸೋತರೂ ಕರಾವಳಿಯಲ್ಲಿ ಬಿಜೆಪಿ ಟಿಸಿಲೊಡೆಯುವಂತೆ ಮಾಡುವಲ್ಲಿ ಯಶಸ್ವಿಯಾದದ್ದು ಸುಳ್ಳಲ್ಲ.

ನಿರಂತರ ಗೆಲುವು: ಅಷ್ಟರಲ್ಲಿ ದೇಶದಲ್ಲಿಯೂ ಅಯೋಧ್ಯೆಯ ಪ್ರಕರಣದ ಹುಟ್ಟು ಹಿಡಿದುಕೊಂಡು ಬಿಜೆಪಿ ಪ್ರವಾಹದ ದಿಕ್ಕನ್ನು ಬದಲಾಯಿಸಲು ನಿರಂತರ ಪ್ರಯತ್ನಿಸುತ್ತಿತ್ತು. ಈ ಪ್ರಯತ್ನ ಕರಾವಳಿಯಲ್ಲಿ ಯಶಸ್ವಿಯಾಯಿತು ಕೂಡ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1991ರಲ್ಲಿ ಮತ್ತೆ ಲೋಕಸಭಾ ಚುನಾವಣೆ ನಡೆದಾಗ ಕಾಂಗ್ರೆಸ್‌ನ ಘಟಾನುಘಟಿ ನಾಯಕ ಜನಾರ್ದನ ಪೂಜಾರಿ ಸೋಲು ಕಾಣಬೇಕಾಯಿತು. ಕರಾವಳಿಯಲ್ಲಿ ಬಿಜೆಪಿ ಸಾಧಿಸಿದ ಈ ಗೆಲುವು ಮಹತ್ವದ್ದಾಗಿತ್ತು. ಪ್ರವಾಹದ ವಿರುದ್ಧ ಈಜಲು ಮನಸ್ಸು ಮಾಡಿದ ಧನಂಜಯ್‌ ಕುಮಾರ್‌ ಪ್ರವಾಹದ ದಿಕ್ಕನ್ನು ಬದಲಿಸುವಲ್ಲಿ ಯಶಸ್ವಿಯಾಗಿದ್ದರು. 1996ರಲ್ಲಿ ಹಾಗೂ 1998ರಲ್ಲಿಯೂ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಕಾಣುವುದು ಸಾಧ್ಯವಾಗಲಿಲ್ಲ. 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬದಲಿಸಿ ಎಂ.ವೀರಪ್ಪ ಮೊಯಿಲಿ ಅವರನ್ನು ಕಣಕ್ಕಿಳಿಸಿದರೂ ಬಿಜೆಪಿಯ ಗೆಲುವಿನ ಕಂಬ ಜಗ್ಗಲಿಲ್ಲ.

ಈ ನಿರಂತರ ಗೆಲುವು ಧನಂಜಯ ಕುಮಾರ್‌ ಅವರನ್ನು ಜನರಿಂದ ತುಸು ದೂರ ಕೊಂಡೊಯ್ದಿತು ಎಂಬುದನ್ನು ಹಲವು ಕಾರ್ಯಕರ್ತರು ನೆನಪಿಸಿಕೊಳ್ಳುತ್ತಾರೆ. ಹಾಗಾಗಿಯೇ ಕಾರ್ಯಕರ್ತರ ಧ್ವನಿಯನ್ನು ಅರಿತ ಬಿಜೆಪಿ 2004ರಲ್ಲಿ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್‌ ನೀಡಿ ಗೆಲುವನ್ನು ಉಳಿಸಿಕೊಂಡಿತು. ಧನಂಜಯ್‌ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದ ದೆಹಲಿವಿಶೇಷ ಪ್ರತಿನಿಧಿ ಎಂಬ ಸ್ಥಾನವನ್ನು ಪಡೆದರು. ಬಳಿಕದ ವರ್ಷಗಳಲ್ಲಿ ಬಿಜೆಪಿ ಪಕ್ಷವು ಉತ್ತುಂಗಕ್ಕೇರಿದರೂ ಧನಂಜಯ್‌ಕುಮಾರ್‌ ಅವರ ರಾಜಕೀಯ ಗ್ರಾಫ್‌ ಯಾಕೋ ಮೇಲೇಳಲೇ ಇಲ್ಲ. 

ಇದನ್ನೂ ಓದಿ... ಬಹು ಅಂಗಾಂಗ ವೈಫಲ್ಯ: ಮಾಜಿ ಸಚಿವ ವಿ.ಧನಂಜಯಕುಮಾರ್‌ ನಿಧನ

ಸಾಧಕ ಪಥ: ಅಟಲ್‌ಬಿಹಾರಿ ವಾಜಪೇಯಿ ಅವರು ಮೊದಲು ಪ್ರಧಾನಿ ಕೇಂದ್ರ ವಿಮಾನಯಾನ ಖಾತೆ ಸಚಿವಾಗಿ, ಎರಡನೇ ಅವಧಿಯಲ್ಲಿ ಹಣಕಾಸು ರಾಜ್ಯ ಸಚಿವರಾಗಿ, ಜವಳಿ ಖಾತೆ ಸಚಿವರಾಗಿ ಕೆಲಸ ಮಾಡಿದವರು. ಹಿಂದಿ ಭಾಷೆಯ ಮೇಲೆ ಅದ್ಭುತವಾದ ಹಿಡಿತ ಇದ್ದುದರಿಂದ ಅವರು ಬೃಹತ್‌ ರ‍್ಯಾಲಿಗಳಲ್ಲಿ ಕಾರ್ಯಕರ್ತರ ಮನಸ್ಸನ್ನು ಮಾತಿನಿಂದಲೇ ಗೆಲ್ಲುತ್ತಿದ್ದರು. ಹಿರಿಯ ನಾಯಕರ ಭಾಷಣಗಳನ್ನು ಸಮರ್ಥವಾಗಿ ಅದೇ ಜೋಶ್‌ನಲ್ಲಿ ಕ್ಷಣಾರ್ಧದಲ್ಲೇ ಅನುವಾದ ಮಾಡಿ ಮಾತನಾಡುತ್ತಿದ್ದರು. ಅವರ ಏಳುಬೀಳುಗಳ ಈ ಪಯಣ ಶುರುವಾಗಿದ್ದು ಕಾರ್ಕಳದ ವೇಣೂರಿನಲ್ಲಿ. 1951ರ ಜೂನ್‌ 4ರಂದು ವೇಣೂರಿನಲ್ಲಿ ಜನಿಸಿದ ಅವರು ಜೈನ ಸಮುದಾಯಕ್ಕೆ ಸೇರಿದವರು. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಪದವಿ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಆರೆಸ್ಸೆಸ್‌ ಜೊತೆ ಹತ್ತಿರದ ಸಂಪರ್ಕ ಇದ್ದುದರಿಂದ ಬಿಜೆಪಿ ಪಕ್ಷದ ಒಳತೋಟಿಗಳನ್ನು ಚೆನ್ನಾಗಿ ಗ್ರಹಿಸಬಲ್ಲ ಶಕ್ತಿಯೂ ಅವರಿಗಿತ್ತು.

ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರಥಮ ಸಂಸದರೆಂಬ ಹೆಗ್ಗಳಿಕೆಯ ಜೊತೆಗೆ ಪ್ರಥಮ ಸಚಿವರೆಂಬ ಹೆಗ್ಗಳಿಕೆ ಅವರಿಗೆ ಸಲ್ಲಬೇಕು. 1996ರಲ್ಲಿ ಸಂಸದರ ನಿಧಿಯನ್ನು ಶೇ 100ರಷ್ಟು ಬಳಕೆ ಮಾಡಿಕೊಂಡು, ಪ್ರಜಾವಾಣಿ ನಡೆಸಿದ ಸಮೀಕ್ಷೆಯಲ್ಲಿ ‘ಶಹಬ್ಬಾಸ್‌ ಧನಂಜಯ್‌ ಕುಮಾರ್‌’ ಎಂಬ ಪ್ರಶಂಸೆ ಪಡೆದುಕೊಂಡಿದ್ದರು. ರಾಜ್ಯದ ಇತರ ಎಲ್ಲ ಸಂಸದರು ತಮ್ಮ ಸಂಸದರ ನಿಧಿ ಬಳಕೆಯಲ್ಲಿ ತೋರುವ ಔದಾಸೀನ್ಯದ ಬಗ್ಗೆ ಟೀಕಿಸಲು ಜನರು ಧನಂಜಯ್‌ ಅವರ ಸಾಧನೆಯನ್ನು ಉಲ್ಲೇಖಿಸುತ್ತಿದ್ದರು.

ಮುನಿಸು – ಮೌನ: ಬಿಜೆಪಿಯೊಡನೆ ಮುನಿಸಿಕೊಂಡ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿಕೊಂಡಾಗ ಧನಂಜಯ್‌ಕುಮಾರ್‌ ಆ ಪಕ್ಷದ ರಾಜ್ಯ ಅಧ್ಯಕ್ಷರಾದರು. ಅಷ್ಟೇ ಏಕೆ, ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ವಿರುದ್ಧವೇ ಭ್ರಷ್ಟತೆಯ ಆರೋಪಗಳನ್ನು ಮಾಡಲು ಧನಂಜಯ್‌ ಅಳುಕಲಿಲ್ಲ. ಯಡಿಯೂರಪ್ಪ ಅವರೊಡನೆ ಇದ್ದ ಆತ್ಮೀಯತೆಯ ಭರದಲ್ಲಿ ಅವರು ಈ ಮಾತುಗಳನ್ನು ಹೇಳಿಬಿಟ್ಟಿದ್ದರು. ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿದರೂ ಧನಂಜಯ್‌ಕುಮಾರ್ ಮಾತ್ರ ಹೊರಗೇ ಉಳಿದುಬಿಟ್ಟರು. ಬಿಜೆಪಿ ಎಂಬ ಪಕ್ಷವೊಂದು ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಜಯಗಳಿಸಿದ ಅವರು ಬಿಜೆಪಿಯ ಉತ್ತುಂಗ ಕಾಲದಲ್ಲಿ ಮಾತ್ರ ದೂರ ನಿಲ್ಲಬೇಕಾಗಿ ಬಂತು. ಬಳಿಕ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಕ್ಕೂ ಸೇರಿ ಕೆಲಸ ಮಾಡಿದರು. 

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 3

  Sad
 • 5

  Frustrated
 • 2

  Angry

Comments:

0 comments

Write the first review for this !