ಶ್ರೀನಿವಾಸನ ಸನ್ನಿಧಿಯಲ್ಲಿ ‘ಏಕಾದಶಿ’ ಸಂಭ್ರಮ

7
ಬೆಳಿಗ್ಗೆಯಿಂದಲೇ ದೇವಾಲಯಗಳತ್ತ ಹರಿದು ಬಂದ ಭಕ್ತ ಸಮೂಹ, ದಿನವೀಡಿ ಬಗೆಬಗೆಯ ಧಾರ್ಮಿಕ ಕೈಂಕರ್ಯಗಳ ಆಚರಣೆ

ಶ್ರೀನಿವಾಸನ ಸನ್ನಿಧಿಯಲ್ಲಿ ‘ಏಕಾದಶಿ’ ಸಂಭ್ರಮ

Published:
Updated:
Deccan Herald

ಚಿಕ್ಕಬಳ್ಳಾಪುರ: ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ಜಿಲ್ಲೆಯಾದ್ಯಂತ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂದಿತ್ತು.

ಬೆಳಿಗ್ಗೆಯಿಂದಲೇ ಕೆಲವೆಡೆ ದೇವರ ದರ್ಶನಕ್ಕಾಗಿ ಸಾಲುಗಳು ಕಂಡು ಬಂದವು. ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಪೂಜೆ, ಉತ್ಸವ ಮೂರ್ತಿಗೆ ಅಲಂಕಾರ, ವೈಕುಂಠ ದ್ವಾರದ ಪೂಜೆ, ನಾರಾಯಣನ ದರ್ಶನ ಮುಂತಾದ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ನಗರದ ಕಂದವಾರಪೇಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ, ವೇಣುಗೋಪಾಕೃಷ್ಣ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ಶಿರಡಿಸಾಯಿ ಬಾಬಾ ದೇವಾಲಯ, ಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತರು ದರ್ಶನಕ್ಕೆ ಮುಗಿಬಿದ್ದಿದ್ದರು.

ನಗರದ ಕಂದವಾರಪೇಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ಮತ್ತು ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯಕ್ಕೆ ಭಕ್ತರು ನಸುಕಿನಲ್ಲೇ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಗರದ ಗಂಗಮ್ಮನ ಗುಡಿ ರಸ್ತೆಯ ಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ವೈಕುಂಠ ದಾರಿಯ ಪ್ರತಿಕೃತಿ ಒಳಗೆ ಮೂಲಕ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿತ್ತು.

ತಾಲ್ಲೂಕಿನ ಕೊಟಗಾರ್ಲಹಳ್ಳಿ ಬಳಿಯ ಶ್ರೀನಿವಾಸ ಸಾಗರ ಜಲಾಶಯಕ್ಕೆ ಹೊಂದಿಕೊಂಡಂತಿರುವ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತ ಸಮೂಹ ಹರಿದು ಬಂದಿತ್ತು. ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲದಲ್ಲಿ ಬೆಳಿಗ್ಗೆ 5 ಗಂಟೆ ಸುಪ್ರಭಾತ ಸೇವೆ, ಅಭಿಷೇಕ, ಉತ್ಸವ ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನಡೆದವು. ಭಕ್ತರಿಗೆ ಸಿಹಿ ಪೊಂಗಲ್ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ತಾಲ್ಲೂಕಿನ ನಂದಿ ಹೋಬಳಿಯ ಗೋಪಿನಾಥ ಬೆಟ್ಟದಲ್ಲಿರುವ ಗೋವರ್ಧನಗಿರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಫಲ ಪಂಚಾಮವೃತಾಭಿಷೇಕ, ಮಂಗಳ ದ್ರವ್ಯ ಸಹಿತ ಮಹಾಅಭಿಷೇಕ, ಬೆಳಿಗ್ಗೆ 5.30ಕ್ಕೆ ವೈಕುಂಠದ್ವಾರದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಪ್ರವೇಶ, ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ನೆರವೇರಿಸಲಾಯಿತು. ಭಕ್ತರು ವೈಕುಂಠ ದ್ವಾರದಲ್ಲಿ ಹಾದು ಹೋಗುವ ಮೂಲಕ ಧನ್ಯತೆಯಲ್ಲಿ ಮಿಂದೆದ್ದರು.

* ವೈಕುಂಠ ಏಕಾದಶಿಯ ದಿನದಂದು ವಿಷ್ಣುವಿನ ದರ್ಶನ ಪಡೆದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಈ ದಿನ ವಿಶೇಷ ಪೂಜೆ ಸಲ್ಲಿಸುತ್ತೇವೆ.
–ಭಾಗೀರಥಿ, ಸುಬ್ಬರಾಯನಪೇಟೆ ನಿವಾಸಿ

* ‘ಮನುಷ್ಯನಾಗಿ ಹುಟ್ಟಿದ ಮೇಲೆ ನಮಗೆ ತಿಳಿಯದೆ ಅನೇಕ ತಪ್ಪುಗಳು ಮಾಡುತ್ತೇವೆ. ಇವತ್ತು ವಿಶೇಷ ದಿನವಾದ್ದರಿಂದ ವಿಷ್ಣುವಿನ ದರ್ಶನ ಪಡೆದು, ಮನದಲ್ಲಿ ಪ್ರಾರ್ಥನೆ ಸಲ್ಲಿಸಿದರೆಮಾಡಿರುವ ತಪ್ಪುಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ದೇವರ ದರ್ಶನ ಪಡೆದೆ’ ಎಂದು ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಕಂದವಾರ ಪೇಟೆ ನಿವಾಸಿ ಆಶಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !