ಇಷ್ಟಾರ್ಥ ಸಿದ್ಧಿಗಾಗಿ ವೆಂಕಟರಮಣಗೆ ಮೊರೆ

7
ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಪೂಜೆ l ಉಪವಾಸ ಆಚರಣೆ ; ದೀಪಾಲಂಕೃತ ದೇವಾಲಯಗಳು l ಲಕ್ಷಗಟ್ಟಲೇ ಲಾಡು ಪ್ರಸಾದ ವಿತರಣೆ

ಇಷ್ಟಾರ್ಥ ಸಿದ್ಧಿಗಾಗಿ ವೆಂಕಟರಮಣಗೆ ಮೊರೆ

Published:
Updated:
Deccan Herald

ಬೆಂಗಳೂರು: ಅಲಂಕೃತ ದೇವಾಲಯ ಗಳು, ವಿಶೇಷ ಪೂಜಾ ವಿಧಿಗಳು, ಸಾಲುಗಟ್ಟಿ ನಿಂತು ದೇವರ ಮೂರ್ತಿಯ ದರ್ಶನ ಪಡೆದು, ಇಷ್ಟಾರ್ಥಗಳು ಈಡೇರಲೆಂದು ಬೇಡಿಕೊಂಡ ಸಾವಿರಾರು ಭಕ್ತರು... -ವೈಕುಂಠ ಏಕಾದಶಿ ಪ್ರಯುಕ್ತ ನಗರದ ವಿವಿಧೆಡೆ ಇರುವ ವೆಂಕಟೇಶ್ವರ, ಶ್ರೀನಿವಾಸ, ಕೋದಂ ಡರಾಮ ದೇವಾಲಯಗಳಲ್ಲಿ ಮಂಗಳ ವಾರ ಕಂಡ ಸಾಮಾನ್ಯ ದೃಶ್ಯವಿದು.

ಹಬ್ಬದ ವಾತಾವರಣ ಮನೆ ಮಾಡಿದ್ದ ದೇವಾಲಯಗಳ ಆವರಣ ದಲ್ಲಿ ವೈಕುಂಠ ದ್ವಾರದ ರಚನೆಗಳನ್ನು ನಿರ್ಮಿಸಲಾಗಿತ್ತು. ಭಕ್ತರು ಸಾಲಾಗಿ ಆ ದ್ವಾರದ ಮೂಲಕ ಹಾದು ದೇವಾಲಯ ಪ್ರವೇಶ ಮಾಡಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಬಹುತೇಕರು ಉಪವಾಸ ವ್ರತ ಆಚರಿಸಿದರು. 

ಬಹುತೇಕ ವೆಂಕಟೇಶ್ವರ ದೇವಾಲಯಗಳಲ್ಲಿ ಬೆಳಿಗ್ಗೆ 4 ಗಂಟೆ ಹೊತ್ತಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸುಪ್ರಭಾತ ಸೇವೆ, ಧೂಪ, ದೀಪ, ಚಾಮರ, ವ್ಯಂಜನ ಸೇವೆ, ಅಭಿಷೇಕಗಳು ಬೆಳಗಿನ ಜಾವದಿಂದಲೇ ನಡೆದವು. ವಿಧ–ವಿಧವಾದ ಹೂ ಗಳಿಂದ ದೇವರ ಮೂರ್ತಿಗಳನ್ನು ಅಲಂಕಾರ ಮಾಡಲಾಗಿತ್ತು. ಲಕ್ಷಾಂತರ ಲಾಡುಗಳನ್ನು ಪ್ರಸಾದವಾಗಿ ವಿತರಿಸಲಾಯಿತು.

ಬೆಳಗಿನ ಚಳಿಯನ್ನು ಲೆಕ್ಕಿಸದೇ ದೇವರ ದರ್ಶನಕ್ಕಾಗಿ ಜನ ಸಾಲುಗಟ್ಟಿ ನಿಂತಿದ್ದರು. ದೇವಸ್ಥಾನದ ಮುಂಬದಿಯ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುವ್ಯವಸ್ಥೆಗಾಗಿ ಪೊಲೀಸ್‌ ಬಂದೋ ಬಸ್ತನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. 

ಹಲಸೂರಿನ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನ ಜಾವ 2 ಗಂಟೆಗೆ ಅಭಿಷೇಕ ಮಾಡಿ, ಹೂವಿನ ಅಲಂಕಾರ ಮಾಡ ಲಾಯಿತು. 4 ಗಂಟೆವರೆಗೆ ಗಣಪತಿ ಹೋಮ, ವಿಷ್ಣು ಹೋಮ, ನವಗ್ರಹ ಹೋಮಗಳನ್ನು ನೆರವೇರಿಸಲಾಯಿತು. ಈ ವೇಳೆ ಭಕ್ತರು ದಂಡು ನೆರೆದಿತ್ತು. ಮಹಾಮಂಗಳಾರತಿಯ ಬಳಿಕ ಲಾಡುಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. 

‌ಶ್ರೀನಿವಾಸನಗರದ ವೆಂಕಟೇಶ್ವರ ದೇವಾಲಯದಲ್ಲಿ ಮುಂಜಾನೆ ಪಂಚಾ ಮೃತ ಅಭಿಷೇಕ, ರುದ್ರಾಭಿಷೇಕ, ವೈಕುಂಠ ದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ ಸೇವೆ, ಮಂತ್ರ ಪುಷ್ಪ ಸೇವೆಗಳು ನಡೆದವು. ಮಹಾಲಕ್ಷ್ಮೀಪುರದ ಶ್ರೀನಿವಾಸ ದೇವಸ್ಥಾನದದಲ್ಲಿ ರಾತ್ರಿ 10 ಗಂಟೆಯವರೆಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೇವರಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಇಲ್ಲಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ರಾಜಾಜಿನಗರದ ಇಸ್ಕಾನ್‌ಗೆ ರಾತ್ರಿ ಹನ್ನೊಂದರ ವರೆಗೂ ಭಕ್ತರ ದಂಡು ಹರಿದು ಬರುತ್ತಿತ್ತು. 50 ಸಾವಿರ ಲಾಡುಗಳನ್ನು ಪ್ರಸಾದವಾಗಿ ಹಂಚಲಾಯಿತು. ಶ್ರೀನಗರದ ವೆಂಕಟ ರಮಣ ಸ್ವಾಮಿ ದೇವಸ್ಥಾನದಲ್ಲಿ ತೋಮಾಲೆ ಅಲಂಕಾರ, ಪೂಲಂಗಿ ಸೇವೆ ನಡೆಯಿತು. ಸಿಹಿ ಲಾಡು ವಿತರಿಸಲಾಯಿತು. ವಿದುಷಿ ಭ್ರಮರಾ ಗೋಪಿನಾಥ್‌ ಅವರಿಂದ ಪ್ರವಚನ ಏರ್ಪಡಿಸಲಾಗಿತ್ತು. 

ಮಲ್ಲೇಶ್ವರದ ಪಾಂಡುರಂಗ ವಿಷ್ಣು ಸಹಸ್ರನಾಮ ಮಂಡಳಿಯ ಆಶ್ರ ಯದಲ್ಲಿ 22ನೇ ವರ್ಷದ ‘ಶ್ರೀನಿವಾಸ ಕಲ್ಯಾಣೋತ್ಸವ’ ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ರಾಜಾಜಿನಗರದ ಶೇಷ ಶಯನ ದೇವಸ್ಥಾನದಲ್ಲಿ ಭಜನೆಗಳು, ವೈಕುಂಠ ದ್ವಾರ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಜೆ.ಪಿ.ನಗರ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಎಂ.ಜಿ. ರೈಲ್ವೆ ಕಾಲೊನಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಕೆಂಗೇರಿಯ ಬೆಟ್ಟನಪಾಳ್ಯದ ಸ್ತಂಭದ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ಏಕಾದಶಿ ಅಂಗ ವಾಗಿ ವಿಶೇಷ ಪೂಜೆ ನಡೆಯಿತು. ವೆಂಕಟರಮಣರ ಕುರಿತು ಕೀರ್ತನೆ, ದೇವರನಾಮ ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನೆಲಮಂಗಲ: ‘ಉಪವಾಸ ಎಂದರೆ ಭಗವಂತನ ಹತ್ತಿರ ಇರುವುದು’ ಎಂದು ಮೇಲುಕೋಟೆ ಯತಿರಾಜ ಮಠದ ಯಧುಗಿರಿ ಯತಿರಾಜ ರಾಮಾನುಜ ಜೀಯರ್‌ ಹೇಳಿದರು. 

ದಾಸನಪುರದ ಉಭಯ ವೇದಾಂತ ವೈಷ್ಣವ ಸಭಾದ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ಆಶೀರ್ವಚನ ನೀಡಿದ ಅವರು, ‘ಈ ಏಕಾದಶಿಯಂದೇ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧನೆ ಮಾಡಿದ. ಈ ಹಿಂದೆ ರಾಮಾನುಜಾಚಾರ್ಯರು ದೇವಾಲಯಗಳನ್ನು ನಿರ್ಮಿಸಿ ಭಗವಂತನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು’ ಎಂದು ಸ್ಮರಿಸಿದರು.

ಆಚಾರ್ಯ ಗುರುಪರಂಪರಾ ಶಾಲೆಯ ವಿದ್ಯಾರ್ಥಿಗಳು ವಿಷ್ಣು ಸಹಸ್ರ ನಾಮ, ಭಗವದ್ಗೀತೆ ಪಾರಾಯಣ ಮಾಡಿದರು. ಆಂಡಾಳ್‌ಗೋಷ್ಠಿ, ಗೋವಿಂದ ನಾಮಾವಳಿ, ಲಲಿತಾ ಸಹಸ್ರನಾಮ, ಸೌಂದರ್ಯಲಹರಿ ಪಠಣ, ದಾಸರ ಪದಗಳ ಗಾಯನ, ಭರತನಾಟ್ಯ, ಭಜನಾ ಕಾರ್ಯಕ್ರಮಗಳು ರಾತ್ರಿ 10 ಗಂಟೆ ವರೆಗೆ ನಡೆದವು.

ದರ್ಪಣ ಮಂದಿರ
ಚಾಮರಾಜಪೇಟೆಯ ಕೋಟೆ ವೆಂಕಟರಮಣ ದೇವಾಲಯದಲ್ಲಿ ಈ ಬಾರಿ ದರ್ಪಣ ಮಂದಿರ ನಿರ್ಮಿಸಲಾಗಿದೆ. ಇದರಲ್ಲಿ ಹೊಕ್ಕು ಒಂದೊಂದು ದಿಕ್ಕಿನತ್ತ ನೋಡಿದರೆ, ಒಂದೊಂದು ದೇವರ ಚಿತ್ರಗಳು ಕಾಣುತ್ತಿದ್ದವು. ಭಕ್ತರು ದರ್ಪಣದಲ್ಲಿನ ದೇವರಿಗೆ ಭಕ್ತಿಪೂರ್ವಕವಾಗಿ ನಮನ ಸಲ್ಲಿಸಿದರು. 

ವೈಯಾಲಿಕಾವಲ್‌ನಲ್ಲಿ ಇರುವ ತಿರುಮಲ ದೇವಸ್ಥಾನಕ್ಕೆ ನಗರದ ನಾನಾ ಪ್ರದೇಶಗಳಿಂದ ಭಕ್ತರು ಬಂದಿದ್ದರು. ಇಲ್ಲಿಯೂ ವೇದ ಪಾರಾಯಣ, ಹರಿಕಥೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ತಿರುಪತಿಯಿಂದ ತಂದಿದ್ದ ಲಾಡುಗಳನ್ನು ಇಲ್ಲಿ ಪ್ರಸಾದವಾಗಿ ಹಂಚಲಾಯಿತು.


ರಾಜಾಜಿನಗರದ ಇಸ್ಕಾನ್‌ ದೇವಸ್ಥಾನದಲ್ಲೂ ದರ್ಶನಕ್ಕೆ ಜನಸಂದಣಿ ಇತ್ತು

ಕಾಲ್ನಡಿಗೆಯಲ್ಲಿ ವೈಕುಂಠ ಏಕಾದಶಿ 
ಹೆಸರಘಟ್ಟ:
‘ರುಕ್ಮಿಣಿ ಸಮೇತ ಪಾಂಡುರಂಗ’ ಪವಡಿಸಿದ್ದ ತೊಟ್ಟಿಲು ಎತ್ತಿಕೊಂಡು ಸಿಡೇದಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪುರಂದರದಾಸ ಇಂಟರ್‌ನ್ಯಾಷನಲ್‌ ಟ್ರಸ್ಟ್ ಇದನ್ನು ಆಯೋಜಿಸಿತ್ತು.

ಮಹಿಳೆಯರು ಪುರಂದದಾಸರ ಹಾಡುಗಳಿಗೆ ಕೋಲಾಟವನ್ನು ಆಡಿದರು. ಐವತ್ತರಿಂದ ಅವರತ್ತು ಮಹಿಳೆಯರು ಬೀದಿ ಉದ್ದಕ್ಕೂ ದೇವರ ಸಂಕೀರ್ತನೆ ಮಾಡಿದರು. ಕಾಲ್ನಡಿಗೆಯಲ್ಲಿ ಬಂದ ಜನ ಜೊತೆಗೂಡಿ ಹರಿನಾಮವನ್ನು ಪಠಿಸಿದರು. ಘೋಷಣೆಗಳನ್ನು ಕೂಗಿದರು. ಸಿಡೇದಹಳ್ಳಿ ಗ್ರಾಮದಿಂದ ಹೊರಟ ಮೆರವಣಿಗೆಯು ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದಲ್ಲಿ ಕೊನೆಗೊಂಡಿತ್ತು.

ಕೆ.ಆರ್.ಪುರ: ಇಲ್ಲಿನ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಕೋಟೆ ವೆಂಕಟರಮಣಸ್ವಾಮಿ ಹಾಗೂ ಐತಿಹಾಸಿಕ ಹಿನ್ನೆಲೆಯ ರಾಮಮೂರ್ತಿ ನಗರದ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನಗಳಲ್ಲಿ ದೇವರಿಗೆ ಕವಚಧಾರಣೆ, ರುದ್ರಾಭಿಷೇಕ, ಹೂವಿನ ಅಲಂಕಾರ, ಕೀರಿಟಧಾರಣೆ ಮಾಡಿ ವಿಶೇಷ ಅಲಂಕಾರ ಮಾಡಲಾಯಿತು.

ದೇವಸಂದ್ರ, ರಾಮಮೂರ್ತಿನಗರ, ವಿಜಿನಾಪುರ, ಮೇಡಹಳ್ಳಿ, ಬಟ್ಟರಹಳ್ಳಿ, ಕೆ.ಚನ್ನಸಂದ್ರ, ಕನಕನಗರ, ಕಲ್ಕೆರೆ, ಅವಳಹಳ್ಳಿ, ಬಿದರಹಳ್ಳಿ ಕಸ್ತೂರಿನಗರ, ಹೊರಮಾವು, ಟಿ.ಸಿ.ಪಾಳ್ಯ ಕಡೆಗಳಿಂದ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.


ರಾಜಾಜಿನಗರದ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಭಕ್ತರು ದೇವರ ಮೂರ್ತಿಯ ದರ್ಶನ ಪಡೆದರು. ಪ್ರಜಾವಾಣಿ ಚಿತ್ರಗಳು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !