ಉಪವಾಸದ ಮಹತ್ವ ಸಾರುವ ‘ವೈಕುಂಠ ಏಕಾದಶಿ’

7

ಉಪವಾಸದ ಮಹತ್ವ ಸಾರುವ ‘ವೈಕುಂಠ ಏಕಾದಶಿ’

Published:
Updated:
Deccan Herald

ಚಾಮರಾಜನಗರ: ನಗರದ ಕೊಳದ ಬೀದಿಯ ಬಳಿ ಇರುವ ಕಾಡು ನಾರಾಯಣಸ್ವಾಮಿ ದೇವಾಲಯವು ಮಂಗಳವಾರ ನಡೆಯಲಿರುವ (ಡಿ.18) ವೈಕುಂಠ ಏಕಾದಶಿಗೆ ಸಜ್ಜಾಗಿದೆ. 

‘ವೈಕುಂಠ ಏಕಾದಶಿ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯಾಗಿರುವ ಈ ವಿಶೇಷ ದಿನದಂದು ನಮ್ಮ ದೇವಸ್ಥಾನದಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಈ ವಿಶೇಷ ದಿನದಲ್ಲಿ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುತ್ತದೆ ಎಂಬ ಪ್ರತೀತ ಹಾಗೂ ನಂಬಿಕೆ ಇದೆ. ಆದ್ದರಿಂದ ಎಲ್ಲ ವಿಷ್ಣು ದೇವಸ್ಥಾನಗಳಲ್ಲಿ ‘ವೈಕುಂಠ ದ್ವಾರ’ ನಿರ್ಮಿಸಿರುತ್ತಾರೆ ಎಂದು ದೇವಾಲಯದ ಅರ್ಚಕರಾದ ರಾಮಚಂದ್ರ ಆಚಾರ್ಯ ತಿಳಿಸಿದರು.

ಉಪವಾಸ: ಸಂಸ್ಕೃತ ಪದವಾಗಿರುವ ಏಕಾದಶ ಎಂದರೆ ಹನ್ನೊಂದು (11) ಎಂಬರ್ಥವಿದೆ. ಒಂದು ಮಾಸದಲ್ಲಿ ಎರಡು ಏಕಾದಶಿ ಇರುತ್ತವೆ. ಈ ದಿನಗಳಂದು ಯಾವುದೇ ಆಹಾರ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸುತ್ತಾರೆ. ಮತ್ತೆ ಕೆಲವರು ನೀರನ್ನೂ ಕುಡಿಯುವುದಿಲ್ಲ.

ನಿರಾಹಾರ ವ್ರತ ಆಚರಿಸುತ್ತಾರೆ. ಏಕಾದಶಿಯ ದಿನ ಉಪವಾಸ ಇದ್ದು ನಂತರದ ದಿನ (ದ್ವಾದಶಿಯ ದಿನ) ಬೆಳಿಗ್ಗೆ 9 ಗಂಟೆಯೊಳಗೆ ಊಟ ಮಾಡುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಕೆಲವರು ಏಕಾದಶಿಯಂದು ಮೌನ ವ್ರತ ಕೂಡ ಆಚರಿಸುತ್ತಾರೆ ಎನ್ನುತ್ತಾರೆ ಅವರು.

ವಿಶೇಷ ಪೂಜಾ ಕಾರ್ಯಕ್ರಮಗಳು: ಇಂದು (ಡಿ.18) ಮತ್ತು ನಾಳೆ (ಡಿ.19) ಎಲ್ಲ ವಿಷ್ಣು ದೇವಾಲಯಗಳಲ್ಲಿ ವೈಕುಂಠ ಏಕಾದಶಿಗೆ ಪೂಜೆ ಹಾಗೂ ಪ್ರಸಾದ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ಇಲ್ಲಿ ಬೆಳಗಿನ ಜಾವ 3 ಗಟೆಯಿಂದಲೇ ಅಭಿಷೇಕ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ನಡೆಯಲಿವೆ.

ಬೆಳಗಿನ ಜಾವ 3 ಗಂಟೆಗೆ ವಿಷ್ಣುವಿಗೆ ಅಭಿಷೇಕ ಮತ್ತು 6 ಗಂಟೆಗೆ ದೇವಸ್ಥಾನದ ಸಭಾಂಗಣದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಭಕ್ತಾದಿಗಳಿಗೆ ವೈಕುಂಠ ದ್ವಾರದಲ್ಲಿ ದೇವರ ದರ್ಶನಕ್ಕೆ ಪ್ರವೇಶ ಹಾಗೂ ಮಹಾಮಂಗಳಾರತಿ. ಪ್ರಸಾದ ವಿನಿಯೋಗ ಇರುತ್ತದೆ.

ಮೆರವಣಿಗೆ: ಡಿಸೆಂಬರ್‌ 19ರಂದು ಬೆಳಿಗ್ಗೆ 9 ಗಂಟೆಗೆ ಶ್ರೀದೇವಿ, ಭೂದೇವಿ ಸಮೇತ ನಾರಾಯಣಸ್ವಾಮಿ ವೈಭವದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಾದ ದೇವಸ್ಥಾನದ ಆವರಣದಿಂದ ಕೊಳದಬೀದಿ, ವೀರಭದ್ರ ದೇವಸ್ಥಾನ, ದೊಡ್ಡ ಅಂಗಡಿ ಬೀದಿ, ಅಗಸರ ಬೀದಿ, ಚಿಕ್ಕ ಅಂಗಿ ಬೀದಿ, ಬಣಜಿಗರ ಬೀದಿ ಹಾಗೂ ಭ್ರಮರಾಂಬ 2ನೇ ಕ್ರಾಸ್‌, 1ನೇ ಕ್ರಾಸ್‌, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರದ ಬೀದಿ, ಭುವನೇಶ್ವರಿ ವೃತ್ತ, ರಥದ ಬೀದಿ, ನಾಗಪ್ಪ ಶೆಟ್ಟರ ಚೌಕ, ಗುಂಡ್ಲುಪೇಟೆ ವೃತ್ತದ ಮೂಲಕ ದೇವಸ್ಥಾನ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿನಿಯೋಗ ಇರುತ್ತದೆ.

ಕಬ್ಬಿಣದ ಕಂಬಿ: ಜನಸಂದಣಿ ನಿಯಂತ್ರಿಸಲು ಕಬ್ಬಿಣದ ಕಂಬಿಗಳನ್ನು ಅಳವಡಿಸಿ ಸಾಲಿನಲ್ಲಿ ಬರುವಂತೆ ಸೂಚಿಸುತ್ತೇವೆ. ಜನರನ್ನು ಸಾಲಿನಲ್ಲಿ ಬಿಡಲು ನನ್ನ ಮಗ (ಅಭಿಷೇಕ್‌) ಹಾಗೂ ಅವನ ಸ್ನೇಹಿತರು ಇಲ್ಲಿ ಇದ್ದು ಸಹಾಯ ಮಾಡುತ್ತಾರೆ ಎಂದು ಅರ್ಚಕ ರಾಮಚಂದ್ರ ಹೇಳಿದರು.

ನಗರದ ಬ್ರಹ್ಮದೇವ ಬುಕ್‌ ಡಿಪೋ ಮಾಲೀಕರು ಅವಲಕ್ಕಿ ಸೇವಾರ್ಥದಾರರು. ಅಲ್ಲದೆ, ಹಲವು ಭಕ್ತರು ಸೇವಾರ್ಥದಾರರಾಗಿದ್ದಾರೆ. ಡಿ.18ರಂದು ಸುಮಾರು 4ರಿಂದ 5 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಎಲ್ಲರಿಗೂ ಅವಲಕ್ಕಿ ಪ್ರಸಾದ ನೀಡಲಾಗುತ್ತದೆ ಎಂದು ತಿಳಿಸಿದರು.

’15 ವರ್ಷದಿಂದ ಉಪವಾಸ ಮಾಡುತ್ತಿದ್ದೇನೆ’

‘ನಮ್ಮದು ತಮಿಳುನಾಡು. ಚಾಮರಾಜನಗರಕ್ಕೆ ಬಂದು 45 ವರ್ಷವಾಯಿತು. ಒಳ್ಳೆಯದಾಗಲಿ ಎಂದು ಕಳೆದ 15 ವರ್ಷದಿಂದ ‘ವೈಕುಂಠ ಏಕಾದಶಿ ಉಪವಾಸ’ ಮಾಡುತ್ತಿದ್ದೇನೆ. ನೀರನ್ನೂ ಸೇವಿಸುವುದಿಲ್ಲ. ಏಕಾದಶಿಯ ಮುನ್ನಾದಿನ ಈ ದೇವಾಲಯಕ್ಕೆ ಬಂದು ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಕೈಲಾದ ಆರ್ಥಿಕ, ಆಹಾರ ದಾನ್ಯಗಳನ್ನು ದಾನವಾಗಿ ನೀಡುತ್ತೇವೆ’ ಎಂದು ದೇವಾಂಗ ಬೀದಿಯ ವೀರಸ್ವಾಮಿ ಗಲ್ಲಿ ನಿವಾಸಿ ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸೇವಾರ್ಥದಾರರಿಗೆ ಲಡ್ಡು ವಿತರಣೆ: ‘ಪ್ರತಿ ವರ್ಷದಂತೆ ಈ ಬಾರಿಯೂ ದೇವಸ್ಥಾನದ ವತಿಯಿಂದ 2 ಸಾವಿರ ಲಡ್ಡು ತಯಾರಿಸಲಾಗಿದೆ. ಡಿಸೆಂಬರ್‌ 19ರಂದು ಮಧ್ಯಾಹ್ನ ಪೂಜೆ ಮಾಡಿ ಸೇವಾರ್ಥದಾರರಿಗೆ ಲಾಡುಗಳನ್ನು ವಿತರಿಸುತ್ತೇವೆ. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ. ಹಲವು ವರ್ಷದಿಂದ ಈ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ’ ಎಂದು ಅರ್ಚಕ ರಾಮಚಂದ್ರ ಆಚಾರ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !