ಭಾನುವಾರ, ಡಿಸೆಂಬರ್ 8, 2019
21 °C
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ

ದೇಶದ ಬೆಳವಣಿಗೆಗೆ ‘ಜಾತಿ’ ಅಡ್ಡಿ‌: ಸಂಸದ ಆರ್‌.ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ಹೊರದೇಶಗಳಲ್ಲಿ ಜನರು ತಮ್ಮ ವೃತ್ತಿಗೆ ಬೆಲೆ ಕೊಡುವುದರಿಂದ ಆ ರಾಷ್ಟ್ರಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಆದರೆ, ನಮ್ಮಲ್ಲಿನ ಮೌಢ್ಯತೆ, ಕಂದಾಚಾರ, ಜಾತಿಯ ಕಾರಣದಿಂದ ರಾಷ್ಟ್ರ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತಿಲ್ಲ’ ಎಂದು ಸಂಸದ ಆರ್‌. ಧ್ರುವನಾರಾಯಣ ಅವರು ಬುಧವಾರ ಅಭಿಪ್ರಾಯ‌ಪಟ್ಟರು.

ಪಟ್ಟಣದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಜಾತಿ ಎಂಬ ಕಾಯಿಲೆ ನಮ್ಮ ದೇಶವನ್ನು ಆವರಿಸಿಕೊಂಡಿದೆ. ಇದು ರಾಷ್ಟ್ರದ ಬೆಳವಣಿಗೆಗೆ ಅಡ್ಡಗಾಲಾಗಿ ನಿಂತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಮಹಾಭಾರತ ಹಾಗೂ ರಾಮಾಯಣ ಹಿಂದೂ ಧರ್ಮದ ಮಹಾನ್‌ ಗ್ರಂಥಗಳು. ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ಮತ್ತು ರಾಮರಾಜ್ಯದ ಪರಿಕಲ್ಪನೆ ಅಡಕವಾಗಿರುವ ರಾಮಾಯಣ ಪ್ರಪಂಚದ ಶ್ರೇಷ್ಠ ಕಾವ್ಯ. ಎಲ್ಲರೂ ಒಂದೇ ಎಂಬ ಭಾವನೆ ಇದರಲ್ಲಿದೆ’ ಎಂದು ಅವರು ಹೇಳಿದರು.

ಕ್ರಿಯಾತ್ಮಕ ಚಟುವಟಿಕೆ ಕಡಿಮೆ: ‘ಭವನಗಳನ್ನು ನಿರ್ಮಿಸಿಕೊಡಬೇಕು ಎಂಬ ಹಿಂದುಳಿದ ಸಮುದಾಯದವರು ಹೆಚ್ಚು ಬೇಡಿಕೆ ಇಡುತ್ತಾರೆ. ಆದರೆ, ನಿರ್ಮಾಣಗೊಂಡಿರುವ ಭವನಗಳನ್ನು ತಿಂಗಳಿಗೊಮ್ಮೆ ಮಾತ್ರವೇ ತೆರೆಯುತ್ತಾರೆ. ಇಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯಬೇಕು. ಕ್ರಿಯಾತ್ಮಕ ಚಟುವಟಿಕೆಗಳಿಗೆ ಸಮುದಾಯ ಭವನಗಳು ಸದ್ಬಳಕೆಯಾಗಬೇಕಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಕಳೆದ 5 ವರ್ಷಗಳಿಂದ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ನೀಡುತ್ತಿದೆ. ಇದಕ್ಕಾಗಿ ಸರ್ಕಾರ ₹27,800 ಕೋಟಿ ಮೀಸಲಿಟ್ಟು ಸಂಬಂಧಪಟ್ಟ ಇಲಾಖೆಗಳು ಅದೇ ವರ್ಷದಲ್ಲಿ ಅನುದಾನ ಸದ್ಭಳಕೆ ಮಾಡಿಕೊಳ್ಳುವಂತೆ ಸೂಚಿಸಿತ್ತು’ ಎಂದು ಹೇಳಿದರು.

ವಸುದೈವ ಕುಟುಂಬದ ಪರಿಕಲ್ಪನೆ ನೀಡಿದವರು: ಮುಖ್ಯ ಭಾಷಣಕಾರರಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಇತಿಹಾಸ ಸ್ನಾತಕೋತ್ತರ ಮತ್ತು ಪದವಿ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್. ರಘು ಅವರು ಮಾತನಾಡಿ, ‘ರಾಮನಿಗೆ ಜೀವ ಕೊಟ್ಟು, ರಾಮಾಯಣದ ಮೂಲಕ ಅವನನ್ನು ರಾಷ್ಟ್ರಕ್ಕೆ ಪರಿಚಯಿಸಿ ವಸುದೈವ ಕುಟುಂಬದ ಪರಿಕಲ್ಪನೆ ನೀಡಿದವರು ಮಹರ್ಷಿ ವಾಲ್ಮೀಕಿ’ ಎಂದರು.

‘ಮಾನವೀಯ ಮೌಲ್ಯ ಹೊಂದಿರುವ ಈ ಕಾವ್ಯದಲ್ಲಿ ಅವರು ಸಂಬಂಧಗಳಿಗೆ ಪ್ರಾತಿನಿತ್ಯ ನೀಡಿದ್ದರು. ಕುಟುಂಬದ ಹಿರಿಯರಿಗೆ ಕಿರಿಯರು ಹೇಗೆ ಗೌರವ ಸೂಚಿಸಬೇಕು ಎಂಬುದನ್ನು ಹೇಳುವ ಮೂಲಕ ಅವರು ವಸುದೈವ ಕುಟುಂಬದ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ಇದರ ಅಧ್ಯಯನದಿಂದ ಯುವ ಸಮುದಾಯವು ಉತ್ತಮ ಪರಂಪರೆ, ಸಂಸ್ಕೃತಿಯನ್ನು ಅರಿಯಬಹುದು’ ಎಂದರು.

ಪುಣ್ಯವಂತರು: ‘ರಾಮ ಲಂಕೆಗೆ ಹೋಗುವಾಗ ಚಾಮರಾಜನಗರದಿಂದ ಹೋಗಿದ್ದ. ಅಲ್ಲದೆ ತಾಲ್ಲೂಕಿನ ನರಸಮಂಗಲದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ರಾಮನ ಹಿನ್ನೆಲೆಯಿಂದ ನಿರ್ಮಿಸಿದ ದೇವಾಲಯವಾಗಿದೆ ಎಂಬುದೂ ರಾಮಾಯಣದಲ್ಲಿದೆ. ಇಲ್ಲಿ ವಾಸವಾಗಿರುವ ನೀವೇ ಪುಣ್ಯವಂತರು’ ಎಂದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಬಾಲರಾಜು, ಶಶಿಕಲಾ, ರಾಮಚಂದ್ರ, ಸದಾಶಿವಮೂರ್ತಿ, ನಗರಸಭೆ ಸದಸ್ಯ ಶಿವರಾಜ್, ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ಮುಖಂಡರಾದ ವೆಂಕಟರಣಸ್ವಾಮಿ, ಅರಕಲವಾಡಿ ನಾಗೇಂದ್ರ, ಶ್ರೀನಿವಾಸ ನಾಯಕ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ.ಹರೀಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಎಸ್. ಕೃಷ್ಣಪ್ಪ ಇದ್ದರು.

ಅದ್ಧೂರಿ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರವಾಸಿ ಮಂದಿರದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಹುಲಿ ವೇಷ ಸೇರಿದಂತೆ ವಿವಿಧ ವೇಷಧಾರಿಗಳು, ವೀರಗಾಸೆ, ಗಾಡಿಗೊಂಬೆ, ಬುಡಕಟ್ಟು ಸಮುದಾಯದ ಸೋಲಿಗರ ನೃತ್ಯಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. 

ನಾಯಕ ಸಮುದಾಯದ ಜನರು ಅಪಾರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರವಾಸಿ ಮಂದಿರದಿಂದ ಗುಂಡ್ಲುಪೇಟೆ ವೃತ್ತದ ಮಾರ್ಗವಾಗಿ ಭುವನೇಶ್ವರಿ ವೃತ್ತದತ್ತ ಬಂದ ಮೆರವಣಿಗೆಯು ಪೇಟೆ ಪ್ರೈಮರಿ ಶಾಲೆಯ ಆವರಣ ತಲುಪಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು