ಸೋಮವಾರ, ಡಿಸೆಂಬರ್ 9, 2019
17 °C
ಮಹರ್ಷಿ ವಾಲ್ಮೀಕಿ ಜಯಂತಿ ಇಂದು

ಅವಿಭಜಿತ ಜಿಲ್ಲೆಯಲ್ಲಿ ‘ರಾಮಾಯಣದ ನಂಟು..!’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಸೀಗೆ ಹುಣ್ಣಿಮೆಗೂ ಮಹರ್ಷಿ ವಾಲ್ಮೀಕಿ ಜಯಂತಿಗೂ ನಂಟಿದೆ. ಹುಣ್ಣಿಮೆಯ ದಿನವೇ ವಾಲ್ಮೀಕಿ ಜನ್ಮ ತಾಳಿದ್ದು ಎಂಬ ಪ್ರತೀತಿ ಪೂರ್ವಿಕರ ಕಾಲದಿಂದಲೂ ಇದೆ. ಈ ಬಾರಿ ಇದೇ 24ರ ಬುಧವಾರ ಮಹರ್ಷಿಯ ಜಯಂತಿ ಎಲ್ಲೆಡೆ ಶ್ರದ್ಧಾ–ಭಕ್ತಿಯ ಸಡಗರದಿಂದ ಆಚರಿಸಲ್ಪಡುತ್ತಿದೆ.

ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು ಸರ್ಕಾರಿ ಜಯಂತಿ ಆಚರಿಸಿದರೆ, ವಾಲ್ಮೀಕಿ ಸಮುದಾಯ, ಸಂಘಟನೆಗಳು ಸೇರಿದಂತೆ ಕೆಲ ಪ್ರಗತಿಪರ ಸಂಘಟನೆಗಳು ಮಹರ್ಷಿಯ ಜಯಂತಿ ಆಚರಣೆಗೆ ಕ್ಷಣಗಣನೆ ಎದುರಿಸುತ್ತಿವೆ.

ಮಹರ್ಷಿ ವಾಲ್ಮೀಕಿಗೂ ಅವಿಭಜಿತ ವಿಜಯಪುರ ಜಿಲ್ಲೆಗೂ ನಂಟಿರುವ ಯಾವ ಪುರಾಣ ಕತೆಗಳು, ದಾಖಲೆಗಳು ಲಭ್ಯವಿಲ್ಲ. ಆದರೆ ‘ರಾಮಾಯಣ’ ರಚಿಸಿದ ಮೊದಲ ವ್ಯಕ್ತಿ ವಾಲ್ಮೀಕಿಯಾಗಿದ್ದು, ಕೃತಿ ರಚನೆ ಬಳಿಕವೇ ಮಹರ್ಷಿಯಾದದ್ದು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ರಾಮಾಯಣಕ್ಕೂ ಅವಿಭಜಿತ ವಿಜಯಪುರ ಜಿಲ್ಲೆಗೂ ನಂಟಿರುವುದು ಹಲವೆಡೆ ದಾಖಲಾಗಿದೆ. ವಿಜಾಪುರ ಜಿಲ್ಲಾ ಗ್ಯಾಸೆಟಿಯರ್‌ನಲ್ಲಿ ಇದು ಉಲ್ಲೇಖಗೊಂಡಿದೆ.

‘ರಾಮ ವನವಾಸಕ್ಕೆ ಈ ಭಾಗಕ್ಕೆ ಬಂದಿದ್ದನೆಂದೂ, ಮಹಾಕೂಟ, ಐಹೊಳೆ, ಬಾದಾಮಿ, ಬಾಗಲಕೋಟೆ, ಗಲಗಲಿ, ಹಿಪ್ಪರಗಿ ಪ್ರದೇಶಗಳು ರಾಮಾಯಣ ಕಾಲದಲ್ಲಿ ದಂಡಕಾರಣ್ಯ ಪ್ರದೇಶವಾಗಿದ್ದವೆಂದೂ ಅಭಿಪ್ರಾಯವಿದೆ. ಕುಂದರಗಿ, ಗಲಗಲಿಗಳಲ್ಲಿರುವ ಲಿಂಗಗಳು ರಾಮ ಪ್ರತಿಷ್ಠಾಪಿತವೆಂದೂ ಹೇಳಲಾಗುತ್ತದೆ.

‘ಸೀತಿಮನಿ’ ರಾಮಾಯಣ ಕಾಲದ ನೆಲೆ ಎಂಬ ಅಭಿಪ್ರಾಯವಿದ್ದು, ಇಲ್ಲಿ ಇಂದಿಗೂ ಸೀತೆಯ ಆರಾಧಕರಿದ್ದಾರೆ. ದೇಗುಲವಿದೆ. ಲವ–ಕುಶ ಹೊಂಡಗಳು ಇವೆ. ವನವಾಸದಲ್ಲಿದ್ದ ರಾಮನು ಅಲ್ಲಿದ್ದನೆಂದು ಹೇಳಲಾಗುತ್ತಿದ್ದು, ಗುಡ್ಡದ ಮೇಲೆ ಗುಡಿಯ ಮುಂದಿರುವ ಪಾದುಕೆಯ ಬಳಿ ಸುಮಾರು 15ನೇ ಶತಮಾನಕ್ಕೆ ಸೇರಿದ ‘ಶ್ರೀರಾಮನಾಥ ದೇವರ ಪಾದ ಕಮಲ’ ಎಂದು ಹೇಳುವ ಶಾಸನವಿದೆ.

ಸೀತಿಮನಿ ಗುಡ್ಡದಾಚೆ ಇರುವ ರಾಮಪುರ, ಜಡರಾಮಕುಂಟಿ, ಬಿಳಿಕೆರೂರು, ಬೀರಖಬ್ಬಿ ಗ್ರಾಮಗಳ ಸುತ್ತ ರಾಮಾಯಣದ ಕತೆ ದಟ್ಟವಾಗಿದೆ. ಲಂಕಾಧಿಪತಿ ರಾವಣೇಶ್ವರನು ವಾದ್ಯ ಮೇಳದವರಿಗೆ ಬಿಟ್ಟ ದತ್ತಿ ಗ್ರಾಮ ಬಾಗಲಕೋಟೆ ಎಂಬ ಐತಿಹ್ಯವಿದೆ’ ಎಂಬ ಉಲ್ಲೇಖ ಗ್ಯಾಸೆಟಿಯರ್‌ನಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು