ಜಲಧಾರೆಯ ವರವಿ ಕೊಳ್ಳ

ಬುಧವಾರ, ಏಪ್ರಿಲ್ 24, 2019
31 °C

ಜಲಧಾರೆಯ ವರವಿ ಕೊಳ್ಳ

Published:
Updated:
Prajavani

‘ಮುನವಳ್ಳಿಯಿಂದ ವರವಿಕೊಳ್ಳ 6 ಕಿಲೊಮೀಟರ್ ದೂರದಲ್ಲಿದೆ. ಇಲ್ಲಿ ಮಳೆಗಾಲದಲ್ಲಿ ಮಳೆಯಾದಾಗ ಈ ಜಲಪಾತ ನೋಡಲು ನಯನ ಮನೋಹರ’ ಎಂದು ಗೆಳೆಯ ಹೇಳಿದ್ದ.

ಕಳೆದ ವರ್ಷದ ಮೇ ತಿಂಗಳಲ್ಲಿ ಮಳೆಯಾಗುತ್ತಿತ್ತು. ನಾನು ಮುನವಳ್ಳಿಗೆ ಹೋದ ದಿನ ಹಿಂದಿನ ದಿನ ಬಾರಿ ಮಳೆಯಾಗಿತ್ತು. ಗೆಳೆಯ ಹಿಂದಿನ ದಿನವಷ್ಟೇ ವರವಿಕೊಳ್ಳಕ್ಕೆ ಹೋಗಿ ಬಂದಿದ್ದ. ಜಲಪಾತದಲ್ಲಿ ನೀರು ಬಹಳ ಇದೆ ಎಂದು ಹೇಳಿದ್ದ. ಮಾರನೆಯ ದಿನ ಭಾನುವಾರದ ರಜೆ ದಿನವಾದ್ದರಿಂದ ವರವಿಕೊಳ್ಳಕ್ಕೆ ಬೈಕ್‌ನಲ್ಲಿ ಹೊರಡಲು ಸಿದ್ಧವಾದೆ.

ಏಕಾಂಗಿಯಾಗಿ ಹೊರಡಲು ರೆಡಿಯಾದೆ. ಬಸ್‌ ನಿಲ್ದಾಣದಲ್ಲಿ ಚುರುಮರಿ ಮತ್ತು ಬಿಸಿ ಬಿಸಿ ಮಿರ್ಚಿ ಬಜ್ಜಿ ಕಟ್ಟಿಸಿಕೊಂಡು ಬೈಕ್‌ ಹತ್ತಿದೆ. ವರವಿಕೊಳ್ಳದ ಹಾದಿ ಹಿಡಿದೆ.

ವರವಿಕೊಳ್ಳ ಮುಖ್ಯ ರಸ್ತೆಯಿಂದ ಒಂದೂವರೆ ಕಿ.ಮೀ ಒಳಗಡೆ ಇದೆ. ಅದು ಕಚ್ಚಾ ರಸ್ತೆ ಬೇರೆ. ಹಿಂದಿನ ದಿನ ಮಳೆ ಬಂದಿದ್ದರಿಂದ ರಸ್ತೆಯ ಕೆಂಪು ಮಣ್ಣು ಕೆಸರಾಗಿತ್ತು. ಅದರಲ್ಲಿ ಬೈಕ್‌ ಚಲಾಯಿಸಿಕೊಂಡು ಹೊರಟೆ. ವರವಿಕೊಳ್ಳ ತಲುಪಿದಾಗ ಮಧ್ಯಾಹ್ನ 12 ಗಂಟೆ ಆಗಿತ್ತು.

ಹಸಿರು ಬೆಟ್ಟಗಳ ನಡುವೆ ಜಲಧಾರೆ ಧುಮ್ಮಿಕ್ಕುತ್ತಿತ್ತು. ಆಗಲೇ ಸಾಕಷ್ಟು ಮಂದಿ ಜಲಪಾತದ ಕೆಳಗೆ ನಿಂತು ಜನ ಸ್ನಾನ ಮಾಡುತ್ತಿದ್ದರು. ಆ ವರ್ಷ ಬೇಸಿಗೆಯಲ್ಲೂ ಜಲಪಾತದಲ್ಲಿ ನೀರು ಕಂಡು ಖುಷಿಯಾಯಿತು. ನಾನು ಸ್ನಾನ ಮಾಡಲು ಜಲಪಾತದ ಹೊಂಡದಲ್ಲಿ ಇಳಿದು ಈಜತೊಡಗಿದೆ. ಜಲಧಾರೆ ಮೈಯೊಡ್ಡಿದೆ. ಆಯಾಸ ಪರಿಹಾರವಾಯಿತು. ನೀರು ತಂಪಾಗಿದ್ದರಿಂದ ಮನಸ್ಸಿಗೆ ಆಹ್ಲಾದಕರ ಎನಿಸಿತು.

ಜಲಪಾತದ ಪಕ್ಕದಲ್ಲೇ ಕಲ್ಲಿನ ಗುಹೆಯಿದೆ. ಅದರೊಳಗೆ ವರವಿಸಿದ್ದೇಶ್ವರ ದೇವರ ವಿಗ್ರಹವಿದೆ. ನಂದಿ ವಿಗ್ರಹವಿದೆ. ಗುಹೆಯೊಳಗೂ ನೀರು ಜಿನುಗುತ್ತಿರುತ್ತದೆ. ನಾನು ಸ್ನಾನ ಮುಗಿಸಿ ವರವಿಸಿದ್ದೇಶ್ವರನ ದರ್ಶನ ಮಾಡಿಕೊಂಡೆ. ನಂತರ ಒಂದು ಮರದ ಕೆಳಗೆ ಕುಳಿತು, ವಿರಮಿಸಿಕೊಳ್ಳುತ್ತಾ, ಚುರುಮರಿ ಮತ್ತು ಮಿರ್ಚಿ ಬಜ್ಜಿ ಪೊಟ್ಟಣ ತೆಗೆದು ತಿನ್ನತೊಡಗಿದೆ. ಅದೆಲ್ಲಿತ್ತೋ ಮಂಗಗಳ ದಂಡು, ನನ್ನನ್ನು ಸುತ್ತುವರೆದವು. ಎಲ್ಲವಕ್ಕೂ ಚುರುಮುರಿ ಮತ್ತು ಮಿರ್ಚಿ ಬಜ್ಜಿ ಎಸೆದೆ. ಬೈಕ ಏರಿ ಮುನವಳ್ಳಿಯತ್ತ ಪ್ರಯಾಣ ಬೆಳೆಸಿದೆ.

ಸಿದ್ಧರ ತಪ್ಪಸಿನ ತಾಣ

ಜಲಧಾರೆ, ಗುಹೆ, ಗುಹೆಯೊಳಗೆ ನಂದಿ, ಲಿಂಗ ವಿಗ್ರಹಗಳು ಇವೆಲ್ಲ ನೋಡಿದಾಗ, ಇದು ಧ್ಯಾನಕ್ಕೆ ಹೇಳಿ ಮಾಡಿಸಿದ ಸ್ಥಳ ಎನ್ನಿಸುತ್ತದೆ. ಒಂದು ಕಾಲದಲ್ಲಿ ಸಿದ್ಧ ಪುರುಷರು ತಪ್ಪಸ್ಸು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

ಹೋಗುವುದು ಹೇಗೆ ?

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಹತ್ತಿರ 6 ಕಿ.ಮೀ. ಅಂತರದಲ್ಲಿ ಎಕ್ಕೇರಿ ಎಂಬ ಗ್ರಾಮವಿದೆ. ಅಲ್ಲಿ ಕರೆಮ್ಮಾದೇವಿ ದೇವಾಲಯಕ್ಕೆ ಮುನ್ನ ರಸ್ತೆ ಬದಿಯುಲ್ಲಿ ‘ವರವಿಕೊಳ್ಳಕ್ಕೆ ಮಾರ್ಗ’ ಎಂಬ ಫಲಕವಿದೆ.

ಮುನವಳ್ಳಿ ನರಗುಂದ ಮಾರ್ಗದಲ್ಲಿ ಸಾಕಷ್ಟು ವಾಹನಗಳ ಸೌಕರ್ಯವಿದೆ. ವಾಹನಗಳಲ್ಲಿ ಬರುವವರು ವರವಿಕೊಳ್ಳ ಕ್ರಾಸ್‌ನಲ್ಲಿ ಇಳಿಯಬಹುದು. ಅಲ್ಲಿಂದ ಒಂದೂವರೆ ಕಿ.ಮೀ ದೂರ ನಡೆದರೆ ವರವಿಕೊಳ್ಳ ತಲುಪಬಹುದು. ನಡೆದು ಬಂದರೆ ಮೊದಲು ಜುಳು ಜುಳು ನೀರಿನ ಶಬ್ಧ ಕೇಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !