ಹೀಗಿದೆ ನೋಡಿ ಬೂರುಗ ವೈವಿಧ್ಯ

ಭಾನುವಾರ, ಏಪ್ರಿಲ್ 21, 2019
26 °C

ಹೀಗಿದೆ ನೋಡಿ ಬೂರುಗ ವೈವಿಧ್ಯ

Published:
Updated:
Prajavani

ಬೂರುಗದ ಮರ, ಹೆಸರು ಕೇಳಿದ ತಕ್ಷಣ ನನ್ನ ನೆನಪಿಗೆ ಬರುವುದು ತುಮಕೂರಿನಲ್ಲಿರುವ ಎಂಪ್ರೆಸ್ ಬಾಲಕಿಯರ ಶಾಲೆಯ ಆವರಣದಲ್ಲಿದ್ದ ದೈತ್ಯ ಮರಗಳು. ನಮ್ಮ ನಿಸರ್ಗ ಸಂಸ್ಥೆಯ ಗುಂಡಪ್ಪನವರು ಈ ಮರಗಳನ್ನು ತೋರಿಸಿ ಇವಕ್ಕೆ ಆಕರ್ಷಿತವಾಗುವ ಪಕ್ಷಿಗಳ ಬಗ್ಗೆ ವಿವರಣೆ ಕೊಟ್ಟಿದ್ದರು. ಈ ಮರಗಳನ್ನು ಸ್ವತಃ ಮೈಸೂರಿನ ಮಹಾರಾಣಿಯವರು ನೆಟ್ಟಿದ್ದರು. ದುರದೃಷ್ಟವಶಾತ್ ಇಂದು ಈ ಮರಗಳು ಇಲ್ಲವಾದರೂ, ಅವು ನೀಡುತ್ತಿದ್ದ ನೆರಳು, ಚಳಿಗಾಲದ ಕೊನೆಯಲ್ಲಿ ಬಿಡುತ್ತಿದ್ದ ಹೂಗಳು, ಹತ್ತಿ ಇರುವ ಕಾಯಿಗಳು ಮತ್ತು ಇಲ್ಲಿಗೆ ಬರುತ್ತಿದ್ದ ವಿವಿಧ ಪಕ್ಷಿಗಳು, ಅವುಗಳ ಕಲರವ ಬಹುತೇಕರಲ್ಲಿ ಇನ್ನೂ ಹಸಿರಾಗಿದೆ.

ಕೆಂಪು – ಹಳದಿ ಹೂವಿನ ಬೂರುಗ

ಕೆಂಪು ಹೂ ಬಿಡುವ ಮರ ಬೂರುಗವೆ ಅಥವಾ ಹಳದಿಯ ಹೂವು ಬಿಡುವ ಮರ ಬೂರುಗವೆ ಎಂದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಸ್ವಲ್ಪ ಅಧ್ಯಯನದ ನಂತರ, ಕನ್ನಡದಲ್ಲಿ ಈ ಎರಡೂ ಜಾತಿಯ ಮರಗಳನ್ನು ಬೂರುಗ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಎರಡು ಮರಗಳಿಗೂ ಸಂಬಂಧವಿಲ್ಲವೆಂದೂ ತಿಳಿಯಿತು. ಕೆಂಪು ಬೂರುಗ ಎಲೆ ಉದುರುವ ಮತ್ತು ನಿತ್ಯ ಹರಿದ್ವರ್ಣ ಎರಡೂ ತರಹದ ಕಾಡುಗಳಲ್ಲಿ ಕಂಡುಬಂದರೆ, ಹಳದಿ ಬೂರುಗ ಮಾತ್ರ ಒಣ-ಎಲೆ ಉದುರುವ ಕಾಡುಗಳಿಗಷ್ಟೆ ಸೀಮಿತವಾಗಿವೆ.

ಕೆಂಪು ಬೂರುಗ (ರೆಡ್ ಸಿಲ್ಕ್ ಕಾಟನ್ ಟ್ರೀ): ಕೆಂಪು ಬೂರುಗ ಮರಳುಯುಕ್ತ ಮಣ್ಣಿನಲ್ಲಿ ಸೊಗಸಾಗಿ ಬೆಳೆಯುತ್ತದೆ. ಕಾಡಿನಲ್ಲಿ ಬೆಟ್ಟದಬುಡದಲ್ಲಿ ಮತ್ತು ನೀರು ಹರಿದು ಹೋಗುವ ಜಾಗಗಳಲ್ಲಿ ಸೊಂಪಾಗಿ ಬೆಳೆದು ನಿಲ್ಲುವ ಈ ಮರಗಳನ್ನು ಕಡಿಯದೆ ಬಿಟ್ಟರೆ ನೂರು ಅಡಿಗೂ ಎತ್ತರ ಬೆಳೆದು ನೂರಾರು ವರ್ಷಗಳ ಕಾಲ ಬಾಳುತ್ತವೆ.

ಚಳಿಗಾಲದ ಕೊನೆಯಲ್ಲಿ ಸಂಪೂರ್ಣವಾಗಿ ಎಲೆ ಉದುರಿದ ನಂತರ ಮರ ಪೂರ್ತಿ ಕೆಂಪು ಹೂಗಳಿಂದ ಆವೃತವಾಗುತ್ತದೆ. ನಾಲ್ಕೈದು ಅಂಗುಲ ಅಗಲವಿರುವ ಬಟ್ಟಲಿನಾಕಾರದ ಹೂಗಳು ರಸವತ್ತಾಗಿರುತ್ತವೆ. ಈ ಹೂಗಳನ್ನರಸಿ ಬರುವ ವಿವಿಧ ಕೀಟ ಮತ್ತು ಪಕ್ಷಿಗಳನ್ನು ನೋಡುವುದೇ ಸೊಗಸು.


ಬೂರುಗ ಕಾಯಿ

ದೇವರಾಯನ ದುರ್ಗದಲ್ಲಿ ಬೂರುಗ ವೈವಿಧ್ಯ

ತುಮಕೂರು ಸಮೀಪದ ದೇವರಾಯನ ದುರ್ಗ ಅರಣ್ಯದಲ್ಲಿ ಕೆಂಪು ಬೂರುಗದ ಮರಗಳಿವೆ. ಒಂದೇ ಕಡೆಯಿದ್ದ ನಾಲ್ಕು ಮರಗಳನ್ನು ಒಂದು ದಿನ ಮಧ್ಯಾಹ್ನದವರೆಗೂ ಗಮನಿಸಿ ನೋಡಿದೆ. ಅವುಗಳ ಸುತ್ತ ಹಳದಿ ಸೂರಕ್ಕಿ, ಕರಿ ಸೂರಕ್ಕಿ, ಭರದ್ವಾಜ, ತಿರುಚು ಬಾಲದ ಕಾಜಾಣ ಸೇರಿದಂತೆ ನೂರಾರು ಪಕ್ಷಿಗಳ ಪ್ರಪಂಚವೇ ಅಲ್ಲಿತ್ತು (ಮರಗಳ ಮೇಲೆ ಕುಳಿತಿದ್ದ ಪಕ್ಷಿಗಳ ಹೆಸರುಗಳಿಗಾಗಿ ಬಾಕ್ಸ್‌ ನೋಡಿ). ಬಿರು ಬೇಸಿಗೆಯಲ್ಲಿ ಈ ಮರ ಹಕ್ಕಿಗಳಿಗೆ ಆಹಾರ ಒದಗಿಸುವ ತಾಣವಾಗಿತ್ತು.

ಕೆಂಪು ಬೂರುಗದ ಬೀಜಗಳು ಎಕ್ಕದ ಬೀಜಗಳಂತೆ ಕಾಣುತ್ತವೆ. ಬೂರುಗದ ಕಾಯಿಯಿಂದ ಹತ್ತಿ ಬೇರ್ಪಡಿಸಿ ದಿಂಬು ಹಾಸಿಗೆಯಂತಹ ವಸ್ತುಗಳನ್ನು ತಯಾರಿಸುತ್ತಿದ್ದರಂತೆ. ಈಗ ಹತ್ತಿ, ನಾರು, ಸ್ಪಂಜಿನ ಅವಾಂತರದಲ್ಲಿ ಬೂರುಗ ನಾಪತ್ತೆಯಾಗಿದೆ. ಮರದ ಗೋಂದನ್ನು ಪುಸ್ತಕ ಅಂಟಿಸಲು ಬಳಸುತ್ತಿದ್ದರು. ಈಗ ಬೂರುಗದ ಮರವನ್ನು ಬೆಂಕಿ ಪೊಟ್ಟಣ ಕಾರ್ಖಾನೆಯಲ್ಲಿ ಕಡ್ಡಿ ತಯಾರಿಸಲು ಬಳಸುತ್ತಾರೆ. ಕೈಗಾರಿಕಾ ಕ್ರಾಂತಿಗೂ ಮುಂಚೆ ಮರದ ಉತ್ಪನ್ನಗಳನ್ನು ಮಾತ್ರ ಬಳಸಲಾಗುತ್ತಿತ್ತು. ಇಂದು ಸಂಪೂರ್ಣ ಮರವನ್ನೇ ಕಡಿದು ಬೆಂಕಿಕಡ್ಡಿ ತಯಾರಿಸಲು ಬಳಸಲಾಗುತ್ತಿದೆ.

ಸುಮಾರು 120 ಅಡಿ ಎತ್ತರ ಮತ್ತು 60 ಅಡಿ ಸುತ್ತಳತೆಯ ಕೆಂಪು ಬೂರುಗದ ಮರವನ್ನು ಉತ್ತರಾಂಚಲದ ಹಲ್ದ್ವಾನಿ ಊರಿನಲ್ಲಿ ನೋಡಿ ಬೆರಗಾಗಿದ್ದೆ. ಚಳಿಗಾಲದಲ್ಲಿ ಸುಮಾರು 7 ಡಿಗ್ರಿ ಸೆಲ್ಶಿಯಸ್ ತಾಪಮಾನವಿರುವ ಹಲ್ದ್ವಾನಿಯಲ್ಲಿ ಕೂಡ ಸೊಂಪಾಗಿ ಬೆಳೆದಿರುವ ಬೂರುಗವನ್ನು ನೋಡಿ ಅಚ್ಚರಿಯಾಗಿತ್ತು. ಮರುಭೂಮಿ ಮತ್ತು ಹಿಮಚ್ಚಾದಿತ ಪ್ರದೇಶಗಳನ್ನು ಬಿಟ್ಟರೆ ಕೆಂಪು ಬೂರುಗದ ಮರಗಳು ಸಮುದ್ರ ಮಟ್ಟದಿಂದ ಹಿಡಿದು ಹಿಮಾಲಯಗಳ ತಪ್ಪಲಿ ನವರೆಗೂ ಭಾರತದಾದ್ಯಂತ ಕಂಡು ಬರುತ್ತವೆ.

ಹಳದಿ ಬೂರುಗ: ಬೆಟ್ಟ, ಬಂಡೆ ಸಂದುಗಳು ಮತ್ತು ಕೊರಕಲುಗಳಲ್ಲಿ ಕಂಡು ಬರುವ ಹಳದಿ ಬೂರುಗ ತನ್ನ ವಿಶಿಷ್ಟವಾದ ಹಳದಿ ಹೂವುಗಳಿಂದಾಗಿ ಈ ಹೆಸರು ಪಡೆದಿದೆ. ಈ ಮರಗಳು ಕೆಂಪು ಬೂರುಗದ ಮರಗಳಂತೆ ಬೃಹದಾಕಾರವಾಗಿ ಬೆಳೆಯು
ವುದಿಲ್ಲ. ರೆಂಬೆ ಕೊಂಬೆಗಳು ತಿರುಚಿಕೊಂಡು ಕಲಾತ್ಮಕವಾಗಿ ಕಾಣುತ್ತವೆ. ಇದರ ಹೂ ನೋಡಲು ಸುಂದರವಾಗಿದೆ. ದೇವರಾಯನ ದುರ್ಗದ ಕಾಡಿನಲ್ಲಿರುವ ಹಳದಿ ಬೂರುಗದ ಮರಗಳನ್ನು ಗಮನಿಸಿದಾಗ, ಅಷ್ಟು ಪ್ರಮಾಣದಲ್ಲಿ ಕೀಟಗಳು, ಪಕ್ಷಿಗಳನ್ನಾಗಲಿ ಆಕರ್ಷಿಸಿದಂತೆ ಕಾಣಲಿಲ್ಲ. ಕೇವಲ ಹಳದಿ ಸೂರಕ್ಕಿ, ಟಿಕಲ್ಸ್ ಹೂ ಗುಬ್ಬಿ, ಹಳದಿ ಗಂಟಲಿನ ಪಿಕಳಾರ ಬಿಟ್ಟು ಬೇರೆ ಯಾವುದೇ ಪಕ್ಷಿಗಳು ಇತ್ತ ಸುಳಿಯಲಿಲ್ಲ.


ಪಕ್ಷಿ

ಹಳದಿ ಬೂರುಗದ ಕಾಯಿಗಳು ದುಂಡಾ ಗಿದ್ದು ಹತ್ತಿಯಿಂದ ಕೂಡಿರುತ್ತವೆ. ಆದರೆ, ಹಳದಿ ಬೂರುಗದ ಹತ್ತಿ ಅಷ್ಟಾಗಿ ಉಪಯೋಗಕ್ಕೆ ಬರುವುದಿಲ್ಲ. ಕೆಂಪು ಮತ್ತು ಹಳದಿ ಬೂರುಗಗಳೆರಡೂ ಕೂಡ ಔಷಧಿ ಗುಣಗಳಿಂದ ಕೂಡಿದ್ದು ಕೆಂಪು ಬೂರುಗದ ಹೂವನ್ನು ಗ್ರಾಮೀಣ ಭಾಗದಲ್ಲಿ ತರಕಾರಿಯಂತೆ ಬಳಸುವುದು ರೂಢಿಯಲ್ಲಿದೆ. ಹಳದಿ ಬೂರುಗದ ಹೂ ಮತ್ತು ತೊಗಟೆ ಪುಡಿಯನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ.

ಅಳವಿನಂಚಿನ ವೈವಿಧ್ಯ

ತುಮಕೂರಿನ ಸಿದ್ದಗಂಗೆಯ ಬಳಿಯಿರುವ ಒಂದು ಹಳ್ಳಿಗೆ ಬೂರುಗ ಮರದ ಪಾಳ್ಯ ಎಂದು ಹೆಸರಿದೆ.  ಒಂದು ಕಾಲದಲ್ಲಿ ಬೂರುಗ ಮರಗಳು ಅಲ್ಲಿ ಯಥೇಚ್ಚವಾಗಿದ್ದಿರಬಹುದು. ಆದರೆ, ಇಂದು ಈ ಹಳ್ಳಿಯಲ್ಲಿ ಹೆಸರಿಗೂ ಒಂದು ಬೂರುಗದ ಮರವಿಲ್ಲ. ಬಹುಪಯೋಗಿ ಬೂರುಗದ ಮರಗಳು ನಿಧಾನವಾಗಿ ಅವನತಿ ಹಾದಿ ಹಿಡಿದಿವೆ. ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಅರಣ್ಯ ರಜ್ಷುಸುಮ ಇಂಥ ದೇಸಿ ಮರಗಳನ್ನು ಉಳಿಸುವುದು ಅನಿವಾರ್ಯವಾಗಿದೆ.

ಆಹಾರ ಅರಸಿ ಬರುವ ಪಕ್ಷಿಗಳು...

ತುಮಕೂರಿನ ದೇವರಾಯನ ದುರ್ಗ ಅರಣ್ಯದಲ್ಲಿನ ಕೆಂಪು ಬೂರುಗದ ಮರಗಳನ್ನು ಒಂದು ಮಧ್ಯಾಹ್ನವರೆಗೂ ಗಮನಿಸಿದಾಗ ಕಂಡ ಪಕ್ಷಿಗಳೆಂದರೆ ಹಳದಿ ಸೂರಕ್ಕಿ, ಕರಿ ಸೂರಕ್ಕಿ, ಭರದ್ವಾಜ, ತಿರುಚು ಬಾಲದ ಕಾಜಾಣ , ಕಾಡುಕಾಗೆ , ಊರುಕಾಗೆ, ಮೈನಾ, ಕಾಡು ಮೈನಾ, ಚೊಟ್ಟಿ ಮೈನಾ, ಹಳದಿ

ಗಂಟಲಿನ ಗುಬ್ಬಿ, ಟಿಕಲ್ಸ್ ಹೂ ಗುಬ್ಬಿ, ಕೋಗಿಲೆ, ಕದುಗನ ಹಕ್ಕಿ, ಬಿಳಿ ಕಣ್ಣಿನ ಚಿಟಗುಬ್ಬಿ, ಕೆಮ್ಮೀಸೆ ಪಿಕಳಾರ, ಕೆಂಪು ಬಾಲದ ಪಿಕಳಾರ, ಚಿಟ್ಟುಗುಟುರ, ಬಿಳಿ ಕೆನ್ನೆ ಚಿಟ್ಟುಗುಟುರ, ಕಪ್ಪು ತಲೆಯ ಓರಿಯೋಲ್, ಕೆಮ್ಮಂಡೆಗಿಳಿ, ರಾಮಗಿಳಿ.

ಇವೆಲ್ಲ ಬೂರುಗದ ಹೂಗಳನ್ನು ತಿನ್ನುತ್ತಾ ಮಕರಂದ ಹೀರುತ್ತಿದ್ದರೆ, ಹೂಗಳನ್ನರಸಿ ಬರುವ ಜೇನು ನೊಣ, ಚಿಟ್ಟೆ, ವಿವಿಧ ನೊಣಗಳನ್ನು ಹಿಡಿದು ಮುಕ್ಕಲು ಅಕ್ಕ ಪಕ್ಕದ ಗಿಡಗಳ ಮೇಲಿಂದ ಹಾರಿ ಬರುವ ಗಣಿಗಾರಲು ಹಕ್ಕಿ, ನೆಲದ ಮೇಲೆ ಬಿದ್ದ ಹೂಗಳನ್ನು ಮುತ್ತಿರುವ ಕೀಟಗಳನ್ನು ಹೆಕ್ಕಿ ತಿನ್ನಲು ಗಿಜಗಾರ್ಲು ಹಕ್ಕಿ, ಕಾಡು ಕೋಳಿಗಳು.. ಹೀಗೆ ನಾಲ್ಕು ಬೂರುಗ ಮರಗಳ ಸುತ್ತ ಒಂದು ಪಕ್ಷಿ ಪ್ರಪಂಚವೇ ಸೃಷ್ಟಿಗೊಂಡಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !