ಸಂಗೀತದ ‘ವರ್ಷ’ಧಾರೆ

ಶನಿವಾರ, ಮಾರ್ಚ್ 23, 2019
34 °C

ಸಂಗೀತದ ‘ವರ್ಷ’ಧಾರೆ

Published:
Updated:

‘ಡಿ ಸ್ಕೊ ಆಡಲಾಕ ಘಲ್ಲು ಘಲ್ಲು ಗೆಜ್ಜೆ ಕಟ್ಟೀನಿ

ಲಕ್ಸ್‌ ಸೋಪ್‌ ಹಾಕಿ ಜಳಕ ಮಾಡಿ ಜಸ್ಟ್‌ ಬಂದೀನಿ..’

ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆದ 6 ನಿಮಿಷದಲ್ಲಿ ಒಂದು ಸಾವಿರ ಮಂದಿ ಹಾಗೂ 6 ಗಂಟೆಯಲ್ಲಿ ಬರೋಬ್ಬರಿ 10 ಲಕ್ಷ ಮಂದಿ ಈ ‘ಲಿರಿಕಲ್‌ ವಿಡಿಯೊ ಸಾಂಗ್‌’ ಅನ್ನು ವೀಕ್ಷಿಸುವ ಮೂಲಕ ಚಂದನವನದಲ್ಲಿ ‘ರೆಕಾರ್ಡ್‌ ಬ್ರೇಕಿಂಗ್‌ ಸಾಂಗ್‌’ ಎಂಬ ಹೊಸ ದಾಖಲೆ ಸೃಷ್ಟಿಯಾಯಿತು. ಹೀಗೆ ಸಂಚಲನ ಸೃಷ್ಟಿಸಿದ ಹಾಡು ಹಾಡಿರುವ ಯುವ ಗಾಯಕಿಯೇ ವರ್ಷಾ ಬಿ.ಸುರೇಶ್.

ಹೌದು, ನಟ ದರ್ಶನ್‌ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ‘ಯಜಮಾನ’ ಚಿತ್ರದ ‘ಬಸಣ್ಣಿ ಬಾ...’ ಎಂಬ ಈ ಐಟಂ ಸಾಂಗ್‌ಗೆ ವಿಕಟ ಕವಿ ಯೋಗರಾಜ ಭಟ್ಟರು ಉತ್ತರ ಕರ್ನಾಟಕ ಶೈಲಿಯ ಪದಗಳ ಮಸಾಲೆಯನ್ನು ಚೆನ್ನಾಗಿಯೇ ಅರೆದು ಹಾಕಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ಈ ಮಸಾಲೆಯ ಘಮವನ್ನು ಕೇಳುಗರ ಕಿವಿಗೆ ಹಾಕಿದ್ದಾರೆ.  ಗಾಯಕಿ ವರ್ಷಾ, ಕೇಳುಗರ ಮನದಾಳಕ್ಕೆ ಇಳಿಸಿ, ಅವರು ಹುಚ್ಚೆದ್ದು ಕುಣಿಯುವಂತೆ ಹಾಡಿದ್ದಾರೆ. ಆರಂಭದಲ್ಲಿ ಈ ಹಾಡಿಗೆ ವರ್ಷಾ ‘ಟ್ರ್ಯಾಕ್‌ ಸಿಂಗರ್‌’ ಆಗಿದ್ದರು. ಇವರ ಅಮಲಿನ ಧ್ವನಿಗೆ ಮನಸೋತ ಹರಿಕೃಷ್ಣ, ಆ ಹಾಡಿನ ಹಿನ್ನೆಲೆ ಗಾಯಕಿ ಪಟ್ಟ ನೀಡಿದರು. 

‘ಭಾವನೆಗಳ ಬೆನ್ನೇರಿ’, ‘ಕಥಾ ವಿಚಿತ್ರ’ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಲಚಿತ್ರಗಳಲ್ಲಿ ಹಾಡಿದ್ದರೂ, ವರ್ಷಾಗೆ ಆ ಗೀತೆಗಳು ಹೆಸರು ತಂದುಕೊಟ್ಟಿರಲಿಲ್ಲ. ‘ಬಸಂತಿ ಬಾ..’ ಈ ಹಾಡು ಅವರ ಸಂಗೀತ ಯಾನಕ್ಕೆ ದೊಡ್ಡ ತಿರುವು ನೀಡಿದೆ. ಈ ಖ್ಯಾತಿಯನ್ನು ಯೋಗದಿಂದಲ್ಲ, ಯೋಗ್ಯತೆಯಿಂದ ಗಳಿಸಿಕೊಂಡಿದ್ದಾರೆ ಎಂಬುದಕ್ಕೆ 16 ವರ್ಷಗಳ ಅವರ ಕಠಿಣ ಪರಿಶ್ರಮವೇ ಸಾಕ್ಷಿ.

ಯಾವ ಮೋಹನ ಮುರಳಿ ಕರೆಯಿತು...

ಬೆಂಗಳೂರಿನ ಕೆಂಗೇರಿ ನಿವಾಸಿ ವರ್ಷಾ, ರೈಲ್ವೆ ನೌಕರ ಸುರೇಶ್ ರಂಗಸ್ವಾಮಿ ಮತ್ತು ಮೀನಾಕ್ಷಿ ಅವರ ಪುತ್ರಿ. ಸಂಗೀತ ಪ್ರೇಮಿಗಳಾಗಿದ್ದ ದಂಪತಿ, ಮಗಳನ್ನು 5ನೇ ವಯಸ್ಸಿಗೆ ವಿದ್ವಾನ್‌ ನಾರಾಯಣ ಅಯ್ಯಂಗಾರ್‌ ಅವರ ಬಳಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಲಿಯಲು ಸೇರಿಸಿದರು. ಸಂಗೀತದೊಂದಿಗೆ ಭರತನಾಟ್ಯವನ್ನೂ ಕಲಿತರು ವರ್ಷಾ. ನಂತರ ವಿದುಷಿ ಶಾಂತಮಣಿ ದತ್ತಾತ್ರಿಯವರಲ್ಲಿ ಸಂಗೀತದ ಕಲಿಕಾ ಪಯಣ ಮುಂದುವರಿಸಿದರು. 10ನೇ ವರ್ಷಕ್ಕೆ ಜೂನಿಯರ್‌, 14ನೇ ವರ್ಷಕ್ಕೆ ಸೀನಿಯರ್‌ ಪರೀಕ್ಷೆ ಪಾಸ್ ಮಾಡಿದರು. ಗಾಯಕಿ ಬಿ. ಕೆ. ಸುಮಿತ್ರಾ ಅವರ ಬಳಿ ಕೆಲಕಾಲ ಸಂಗೀತಾಭ್ಯಾಸ ಮಾಡಿದರು. ಆನಂತರ ಸಂಗೀತ ನಿರ್ದೇಶಕ ಉಪಾಸನಾ ಮೋಹನ್‌ ಸಾರಥ್ಯದ ಭಾವಗೀತೆ ಶಾಲೆ ಸೇರಿದರು.

ಮೋಹನ್‌ ಅವರ ಗರಡಿಯಲ್ಲಿ ಪಳಗುತ್ತಿರುವಾಗಲೇ, ಆ ಶಾಲೆಗೆ ಭೇಟಿ ನೀಡುತ್ತಿದ್ದ ಎಚ್‌.ಎಸ್. ವೆಂಕಟೇಶಮೂರ್ತಿ, ಬಿ.ಆರ್‌. ಲಕ್ಷ್ಮಣರಾವ್‌, ವ್ಯಾಸರಾವ್‌, ಡುಂಡಿರಾಜ್‌ರಂತಹ ಕವಿಗಳ ಒಡನಾಟ ದೊರೆಯಿತು. ಅವರ ಸಾಂಗತ್ಯದಿಂದ ವರ್ಷಾ ಅವರ ಹಾಡುಗಾರಿಕೆಗೆ ಹೊಸ ಲಯ ಸಿಕ್ಕಿತು. ನಂತರದಲ್ಲಿ ಪಾರಾ ಮಂಜುನಾಥ್‌ ಮತ್ತು ಕಾಶೀನಾಥ್‌ ಪತ್ತಾರ್‌ ಬಳಿ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದ ಪರಿಣಾಮ ಗಮಕ, ಮುರ್ಕಿ, ಆಲಾಪ, ಸ್ವರ ಸಂಸ್ಕೃತಿಗಳ ಪರಿಚಯವೂ ಆಯಿತು.

ಮೊದಲ ಬಾರಿಗೆ ‘ಭಾವ ಭೃಂಗ’ ಧ್ವನಿಸುರುಳಿಯ ‘ತೇರು ಹೊಂಟೈತವ್ವಾ’ ಸಾಮೂಹಿಕ ಗೀತೆಯ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ದಿನಗಳು ಉರುಳಿದಂತೆ ವೇದಿಕೆ ಕಾರ್ಯಕ್ರಮ, ಭಾವಗೀತೆಗಳ ಸಿ.ಡಿ.ಗೆ ಹಾಡುವ ಭಾಗ್ಯವೂ ಲಭಿಸಿತು. ರತ್ನಮಾಲಾ ಪ್ರಕಾಶ್‌, ಎಂ.ಡಿ ಪಲ್ಲವಿ, ಯಶವಂತ ಹಳಿಬಂಡಿ, ಜೋಗಿ ಸುನೀತಾ, ಶಮಿತಾ ಮಲ್ನಾಡ್‌ರಂತಹ ಖ್ಯಾತ ಗಾಯಕರೊಂದಿಗೆ ಸುಮಾರು 50 ಸಿ.ಡಿ.ಗಳಿಗೆ ವರ್ಷಾ ಅವರು ತಮ್ಮ ಇಂಪಾದ ಧ್ವನಿ ನೀಡಿದ್ದಾರೆ. ಸಾವಿರಕ್ಕೂ ಅಧಿಕ ‘ಸ್ಟೇಜ್‌ ಷೋ’ ಕೊಟ್ಟಿದ್ದಾರೆ. ‘ವರ್ಷಧಾರೆ’ ಎಂಬ ಭಾವಗೀತೆಗಳ ಸೋಲೋ ಆಲ್ಬಂ ಹೊರತಂದು ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 ಎಂ.ಕಾಂ ಓದಿರುವ ವರ್ಷಾ, ಆಳ್ವಾಸ್‌ ನುಡಿಸಿರಿ, ಹಂಪಿ ಉತ್ಸವ, ಮಲ್ಪೆ ಉತ್ಸವ, ಹಾವೇರಿ ಉತ್ಸವ ಸೇರಿದಂತೆ ರಾಜ್ಯದ ವಿವಿಧೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಸಂಗೀತ ಕ್ಷೇತ್ರದ ಸಾಧನೆಗೆ ‘ಯೂತ್‌ ಅಚೀವ್‌ಮೆಂಟ್‌ ಅವಾರ್ಡ್‌’, ‘ಅಕ್ಕು’ ನಾಟಕದ ಹಾಡಿಗೆ 2015ನೇ ಸಾಲಿನ ‘ಬೆಸ್ಟ್‌ ಫೀಮೇಲ್‌ ಸಿಂಗರ್‌’ ಎಂಬ ಕನ್ನಡ ಇಂಟರ್‌ನ್ಯಾಷನಲ್‌ ಮ್ಯೂಸಿಕ್‌ ಅವಾರ್ಡ್‌ (KIMA) ಸೇರಿದಂತೆ ವಿವಿಧ ಸನ್ಮಾನ, ಬಹುಮಾನಗಳು ಸಂದಿವೆ.

‘ನೀರಿನ ವ್ಯತ್ಯಾಸವಾಗಿ ಗಂಟಲು ಕಟ್ಟಿಕೊಂಡಿತ್ತು. ಸರಿಯಾಗಿ ಮಾತನಾಡುವುದೇ ಕಷ್ಟವಾಗಿತ್ತು. ಹಾಗಿದ್ದಾಗ, ಒಂದು ದಿನ ಹರಿಕೃಷ್ಣ ಸರ್‌ ‘ನಾಳೆ ಹಾಡಿನ ರೆಕಾರ್ಡಿಂಗ್‌ ಇದೆ ಬನ್ನಿ’ ಎಂದು ಕರೆದರು. ಅವಕಾಶ ತಪ್ಪಿ ಹೋದೀತು ಎಂಬ ಭಯದಿಂದ ಅನಾರೋಗ್ಯ ಸಮಸ್ಯೆ ಮುಚ್ಚಿಟ್ಟು ಒಪ್ಪಿಕೊಂಡೆ. ನನ್ನ ಅದೃಷ್ಟ ‘ಬಸಣ್ಣಿ ಬಾ...’ ಹಾಡಿನ ರೆಕಾರ್ಡಿಂಗ್‌ ದಿನ ನನ್ನ ಧ್ವನಿ ಕೈಕೊಡಲಿಲ್ಲ. ಆತ್ಮವಿಶ್ವಾಸದಿಂದ ಹಾಡಿದೆ. ಆ ಹಾಡು ಕ್ಲಿಕ್‌ ಆಗುತ್ತದೆ ಎಂಬ ನಂಬಿಕೆಯಿತ್ತು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್‌ ಆಗುತ್ತದೆ ಅಂತ ಗೊತ್ತಿರಲಿಲ್ಲ.

ಒಂದೇ ಶೈಲಿಯ ಸಾಂಗ್‌ಗಳಿಗೆ ಅಂಟಿಕೊಳ್ಳುವುದು ನನಗೆ ಇಷ್ಟವಿಲ್ಲ. ಮಾದಕ, ಮಾಧುರ್ಯ, ಜನಪದ, ಶಾಸ್ತ್ರೀಯ, ಗಜಲ್‌ ಹೀಗೆ ಎಲ್ಲ ರೀತಿಯ ಗೀತೆಗಳನ್ನು ಹಾಡಲು ಇಷ್ಟ. ಕನ್ನಡದ ಗಾಯಕಿಯಾದ ನಾನು ಎಲ್ಲ ಭಾಷೆಗಳಲ್ಲೂ ಹಾಡಬೇಕು. ಎ.ಆರ್‌. ರೆಹಮಾನ್‌ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಕನಸಿದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ವರ್ಷಾ ಹಂಚಿಕೊಂಡರು.

ಎದೆ ತುಂಬಿ ಹಾಡುವೆನು...

ವರ್ಷಾ, ಓದು ಹಾಗೂ ಸಂಗೀತ ಎರಡಲ್ಲೂ ಜಾಣೆ. ಅವರು ಎರಡು ಬಾರಿ ಈಟಿವಿ ವಾಹಿನಿಯ ‘ಎದೆ ತುಂಬಿ ಹಾಡುವೆನು’ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಬಂದಿದ್ದಾರೆ. ಮೊದಲಬಾರಿ ಭಾಗವಹಿಸಿದ್ದಾಗ ಕ್ವಾರ್ಟರ್‌ ಫೈನಲ್‌ ತಲುಪಿದ್ದರು. ಎರಡನೇ ಬಾರಿಗೆ ಸ್ಪರ್ಧಿಸಿದಾಗ, ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ‘ಕನ್ನಡದ ಶ್ರೇಯಾ ಘೋಷಾಲ್’ ಎಂದು ಕರೆಸಿಕೊಂಡಿದ್ದರು. ಸಂಗೀತದಂತೆ ಓದಿನಲ್ಲೂ ಮುಂದಿರುವ ವರ್ಷಾ, ಎಸ್ಸೆಸ್ಸೆಲ್ಸಿಯಲ್ಲಿ ಶೇ 90 ಅಂಕಗಳಿಸಿದ್ದಾರೆ. ಜಯನಗರದ ಜೈನ್‌ ಕಾಲೇಜಿನಲ್ಲಿ ಬಿ.ಕಾಂ ಓದುವಾಗ ಸಂಗೀತ ತಂಡ ಕಟ್ಟಿ ಕಾರ್ಯಕ್ರಮಗಳನ್ನು ನೀಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !