ವರ್ತೂರು ಸೇತುವೆ ದುರಸ್ತಿ ವಿಳಂಬ

7
ಸೆಪ್ಟೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ

ವರ್ತೂರು ಸೇತುವೆ ದುರಸ್ತಿ ವಿಳಂಬ

Published:
Updated:
Deccan Herald

ಬೆಂಗಳೂರು: ಕಂಪಿಸುತ್ತಿರುವ ವರ್ತೂರು ಸೇತುವೆ ದುರಸ್ತಿ ಕಾರ್ಯ ಮತ್ತಷ್ಟು ವಿಳಂಬವಾಗಿದೆ. ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿದ್ದ ರಿಪೇರಿ ಕೆಲಸ ಸೆಪ್ಟೆಂಬರ್‌ ವೇಳೆಗೆ ಕೆಲಸ ಮುಗಿಯುವ ನಿರೀಕ್ಷೆ ಇದೆ.

‘ಬಿಬಿಎಂಪಿ ಅಧಿಕಾರಿಗಳು ಸೇತುವೆ ಕೆಲಸವನ್ನು ನಿಗದಿತ ಸಮಯಕ್ಕೆ ಮುಗಿಸಿಲ್ಲ. ಜುಲೈಯೊಳಗೆ ಕೆಲಸ ಮುಗಿಯುವ ಭರವಸೆ ಈಗ ಸುಳ್ಳಾಗಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ನಿರ್ಮಾಣ ಕೆಲಸಕ್ಕೆ ಬೇಕಾಗಿರುವ ಪರಿಕರಗಳ ಸರಬರಾಜು ತಡವಾಗಿದೆ. ದುರಸ್ತಿ ಕಾರ್ಯಕ್ಕೆ ಕೆಲಸಗಾರರು ಸರಿಯಾಗಿ ಬರುತ್ತಿಲ್ಲ. ಹಾಗಾಗಿ ವಿಳಂಬ ಆಗಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಸೋಮಶೇಖರ್‌, ‘ಸೇತುವೆಯಲ್ಲಿ ಕಾಣಿಸಿಕೊಂಡಿರುವ ಬಿರುಕುಗಳನ್ನು ಮುಚ್ಚುತ್ತಿದ್ದೇವೆ. ಪಿಲ್ಲರ್‌ಗಳ ಅದರ ಬುಡವನ್ನು ಭದ್ರಪಡಿಸುವ ಕಾರ್ಯವನ್ನು ಇನ್ನು ಎರಡು ವಾರಗಳಲ್ಲಿ ಆರಂಭಿಸಲಿದ್ದೇವೆ. ದುರಸ್ತಿ ಕಾರ್ಯಕ್ಕೆ ಬೇಕಾದ ಬೇರಿಂಗ್‌ಗಳು ಇನ್ನು 10 ದಿನಗಳ ಒಳಗೆ ಸ್ಥಳವನ್ನು ತಲುಪಲಿವೆ. ಈ ತಿಂಗಳ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ’ ಎಂದರು.

ಈ ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವರ್ತೂರು ರಸ್ತೆ ವಿಸ್ತರಣೆ ಆಗುತ್ತಿದ್ದು, ಇಲ್ಲಿ ಹೊಸ ಸೇತುವೆಯೂ ನಿರ್ಮಾಣವಾಗಲಿದೆ. ಹೊಸ ಸೇತುವೆಯಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ಬಿಬಿಎಂಪಿ ಅನುವು ಮಾಡಿಕೊಡಲಿದೆ.

‘ಹೊಸ ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಪರಿಕರಗಳು ಸ್ಥಳವನ್ನು ತಲುಪಿವೆ. ಪಿಲ್ಲರ್‌ಗಳನ್ನು ಅಳವಡಿಸುವುದಕ್ಕೆ ನೆಲ ಅಗೆಯುವ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದೇವೆ’ ಎಂದು ಸೋಮಶೇಖರ್‌ ತಿಳಿಸಿದರು.

‘ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆಯೇ ವರ್ತೂರು ರಸ್ತೆ ವಿಸ್ತರಣೆ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಇಲ್ಲಿ ಮೇಲ್ಸೇತುವೆ ನಿರ್ಮಿಸಲು ಮುಂದಾಗಿದೆ’ ಎಂದು ಸ್ಥಳೀಯ ನಿವಾಸಿ ಜಗದೀಶ ರೆಡ್ಡಿ ದೂರಿದರು.

‘ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ಹಾಗಾಗಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲು ಸ್ವಲ್ಪ ಸಮಯ ಹಿಡಿಯಲಿದೆ’ ಎಂದು ಸೋಮಶೇಖರ್‌ ತಿಳಿಸಿದರು.

ಇಲ್ಲಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವದ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !