ಚಿಣ್ಣರ ಪ್ರಶ್ನೆಗಳಿಗೆ ವಸಿಷ್ಠ ಸಿಂಹ ತಬ್ಬಿಬ್ಬು

ಶನಿವಾರ, ಮೇ 25, 2019
22 °C

ಚಿಣ್ಣರ ಪ್ರಶ್ನೆಗಳಿಗೆ ವಸಿಷ್ಠ ಸಿಂಹ ತಬ್ಬಿಬ್ಬು

Published:
Updated:
Prajavani

ಬೆಂಗಳೂರು: ‘ನೀವು ಯಾವ ಕಾಡಿನ ಸಿಂಹ’ ಎಂದು ಪುಟಾಣಿ ಸ್ಮೃತಿ ಕೇಳಿದ ಪ್ರಶ್ನೆಗೆ ಸಿನಿಮಾ ನಟ ವಸಿಷ್ಠ ಸಿಂಹ ಒಮ್ಮೆ ತಬ್ಬಿಬ್ಬಾದರು. ಬಳಿಕ ಸಾವರಿಸಿಕೊಂಡು ‘ನನ್ನನ್ನು ಪ್ರೀತಿಸುವ ಮನಸ್ಸುಗಳಿಗಷ್ಟೆ ನಾನು ಸಿಂಹ’ ಎಂದು ಉತ್ತರಿಸಿದರು.

‘ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಈ ರೀತಿಯ ಪ್ರಶ್ನೆಗಳನ್ನು ಕೇಳಿಲ್ಲ. ಮೊದಲ ‍ಪ್ರಶ್ನೆಯೇ ತಬ್ಬಿಬ್ಬು ಮಾಡಿತು. ಮುಂದೆ ಹುಷಾರಾಗಿರಬೇಕು’ ಎಂದು ನಕ್ಕರು.

‘ವಿಜಯನಗರ ಬಿಂಬ’ ಆಯೋಜಿಸಿದ್ದ  ‘ಪ್ರಶ್ನಾರ್ಥ’ ಚಿಣ್ಣರ ಚಾವಡಿ–ಪುಟಾಣಿ ಮಕ್ಕಳ ತಮಾಷೆ ಪತ್ರಿಕಾಗೋಷ್ಠಿ ಈ ನಟನ ಪಾಲಿಗೆ ಹೊಸ ಸವಾಲಿನಿಂದ ಕೂಡಿತ್ತು. ಒಂದೆಡೆ ಪುಟಾಣಿ ಪತ್ರಕರ್ತರು ಪ್ರಶ್ನೆಗಳ ಬಾಣ ಎಸೆಯುತ್ತಿದ್ದರೆ, ಸಿಂಹ ತಾಳ್ಮೆಯಿಂದ ಅವುಗಳನ್ನು ಎದುರಿಸಿದರು. ಮಕ್ಕಳ ಬಹುತೇಕ
ಪ್ರಶ್ನೆಗಳಿಗೆ ತಮಾಷೆ‌ಯಿಂದ ಉತ್ತರಿಸಿದರು. ಕೆಲವು ಪ್ರಶ್ನೆಗಳಿಗೆ ಗಂಭೀರವಾಗಿಯೇ ಉತ್ತರ ಕೊಟ್ಟರು. ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದರು. ಸಿಹಿ–ಕಹಿ ಘಟನೆಗಳನ್ನು ನೆನೆದರು. ಪುಟಾಣಿಗಳೊಂದಿಗೆ ಕುಳಿತು ‌ಅವರೂ ಕೆಲಹೊತ್ತು ಮಗುವಾದರು. ಕಾಲೇಜು ದಿನಗಳಲ್ಲಿ ಮಾಡಿದ್ದ ಚೇಷ್ಟೆಗಳನ್ನು ಹಂಚಿಕೊಂಡು ಖುಷಿಪಟ್ಟರು.

ಬಾಲಕಿ ಇಶಾ, ‘ನೀವು ಅಭಿನಯಿಸಿದ್ದ ನಾಟಕದ ಡೈಲಾಗ್‌ ಹೇಳಿ’ ಎಂದು ಮನವಿ ಮಾಡಿದರು. ‘10 ವರ್ಷಗಳ ಹಿಂದೆ ನಾಟಕದಲ್ಲಿ ನಟಿಸಿದ್ದೆ. ಈಗ ಸಂಭಾಷಣೆ ನೆನಪಾಗುತ್ತಿಲ್ಲ. ನೆನಪಾದ ಬಳಿಕ ಹೇಳುತ್ತೇನೆ’ ಎಂದು ಸಿಂಹ ಜಾಣ್ಮೆಯಿಂದ ನುಣುಚಿಕೊಂಡಾಗ ಇಶಾ ಬೇಸರಗೊಂಡರು.

ಬಾಲಕ ಪವನ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್‌ಕುಮಾರ್‌ ಮತ್ತು ವಜ್ರಮುನಿಯವರಂತೆ ಉತ್ತಮ ಕಲಾವಿದನಾಗಬೇಕು’ ಎಂಬ ಬಯಕೆ ತೋಡಿಕೊಂಡರು.

‘ಖಳನಟನ ಪಾತ್ರಗಳಂತೆ ಹಾಸ್ಯ ಪಾತ್ರಗಳಲ್ಲಿ ಮಿಂಚಬೇಕೆಂಬ ಆಸೆ ಇದೆ’ ಎಂದು ಪುಟಾಣಿ ವರ್ಷಿತ್‌ ಬಳಿ ತಮ್ಮ ಆಸೆ ಹೇಳಿಕೊಂಡರು.

‘ನಾನು ನಟಿಸಿದ ಸಿನಿಮಾ ಸೋತಿದೆ ಎಂದು ಯಾವತ್ತೂ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುವುದೇ ದೊಡ್ಡ ಸೋಲು’ ಎನ್ನುವ ಮೂಲಕ ಫಾಲ್ಗುಣಿ ಅವರ ಸಂದೇಹ ನಿವಾರಿಸಿದರು.

ಕೆಜಿಎಫ್ ಸಿನಿಮಾದ ಶೂಟಿಂಗ್ ಸಂದರ್ಭವನ್ನು ಮೆಲುಕು ಹಾಕಿದ ಅವರು, ‘ಸಿನಿಮಾ ಸಲುವಾಗಿ ಹಾಕಿದ್ದ ದೊಡ್ಡ ಸೆಟ್ ಒಮ್ಮೆ ಬಿರುಗಾಳಿಗೆ ಹಾರಿ ಹೋಗಿತ್ತು. ಶೂಟಿಂಗ್‌ ವೇಳೆ ಇಂಥ ಅವಘಡಗಳು ಸಹಜ. ನಾವು ಧೈರ್ಯದಿಂದಿರಬೇಕು’ ಎಂದರು.

‘ಟಗರು ಸಿನಿಮಾದ ವೇಳೆ ಶಿವರಾಜ್‌ಕುಮಾರ್‌ ಜೊತೆ ಹರಟೆ ಹೊಡೆದಿದ್ದೇ ಹೆಚ್ಚು. ಯಶ್‌ ಜೊತೆಗೆ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ದರ್ಶನ್‌, ಸುದೀಪ್ ಜೊತೆ ನಟಿಸಬೇಕು’ ಎಂದು ತಿಳಿಸಿದರು.

ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವ ಬೆಳೆಯಲಿ ಎಂಬ ಉದ್ದೇಶದಿಂದ ‘ವಿಜಯನಗರ ಬಿಂಬ’ ಈ ಕಾರ್ಯಕ್ರಮ ಆಯೋಜಿಸಿತ್ತು.

*

ಪ್ರಶ್ನೆ ಕೇಳುವ ಮನಸ್ಥಿತಿ ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಮಕ್ಕಳು ಅಂಕಗಳಿಗಾಗಿಲ್ಲ. ಜ್ಞಾನಕ್ಕಾಗಿ ಕಲಿಯಬೇಕು. ಅಂಕ ಗಳಿಸುವಂತೆ ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕಬಾರದು
–ವಸಿಷ್ಠ ಸಿಂಹ

 

ಅಕ್ಕಿರೊಟ್ಟಿ–ಬೆಂಡೆಕಾಯಿ ಪಲ್ಯ ಇಷ್ಟ’

ವಸಿಷ್ಠ ಸಿಂಹ ಅವರಿಗೆ ಅಕ್ಕಿರೊಟ್ಟಿ ಮತ್ತು ಬೆಂಡೆಕಾಯಿ ಪಲ್ಯ ತುಂಬಾ ಇಷ್ಟವಂತೆ. ತನಿಷ್‌ ಕೇಳಿದ ಪ್ರಶ್ನೆಗೆ ಅವರೇ ಹಾಗಂತ ತಿಳಿಸಿದರು.

‘ಚಿಕ್ಕಂದಿನಿಂದಲ್ಲೂ ಅಕ್ಕಿರೊಟ್ಟಿ ಬೆಂಡೆಕಾಯಿ ಪಲ್ಯ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ’ ಎಂದರು. ‘ನನಗೂ ಪಾರ್ಸೆಲ್‌ ಬೇಕು’ ಎಂದ ತನಿಷ್‌ಗೆ ನೇರವಾಗಿ ಮನೆಗೆ ಬರುವಂತೆ ಆಹ್ವಾನ ಕೊಟ್ಟರು‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !