ಸೋಮವಾರ, ಅಕ್ಟೋಬರ್ 21, 2019
21 °C

ಬಂಡೀಪುರ: ಯಥಾಸ್ಥಿತಿ ಮುಂದುವರಿಸಲು ಮನವಿ

Published:
Updated:
Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೇರಿರುವ ನಿಷೇಧ ಹೀಗೆಯೇ ಮುಂದುವರಿಯಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ಅವರು ಶುಕ್ರವಾರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಮಾಡಿದರು. 

‘ರಾತ್ರಿ ಸಂಚಾರಕ್ಕೆ ಮತ್ತೆ ಅವಕಾಶ ನೀಡಿದರೆ ವನ್ಯಜೀವಿಗಳ ಜೀವಕ್ಕೆ ಅಪಾಯ ಎದುರಾಗಬಹುದು. ಅಕ್ರಮ ಚಟುವಟಿಕೆಗಳೂ ಹೆಚ್ಚುತ್ತವೆ. ಮರಳು, ಮರದ ಮಾಫಿಯಾ ಹೆಚ್ಚಾಗಲು ಅವಕಾಶ ನೀಡಿದಂತಾಗುತ್ತದೆ’ ಎಂಬುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. 

ಪರಿಶೀಲನೆಗೆ ಒತ್ತಾಯ: ಚಾಮರಾಜನಗರದಲ್ಲಿ ನಡೆಯುತ್ತಿರುವ ‘ಒಳಚರಂಡಿ ಕಾಮಗಾರಿ, ಕ್ರೀಡಾಂಗಣ ಕಾಮಗಾರಿ, ರಸ್ತೆ ಕಾಮಗಾರಿಗಳು ಕಳಪೆಯಾಗಿದ್ದು, ಇದರ ಬಗ್ಗೆ ಪರಿಶೀಲನೆ ನಡೆಸಬೇಕು. ಶ್ರೀಚಾಮರಾಜೇಶ್ವರ ದೇವಸ್ಥಾನದ ರಥ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳಬೇಕು. ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಶಿವಲಿಂಗಮೂರ್ತಿ, ಪಣ್ಯದಹುಂಡಿರಾಜು, ಚಾ.ರಾ.ಕುಮಾರ್ ಇದ್ದರು.

‘ಪ್ರಜಾಪ್ರಭುತ್ವದ ಕಗ್ಗೊಲೆ’

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌ ನಾಗರಾಜ್‌ ಅವರು, ವಿಧಾನಸಭಾ ಕಲಾಪಗಳನ್ನು ಚಿತ್ರೀಕರಿಸಲು ಖಾಸಗಿ ಚಾನೆಲ್‌ಗಳಿಗೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿದರು.

ಅಧಿವೇಶನದಲ್ಲಿ ಮಾಧ್ಯಮಗಳಿಗೆ ಅವಕಾಶ ನೀಡದೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ. ಅಧಿವೇಶನ ರಹಸ್ಯವಾಗಿ ನಡೆಯಬಾರದು. ನ್ಯಾಯಾಲಯದ ಕಲಾಪ‍ಗಳನ್ನೇ ನೇರಪ್ರಸಾರ ಮಾಡಲಾಗುತ್ತಿದೆ. ಅಂತಹದ್ದರಲ್ಲಿ ಸದನದಲ್ಲಿ ಆಗುವ ಚರ್ಚೆಗಳು ಬಹಿರಂಗವಾಗಬೇಕು. ಶಾಸಕರು ಪ್ರಾಮಾಣಿಕರಾಗಿದ್ದರೆ ಭಯ ಏಕೆ? ಈ ಸಂಬಂಧ ಸ್ವೀಕರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ’ ಎಂದರು.

Post Comments (+)