ಮಂಗಳವಾರ, ಸೆಪ್ಟೆಂಬರ್ 17, 2019
24 °C
ಬೆಳ್ಳಿ ಕವಚಧಾರಿ ಜಡೆ ವೀರಭದ್ರೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು

6 ವರ್ಷದ ಬಳಿಕ ವಿಜೃಂಭಣೆಯಿಂದ ನಡೆದ ರಥೋತ್ಸವ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಚನ್ನಪ್ಪನಪುರದಲ್ಲಿರುವ ಅಮಚವಾಡಿ ಗುಡ್ಡದ ಮಠದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಆರು ವರ್ಷಗಳ ಬಳಿಕ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಸಮೀಪದ ಚನ್ನಪ್ಪನಪುರ, ಅಮಚವಾಡಿ, ಹೊನ್ನಹಳ್ಳಿ, ಅರಕಲವಾಡಿ, ಯಾನಗಹಳ್ಳಿ, ಲಕ್ಷ್ಮೀಪುರ, ಹರದನಹಳ್ಳಿ, ನಂಜದೇವನಪುರ, ಉಡಿಗಾಲ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಬೆಳ್ಳಿ ಕವಚ ಸಹಿತ ವೀರಭದ್ರೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡರು. 

ಭಾನುವಾರ ಮಧ್ಯಾಹ್ನ ಧ್ವಜಾರೋಹಣ ಪೂಜೆ ಹಾಗೂ ಸೋಮವಾರ ಮುಂಜಾನೆ ರುದ್ರಾಭಿಷೇಕ ಪೂಜೆ ಜರುಗಿತು. ಸಂಜೆ ಪೆಟ್ಟಿಗೆ ದೇವರಿಗೆ ಪೂಜೆ ಸಲ್ಲಿಸಲಾಯಿತು. ಮುಜರಾಯಿ ಇಲಾಖೆ ವಶದಲ್ಲಿದ್ದ ಬೆಳ್ಳಿ ಕವಚವನ್ನು ಪೊಲೀಸ್‌ ಬಂದೋಬಸ್ತ್‌ನೊಂದಿಗೆ ರಾತ್ರಿ 7 ಗಂಟೆಗೆ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ಧಾರಣೆ ಮಾಡಲಾಯಿತು.

ಪಲ್ಲಕ್ಕಿ ಉತ್ಸವ: ವೀರಭದ್ರೇಶ್ವರ ಮತ್ತು ಭದ್ರಕಾಳಮ್ಮ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯ, ನಂದಿ ಕಂಬ, ವೀರಗಾಸೆಯೊಂದಿಗೆ ಮೆರವಣಿಗೆ ನಡೆಸಿ ಬಳಿಕ ಉತ್ಸವಮೂರ್ತಿಗಳನ್ನು ಗರ್ಭಗುಡಿಯ ಮುಂದಿರಿಸಿದರು.

ರಥೋತ್ಸವ: ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಮಹಾ ಮಂಗಳಾರತಿ ನಡೆಯಿತು. ನಂತರ 11.30 ಗಂಟೆಯವರೆಗೆ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪಲ್ಲಕ್ಕಿಯಲ್ಲಿದ್ದ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಹೊರಗೆ ರಥೋತ್ಸವದೊಂದಿಗೆ ದೇವಸ್ಥಾನದ ಸುತ್ತಲೂ ಮೆರವಣಿಗೆ ನಡೆಸಿದರು. ಹರಕೆ ಹೊತ್ತ ಭಕ್ತರು ರಥದ ಚಕ್ರಕ್ಕೆ ಈಡುಗಾಯಿ ಒಡೆದು ಹರಕೆ ತೀರಿಸಿದರು.

ಮೂರು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಈ ರಥೋತ್ಸವವು ಬರಗಾಲ ಹಾಗೂ ರಥ ದುರಸ್ತಿ ಕಾರಣಕ್ಕೆ ಆರು ವರ್ಷದಿಂದ ನಡೆದಿರಲಿಲ್ಲ. ಈಗ ಗ್ರಾಮಸ್ಥರೆಲ್ಲ ಒಗ್ಗೂಡಿ ₹ 1.5 ಲಕ್ಷ ವೆಚ್ಚದಲ್ಲಿ ನೂತನ ರಥ ನಿರ್ಮಾಣ ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ 12 ಗಂಟೆಯವರೆಗೂ ಬೆಳ್ಳಿ ಕವಚ ಸಹಿತ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಇದೆ ಎಂದು ಅರ್ಚಕರು ಹೇಳಿದರು.

Post Comments (+)