ವೀರಾಂಜನೇಯಸ್ವಾಮಿ ಬ್ರಹ್ಮರಥೋತ್ಸವ

7

ವೀರಾಂಜನೇಯಸ್ವಾಮಿ ಬ್ರಹ್ಮರಥೋತ್ಸವ

Published:
Updated:

ವೈಕುಂಠ ಏಕಾದಶಿ ಸಂಭ್ರಮದ ಹಿಂದೆಯೇ ಬರುವ ಹನುಮದ್‌ ವ್ರತವು ಭಕ್ತರಿಗೆ ವಿಶೇಷವಾದ ಹಬ್ಬ. ಹನುಮನಿಗೆ ರಾಮನ ಮೇಲಿದ್ದಷ್ಟೇ ಪ್ರೀತಿ  ಭಕ್ತರಿಗೆ ಮಾರುತಿ ಮೇಲೆ. ಸಡಗರ ಸಂಭ್ರಮದಿಂದ ಹನುಮದ್‌ ವ್ರತ ಆಚರಣೆಗೆ ನಗರ ಸಜ್ಜಾಗಿದೆ.

ಹನುಮದ್‌ ವೃತ ಅಂಗವಾಗಿ ಕೆ.ಆರ್.ಪುರದ ವೆಂಗಯ್ಯನಕೆರೆ ಬಳಿಯ ಪ್ರಸನ್ನ ವೀರಾಂಜನೇಯ ಸ್ವಾಮಿ ದೇಗುಲದ ವತಿಯಿಂದ 28ನೇ ವರ್ಷದ ಪ್ರಸನ್ನ ವೀರಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವವನ್ನು ಇದೇ 20ರಂದು ಹಮ್ಮಿಕೊಂಡಿದೆ.

ಹಿಂದೊಮ್ಮೆ ಈ ದೇಗುಲ ಕೆರೆಯಂಗಳದಲ್ಲೇ ಇತ್ತು. ಆದರೆ, ನೀರಿನ ಸಂಗ್ರಹ ಮಟ್ಟ ತಗ್ಗಿ ಕೆರೆಗೂ ದೇಗುಲಕ್ಕೂ ಅಂತರ ಹೆಚ್ಚಾಗಿದೆ.

ಇಲ್ಲಿನ ಅಶ್ವತ್ಥಕಟ್ಟೆಯ ಮೇಲೆ ನೆಲೆನಿಂತ ಮಾರುತಿ ಮಹಿಮೆ ಅಪಾರವಾದದ್ದು. ಶ್ರದ್ಧೆ ಭಕ್ತಿಯಿಂದ ವೀರಾಂಜನೇಯಸ್ವಾಮಿಯನ್ನು ಬೇಡಿಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಇಲ್ಲಿನ ನಂಬಿಕೆ. ಅಂತೆಯೇ ಇಲ್ಲಿಗೆ ನಿತ್ಯವೂ ನೂರಾರು ಮಂದಿ ಭಕ್ತರು ಬಂದು ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ ಹೋಗುತ್ತಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯು ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30ಕ್ಕೆ ವಿಶ್ವಸೇನಾ ಕಳಸ ಸ್ಥಾಪನೆ ಮೂಲಕ ಬ್ರಹ್ಮರಥೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಬಳಿಕ ಉತ್ಸವಮೂರ್ತಿಗೆ ಮತ್ತು ಆಂಜನೇಯಸ್ವಾಮಿಯ ಮೂಲ ವಿಗ್ರಹಕ್ಕೆ ಅಷ್ಠ ದ್ರವ್ಯಗಳಿಂದ ಅಭಿಷೇಕ, ಹೂವಿನ ಅಲಂಕಾರ, ಸಹಸ್ರನಾಮ, ಮಹಾಗಣಪತಿ ಹೋಮ, ಮಾರುತಿ ಮೂಲಮಂತ್ರ ಹೋಮ, ಪವನ ಹೋಮ, ರಾಕ್ಷೋಘ್ನ ಹೋಮ, ನವ ಕಳಸ ಸ್ಥಾಪನೆ, ರಥಪ್ರತಿಷ್ಠೆ, ಪಂಚ ಲೋಹದ ಬ್ರಹ್ಮ ಕಳಸ ಸ್ಥಾಪನೆ, ರಥಾಂಗ ಹೋಮ, ಗ್ರಾಮ ಪ್ರಕಾರ ಅಷ್ಠಬಲಿ ಹರಣ ಹಾಗೂ ರಥಬಲಿ ಹರಣ, ದರ್ಪಣ ದರ್ಶನ ಮತ್ತು ಗೋದರ್ಶನ ಹಾಗೂ ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿವೆ.

‘ಮಧ್ಯಾಹ್ನ 12.20ರಿಂದ 1.15 ಗಂಟೆಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಪ್ರಸನ್ನ ವೀರಾಂಜನೇಯಸ್ವಾಮಿ ಪ್ರಕಾರಾ ಬ್ರಹ್ಮರಥೋತ್ಸವದ ಕೈಂಕರ್ಯ ಜರುಗಲಿದೆ. ಕೈರಥ, ಪ್ರಾಕಾರ ರಥ ಹಾಗೂ ಬ್ರಹ್ಮರಥ ಎಂಬ ಮೂರು ಮಾದರಿಯ ರಥಗಳು ಈ ದೇಗುಲದಲ್ಲಿವೆ. ಕೈರಥ ಹಾಗೂ ಪ್ರಾಕಾರ ರಥಗಳ ಮೂಲಕ ಉತ್ಸವ ಮೂರ್ತಿಯನ್ನು ಬ್ರಹ್ಮರಥದಲ್ಲಿಟ್ಟು ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ದೇವಸ್ಥಾನದ ಬಳಿಯಿಂದ ಹೊರಡುವ ಬ್ರಹ್ಮರಥೋತ್ಸವವು ಮೂಲ ಕೆ.ಆರ್.ಪುರದ ಮುಖ್ಯ ಬೀದಿಯಲ್ಲಿ ಸಾಗಿ, ಓಲ್ಡ್ ಎಕ್ಸ್‌ಟೆನ್ಷನ್ ರಸ್ತೆ ಹಾಗೂ ಕಾಲೇಜು ಬೀದಿಯಲ್ಲಿ ಸಾಗಿ ಮತ್ತದೇ ಮಾರ್ಗವಾಗಿ ದೇಗುಲದ ಬಳಿಗೆ ಹಿಂದಿರುಗುತ್ತದೆ. ರಥೋತ್ಸವ ಸಾಗುವ ಹಾದಿಯಲ್ಲಿ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ರಥೋತ್ಸವದ ಸಂಪೂರ್ಣ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು’ ಎಂದು ದೇಗುಲದ ಪ್ರದಾನ ಅರ್ಚಕ ಎಂ.ಎಸ್. ವೆಂಕಟೇಶ್ ದೀಕ್ಷಿತ್ ಮನವಿ ಮಾಡಿದ್ದಾರೆ.

ಗ್ರಾಮೋತ್ಸವ: ರಥೋತ್ಸವಕ್ಕಿರುವಷ್ಟೇ ಪ್ರಾಮುಖ್ಯತೆ ಇಲ್ಲಿ ನಡೆಯುವ ಹೂವಿನ ಪಲ್ಲಕ್ಕಿಯ ಗ್ರಾಮೋತ್ಸವಕ್ಕೂ ಇದೆ. ಸಂಜೆ 6ಕ್ಕೆ ಶುರುವಾಗಲಿರುವ ಪಲ್ಲಕ್ಕಿಯ ಗ್ರಾಮೋತ್ಸವವು ಕೆ.ಆರ್.ಪುರ, ಓಲ್ಡ್ ಎಕ್ಸ್‌ಟೆನ್ಷನ್, ವಾಸವಿ ಮಹಲ್ ರಸ್ತೆ, ಕುಂಬಾರ ಬೀದಿಯಲ್ಲಿ ಸಾಗಿ ಮತ್ತೆ ಓಲ್ಡ್ ಎಕ್ಸ್‌ಟೆನ್ಷನ್ ರಸ್ತೆಯಲ್ಲಿ ಸಾಗಿ ಬೆಳಿಗ್ಗೆ 4ರ ಸುಮಾರಿಗೆ ದೇಗುಲ ಸೇರಲಿದೆ ಎನ್ನುತ್ತಾರೆ ದೇಗುಲದ ಅರ್ಚಕ ವಿ.ಎಸ್.ಜಗದೀಶ್ ದೀಕ್ಷಿತ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !