ಸಮಾಜಕ್ಕಾಗಿ ವೈಭೋಗ ತ್ಯಜಿಸಿದ ಮಹಾಯೋಗಿ

7
ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಚಿಂತಾಮಣಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ಅಭಿಮತ

ಸಮಾಜಕ್ಕಾಗಿ ವೈಭೋಗ ತ್ಯಜಿಸಿದ ಮಹಾಯೋಗಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸಮಾಜಕ್ಕಾಗಿ ವೈಭೋಗವನ್ನೇ ತ್ಯಜಿಸಿದ ಮಹಾಯೋಗಿ ವೇಮನ ಅವರಂತೆ ನಾವು ಆತ್ಮ, ಮನಸ್ಸು, ಆಚಾರ, ವಿಚಾರ, ಕಾಯಕ ನಿಷ್ಠೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ’ ಎಂದು ಚಿಂತಾಮಣಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ ಕುಟುಂಬಕ್ಕೆ ಸೇರಿದ ವೇಮನ ಅವರು ವೈಭೋಗವನ್ನೇ ತ್ಯಾಗ ಮಾಡಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡು ಅಸ್ಪೃಶ್ಯತೆ, ಜಾತಿ ಪದ್ಧಿತಿ, ಅಸಮಾನತೆ ವಿರೋಧ ಹೋರಾಟದಲ್ಲಿ ಶ್ರೇಷ್ಠ ದಾರ್ಶನಿಕರಾಗಿ ಗುರುತಿಸಿಕೊಳ್ಳುತ್ತಾರೆ. ಮನುಕುಲದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಅವರ ತ್ಯಾಗ ಸದಾ ಸ್ಮರಣೀಯವಾದದ್ದು’ ಎಂದು ತಿಳಿಸಿದರು.

‘ಪಾಶ್ಚಾತ್ಯ ವಿದ್ವಾಂಸ ಸಿ.ಪಿ.ಬ್ರೌನ್ ಅವರು ವೇಮನ ಅವರನ್ನು ಇಡೀ ಜಗತ್ತಿಗೆ ಪರಿಚಯಿಸಿಕೊಟ್ಟರು. ಪ್ರತಿ ಯುಗದಲ್ಲಿ ಜ್ಞಾನಿಗಳು ಇದ್ದೆ ಇರುತ್ತಾರೆ. ಅನಾಗರಿಕತೆ, ಅಸತ್ಯ, ಅಧರ್ಮ ಹೆಚ್ಚಾದಾಗ ಅದರಿಂದ ಜನರನ್ನು ಹೊರತರಲು ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಅವರು ಮಾಡುತ್ತಾರೆ. ಅಂತಹ ಜ್ಞಾನಿಗಳ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆದರೆ ಸಮಾಜ ಸುಭಿಕ್ಷವಾಗಿರುತ್ತದೆ’ ಎಂದರು.

‘ಮನುಷ್ಯನ ದುರಾಸೆಯ ಆಲೋಚನೆಗಳು ತೊಡೆದು ಹಾಕಲು ವೇಮನ ವಚನಗಳು ತುಂಬಾ ಮುಖ್ಯವಾಗುತ್ತವೆ. ಪ್ರಕೃತಿ, ನಿಸರ್ಗದಂತೆ ಪ್ರೀತಿಯಿಂದ ಬದುಕಬೇಕು ಎಂಬುದನ್ನು ಅವರು ತಮ್ಮ ವಚನಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅವರು ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಲು ತಮ್ಮ ವಚನಗಳ ಮೂಲಕ ಸಾಕಷ್ಟು ಶ್ರಮಿಸಿದರು’ ಎಂದು ತಿಳಿಸಿದರು.

‘ಸಾಮಾಜ ಸುಧಾರಣೆ ಕನಸು ಕಂಡು ಸದಾ ಜಾತ್ಯತೀತ ತತ್ವ, ಮಾನವೀಯ ಮೌಲ್ಯ ಪ್ರತಿಪಾದಿಸುತ್ತಿದ್ದ ಮೇವನ ಅವರು ಸುಂದರ ಹಾಗೂ ಆದರ್ಶ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದರು. ಅವರ ಅತ್ಯಮೂಲ್ಯ ವಚನಗಳನ್ನು ಮಕ್ಕಳು, ಯುವ ಸಮುದಾಯ ಅರ್ಥ ಮಾಡಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ರೆಡ್ಡಿ ಸಮುದಾಯದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ನಗದು ಬಹುಮಾನ ನೀಡಿ ಗೌರವಿಸಲಾಯಿತು. ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ನಗರಸಭೆ ಆಯುಕ್ತ ಉಮಾಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !