ನೀಲ ನೀರ ತಾಣ ವೆಂಬನಾಡು

ಶುಕ್ರವಾರ, ಏಪ್ರಿಲ್ 19, 2019
27 °C

ನೀಲ ನೀರ ತಾಣ ವೆಂಬನಾಡು

Published:
Updated:
Prajavani

ಕೇರಳದಲ್ಲಿ ವೆಂಬನಾಡು ಎಂಬ ಒಳನಾಡ ಸಮುದ್ರವಿದೆ ಗೊತ್ತಾ? ಎಂದು ಯಾರನ್ನಾದರೂ ಕೇಳಿದರೆ, ‘ಅರೆ, ಅಲ್ಲಿ ಎಲ್ಲೂ ಈ ಸಮುದ್ರದ ಹೆಸರು ಕೇಳಲಿಲ್ವಲ್ಲಾ’ ಎಂದು ಹೇಳುವವರೇ ಹೆಚ್ಚು. ನಿಜ, ವೆಂಬನಾಡು ಸಮುದ್ರವಲ್ಲ. ಸಮುದ್ರದಂತಹ ಸರೋವರ. ಅರ್ಧ ಸಿಹಿ, ಅರ್ಧ ಉಪ್ಪು ನೀರಿನಿಂದ ಕೂಡಿರುವ ಭಾರತದ ಉದ್ದದ ಸರೋವರ. ಇದನ್ನು ನೀಲ ನೀರ ತಾಣ ಎನ್ನಬಹುದು. ಇದಕ್ಕೆ ವೆಲ್ಲಾರಪದಮ್, ವಿಲ್ಲಿಂಗ್‍ಡಮ್, ವೆಂಬನಾಡ್ ಕೊಯ್ಲ್ ಎಂದೂ ಹೆಸರಿದೆ.

ಇದು ಕೇರಳದ ಅಲಾಪ್ಪುಳ (ಅಲಪುಝಾ) ನಗರದಲ್ಲಿದೆ. ಇಲ್ಲಿ ನಿತ್ಯವೂ ನೂರಾರು ಬೋಟುಗಳು ಸಂತೆ ಸೇರಿದಂತೆ ಸೇರುತ್ತವೆ. ಈ ಸರೋವರದಂತಿರುವ ಸಮುದ್ರದ ದಡದ ಉದ್ದಕ್ಕೂ ಬಾಗಿರುವ ತೆಂಗಿನ ಮರಗಳು. ಅವುಗಳ ಮೇಲೆ ಬೆಚ್ಚಗೆ ಕುಳಿತ ಪಕ್ಷಿ ಗಣ. ನೀರಿನ ಮೇಲೆ ತೇಲುವ ದೋಣಿಯ ಮನೆಗಳು ಕಾಣುತ್ತವೆ.

ಪಂಬಾ, ಪೆರಿಯಾರ್, ಮೂವಾಟೂಪೂಝಾ, ಮಿನಾಚಿ, ಮನಿಮಾಲ, ಅಚಿನಕೊವಿಲ್‌ ಸೇರಿದಂತೆ ದಶ ನದಿಗಳ ಸಂಗಮ
ದಿಂದ ಉಂಟಾದ ಸಮುದ್ರ ಇದು. ಸುಮಾರು 96.5 ಕಿ. ಮೀ ಉದ್ದ. 14 ಕಿ.ಮೀ ಗರಿಷ್ಠ ಅಗಲ. ಕೇರಳದ ಮೂರು ಜಿಲ್ಲೆಗಳಲ್ಲಿ ಇದರ ವ್ಯಾಪ್ತಿ ಹರಡಿದೆಯೆಂದರೆ ವಿಸ್ತಾರವನ್ನು ನೀವು ಕಲ್ಪಿಸಿಕೊಳ್ಳಿ.

ಈ ಸರೋವರವನ್ನು ಅನೇಕ ದ್ವೀಪಗಳು ಬಿಗಿದಪ್ಪಿವೆ. ಅವುಗಳಲ್ಲಿ ಪಾದಿರಾಮಲೈ ಕೂಡಾ ಒಂದು. ಪಕ್ಕದಲ್ಲೇ ಕುಮಾರಕೊಂ ಪಕ್ಷಿಧಾಮವೂ ಇದೆ. 16 ದಶಲಕ್ಷ ಜನ ಸಮುದ್ರವನ್ನು ತಮ್ಮ ನಿತ್ಯದ ಅನ್ನ, ಬಟ್ಟೆಗಾಗಿ ಅವಲಂಬಿಸಿದ್ದಾರೆ. ಒಟ್ಟು 290 ಚದರ ಕಿಲೋ ಮೀಟರ್ ವಿಸ್ತಾರದಲ್ಲಿ ಹರಡಿಕೊಂಡಿರುವ ಈ ಸಾಗರ, ಕೇರಳ ರಾಜ್ಯಕ್ಕೆ ಶೇ 30 ರಷ್ಟು ನೀರು ಪೂರೈಕೆ ಮಾಡುತ್ತದೆ. 

ನಡುವಿರುವ ದ್ವೀಪದಂತಹ ಜಾಗಗಳಲ್ಲಿ ಜನರು ಮನೆಗಳನ್ನು ನಿರ್ಮಿಸಿ ಕೊಂಡಿದ್ದಾರೆ. ನಡುಗಡ್ಡೆಗಳನ್ನು ಬಳಸಿ ಜನ ಗದ್ದೆಗಳನ್ನು ಮಾಡಿ ಕೃಷಿ ಮಾಡುತ್ತಿದ್ದಾರೆ. ನಡುಗಡ್ಡೆಯೊಂದರಲ್ಲಿ ಒಂದು ಚರ್ಚ್ ಇದೆ. ಗದ್ದೆ ಅಂಚಿನ ಕಂಬಗಳ ಮೇಲೆ ವಿದೇಶಿ ಸಮುದ್ರ ಕಾಗೆಗಳ ಹಿಂಡು ಕುಳಿತಿರುತ್ತವೆ. ಒಂದು ಕಡೆ ಹುಲ್ಲು ಕೊಯ್ಯುವವರು, ದೋಣಿಗಳ ಮೂಲಕ ಹೊರೆ ಹುಲ್ಲು ಹೊತ್ತೊಯ್ಯುತ್ತಿದ್ದರೆ, ಮತ್ತೊಂದಷ್ಟು ಮಂದಿ ನದಿಗುಂಟ ಪಾತ್ರೆ, ಬಟ್ಟೆ ತೊಳೆಯುತ್ತಿರುತ್ತಾರೆ. ಈ ದೃಶ್ಯ ನೋಡಿದಾಗ ಇದನ್ನು ನಮ್ಮ ನಾಡಿನ ವೆನಿಸ್ ಎಂದು ಹೇಳಲಡ್ಡಿ ಇಲ್ಲ.

ಇಂಥ ವೆಂಬನಾಡು ನಗರವನ್ನು ಸಮುದ್ರದಗುಂಟ ಸುತ್ತಿ ಬರುವ ಇರಾದೆ ಇದ್ದರೆ ದೋಣಿ ಬಾಡಿಗೆಗೆ ಪಡೆದು, ಹೊರಡಬಹುದು. ಬಾಡಿಗೆಯಂತೂ ಕೊಂಚ ಹೆಚ್ಚೇ. ದಿನವೊಂದಕ್ಕೆ ಒಬ್ಬರಿಗೆ ₹1 ಸಾವಿರದಿಂದ ‌₹ 2500 ‌.

ಓಣಂನಲ್ಲಿ ಬೋಟ್‌ ರೇಸ್

ಈ ಸಮುದ್ರದಲ್ಲಿ ಓಣಂ ಸಂದರ್ಭದಲ್ಲಿ ಪ್ರಸಿದ್ಧ ‘ನೆಹರು ಟ್ರೋಫಿ ಬೋಟ್ ರೇಸ್’ ನಡೆಯುತ್ತದೆ. ನಾವು ಹೋಗಿದ್ದಾಗ, ಒಂದೆರಡು ವಿಶಿಷ್ಟ ‘ಹಾವು ದೋಣಿಗಳನ್ನು’ ಕಂಡೆವು. ನಡು ಮಧ್ಯಾಹ್ನದ ಹೊತ್ತಿನಲ್ಲಿ ನಮ್ಮ ಬೋಟ್ ದೂರ ತೀರದಲ್ಲೆಲ್ಲೋ ಲಂಗರು ಹಾಕಿತು. ಬೋಟ್‌ನಲ್ಲೇ ತಿಂಡಿ ಸರಬರಾಜಾಯಿತು. ಹೊಟ್ಟೆ ಉಬ್ಬರಿಸುವಷ್ಟು ತಿಂದು ಸಂಜೆ ಅಲಾಪ್ಪುಳಕ್ಕೆ ವಾಪಾಸಾದೆವು.

ಇಲ್ಲಿ ಮಾತ್ರವೇ ಸಿಗುವ ವಿಶಿಷ್ಟ ಶ್ರಿಂಪ್‍ಗಳು (ಸಿಗಡಿ), ಬಲು ದೊಡ್ಡ ಏಡಿಗಳು, ವಿಶಿಷ್ಟ ಜಾತಿಯ ಚಿಪ್ಪುಗಳು ಈ ಸರೋವರದಲ್ಲಿ ಬೆಳೆಯುತ್ತಿರುವ ಕಳೆಗಿಡಗಳಿಂದ ಕಂಟಕವನ್ನು ಎದುರಿಸುತ್ತಿವೆ. ಜೊತೆಗೆ ಪ್ರವಾಸಿಗರು ಎಸೆದ ಪ್ರತಿ ಕಸವೂ ಇಲ್ಲಿನ ವಿಶಿಷ್ಟ ಜೀವಿಗಳ ನಿದ್ದೆ ಕೆಡಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ಗಂಗೆಯಂತೆ ಈ ಸರೋವರವೂ ಬತ್ತಿ ಹೋಗುವುದೆಂಬ ಎಚ್ಚರಿಕೆಯನ್ನೂ ವಿಜ್ಞಾನಿಗಳು ನೀಡಿದ್ದಾರೆ. ಜೊತೆಗೆ ಇದರ ವಿಸ್ತಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮುಂದಿನ ಜನಾಂಗಕ್ಕೆ ಇದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. 

ಕುಮಾರಕೊಂ ಪಕ್ಷಿಧಾಮ

ಸುಮಾರು 14 ಎಕರೆ ಜಾಗದಲ್ಲಿ ಕುಮಾರಕಂ ಪಕ್ಷಿಧಾಮವಿದೆ. ಹೆಚ್ಚಾಗಿ ವಲಸೆ ಹಕ್ಕಿಗಳು ಸೈಬೀರಿಯನ್ ಸ್ಟಾರ್ಕ್, ಈಗ್ರೆಟ್, ಡಾರ್ಟರ್, ಹೆರೊನ್ ಸೇರಿದಂತೆ ನೂರಾರು ಪ್ರಬೇಧದ ಹಕ್ಕಿಗಳು ವಲಸೆ ಬರುತ್ತವೆ. ಭಾರತದ ಹಿಮಾಲಯ, ದೂರದ ಸೈಬಿರಿಯಾಗಳಿಂದ ಹಕ್ಕಿಗಳು ಇಲ್ಲಿಗೆ ಬರುತ್ತವೆ. ವರ್ಷದ ಬಹುತೇಕ ಎಲ್ಲ ಕಾಲದಲ್ಲೂ ಹಕ್ಕಿಗಳನ್ನು ನೋಡಬಹುದು.

ಹೋಗುವುದು ಹೀಗೆ ?

* ಬೆಂಗಳೂರಿನಿಂದ ತಿರುವನಂತಪುರಕ್ಕೆ ಬಸ್‌, ರೈಲು, ವಿಮಾನಗಳಿವೆ. ಬೆಂಗಳೂರಿನಿಂದ 594 ಕಿ.ಮೀ. ಮಂಗಳೂರಿನಿಂದ 462 ಕಿ.ಮೀ ಕೇವಲ ಒಂದು ದಿನದ ಹಾದಿ.

* ರೈಲಿನಲ್ಲಿ ಹೋಗುವವರು ಕೊಚ್ಚಿನ್‌ಗೆ ಬಂದು, ಅಲ್ಲಿಂದ 80 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ. ಕೊಟ್ಟಾಯಂನಿಂದ ಬಸ್ ಮಾರ್ಗವಾಗಿ ಕೇವಲ 16 ಕಿ.ಮೀ. ಈ ಜಾಗದಲ್ಲಿ ಉಳಿಯಲು ಸುತ್ತಮುತ್ತ ಸಾಕಷ್ಟು ರೆಸಾರ್ಟುಗಳಿವೆ.

* ಹೋಮ್‌ಸ್ಟೇಗಳೂ ಸಾಕಷ್ಟಿವೆ. ನೂರರಿಂದ ಶುರುವಾಗಿ ದಶಸಾವಿರ ದಾಟುವ ವೆಚ್ಚದಲ್ಲಿ ವಿವಿಧ ಶ್ರೇಣಿಯ ಹೋಟೆಲ್‌ಗಳಿವೆ.

ವಿಶೇಷ: ದೋಣಿಮನೆ ಪ್ರವಾಸವೇ ಇಲ್ಲಿನ ವಿಶೇಷ. ಈ ದೋಣಿಯಲ್ಲಿ ಹಲವು ಸೌಲಭ್ಯಗಳಿರುತ್ತವೆ. ಒಂದು ರೀತಿ ತೇಲುವ ಮನೆ ಇದು. ಇಡೀ ಸರೋವರದ ಉದ್ದಕ್ಕೂ ಈ ದೋಣಿ ಮನೆಯಲ್ಲಿ ಹೋಗಿಬರಬಹುದು.

ನೋಡಬಹುದಾದ ಸ್ಥಳಗಳು: ತಿರುವನಂತಪುರ ಅನಂತ ಪದ್ಮನಾಭ ದೇವಾಲಯ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !