ಅಮ್ಮಾ ನಾ ಪಾಸಾದೆ!

7

ಅಮ್ಮಾ ನಾ ಪಾಸಾದೆ!

Published:
Updated:
Deccan Herald

ಚುನಾವಣಾ ಫಲಿತಾಂಶ ನೋಡ್ಕೊಂತ ಕುಂತಾಗ, ಮತಗಟ್ಟೆ ಸಮೀಕ್ಷೆ ಉಲ್ಟಾ ಆಗಿ ಕ್ಷಣಕ್ಷಣಕ್ಕ ಫಲಿತಾಂಶದ ಏರುಪೇರು ನೋಡಿ  ಪುಢಾರಿಗಳ ಬಿಪಿ ಏರ್ದಂಗ್‌ ನಂದೂ ಬಿಪಿ ಹೆಚ್ಚಾಗತೊಡಗಿತ್ತು. ಪ್ರಭ್ಯಾನ ಕೂಡ ಮಾತಾಡಿ ಮನಸ್‌ ಹಗುರ್‌ ಮಾಡ್ಕೊಬೇಕಂತ ಫೋನ್‌ ಹಚ್ಚಿದೆ.

ಹಲೊ ಅನ್ನುತ್ತಿದ್ದಂತೆ, ‘ಭೂಕಂಪ ಆಯ್ತಲ್ಲೋ, ನಿನ್ನ ಅನುಭವಕ್ಕ ಬಂತೇನ್‌’ ಎಂದೆ ಗಾಬರಿ ದನಿಯಲ್ಲಿ.

ಮಾತನ್ಯಾಗ್‌ ನನಗಿಂತ ಶಾಣೆ ಇದ್ದ ಪ್ರಭ್ಯಾ, ‘ಎಲ್ಲೆ, ಬೆಳಗಾವಿ ಒಳ್ಗನ. ಕಮಲದ ಕಡೆ ಎಷ್ಟ್‌ ಎಂಎಲ್‌ಎ
ಗೋಳು ಬರಾಕಂತಾರಂತ. ಯಾವಾಗಂತ ಯಡ್ಡಿ ಹೊಸಾ ಮುಹೂರ್ತ’ ಅಂತ ಪಟಪಟನೆ ಒಂದೇ ಉಸಿರಿನಲ್ಲಿ ಕೇಳಿದ.

‘ಲೇ ಮಗ್ನ ಸ್ವಲ್ಪ ಸಾವಧಾನದಿಂದ ಕೇಳ್‌.  ಪ್ರಕಾಶ್‌ ಜಾವಡೇಕರ್‌ ಹೇಳ್ದಂಗ್‌s ಧಮಾಕಾ ಘಟಿಸೇದ್‌. ಆದ್ರ ಜಾಗಾ ಮಾತ್ರ ಬ್ಯಾರೆ. ಕರ್ನಾಟಕದ ಬದ್ಲಿಗೆ ಉತ್ತರ ಭಾರತ್‌ದಾಗ್‌ ಆಗೇದ್‌. ಮೂರು ರಾಜ್ಯದಾಗ್‌ ಬಿಜೆಪಿಗೆ ಮೂರು ನಾಮಾ ಬಿದ್ದ ಸುದ್ದಿಗೋಳ್‌ ಬರಾಕತ್ತಾವ್‌. ಇನ್ನ ಯಾವ್ದೂ ನಿಕ್ಕಿಯಾಗಿಲ್ಲ’ ಎಂದೆ.

‘ಏಯ್‌ ಖರೇ ಹೇಳು. ಟಿವಿ ನೋಡ್‌ ಬೇಕಂದ್ರ ಲೋಡ್‌ಶೆಡ್ಡಿಂಗ್‌ನಿಂದ ನಮ್ಮ ಮನ್ಯಾಗ್‌ ಕರೆಂಟ್‌ ಕೈಕೊಟ್ಟದ’ ಅಂದ.

‘ಛಲೋ ಆತ್‌ ಬಿಡು. ಕರೆಂಟ್‌ ಇದ್ದಿದ್ರ ಟಿವಿ ನೋಡಿ ಭಾಜಪದ ಪರಮ ಭಕ್ತನಾದ ನೀ ಎದಿ ಒಡ್ಕೊಂಡು ಸಾಯ್‌ತಿದ್ದಿ’ ಅಂತ ಅನ
ಬೇಕಂತ ಅನಕೊಂಡಾವ್‌ ತಟ್ಟನೆ ನಾಲ್ಗಿ ಕಚ್ಚಿಕೊಂಡೆ. ಅಡಿಲೇಡ್‌ ಟೆಸ್ಟ್‌ನ್ಯಾಗ್‌ ಯಾರ್‌ ಗೆಲ್ತಾರ್‌ ಅನ್ನೋದೂ ಹೀಂಗ್‌ ಡೋಲಾಯಮಾನ ಆದಾಗ ತಂಡದ ಕೋಚ್ ರವಿಶಾಸ್ತ್ರಿ ಆಡಿದ ಮಾತ್‌  ನೆನಪಾತು. ಕೆಟ್ಟದ್ದು ಮಾತಾಡಬಾರದು ಅಂತ ಬಾಯಿಗೆ ಬಂದಿದ್ದ ಶಬ್ದಾನ ನುಂಗಿ ...‘ನಿನ್ನ ಎದಿ ಧಸಕ್‌ ಅಂತಿತ್ತು’ ಎಂದೆ.

‘ಏಯ್‌ ಬಿಡಿಸಿ ಹೇಳೋ ಭಾಡ್ಕೊ. ಸುಮ್ನ ನನ್ನ ಸಿಟ್‌ ನೆತ್ತಿಗೆ ಏರಿಸಬ್ಯಾಡ’ ಅಂದ.

‘ಸಮಾಧಾನ ಮಾಡ್ಕೋಪಾ. ಬೆಳಗಾವಿ ಅಧಿವೇಶನದಾಗ್‌ ಮೈತ್ರಿ ಸರ್ಕಾರನ್ನ ಒಂಟಿಗಾಲಲ್ಲಿ ನಿಲ್ಲುವಂತೆ ಮಾಡ್ತೀನಿ ಅಂತ ಯಡ್ಡಿ ಸಾಹೇಬ್ರು ಹೇಳ್ದಂಗ, ನಾನೂ ಇಲ್ಲಿ ಟಿವಿ ಮುಂದ ಒಂಟಿ ಕಾಲಲ್ಲಿ ನಿಂತ್ಕೊಂಡs ಫಲಿತಾಂಶ ನೋಡಾಕತ್ತೀನಿ’ ಎಂದೆ.

‘ಅಂದ್ರ, ಪಪ್ಪು ಪಾಸ್‌ ಆಗ್ಯಾನ್‌. ಅಂವ್ಗ ಫುಲ್‌ ಮಾರ್ಕ್ಸ್‌ ಬಿದ್ದಾವ್‌ ಅಂದಂಗ್ಹಾತು’ ಎಂದ ನಿರಾಶೆಯಿಂದ.

‘ಹ್ಞೂನಪಾ. ಬರೀ ಪಾಸ್ ಅಷ್ಟ ಆಗಿಲ್ಲ. ರಾಜ್‌ ಠಾಕ್ರೆ ಹೇಳ್ದಂಗ್‌, ‘ಪರಮ್ ಪೂಜ್ಯ’ನೂ ಆಗ್ಯಾನ್‌. ಪಪ್ಪು ಈಗ ‘ಅಮ್ಮಾ ನಾ ಪಾಸಾದೆ, ತೆಲಂಗಾಣದಲ್ಲಿ ಫೇಲಾದೆ...’ ಅಂತ ಹೊಸ ‘ರಾಗಾ’ ಕಟ್ಟಿ ಹಾಡಾಕತ್ತಾನಂತ’ ಎಂದೆ.

ಫೋನ್‌ನ್ಯಾಗ್‌ ಮಾತಾಡಕೋಂತನ ಪ್ರಭ್ಯಾ ಮನಿ ಬಾಗಿಲಿಗೆ ಬಂದಿದ್ದ. ‘ಬಾರಪಾ, ಟಿವ್ಯಾಗ್‌ ನಿನ್ನ ಪಾರ್ಟಿಗತಿ ಏನ್‌ ಆಗಾಕತ್ತದಂತ ಠೀವಿಯಿಂದ ನೋಡಂತಿ ಬಾ’ ಎಂದು ಕರೆದೆ.

‘ನೋಡ್‌ ಅಲ್ಲಿ, ಇದೀಗ ಬಂದ ಸುದ್ದಿ ಪ್ರಕಾರ, ರಾಜಸ್ಥಾನದಾಗ್‌ ದೇಶದ ಮೊದಲ ಗೋಮಾತೆ ಖಾತೆ ಸಚಿವನೂ ಗೋತಾ ಹೊಡ್ದಾನ. ಸಾಕಲ್ಲ ಮಗನ ಮಂಗಳಾರತಿ. ಗೋರಕ್ಷಕ ಪಕ್ಷಕ್ಕೆ ಗೋಮಾತೆ ಕೂಡ ಸರಿಯಾಗಿ ಝಾಡಿಸಿ ಒದ್ದಾಳ್‌ ನೋಡ್‌. ಮಧ್ಯಪ್ರದೇಶ್‌ದಾಗ್‌ ಸಂತೋಷದ ಖಾತೆ ನಿರ್ವಹಿಸುತ್ತಿದ್ದ ರಾಜ್ಯ ಸಚಿವನೂ ಅಸಂತೋಷದಿಂದಲೇ ಮನಿಗೆ ಹೋಗ್ಯಾನಂತ. ಇದೆಲ್ಲ ನೋಡಿದ್ರ, ‘ಅಚ್ಛೇ ದಿನ್‌’ ಖಾತೆಯ ಮಹಾಮಂತ್ರಿಯೂ ಮನಿಗೆ ಹೋಗುವ ಸೂಚನೆ ಇದ್ಹಂಗ್‌ ಕಾಣ್ತದ. ಸುನಾಮಿ ಏಳ್‌ಬೇಕಷ್ಟೆ’  ಎನ್ನುತ್ತಿದ್ದಂತೆ ಪ್ರಭ್ಯಾ ಕಮಕ್‌ ಕಿಮಕ್‌ ಅನಲಿಲ್ಲ.

ಟಿವ್ಯಾಗಿನ ಬ್ಯಾರೆ, ಬ್ಯಾರೆ ಚಾನೆಲ್‌ಗಳನ್ನೆಲ್ಲ ತಿರುವಿಹಾಕಿ ಕಮಲ ಕಮರುತ್ತಿರುವುದನ್ನು ಖಾತ್ರಿ ಮಾಡ್ಕೊಂಡ. ಸ್ವಲ್ಪ ಹೊತ್ತಿನ ಮ್ಯಾಲ್‌ ಸುಧಾರಿಸಿಕೊಂಡು, ‘ಕಾಂಗ್ರೆಸ್‌ ಮುಕ್ತ ಭಾರತ್‌ ಮಾಡ್ತೀನಿ ಅಂತ ಬಡ್ಕೊತ್ತಿದ್ದವರ ಬಾಯಿಗೆ ಹೊಲಿಗಿ ಬಿದ್ದದ ಏಳ್‌. ಇರ‍್ಲಿ. ಎಲ್ಲೆ ನಿಮ್ಮ ಕುಮಾರಣ್ಣ’ ಅಂತ ಕೇಳ್ದ ಜೋಲು ಮುಖದಿಂದ. ‘ಬೆಳಗಾವಿಗೆ ಹೋಗ್ಯಾರಲ್ಲ’ ಎಂದೆ.

‘ಅಲ್ಲೇನ್‌ ಕಬ್‌ ಕಡ್ಯಾಕ್‌ ಹೋಗ್ಯಾನೇನ್‌. ತಾನs ನೆಟ್ಟಿದ್ದ ಭತ್ತಾನ ಕೊಯ್ಯಾಕ್‌  ಹೊತ್ತ ಮುಳುಗಿಂದ್‌ ಹೋಗಿ ಶಾಸ್ತ್ರಾ ಮಾಡದವ್ನ  ಕೈಯಾಗ್‌ ಕಬ್‌ ಕತ್ತರಿಸೋದು, ಸುಲಿಯೋದ್‌ ಆಗ್ತದ ಅಂದ್ರ, ಕಬ್ಬಿನ ಗದ್ದೆಗಳೇ ಗಹಗಹಿಸಿ ನಗ್ತಾವ್‌. ಮನಿ–ಮಠ ಬಿಟ್ಟು ಖಾಸಗಿ ಬದುಕದ ಅಂತ ತಾಜ್‌ ವೆಸ್ಟೆಂಡ್‌ ಹೋಟೆಲ್‌ನ್ಯಾಗ್‌ ಮಲಗುವ ಕುಮಾರಣ್ಣಗ್‌  ಕಬ್ಬಿನ ಗಣಿಕಿನರ ತಿನ್ನಾಕ್‌ ಆಗ್ತದ ಇಲ್ಲೋ’ ಅಂತ ಕೆಣಕಿದ.

‘ಭತ್ತ, ಕಬ್ಬಿನ ಸುದ್ದಿನ ಬಿಟ್ಟು ಕಮಲದ ಸುದ್ದಿಗೆ ಬಾರಪಾ. ಬಿಜೆಪಿ ಪಾಲಿಗೆ ಅಚ್ಛೇ ದಿನ್‌ ಮುಗ್ದು,  ಬುರೆ ದಿನ್‌ ಚಾಲು ಆದಂಗ್‌ ಕಾಣಸ್ತದ. ಬಿಜೆಪಿ ಮುಕ್ತ ಭಾರತದ ಚುನಾವಣಾದಾಗ್‌ ಪಾಲುದಾರ ಆಗಬಾರದಂತ ಸುಷ್ಮಕ್ಕ, ಉಮಕ್ಕ ಈಗಲೇ ರಾಜಕೀಯ ಸನ್ಯಾಸ ಸ್ವೀಕರಿಸ್ಯಾರ್‌.  ಹೆಣ್ಮಕ್ಕಳು ಮುಕ್ತ ಬಿಜೆಪಿ, ಕಾಂಗ್ರೆಸ್‌ ಮುಕ್ತ ಭಾರತ್‌, ಭಾಜಪ ಮುಕ್ತ ಭಾರತ್‌,  ಯಡ್ಡಿ ಕನಸ್‌ ಮುಕ್ತ ಮೈತ್ರಿ ಸರ್ಕಾರ, ಆಪರೇಷನ್‌ ಕಮಲ ಮುಕ್ತ ಕರುನಾಡು... ಹೀಂಗ್‌ ಹೊಸಾ ಮುಕ್ತ ಮುಕ್ತ ಧಾರಾವಾಹಿ ಕಥೆ ಹೊಸ್ದು ಪ್ರಸಾರ ಮಾಡವ್ರು ಯಾರರ ಅದಾರ್‌ ಏನ್‌ ನೋಡ್‌’ ಎಂದೆ.

ಉರ್ಜಿತ್‌ ಪಟೇಲ್‌ ಆರ್‌ಬಿಐ ಗವರ್ನರ್‌ಗಿರಿಗೆ ಅಂತ ರಾಜೀನಾಮೆ ಬಿಸಾಕಿ ಹೋದಂಗ್‌, ಪ್ರಭ್ಯಾ ಕೈಯಾಗಿನ ಪೇಪರ್‌ ಬಿಸಾಕಿ ಧಿಗ್ಗನೆ ಎದ್ದು ಹೊಂಟ. ಟಿವ್ಯಾಗ ಕೇಳಿ ಬಂದ ಮುಕ್ತ ಮುಕ್ತ ಧಾರಾವಾಹಿಯ ‘ಮಣ್ಣ ತಿಂದು... ಹಾಡಿಗೆ ನಾ ಕಿವಿಗೊಟ್ಟೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !