2019ರ ‘ದೇಸದ ಭವಿಸ್ಯ!’

7

2019ರ ‘ದೇಸದ ಭವಿಸ್ಯ!’

Published:
Updated:
Prajavani

ಅಬ್ಬಬ್ಬಾ! 2019ರಲ್ಲಿ ಏನೂ ಆಗಬಹುದು! ಹೀಗೆ ಬೆರಗಾಗುವುದಕ್ಕೆ ಬಲವಾದ ಕಾರಣವಿದೆ. ಮೊನ್ನೆ ದಾರಿಯಲ್ಲಿ ನನ್ನ ಪಾಡಿಗೆ ನಾನು ನಡೆದುಕೊಂಡು ಹೋಗುತಿದ್ದಾಗ ಫುಟ್‌ಪಾತ್‌ನಲ್ಲಿ ಕೂತಿದ್ದ ಗಿಳಿಶಾಸ್ತ್ರ ನೋಡುವ ಬಡ ಆಸಾಮಿ ‘ಸ್ವಾಮಿ, ಬೆಳಿಗ್ಗೆಯಿಂದ ಯಾರೂ ಸಿಕ್ಕಿಲ್ಲ… ಈ ಗಿಳಿಯ ಮೇಲೆ ಕರುಣೆಯಿಟ್ಟಾದರೂ ಬನ್ನಿ ಸ್ವಾಮಿ...’ ಅಂದ.

ನಾನು ಸುಮ್ಮನೆ ತಪ್ಪಿಸಿಕೊಳ್ಳೋಕೆ ‘ದೇಶದ ಭವಿಷ್ಯ ಹೇಳುವುದಾದರೆ ಹೇಳು’ ಅಂದೆ. ಆತ
ನನ್ನನ್ನು ಬೌಲ್ಡ್ ಮಾಡಿಬಿಡಬೇಕೆ!  ‘ಸರಿ, ಸ್ವಾಮೇರ… ಹೇಳ್ತೀನಿ, ಇಲ್ಲಿ ಕೂರಿ’. ನನಗೂ ಕುತೂಹಲ. ಗಿಳಿರಾಮ ಎಲೆ ಆಯ್ಕೆ ಮಾಡಿ ಜ್ಯೋತಿಷಿಗೆ ಕೊಟ್ಟು ತನ್ನ ಭಾಷೆಯಲ್ಲಿ ‘ಇನ್ನು ಬುರುಡೆ ಬಿಡು!’ ಎಂದು ಕಿರುಚಿ ಗೂಡಿನೊಳಗೆ ಹೊಕ್ಕಿತು.

ನಾನು ಕಿವಿ ನಿಮಿರಿಸಿಕೊಂಡು ‘ದೇಸದ ಭವಿಸ್ಯ’ ಆಲಿಸತೊಡಗಿದೆ. ಅದು ಇಂತಿದೆ–

ರಾಜ್ಯದ ರಾಜಕಾರಣದಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ರಮೇಸ ಜಾರಕಿಹೊಲಿ ಡಿಸಿಎಂ ಆಗಲಿದ್ದಾರೆ. ಅಂದರೆ ಪರಮೇಸ್ವರರಿಂದ ಆ ಕುರ್ಚಿಯನ್ನು ಕಸಿದುಕೊಳ್ಳುವಲ್ಲಿ ಹೈಗಮಾಂಡ್ ಯಶಸ್ವಿಯಾಗಲಿದೆ.

ಅಮಲು ದೊರೆ ಮಲ್ಯರನ್ನು ಜೈಲಿಗೆ ಹಾಕೊಲ್ಲ. ಅದರ ಬದಲು ಸುಸಜ್ಜಿತ ಮನೆಯೊಂ
ದರಲ್ಲಿ ಗೃಹಬಂಧನದಲ್ಲಿರಿಸುತ್ತಾರೆ. ಇದನ್ನು ನೋಡಿ ಡೈಮಂಡ್ ದೊರೆ ನೀರವ್, ಭಾರತಕ್ಕೆ ಬಂದು ಶರಣಾಗುವವರಿದ್ದಾರೆ.

ಗಮಲ್ ಹಾಸನ್ ಮುಂದಿನ ಪ್ರಧಾನಿಯಾಗಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಯುಪಿಎ ಸರಿಸಮಾನ ಸೀಟುಗಳನ್ನು ಪಡೆಯುತ್ತವೆ. ಆದರೆ ಬಹುಮತಕ್ಕೆ ಹತ್ತು ಸಂಸದರ ಅಗತ್ಯವಿರುತ್ತದೆ. ಗಮಲ್ ಹಾಸನ್ ಪಾರ್ಟಿ ಹತ್ತು ಸೀಟುಗಳನ್ನು ಗೆದ್ದಿರುವುದರಿಂದ ತನ್ನನ್ನು ಪ್ರಧಾನಮಂತ್ರಿ ಮಾಡಲಿಚ್ಛಿಸುವವರೊಂದಿಗೆ ಹೋಗಲಿದ್ದಾರೆ.

ಮಹಿಳೆಯರಿಗೆ ಪ್ರವೇಶ ನೀಡದಿದ್ದರೆ ಅಯ್ಯಪ್ಪ ದೇಗುಲವನ್ನು ಸ್ಥಿರವಾಗಿ ಮುಚ್ಚಬೇಕೆಂದು ಕೋರ್ಟ್ ತೀರ್ಪು ಬರಲಿದೆ ಮತ್ತು ಆ ತೀರ್ಪನ್ನು ಭಕ್ತರು ಕಡೆಗಣಿಸಲಿದ್ದಾರೆ.

ತ್ರಿವಳಿ ತಲಾಖ್‌ಗೆ ನಿಷೇಧ ಜಾರಿಯಲ್ಲಿರುವುದರಿಂದ ಇನ್ನು ‘ಪಂಚ ತಲಾಖ್’ ಚಾಲ್ತಿಗೆ ಬರಲಿದೆ.

ಕಳ್ಳಬಟ್ಟಿ ಸಾರಾಯಿಯಿಂದ ಕಾರು, ದ್ವಿಚಕ್ರ ವಾಹನಗಳು ಓಡಬಹುದೆಂದು ಸಂಸೋಧಕ
ರೊಬ್ಬರು ತೋರಿಸಿಕೊಡಲಿದ್ದಾರೆ.

ಐವತ್ತಾರು ಇಂಚಿಗಿಂತ ಹೆಚ್ಚಿನ ಹೊಟ್ಟೆಯುಳ್ಳ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಕೆಲಸದಿಂದ ಏಕ್‌ದಂ
ವಜಾ ಮಾಡಲಾಗುವುದು. ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಇದು ಅನ್ವಯವಾಗುವುದಿಲ್ಲ.

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯದಿಂದ ಆರೋಗ್ಯ ಹದಗೆಡಬಹುದೆಂಬ ಭೀತಿಯಿಂದ, ಮುಖ್ಯಮಂತ್ರಿ ಕೇಜ್ರಿಬಾಲ ಮೈಸೂರಿನಲ್ಲಿ ನೆಲಸಿ ಕಾರ್ಯ ನಿರ್ವಹಿಸಲಿದ್ದಾರೆ.

ಬೆಂಗಳೂರು ಪಾರ್ಕಿಂಗ್‌ರಹಿತ ನಗರವಾಗಲಿದೆ. ಯಾವುದೇ ರಸ್ತೆ ಬದಿಯಲ್ಲೂ ವಾಹನಗಳನ್ನು
ನಿಲ್ಲಿಸುವಹಾಗಿಲ್ಲ. ತಮ್ಮ ಮನೆ ಎದುರಿಗಿನ ರಸ್ತೆಯಲ್ಲಿ ನಿಲ್ಲಿಸಿದರೂ ದಂಡ ತೆರಬೇಕಾಗುತ್ತದೆ.

ವಿಶ್ವದ ಅತ್ಯಂತ ಎತ್ತರದ ‘ಏಕತೆಯ ಪ್ರತಿಮೆ’ ಈ ವರ್ಷ ಮತ್ತೆ ಸುದ್ದಿಯಾಗಲಿದೆ. ಆ ಪ್ರತಿಮೆಯನ್ನು ಏರಿದ ಒಬ್ಬ ವ್ಯಕ್ತಿ, ಸರ್ದಾರ್ ಪಟೇಲರ ತಲೆಯ ಮೇಲಕ್ಕೇರಿ, ‘ನನ್ನ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕಿ, ಇಲ್ಲಾಂದ್ರೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಲಿದ್ದಾನೆ.

ಈ ವರ್ಷ ಕನ್ನಡ ಸಿನಿಮಾರಂಗ ದೊಡ್ಡ ದಾಖಲೆ ಮಾಡಲಿದೆ. ಒಂದೇ ದಿನ ಇಪ್ಪತ್ತೈದು ಸಿನಿಮಾಗಳು ಬಿಡುಗಡೆಯಾಗಲಿವೆ.

ಎಲ್ಲಾ ಜೈಲುಗಳಲ್ಲಿ ಪುರುಷ ಕೈದಿಗಳಿಗೆ ಶಿಕ್ಷಾ ಪ್ರಮಾಣ ಜಾಸ್ತಿಯಾಗಬೇಕೆಂದು ಸಚಿವ ಸಂಪುಟ ಸಭೆ ತೀರ್ಮಾನಿಸಲಿದೆ. ಕನ್ನಡ ಟಿವಿ ಧಾರಾವಾಹಿಗಳನ್ನು ಕಡ್ಡಾಯವಾಗಿ ವೀಕ್ಷಿಸಬೇಕೆನ್ನುವುದೇ ಆ ಶಿಕ್ಷೆ.

ಸಾರುಖ್ ಖಾನ್ ‘ಜೀರೊ’ ಸಿನಿಮಾದಲ್ಲಿ ಕುಳ್ಳನ ಪಾತ್ರ ಮಾಡಿದ್ದನ್ನು ನೋಡಿ, ಸಲ್ಮಾನ್ ಎಂಟಡಿ ಎತ್ತ
ರದ ವ್ಯಕ್ತಿಯ ಪಾತ್ರ ವಹಿಸಲಿದ್ದಾನೆ. ಒರಿಜಿನಲ್ ಸಲ್ಮಾನ್ ಕುಬ್ಜನಾಗಿ ಕಾಣುತ್ತಾನೆ ಎಂಬ ಕಾರಣಕ್ಕೆ ಈ ಚಿತ್ರದಲ್ಲಿ ಲಂಬೂ ಸಲ್ಲುವನ್ನು ಮಾತ್ರ ಕಾಣಬಹುದು.

ಕಾಶ್ಮೀರ ಸಮಸ್ಯೆ ಬಗೆಹರಿಸುವ ಮಾತುಕತೆಗೆ ಪಾಕ್ ಪ್ರಧಾನಿ ಮುಂದೆ ಬರಲಿದ್ದಾರೆ. ಆದರೆ ಆ ಮಾತುಕತೆಯಲ್ಲಿ ಭಾರತದ ಪರವಾಗಿ ಸಿದ್ದು ಮಾತ್ರ ಇರಬೇಕೆಂಬ ಕಂಡಿಸನ್ ಹಾಕಲಿದ್ದಾರೆ.

ವಿರಾಟ್ ಕೊಯಿಲು ಈ ವರ್ಷವೂ ಸಚಿನ್ ದಾಖಲೆಗಳನ್ನು ಮುರಿಯಲಿದ್ದಾರೆ… ಅತ್ಯಂತ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿ!

ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಲೆಕ್ಕ ಇಡುವುದಕ್ಕೆ ಡ್ರೋನ್ ಬಳಸಲಿದ್ದಾರೆ.

ಕೆಂಪೇಗೌಡ ಪ್ರಶಸ್ತಿಗಳನ್ನು ಕೊಡುವ ವಿಧಾನವನ್ನು ಬದಲಾಯಿಸಲಿದ್ದಾರೆ. ಒಟ್ಟು ಐನೂರು ಸ್ಮರಣಿಕೆಗಳನ್ನು ವೇದಿಕೆಯಲ್ಲಿ ಇಡಲಾಗುವುದು. ಸಾರ್ವಜನಿಕರು ಅದರಲ್ಲಿ ಒಂದನ್ನು ಎದ್ದು ಬಿದ್ದು ಹೆಕ್ಕಿ ತೆಗೆಯುವ ವಿನೂತನ ಪ್ರಯೋಗ ನಡೆಯಲಿದೆ.

ಅಲ್ಲಿಗೆ ದೇಸದ ಭವಿಸ್ಯ ಹೇಳಿ ಮುಗಿಸಿದ ಜ್ಯೋತಿಷಿಗೆ ಹತ್ತು ರೂಪಾಯಿ ಕೊಡಲು ನಾನು ಮುಂದಾದೆ. ಅವನು ಮುಖ ಗಂಟಿಕ್ಕಿ ‘ಸ್ವಾಮಿ, ಹತ್ತು ರೂಪಾಯಿ ಬರೀ ವಾರ್ಡ್ ಭವಿಸ್ಯಕ್ಕೆ. ನಾನು ಹೇಳಿದ್ದು ಇಡೀ ದೇಸದ ಭವಿಸ್ಯ… ನೂರು ಕೊಡಿ’ ಎಂದ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !