ಮೈಸೂರ ಹುಲಿ ಜತೆ...

7

ಮೈಸೂರ ಹುಲಿ ಜತೆ...

Published:
Updated:
Deccan Herald

ನಿಮಗೆ ಆಶ್ಚರ್ಯವಾಗಬಹುದು... ಆದರೆ, ನಿಮ್ಮಾಣೆಗೂ ನಿಜ. ನನಗೆ ಮೈಸೂರ ಹುಲಿಯೊಂದಿಗೆ ಮಾತನಾಡುವ ಅವಕಾಶ ಸಿಕ್ಕಿದೆ. ಹಾಗಂತ ಈ ಮೈಸೂರು ಹುಲಿಗೂ ಟಿಪ್ಪು ಸುಲ್ತಾನನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನಿಲ್ಲಿ ಪ್ರಸ್ತಾಪಿಸುತ್ತಿರುವ ಹುಲಿ ಮೈಸೂರಿನ ಝೂನಲ್ಲಿದೆ. ಝೂಗೆ ಹೋದಾಗಲೆಲ್ಲಾ ಅದರೊಂದಿಗೆ ಒಂದಿಷ್ಟುಹೊತ್ತು ಹರಟೆ ಹೊಡೆದು ಬರುತ್ತೇನೆ.

ಹುಲಿಯಣ್ಣ ದೊಡ್ದದಾಗಿ ಬಾಯಿಬಿಟ್ಟು ನಗುತ್ತಾ ನನ್ನೆದುರು ಬಂದು, ‘ಏನ್ ಸಮಾಚಾರ? ಹಬ್ಬ ಜೋರಾ?’ ಎಂದಿತು.
‘ಸದ್ದಿಲ್ಲದ ದೀಪಾವಳಿ ಮುಗಿಯಿತು ಮಾರಾಯ!’
‘ಯಾಕೆ? ಸದ್ದಿಲ್ಲದೆ ಎಲ್ಲಾದರೂ ದೀಪಾವಳಿ ಆಚರಿಸುವುದುಂಟೇ?’
‘ಕಿವಿಗಪ್ಪಳಿಸುವ ಪಟಾಕಿಗಳಿಗೆ ನಿಷೇಧವಿತ್ತಲ್ಲ… ಆದರೆ ಅದರ ಬದಲು ನಿನ್ನ ಮೆಚ್ಚಿನ ಸುಲ್ತಾನನ ಜಯಂತಿ ಆಚರಣೆಯ ಸದ್ದು–ಗುದ್ದು, ಗದ್ದಲವೇ ಜೋರಾಗಿದೆಯಲ್ಲ ಮಾರಾಯ!’

‘ಅಲ್ಲಯ್ಯಾ, ಈ ಬಾಜಪ್ಪರುಗಳಿಗೆ ಬ್ರಿಟಿಷರ ಎದುರು ಗರ್ಜಿಸಬಲ್ಲವನಾಗಿದ್ದ ಟಿಪ್ಪು ಸುಲ್ತಾನನ ಬಗ್ಗೆ ಯಾಕಿಷ್ಟು ತಾತ್ಸಾರ?’

ನಾನು ಏನೋ ಹೇಳಲು ಹೊರಟಾಗ ಪಕ್ಕದಲ್ಲಿದ್ದ
ಲಂಗೂರ್ ಕೋತಿ ಅರಚಿತು. ‘ಟಿಪ್ಪು ಜಯಂತಿ ಆಚರಿಸುವ ಬಗ್ಗೆ ನನ್ನದೂ ತಕರಾರು ಇದೆ! ಆತನಿಗೆ ಹುಲಿಗಳ ಬಗ್ಗೆ ಮಾತ್ರ ವ್ಯಾಮೋಹವಿತ್ತು. ನನ್ನಂತಹವ
ರನ್ನು ನೋಡಿದರೆ ಆಗುತ್ತಿರಲಿಲ್ಲ’.

ಹುಲಿಯಣ್ಣ ‘ಶೋಲೆ’ಯ ಗಬ್ಬರ್ ಸಿಂಗ್‌ನಂತೆ ಜೋರಾಗಿ ನಗುತ್ತಾ ಹೇಳಿದ. ‘ಟಿಪ್ಪು, ಹುಲಿಯನ್ನು ಮೈಸೂರು ರಾಜ್ಯದ ಚಿಹ್ನೆಯನ್ನಾಗಿ ಮಾಡಿದ್ದೇ ಈ ಲಂಗೂರನ ಅಸಮಾಧಾನಕ್ಕೆ ಕಾರಣ. ಅವನೇ ರಾಜ್ಯದ ಚಿಹ್ನೆಯಾಗಿರಬೇಕಾಗಿತ್ತಂತೆ!’

ನಾನು ಲಂಗೂರ್ ಕೋತಿಗೆ ಹೇಳಿದೆ. ‘ನೋಡಯ್ಯಾ, ಮನುಷ್ಯರು ಹುಲಿಗೆ ಜಾಸ್ತಿ ಮರ್ಯಾದೆ ಕೊಡುತ್ತಾರೆ. ಅದಕ್ಕೇ ಟಿಪ್ಪು ಅವರನ್ನು ‘ಮೈಸೂರಿನ ಹುಲಿ’ ಎಂದೇ ಕರೆಯುತ್ತಿದ್ದರು’.

ಲಂಗೂರ್, ಟಿ.ವಿ. ಚರ್ಚೆಯಲ್ಲಿ ಭಾಗವಹಿಸುವವರಂತೆ ಜೋರಾಗಿ ತಲೆ ಆಡಿಸುತ್ತಾ ವಾದ ಮುಂದುವರಿಸಿತು. ‘ಹಾಗೇನಿಲ್ಲ… ನೀವೆಲ್ಲಾ ಹನುಮಂತನನ್ನೇ ಪೂಜಿಸುವವರು ಅಂತ ನನಗೆ ಗೊತ್ತಿಲ್ಲವೇ! ಅದೆಲ್ಲಾ ಇರ್‍ಲಿ, ಕಳೆದ ಅಸೆಂಬ್ಲಿ ಚುನಾವಣೇಲಿ ಮೈಸೂರು ಹುಲಿ ಅಂತ ಕರೆಸಿಕೊಂಡಿದ್ದ ಒಬ್ಬರನ್ನು ಇಲ್ಲಿನ ಜನ ಯಾಕೆ ಸೋಲಿಸಿದರು ಮತ್ತೆ?’

ನನಗೂ ‘ಓಹ್, ಹೌದಲ್ಲ!’ ಅನಿಸಿತು. ನಾನು ಸಾವಧಾನಿಸಿ, ‘ಟಿಪ್ಪು ಸುಲ್ತಾನನೇ ಮೊದಲ ಹುಲಿ ಹಾಗೂ ಕೊನೆಯ ಹುಲಿ. ಆ ನಂತರ ಮೈಸೂರಿನಲ್ಲಿ ಯಾವನೂ ಹುಲಿಯ ಪ್ರತಾಪ ತೋರಿಸಿಲ್ಲ’.

ಕೋತಿಗೆ ಕಿರಿಕ್ ಮುಂದುವರಿಸಲು ಹುಲಿಯಣ್ಣ ಅವಕಾಶ ಕೊಡಲಿಲ್ಲ. ‘ಈ ಕೋತಿಯ ತರಲೆ ಇದ್ದದ್ದೇ. ಅಲ್ಲ, ಈಗ ಮೈಸೂರು ಸಿಂಹ ಅಂತ ಒಬ್ಬರಿದ್ದಾರಲ್ಲ… ಅವರಿಗೆ ಟಿಪ್ಪು ಬಗ್ಗೆ ಸಿಕ್ಕಾಪಟ್ಟೆ ಉರಿಯಂತಲ್ಲ’.

‘ಓಹ್! ಅವರಾ?, ನೋಡಪ್ಪಾ ಹುಲಿಯಣ್ಣಾ, ಕಾಡಿನ ರಾಜ ಯಾರು? ಸಿಂಹ ಅಲ್ಲವೇ? ಹಾಗಾದರೆ ಇನ್ನೂ ಮೈಸೂರು ಹುಲಿ ಮೈಸೂರು ಹುಲಿ ಅಂತ ಹುಲಿಯನ್ನು ತಲೆ ಮೇಲಿಟ್ಟರೆ ಸಿಂಹಕ್ಕೆ ಮೈಉರಿಯಾಗಲ್ವೇ?’ ನನ್ನ ಲಾಜಿಕ್ ಹುಲಿಗೆ ಅರ್ಥವಾಗದಿದ್ದರೂ ‘ಹೌದು’ ಎಂದು ತಲೆ ಅಲ್ಲಾಡಿಸಿತು.

ಹುಲಿ ಹೇಳಿತು. ‘ಆದರೆ ಮೈಸೂರಿನ ಈ ಸಿಂಹ ರಾಜಕೀಯದಲ್ಲಿದ್ದಾರೆ ಎಂದು ಮೈಸೂರಿನ ಹುಲಿಯನ್ನೂ ರಾಜಕೀಯಕ್ಕೆ ಎಳೆಯುವುದು ನನಗ್ಯಾಕೋ ಸರಿಕಾಣುತ್ತಿಲ್ಲಪ್ಪಾ’.

‘ನನಗೂ ಇದು ಸರಿಯಲ್ಲ ಎಂದೆನಿಸಿದೆ. ದೇಶದಲ್ಲಿ ನಿನ್ನ ಸಂತತಿ ಕಡಿಮೆಯಾಗದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕೇ ವಿನಾ, ಈ ರೀತಿ ಹುಲಿಯನ್ನು ರಾಜಕೀಯವಾಗಿ ಬಳಸುವುದು ಶುದ್ಧ ತಪ್ಪು! ನಾನು ಇದನ್ನು ಖಂಡಿಸುತ್ತೇನೆ! ಸೇವ್ ಟೈಗರ್!’ ನಾನು ಪತ್ರಿಕೆಗಳಲ್ಲಿ ಬಾರದ ಹೇಳಿಕೆ ಕೊಟ್ಟೆ.

ನನ್ನ ‘ಸೇವ್ ಟೈಗರ್’ ವೀರಘೋಷ ಕೇಳಿ ಹುಲಿಯಣ್ಣನ ಕಿವಿ ನಿಮಿರಿತು. ‘ಅಲ್ಲ ಮಾರಾಯ… ದೇಶದಲ್ಲಿ ಹುಲಿಗಳ ಸಂರಕ್ಷಣೆ ಕಾರ್ಯ ನಡೆಯುತ್ತಿದೆ ಅಂತೀಯಲ್ಲ, ಹಾಗಾದರೆ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಮೊನ್ನೆಯಷ್ಟೇ ಎರಡು ಹುಲಿಗ
ಳನ್ನು ಕೊಂದುಬಿಟ್ರಲ್ಲ… ಯಾಕೆ?’ ಎಂದು ಕೇಳಿತು.

ನನಗೊಮ್ಮೆಲೇ ಕೋರ್ಟ್ ಕಟ್ಟೆಯಲ್ಲಿ ನಿಂತಂತಾಯಿತು. ‘ಹೌದು ಕಣಪ್ಪಾ, ಹುಲಿಗಳನ್ನು ಕೊಂದದ್ದು ಮಹಾಪರಾಧ. ಅದೂ ಮಹಾರಾಷ್ಟ್ರದಲ್ಲಿ ಕೊಂದದ್ದು ಸಂತತಿ ಹೆಚ್ಚಿಸುವ ಹೆಣ್ಣುಹುಲಿಯನ್ನೇ!’

ಹುಲಿಯಣ್ಣನಿಗೆ ಕೋಪ ನೆತ್ತಿಗೇರಿತೂಂತ ಕಾಣುತ್ತೆ. ‘ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರು ನೈತಿಕ ಜವಾಬ್ದಾರಿ ವಹಿಸಿಕೊಂಡು ರಾಜೀನಾಮೆ ಕೊಡಲೇಬೇಕು’ ಎಂದು ಗರ್ಜಿಸಿತು.

ನಾನು ಸಮಾಧಾನ ಮಾಡಿದೆ. ‘ಹುಲಿಯಣ್ಣಾ, ತಾಳ್ಮೆಯಿಂದಿರು… ಮಹಾರಾಷ್ಟ್ರದ ಶಿವಸೇನಾ ಗೊತ್ತಲ್ಲಾ? ಶಿವಸೇನಾವನ್ನು ಗುರಿಯಾಗಿಸಿಕೊಂಡು ಈ ಹುಲಿಯ ಹತ್ಯೆ ಮಾಡಲಾಗಿದೆ ಎಂದು ಈಗಾಗಲೇ ಠಾಕ್ರೆಜೀ ‘ವ್ಯಾಘ್ರ’ರಾಗಿದ್ದಾರೆ. ಶೀಘ್ರದಲ್ಲೇ ಅವರು
ಸಿ.ಎಂ. ಮತ್ತು ಅರಣ್ಯ ಸಚಿವರ ರಾಜೀನಾಮೆಗೆ ಹಟ ಹಿಡಿಯಬಹುದು. ಕಾಂಗ್ರೀಸ್ ಅಧ್ಯಕ್ಷ ಕೂಡಾ ರೊಚ್ಚಿಗೆದ್ದಿದ್ದಾರೆ’. ‘ಒಟ್ಟಾರೆ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರದಲ್ಲೂ ರಾಜಕೀಯವಾಗಿ ಬಳಸೋಕೆ ಹುಲಿಯೊಂದು ಸಿಕ್ತಲ್ಲ!’

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !