ಸೋಮವಾರ, ಸೆಪ್ಟೆಂಬರ್ 21, 2020
22 °C

ಯೋಧರ ಮನೆಗೆ ಬೆಂಕಿ ಹಚ್ಚಲು ಯತ್ನ; ಭೀತಿಯಿಂದ ಗ್ರಾಮ ತೊರೆದ ಕುಟುಂಬ

ಬೆಳಗಾವಿ: ತಾಲ್ಲೂಕಿನ ಕಣಯೆ ಗ್ರಾಮದಲ್ಲಿ ಇಬ್ಬರು ಯೋಧರಿರುವ (ಸಹೋದರ ಹಾಗೂ ಸಹೋದರಿ) ಕುಟುಂಬದವರ ಮೇಲೆ ಇತ್ತೀಚೆಗೆ ಹಲ್ಲೆ ನಡೆಸಿ, ಮನೆಗೆ ನುಗ್ಗಿ ದಾಂಧಲೆ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅದೇ ಗ್ರಾಮದ ಮಹೇಶ ಡುಕ್ರೆ, ನಾಮದೇವ ಡುಕ್ರೆ ಮತ್ತು ಪಿಂಟು ಡುಕ್ರೆ ಬಂಧಿತರು.

ಭರತೇಶ ಅಸ್ಸಾಂನಲ್ಲಿ ಸೇನೆಯಲ್ಲಿದ್ದರೆ, ಅವರ ತಂಗಿ ಕೋಲ್ಕತ್ತಾದಲ್ಲಿ ಬಿಎಸ್‌ಎಫ್‌ ಕಾನ್‌ಸ್ಟೆಬಲ್ ಆಗಿದ್ದಾರೆ.

ಹಲ್ಲೆ ವಿಷಯ ತಿಳಿದು ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಬಂದಿದ್ದ ಭರತೇಶ ವಿಡಿಯೊ ಮಾಡಿದ್ದಾರೆ. ‘ತಂದೆ ಮೇಲೆ ಕಿಣಯೆ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ತಂಗಿ, ತಾಯಿಯನ್ನೂ ಥಳಿಸಿದ್ದಾರೆ. ಪೊಲೀಸರು ಈ ಬಗ್ಗೆ ದೂರು ತಗೆದುಕೊಂಡಿರಲಿಲ್ಲ. ತಂದೆ, ತಾಯಿ, ತಂಗಿಯನ್ನು  ಆಸ್ಪತ್ರೆಗೆ ಕರೆ ತಂದಾಗ ಕಿಡಿಗೇಡಿಗಳು ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನ ಜಖಂಗೊಳಿಸಿದ್ದಾರೆ. ಮನೆಯೊಳಗಿನ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಆರೋಪಿಸಿದ್ದಾರೆ. ಬಳಿಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.