ಶನಿವಾರ, ಜುಲೈ 24, 2021
21 °C

ಕವಿತೆ | ಕಳ್ಳಬೆಕ್ಕು

ಈ ಕಳ್ಳಬೆಕ್ಕು

ಹೀಗೇ ಇತ್ತೇ..

ಈ ಮನೆಗೆ ಬಂದ ದಿನದಿಂದ?

ಬೆಕ್ಕು ಹಾಗೂ ನಾನು ಪರಸ್ಪರ ಅಂಜಿ

ಓಡುವುದೇ ಆಗಿದೆ.

ರಾತ್ರಿ ನಿದ್ದೆಯಲ್ಲೂ ಮೃದು ತುಪ್ಪಳಪಾದದಿಂದ 

ಚಿಗುರಿ

ಹೊರ ಬರುವ ನಖಗಳು ಉದ್ದಕ್ಕೆ ಬೆಳೆ 

ಬೆಳೆಯುತ್ತ

ನನ್ನ  ಆಕ್ರಮಿಸಿದಂತೆ

ಕೊರಳ ಬಳಿ ಗೀರು

ಬೆಚ್ಚಿ ಕಣ್ತೆರೆದರೆ ಒದ್ದೆ ಕುತ್ತಿಗೆ!

ಹುಲಿಯಂತಹ ಬೆಕ್ಕು

ಈ ಮನೆಯನ್ನೇ ಹುಡುಕಿತೇಕೆ

ನನ್ನದೇ ಗುಂಗಿನಲಿ ನಾನು ಮೈ ಮರೆತಿರುವಾಗ?

ಒಂದಿಷ್ಟೂ ಸದ್ದು ಗದ್ದಲವಿಲ್ಲ

ಒಳಹೊಕ್ಕು ಅಡ್ಡಾಡುತ್ತದೆ

ವರಾಂಡ,ಅಡುಗೆಮನೆ, ಖಾಸಗಿ ಕೋಣೆ

ದೇವರಮನೆಯನ್ನೂ ಬಿಟ್ಟಿಲ್ಲ

ಒಳಲಹರಿಯನು ತುಂಡರಿಸಿ..

ನನ್ನ ಸಪ್ಪಳಕ್ಕೆ ಕಿಟಕಿ ಮೇಲೆ

ಜಿಗಿದು

ಗೋಡೆ ಮೇಲೆ ಒಂದಿಷ್ಟು ಗೆರೆ ಮೂಡಿಸಿ

ಹೊರಗೆ ಹಾರುತ್ತದೆ.

ನಾನು ಅವ್ಯಕ್ತ ಭಯದಲ್ಲಿ ಕಿರುಚುತ್ತೇನೆ.

ಬೇಲಿಯಾಚೆ ಗಂಭೀರವಾಗಿ ಚಣಕಾಲ

ನನ್ನ ದುರುಗುಟ್ಟುತ್ತದೆ.

ನನ್ನ ಕಣ್ಣು,ಮುಖದಲ್ಲೂ

ಭಯ ತುಂಬಿದ ಕೋಪ!

ದೇಹ,ಮನಸು ಸಮಸ್ಥಿತಿಗೆ ಬರಲು 

ಸಮಯ ಯಾಚಿಸುತ್ತವೆ.

ಕನಸಿನಲ್ಲೂ ಉದ್ದಕ್ಕೆ ಹಾವಿನಂತಹ ಬಾಲ,

ಮೊನಚಾದ ಮುಳ್ಳಿನಂತಹ ಮೀಸೆ, 

ಹೊಳಪು ಮೈ..

ಆ ಉಗುರುಗಳು ಬೆನ್ನಟ್ಟುತ್ತವೆ

ಪಾತ್ರೆಗಳು ಬೋರಲಾಗಿ ಬಿದ್ದಿವೆಯೇ,

ಎಂಜಲಾಗಿ ಚೆಲ್ಲಿವೆಯೇ  ವ್ಯಂಜನಗಳು?

ತಳಮಳ!

ಇದು ಒಂದು ಹಲ್ಲಿ, ಇಲಿ, ಜಿರಳೆಯನ್ನೂ ಹಿಡಿದ

ಕುರುಹಿಲ್ಲ.

ಅಜ್ಜಿ ಅಂದಿದ್ದಳು: 

"ಹೇ ಹುಡುಗಿ,ಬೆಕ್ಕು ನೋಡಲು ಅಂದ.

ರಾತ್ರಿ ಮುಚ್ಚಿದ ಕೋಣೆಯಲ್ಲಿ ಒಬ್ಬಳೇ

ಎದುರಾಗಬೇಡ

ಹೊಡೆಯಬೇಡ.

ಅದರೊಳಗೆ ಆಕ್ರಮಣದ ಗುಣವಿದೆ.

ಪ್ರಾಣವನ್ನೇ ಹಿಡಿಯುತ್ತದೆ.’

ನಾಲ್ಕೈದು ದಿನವಾಯಿತು

ಬೆಕ್ಕು ಬರುತ್ತಿಲ್ಲ,

ಸತ್ತಿರಬಹುದೇ..?!

ಸುಮ್ಮಸುಮ್ಮನೆ ಒಳಹೊರಗೆ ಹಣುಕಿ 

ಏನನ್ನೋ ಖಾತ್ರಿ ಪಡಿಸುತ್ತೇನೆ.

ಇಂದು ಮನೆಯ ಎದುರಿನ ದಂಡೆಯ ಮೇಲೆ

ತಪಸ್ವಿಯಂತೆ ಕೂತಿದೆ.

ಇಣುಕಿ ನೋಡಿದೆ:

ಮುಖದ ಗಡಸುತನ, ಕಣ್ಣು..!

ಅರೇ,ಕಣ್ಣು ಊದಿದೆ! ಕೆಂಪಾಗಿದೆ!

ಪೆಟ್ಟು ಬಿದ್ದಿರಬೇಕು.

ಬೆಕ್ಕು ಸರಿದು ಹೋಯಿತು.

ಈಗದು ಕನಸನ್ನೂ ಮುಟ್ಟುತ್ತಿಲ್ಲ.

ದಂಡೆಯಲ್ಲಿ ಆಗಾಗ ನೆರಳೊಂದು

ಸರಿದಾಡುತ್ತದೆ.

-ಪೂರ್ಣಿಮಾ ಸುರೇಶ್