ಶನಿವಾರ, ಜೂನ್ 19, 2021
27 °C

ಕವಿತೆ | ಗಂಡಿನ ನೆರಳು

ಊರಲ್ಲಿ ಯಾರೇ ನಕ್ಕರೂ
ಅತ್ತರೂ ಕಿವಿಯಾಗುವ
ಒಂದು ಮನೆ ಇದೆ
ಆದರೆ ಆ ಮನೆಯ
ಧನಿಗಾಗಿ ಕರುವೊಂದು ಎಚ್ಚರಗೊಳ್ಳುತ್ತದೆ
ಎಷ್ಟು ಬೇಕೊ ಅಷ್ಟು
ಬೆಳಕು ನೀಡುವ ಬಲ್ಬು
ನಡುರಾತ್ರಿ ಅಲೆದಾಡುವ ಗಡವ ಬೆಕ್ಕು
ತಲೆ ದಿಂಬಿನ ಕೆಳಗೆ
ಸೈನಿಕರಂತೆ ಬದುಕಿರುವ ಮಾತ್ರೆಗಳು
ಓದದೇ ಉಳಿದು
ನೀರೊಲೆ ಸೇರುವ ಲಗ್ನಪತ್ರಿಕೆಗಳು
ಗಡಿಯಾರದಲ್ಲಿ ಒಣಗಿರುವ
ಮೊಮ್ಮಗನ ಫೋಟೊ
ಆ ಮನೆಯ ಜೀವ ಚೈತನ್ಯದ ಠೇವಣಿಗಳು

ಅವ್ವನ್ನ ಬಿಟ್ಟು ಗೋಡೆಯ ಫೋಟೋವಾದ ಅಪ್ಪ
ಲಜ್ಜೆಗೆಟ್ಟ ಅಳಿಯನಿಂದ ಮೋಸ ಹೋಗಿ ಒಬ್ಬಂಟಿಯಾದ ಮಗಳು
ಇಬ್ಬರೇ ಇರುವ ಮನೆ
ಗಟ್ಟಿಯಾದ ಗಂಡು ಧ್ವನಿ ಇಲ್ಲ
ಇರಬೇಕಾದ ಮೊಮ್ಮಗ
ಕಾಸಿನ ಪಾಲು
ಬಂದರೆ ಬಂದ
ಎದ್ದರೆ ಎದ್ದ
ಮೊದಲೆಲ್ಲ ಇಲ್ಲೆ ಅಲೆದ ಪುಟ್ಟ
ಈಗ ಇಲ್ಲಿ ಬಂದಾಕ್ಷಣ
ಹೋಗುವ ಚಿಂತೆಯೊಂದೆ ಅವಗೆ

ಹಬ್ಬ ಹರಿದಿನಗಳನ್ನು
ಮಾಡುವರು
ಇಬ್ಬರೇ ಕೂತು ಉಣ್ಣುವರು
ಯಾರಿಗಾಗಿ ಅನ್ನುವ
ಖಾತರಿಯಿಲ್ಲದೆ
ಮನೆ ಬಾಗಿಲಲಿ ನಿಂತು ಕಾಯುವರು
ಯಾರೊ ಬರುತ್ತಾರೆ
ಉಳಿದ ಊಟ ಖಾಲಿ ಮಾಡುತ್ತಾರೆ
ಬರಲಿಲ್ಲ ಅಂದುಕೊಳ್ಳಿ
ಚಿಲಕ ಜಡಿದು
ಟಿವಿಯ ಮುಂದೆ ಕೂತು ಬಿಡೋದು
ಸರಿ ರಾತ್ರಿಯಲ್ಲಿ
ನಿದಿರೆ ಬಂದರೆ ಮಲಗೋದು

ಇನ್ನೇನೊ ಮಳೆಗಾಲ ಬಂತು
ಕೈಯ್ಯಂಚಿನ ಮನೆ ಕೈಯ್ಯಾಡಿಸಬೇಕಿದೆ
ಅಟ್ಟದ ಮೇಲೆ ಅಡ್ಡಾಡಬೇಕಿದೆ
ಎಂದೊ ಅಡ್ಡಾದಿಡ್ಡಿ ಎದ್ದು ನಿಂತಿರುವ ಮಣ್ಣಿನ ಗೋಡೆಗಳು
ಮಾತನಾಡುತ್ತವೆ
ನಮಗೆ ಯಾವಾಗ ಸುಣ್ಣ ಬಣ್ಣ
ಬಿಸಿಲುಕೋಲು ಬಾಡಿವೆ
ಎಲ್ಲಿ ಆ ಸದ್ದು ಗದ್ದಲ
ಜೋರಾದ ನಗು
ಚಿಗುರಿಲ್ಲದ ಗಾಳಿ
ದಿನ ನಿತ್ಯ ಸಂಜೆಗೆ ಬರಬೇಕಿದ್ದ ಅಪ್ಪ

ಈ ಹೆಣ್ಣುಗಳು ಮಾತ್ರ ವಾಸ ಮಾಡುವ ಮನೆ
ಅಲ್ಲಿ ಅನ್ನ ತಿಂದು
ಮಗ್ಗಲು ಕೊಡುವ ಮನಸ್ಸುಗಳು
ಅದೆಷ್ಟೇ ಧೈರ್ಯದಿಂದಿದ್ದರೂ
ಅವುಗಳ ಭಯಕ್ಕೆ ಕಾರಣ ಬೇಕಿಲ್ಲ ನೋಡಿ
ನಡುರಾತ್ರಿ ಕದ ಬಡಿದರೆ
ಮಳೆಯಾಗಿ ಕರೆಂಟು ಬರದಿರೆ
ಮನೆಯ ಗಲ್ಲಿಯಲಿ ಯಾವನೋ
ಗಡ್ಡದಾರಿ ಬೀಡಿ ಸೇದುತ್ತಾ ಉಳಿದುಬಿಟ್ಟರೆ
ದಾರಿಯಲ್ಲಿ ಅನಾವಶ್ಯಕವಾಗಿ ಚನ್ನಾಗಿದ್ದೀಯ,
ನಿಮ್ಮವ್ವ ಮನೆಯಲ್ಲಿಲ್ಲವ ಅಂದರೆ
ಉತ್ತರ ಕೊಡುವ ಗಂಟಲು ಒಣಗುತ್ತದೆ
ಕೈಕಾಲು ಬಲಹೀನವಾಗುತ್ತವೆ
ಗಂಡಿನ ನೆರಳು
ಇದ್ದ ದಿನಗಳನ್ನು ಕೈಬೀಸಿ
ಕರೆಯಬೇಕೆನಿಸುತ್ತದೆ

ಆದರೂ ಹೊಲ ಉಳುಮೆಯಾಗುತ್ತದೆ
ಮಾವು ಚಿಗುರುತ್ತದೆ
ಮಾರ್ಲಾಮಿಗೆ ಎಡೆ ಬಿದ್ದೇ ಬೀಳುತ್ತದೆ
ಹಬ್ಬ ಹರಿದಿನಗಳಿಗೆ ಮನೆ
ಉಸಿರಾಡಲು ಅಣಿಯಾಗುತ್ತದೆ
ಆದರೇನು ಬಂತು
ಊದಿಕೊಳ್ಳುವ ಕಾಲಿಗೆ ಯಾರಲ್ಲಿ ಕಾರಣ ಕೇಳುವುದು
ನಡುರಾತ್ರಿ ಹೊಟ್ಟೆ ನೋವಾದರೆ
ಎಷ್ಟು ಅಂತ ಅವಡುಗಚ್ಚೋದು
ಇಲ್ಲಿಂದ ಹೊರಟ ದಿನ
ಯಾವ ಊರಿಗೆ ಬಸ್ಸು ಹತ್ತೋದು??

-ಚಂದ್ರು ಎಂ. ಹುಣಸೂರು