ಈಶಾನ್ಯ ಸೋದರಿಯರ ಮಡಿಲಿನಲ್ಲಿ..

ಬುಧವಾರ, ಜೂನ್ 19, 2019
23 °C

ಈಶಾನ್ಯ ಸೋದರಿಯರ ಮಡಿಲಿನಲ್ಲಿ..

Published:
Updated:
Prajavani

ಅದೊಂದು ಅದ್ಭುತ ಕ್ಷಣ...

ಸೂರ್ಯನ ಎಳೆಯ ಕಿರಣಗಳು ನೆಲಕ್ಕೆ ಸ್ಪರ್ಶಿಸುತ್ತಿದ್ದ ಹೊತ್ತಲ್ಲಿ, ಬೌದ್ಧ ಭಿಕ್ಕುಗಳ ಗುಂಪೊಂದು ರಸ್ತೆಯಲ್ಲಿ ಭಿಕ್ಷಾಟನೆಗೆ ಹೊರಟಿತ್ತು. ರಸ್ತೆ ಅಂಚಿಗೆ ಹಣ್ಣು ಹಂಪಲು ಹಿಡಿದ ಹೆಂಗಳೆಯರು, ಭಿಕ್ಷುಗಳ ಜೋಳಿಗೆಗೆ ಭಿಕ್ಷೆ ಹಾಕಿ ನಮಸ್ಕರಿಸುತ್ತಿದ್ದರು. ಹಿನ್ನಲೆಗೆ ದಟ್ಟ ಕಾಡು ಹಬ್ಬಿ ನಿಂತಿತ್ತು.

ಈ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಲೇ ನಮ್ಮ ಕಾರು ಮುಂದೊಡಿತು. ಮುಖ ಸವರುತ್ತಿದ್ದ ತಂಗಾಳಿ, ಮೈಮನವನ್ನು ಉಲ್ಲಸಿತಗೊಳಿಸಿತ್ತು.

ಈಶಾನ್ಯ ಸೋದರಿಯರ ಸೆರಗಿನಲ್ಲಿ ಈಶಾನ್ಯ ರಾಜ್ಯವೆಂದರೆ ತಂಪಿನ ತಾಣ, ಕಾಡು ಪ್ರದೇಶ ಎಂದುಕೊಂಡವನನ್ನು ಅಸ್ಸಾಂನ ತಿನ್‌ಸುಕಿಯಾದ ಸೆಕೆ ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಬೆಳಿಗ್ಗೆ, ಮೂರೂವರೆ ಗಂಟೆಗೆ ಎದ್ದು, ಪರಶುರಾಮ ಕುಂಡಕ್ಕೆ ಹೊರಟೆವು. ನಾಲ್ಕೂವರೆ ಗಂಟೆಗೆಲ್ಲಾ ಎಳೆ ಬಿಸಿಲು, ನಮ್ಮ ಏಳೂವರೆಯ ಹಾಗೆ. ಈಶಾನ್ಯ ರಾಜ್ಯಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡೂ ದಕ್ಷಿಣ ಭಾರತದ ರಾಜ್ಯಗಳಿಗಿಂತ ಎರಡು ಗಂಟೆ ಮುನ್ನ.

ಚಹಾ ತೋಟಗಳನ್ನು ಹಿಂದಿಕ್ಕಿ ಸಾಗಿದ ರಸ್ತೆ, ಹಾವಿನಂತೆ ಸುತ್ತಿ ಬಳಸಲು ಶುರುವಾಯಿತು. ರಸ್ತೆಗಳ ಎರಡೂ ಬದಿ ಗಗನಚುಂಬಿ ಮರಗಳ ದಟ್ಟ ಕಾಡು, ಕಾಡಿನ ನಡುವೆ ಕಾಡುಬಾಳೆ, ಪುಟ್ಟ ಪುಟ್ಟ ಜಲಪಾತ ಸ್ವರ್ಗವನ್ನು ನೆನಪಿಸುತ್ತಿದ್ದವು.

‘ನಿಮ್ಮ ಪರ್ಮಿಟ್ ತೋರಿಸಿ’ ಎಂದು ಸೈನಿಕರು ನಮ್ಮ ಕಾರಿನ ಕಿಟಕಿಯಲ್ಲಿ ತಲೆ ತೂರಿಸಿದಾಗಲೇ ಗೊತ್ತಾಗಿದ್ದು, ನಾವು ಅರುಣಾಚಲ ಪ್ರದೇಶದಲ್ಲಿದ್ದೇವೆಂದು.

ಪುಟ್ಟ ಹಳ್ಳಿಯೊಂದರ ಗೂಡಂಗಡಿಯಲ್ಲಿ ತಾಜಾ ಚಹ ಸವಿದು, ಬೌದ್ಧ ಬಿಕ್ಕುಗಳ ಮುಖದ ಪ್ರಸನ್ನತೆಗೆ ನಮಿಸಿ, ಮಂಜು ಹೊದ್ದು ಮಲಗಿದ್ದ ಗಿರಿ ಶಿಖರಗಳ ಪೋಟೊ ಕ್ಲಿಕ್ಕಿಸುತ್ತಾ ಮೈ ಮರೆತವನಿಗೆ ‘ಇಳಿಯಿರಿ! ಇದೇ ಪರಶುರಾಮ ಕುಂಡ’ ಗೆಳೆಯ ಚಿನ್ಮೆ ಎಚ್ಚರಿಸಿದ. ಕಾರಿನಿಂದ ಇಳಿದ ನಾನು ಸುತ್ತಲೂ ನೋಡಿ ಅಚ್ಚರಿಗೊಂಡೆ. ದೇವಾಲಯವಿಲ್ಲ. ಮೈಕ್‌ನ ಹಾವಳಿ ಇಲ್ಲ. ಗಾಳಿಗೆ ಪಟಗುಟ್ಟುವ ಕೇಸರಿ ಬಾವುಟಗಳಿಲ್ಲ!

‘ಎಲ್ಲಿದೆ ಪ್ರಸಾದ್, ದೇವಸ್ಥಾನ? ನಾವು ದಾರಿ ತಪ್ಪಿಲ್ಲ‌ ತಾನೇ’ ನಮ್ಮ ಟೀಂ ಲೀಡರ್ ಡಾ.ದೇವಕುಮಾರ್ ಪ್ರಶ್ನಾರ್ಥಕವಾಗಿ ನನ್ನತ್ತ ನೋಡಿದರು. ನಮ್ಮ ಮುಖದಲ್ಲಿ ಮೂಡಿದ ಗೊಂದಲ ಅರ್ಥಮಾಡಿಕೊಂಡ ಚಿನ್ಮೆ ‘ಬನ್ನಿ , ಕುಂಡದತ್ತ ಹೋಗಿ ಬರೋಣ’ ಎಂದು, ರಸ್ತೆಯ ಇಳಿಜಾರಿಗೆ ಕರೆದೊಯ್ದರು.

ಇಳಿಜಾರಿನಲ್ಲೊಂದು ಉದ್ದದ ಸೇತುವೆ. ಅದರ ಮಧ್ಯ ನಿಂತು ನೋಡಿದರೆ, ಗಿರಿ ಶಿಖರಗಳ ಮಡಿಲಿಂದ ಇಳಿದು ಬರುತ್ತಿದ್ದ ಲೋಹಿತ್ ನದಿಯ ನೀಲ ವರ್ಣದ ಜಲಧಾರೆ.

ಟಿಬೇಟ್‌ನಲ್ಲಿ ಹುಟ್ಟುವ ಲೋಹಿತ್ ನದಿ, ಬ್ರಹ್ಮಪುತ್ರ ನದಿಯ ಉಪನದಿ. ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯ ಮೂಲಕ ಹರಿದು ಬರುವ ಈ ನದಿ, ಪರಶುರಾಮ ಕುಂಡದ ನಂತರದ ಬಯಲಿನಲ್ಲಿ ಕವಲುಗಳಾಗಿ ಒಡೆಯುತ್ತದೆ. ಪ್ರತಿ ಕವಲೂ ನಮ್ಮ ಕಾವೇರಿಯ ಎರಡು ಪಟ್ಟು ದೊಡ್ಡದು. ಪ್ರತಿ ವರ್ಷ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ಕಾಯಂ. ಪ್ರತಿ ವರ್ಷ ತನ್ನ ಪಾತ್ರವನ್ನು ಬದಲಿಸಿ , ಭೋರ್ಗೆರೆದು ಹರಿವ ಈ ನದಿ ಸಾಕಷ್ಟು ಕೃಷಿ ಭೂಮಿಯನ್ನು ಕಬಳಿಸುತ್ತದೆ.

ಪರಶುರಾಮ ಕುಂಡದ ಬಳಿ ಲೋಹಿತ್ ನದಿಗೆ ಉದ್ದವಾದ ಸೇತುವೆ ಕಟ್ಟಿದಾರೆ. ಇಲ್ಲಿ ಕೆಳಗಿಳಿದರೆ ಸಣ್ಣ ದ್ವೀಪ ಕಾಣುತ್ತದೆ. ಇದೇ ಪರಶುರಾಮ ಕುಂಡ. 1950ರ ಭೂಕಂಪ ಮೂಲಕುಂಡವನ್ನು ಹೊಸಕಿ ಹಾಕಿ, ಒಂದು ಪಾರ್ಶ್ವವನ್ನಷ್ಟೇ ಉಳಿಸಿದೆ. ಇಲ್ಲಿ ನದಿಯ ನೀರು ಸ್ಫಟಿಕ ಶುದ್ಧ.

ಜನಮನದಲ್ಲಿ ಹರಿದಾಡುವ ಕತೆಯೊಂದು ಈ ಸ್ಥಳದ ಮಹಿಮೆಯನ್ನು ಹೇಳುತ್ತದೆ. ತಂದೆ ಜಮದಗ್ನಿಯ ಅಪ್ಪಣೆಯಂತೆ, ತಾಯಿಯ ತಲೆ ಕತ್ತರಿಸುವ ಪರಶುರಾಮನ ಕೈಗೆ ಕೊಡಲಿ ಕಚ್ಚಿಕೊಳ್ಳುತ್ತದೆ. ತಾಯಿ ಕೊಂದ ಪಾಪ ಕೃತ್ಯಕ್ಕೆ ನರಳುವ ಪರಶುರಾಮ ಕೊನೆಗೆ ತಪಸ್ವಿಗಳ ಸಲಹೆಯಂತೆ ಲೋಹಿತ್ ನದಿಯ ಪವಿತ್ರ ಜಲದಲ್ಲಿ ಕೈ ತೊಳೆದಾಗ ಪಾಪ ನಿವಾರಣೆಯಾಗುತ್ತದೆ. ಕೊಡಲಿ ಕೈ ಬಿಡುತ್ತದೆ. ಪರಶುರಾಮನ ಪಾಪ ಕಳೆದ ತಾಣವೇ ಇದು.

ಮಕರ ಸಂಕ್ರಾಂತಿಯಂದು ಸಾಧು ಸಂತರು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಪುಣ್ಯ ಸ್ನಾನ ಮಾಡುತ್ತಾರೆ. ನದಿಯ ದಡದಲ್ಲಿ, ಕಾಡಿನ ಮಧ್ಯೆ ಪರಶುರಾಮ ದೇವಾಲಯವಿದೆ. ಧ್ಯಾನದಲ್ಲಿ ನಿರತರಾದ ಸಾಧು ಸಂತರನ್ನು ಇಲ್ಲಿ ಕಾಣಬಹುದು.

 

ಸೇತುವೆಯ ಅಂಚಿನಲ್ಲೊಂದು ಪುಟ್ಟ ಹೋಟೆಲ್. ಅಲ್ಲಿ ಮುಸುಕಿನ ಜೋಳದ ಹತ್ತಾರು ಖಾದ್ಯಗಳು ಸವಿಯಲು ಸಿಗುತ್ತವೆ. ಜೊತೆಗೆ ನೆನಪಿನಲ್ಲಿ ಉಳಿಯುವ ಚಹಾ. ನಾವು ಬಾಯಿ ಚಪ್ಪರಿಸುತ್ತಿದ್ದರೆ, ಡಾ.ದೇವಕುಮಾರ್ ಅರುಣಾಚಲದ ಕುಬ್ಜ ಮೇಕೆಗಳ ಬೆನ್ನತ್ತಿದ್ದರು!. ನಮ್ಮ ಸಾಕು ನಾಯಿ ಗಾತ್ರದ ಸಣ್ಣ ಮೇಕೆಗಳು ಇಲ್ಲಿನ ವಿಶೇಷ.

ಪರಶುರಾಮ ಕುಂಡದ ದಾರಿಯಲ್ಲಿ ಅನೇಕ ಬೌದ್ಧ ದೇವಾಲಯಗಳು, ಹಸಿರು ಕಕ್ಕುವ ಗದ್ದೆ ಬಯಲು, ಗಿರಿಜನರ ಸಂತೆಗಳು ಮನಸೆಳೆಯುತ್ತವೆ.  ಈಶಾನ್ಯ ರಾಜ್ಯದ ಪ್ರವಾಸವೆಂದರೆ, ನಾವು ನೋಡದ ಲೋಕವನ್ನು ಹೊಕ್ಕಿ ಬಂದ ಅನುಭವ.

ಹೋಗುವುದು ಹೇಗೆ?

ಪರಶುರಾಮ ಕುಂಡ ಅಸ್ಸಾಂನ ತಿನ್‌ಸುಕಿಯಾದಿಂದ 160 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ತಿನ್‌ಸುಕಿಯಾಗೆ ವಾರಕ್ಕೊಮ್ಮೆ ನೇರ ರೈಲಿದೆ.‌ ಮೂರು ದಿನದ ರೈಲಿನ ಪ್ರಯಾಣ. ಬೆಂಗಳೂರಿನಿಂದ ದಿಬ್ರುಗರ್‌ಕ್ಕೆ ಕೋಲ್ಕತ್ತಾ ಮೂಲಕ ವಿಮಾನವಿದೆ. ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಡಲು ಇನರ್ ಲೈನ್ ಪರ್ಮಿಟ್ ಅವಶ್ಯಕ. ಅರುಣಾಚಲ್ ಟೂರಿಸಂ ಜಾಲತಾಣದಲ್ಲಿ ವಿವರ ಸಿಗುತ್ತದೆ ಮತ್ತು ಅಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ತಿನ್‌ಸುಕಿಯಾದಿಂದ ಬಾಡಿಗೆ ಕಾರಿನಲ್ಲಿ ಮೂರು ಗಂಟೆಗಳ ಪ್ರಯಾಣ. ಪರಶುರಾಮ ಕುಂಡದ ದಾರಿಯ, ಹಸಿರು ಹೊದ್ದ ಗಿರಿ ಕಂದರದ ಚೆಲುವು ವರ್ಣಿಸಲಸದಳ. ಇಡೀ ದಿನ ಸುತ್ತಾಡಿ,ಸಂಜೆ ತಿನ್‌ಸುಕಿಯಾಕ್ಕೆ ವಾಪಸ್ ಬರಬಹುದು. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಏಪ್ರಿಲ್ ಸೂಕ್ತ ಕಾಲ.

ಊಟ–ವಸತಿ

ದಿಬ್ರುಗರ್‌ನಲ್ಲಿ ಉಳಿಯಲು ಉತ್ತಮ ವಸತಿ ಸೌಕರ್ಯವಿದೆ. ಬ್ರಹ್ಮಪುತ್ರ ನದಿ ಪಾತ್ರದ ಅಗಾಧತೆಯನ್ನು ಇಲ್ಲಿ ಕಾಣಬಹುದು. ಅಹಿಂಸಾ ಸೀರೆಗಳಿಗೆ ದಿಬ್ರುಗರ್ ಹೆಸರುವಾಸಿ. ಚಹಾ ತೋಟಗಳ ಸ್ವರ್ಗವಿದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !