ರಾಜ್ಯದಲ್ಲಿ ವಿಜಯಪುರಕ್ಕೆ ಏಳರ ಗರಿ..!

ಮಂಗಳವಾರ, ಮಾರ್ಚ್ 19, 2019
33 °C
ದೇಶದ ಸ್ವಚ್ಛ ನಗರಗಳ ಪಟ್ಟಿ ಪ್ರಕಟ: ರಾಷ್ಟ್ರ ರ‍್ಯಾಂಕಿಂಗ್‌ನಲ್ಲಿ 251ನೇ ಸ್ಥಾನ

ರಾಜ್ಯದಲ್ಲಿ ವಿಜಯಪುರಕ್ಕೆ ಏಳರ ಗರಿ..!

Published:
Updated:
Prajavani

ವಿಜಯಪುರ: ಕೇಂದ್ರದ ನಗರಾಭಿವೃದ್ಧಿ ಇಲಾಖೆ ಬುಧವಾರ ದೇಶದ ಸ್ವಚ್ಛ ನಗರಿಗಳ ಪಟ್ಟಿಯನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದ್ದು, ವಿಜಯಪುರ ನಗರ ರಾಷ್ಟ್ರ ರ‍್ಯಾಂಕಿಂಗ್‌ನಲ್ಲಿ 251ನೇ ಸ್ಥಾನ ಗಳಿಸಿದ್ದರೆ, ರಾಜ್ಯದಲ್ಲೇ ಏಳನೇ ಸ್ವಚ್ಛ ನಗರಿ ಎಂದು ಗುರುತಿಸಿಕೊಂಡಿದೆ.

ರಾಷ್ಟ್ರ ರ‍್ಯಾಂಕಿಂಗ್‌ನಲ್ಲಿ ಹಿಂದಿನ ವರ್ಷ 275ನೇ ಸ್ಥಾನ ಗಳಿಸಿದ್ದರೆ, 2017ರಲ್ಲಿ 321ನೇ ಸ್ಥಾನದಲ್ಲಿತ್ತು. ಅದರ ಹಿಂದಿನ ವರ್ಷಗಳಲ್ಲಿ ಸ್ವಚ್ಛ ಸರ್ವೇಕ್ಷಣಾ ನಗರಗಳ ಪಟ್ಟಿಯಲ್ಲಿ ವಿಜಯಪುರ ನಗರ ಸ್ಥಾನವನ್ನೇ ಪಡೆದಿರಲಿಲ್ಲ.

‘ವರ್ಷದ ಆರಂಭದಿಂದಲೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದ ಫಲ ಈ ಫಲಿತಾಂಶ ದೊರೆತಿದೆ. 150ರೊಳಗಿನ ರ‍್ಯಾಂಕಿಂಗ್‌ ಪಡೆಯಬೇಕು ಎಂಬ ನಮ್ಮ ಕನಸು ಈಡೇರದಿದ್ದರೂ; ಸ್ವಚ್ಛತೆಯ ಹಾದಿಯಲ್ಲಿ ಪ್ರಗತಿ ಪಥದಲ್ಲಿ ಸಾಗಿದ್ದೇವೆ. ವರ್ಷದಿಂದ ವರ್ಷಕ್ಕೆ ರ‍್ಯಾಂಕಿಂಗ್‌ ಹೆಚ್ಚುತ್ತಿದೆ’ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಚ್ಛತೆಯಲ್ಲಿನ ಯಶಸ್ಸಿಗೆ ಈ ಪ್ರತಿಫಲ ಸಿಕ್ಕಿದೆ. ಆನ್‌ಲೈನ್‌ ವೋಟಿಂಗ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗಿಯಾಗಿದ್ದರೆ, ಪಬ್ಲಿಕ್ ಫೀಡ್‌ಬ್ಯಾಕ್‌ ಇನ್ನಷ್ಟು ಹೆಚ್ಚಾಗಿದ್ದರೆ, ಡಾಕ್ಯುಮೆಂಟೇಶನ್ ಕೆಲಸಗಳು ಮತ್ತಷ್ಟು ಚುರುಕಿನಿಂದ ನಡೆದಿದ್ದರೆ, ನಮ್ಮ ರ‍್ಯಾಂಕಿಂಗ್‌ ಇನ್ನೂ ಹೆಚ್ಚಿರುತ್ತಿತ್ತು’ ಎಂದು ಅವರು ಹೇಳಿದರು.

‘ಹಿಂದಿನ ವರ್ಷದ ಆರಂಭದಲ್ಲೇ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದ್ದೆವು. ಮನೆ ಮನೆ ಬಾಗಿಲಿಗೂ ಮುಂಜಾನೆಯೇ ಕಸ ಸಂಗ್ರಹಿಸುವ ವಾಹನಗಳು ತೆರಳಿ, ಸ್ಥಳೀಯ ಬಡಾವಣೆಗಳ ಜನರಿಗೆ ಧ್ವನಿ ವರ್ಧಕದ ಮೂಲಕ ಮನವಿ ಮಾಡಿಕೊಂಡು ಕಸ ಸಂಗ್ರಹಿಸಿದವು.

ರಾತ್ರಿ ಅಂಗಡಿಗಳು, ಹೋಟೆಲ್‌ಗಳು ಮುಚ್ಚುವ ವೇಳೆಗೆ ಸರಿಯಾಗಿ 14 ವಾಹನಗಳು 30 ಟ್ರಿಪ್‌ ನಗರದ ಎಲ್ಲೆಡೆ ಸಂಚರಿಸಿ, ಕಸ ಸಂಗ್ರಹಿಸಿದ ಫಲವಾಗಿ ನಗರದಲ್ಲಿ ಸ್ವಚ್ಛತೆ ಗೋಚರಿಸಿತು. ಸಾರ್ವಜನಿಕರು ರಸ್ತೆಗೆ ಕಸ ಎಸೆಯುತ್ತಿದ್ದ ಜಾಗದಲ್ಲಿ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ, ಕಸ ಎಸೆಯದಂತೆ ನೋಡಿಕೊಂಡೆವು.

ಶಾಲೆಗಳಿಗೆ ತೆರಳಿ ಮಕ್ಕಳಿಗೆ ಸ್ವಚ್ಛತೆಯ ಪಾಠ ಬೋಧಿಸಲಾಯಿತು. ಗಲ್ಲಿ ಗಲ್ಲಿಯಲ್ಲೂ ಬೀದಿ ನಾಟಕಗಳನ್ನು ಪ್ರದರ್ಶಿಸಿ, ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಕೈಗೊಂಡೆವು. ಶಾಲಾ ಗೋಡೆಗಳ ಮೇಲೆ ಜಾಗೃತಿ ಮೂಡಿಸುವ ಬರಹ, ಸ್ವಚ್ಛತೆಯ ಮಹತ್ವ ತಿಳಿಸುವ ಗೋಡೆ ಬರಹವನ್ನು ಎಲ್ಲೆಡೆ ಬಿಡಿಸಿ, ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ, ಕೇಂದ್ರ ನಗರಾಭಿವೃದ್ಧಿ ಇಲಾಖೆ ನಡೆಸಿದ ಸ್ವಚ್ಛ ಸರ್ವೇಕ್ಷಣಾ ಅಭಿಯಾನ–2019ರಲ್ಲಿ ಈ ಫಲಿತಾಂಶ ದೊರೆತಿದೆ’ ಎಂದು ಔದ್ರಾಮ್‌ ಮಾಹಿತಿ ನೀಡಿದರು.

‘ವಿಜಯಪುರ ಬಯಲು ಶೌಚ ಮುಕ್ತ ನಗರವಾಗಿ ಈಗಾಗಲೇ ಘೋಷಿಸಿಕೊಂಡಿದೆ. 2000 ನಿವಾಸಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಟ್ಟರೆ, ಒಡಿಎಫ್‌ ಪ್ಲಸ್‌, ಪ್ಲಸ್‌ ಆಗಲಿದೆ. ರ‍್ಯಾಂಕಿಂಗ್‌ನಲ್ಲಿ ಇದೂ ಪರಿಗಣನೆಯಾಗಲಿದೆ’ ಎಂದು ತಿಳಿಸಿದರು.

**

ವಿಜಯಪುರ ನಗರ ಸ್ವಚ್ಛ ನಗರವಾಗಿ ಹೊರಹೊಮ್ಮುತ್ತಿರುವುದಕ್ಕೆ ಖುಷಿಯಾಗುತ್ತಿದೆ. ದೇಶ–ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಗರ ಸದಾ ಸ್ವಚ್ಛವಾಗಿರಲಿ.
–ಲಕ್ಷ್ಮೀ ಎನ್.ರಾಜು, ಪ್ರವಾಸಿ

**

ಮೈಸೂರು, ಮಂಗಳೂರು ಮಹಾನಗರ ಪಾಲಿಕೆ ಬಳಿಕ ವಿಜಯಪುರ ಮಹಾನಗರ ಪಾಲಿಕೆ ಸ್ಥಾನ ಪಡೆದಿದೆ. ಮುಂದಿನ ಬಾರಿ 150ನೇ ರ‍್ಯಾಂಕಿಂಗ್‌ನೊಳಗಿರಲಿದೆ
–ಡಾ.ಔದ್ರಾಮ್, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !