ವಿಷ್ಣು ಸಹಸ್ರನಾಮ ಭವನ ಲೋಕಾರ್ಪಣೆ ಇಂದು

7

ವಿಷ್ಣು ಸಹಸ್ರನಾಮ ಭವನ ಲೋಕಾರ್ಪಣೆ ಇಂದು

Published:
Updated:

ವಿಜಯಪುರ: ‘ವಿಶ್ವ ಶಾಂತಿಯ ಮಹೋನ್ನತ ಉದ್ದೇಶದಿಂದ ನಗರದ ನಿಂಬರಗಿ ಬಡಾವಣೆಯಲ್ಲಿ ನಿರ್ಮಿಸಲಾದ ಭವ್ಯವಾದ ವಿಷ್ಣು ಸಹಸ್ರನಾಮ ಭವನ ಲೋಕಾರ್ಪಣೆ ನಿಮಿತ್ತ ಫೆ.6, 7ರಂದು ವಿವಿಧ ಕಾರ್ಯಕ್ರಮ ಜರುಗಲಿವೆ ಎಂದು ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಡಾ.ಉಪೇಂದ್ರ ನರಸಾಪುರ ಹೇಳಿದರು.

‘ವ್ಯಾಸ ಮಧ್ವ ಸಂಸ್ಕೃತ ವಿದ್ಯಾಲಯದ ಅಡಿಯಲ್ಲಿ 6 ಸಾವಿರ ಚದರ ಅಡಿ ಜಾಗದಲ್ಲಿ, ಎರಡಂತಸ್ತಿನ ಭವ್ಯವಾದ ಭವನ ನಿರ್ಮಾಣಗೊಂಡಿದೆ. ಕೆಳಮಹಡಿ ಭೋಜನ ಇತ್ಯಾದಿ ಕಾರ್ಯಕ್ರಮಗಳಿಗೆ ಹಾಗೂ ಮೇಲ್ ಮಹಡಿಯಲ್ಲಿ ಉಪನ್ಯಾಸ, ಪ್ರವಚನ ಪಾಠಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಇಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭವನದ ರೂವಾರಿ ಪಂಡಿತ ವೇದನಿಧಿ ಆಚಾರ್ಯ ಮಾತನಾಡಿ, ಗರ್ಭಗುಡಿಯ ಮುಂದಿರುವ ವಿಷ್ಣು ಸಹಸ್ರನಾಮ ಭವನದಲ್ಲಿ ಎರಡು ಬದಿಗೆ 18 ಗ್ರ್ಯಾನೈಟ್ ಶಿಲೆಗಳಲ್ಲಿ 157 ವಿಷ್ಣು ಸಹಸ್ರ ನಾಮದ ಶ್ಲೋಕಗಳನ್ನು ಕೆತ್ತಿ ಕೂಡಿಸಲಾಗಿದೆ. ಅಲ್ಲದೇ, ಭವನದ ಪಕ್ಕದಲ್ಲಿಯೇ ಒಂದು ತೆರೆದ ಬಾವಿಯನ್ನು ತೋಡಲಾಗಿದ್ದು ಅದಕ್ಕೆ ಸ್ವಾಮಿ ತೀರ್ಥ ಎಂದು ಹೆಸರಿಡಲಾಗಿದೆ ಎಂದರು.

‘ಮುಂಬರುವ ದಿನಗಳಲ್ಲಿ ಗರ್ಭಗುಡಿ ಬಲಬದಿಯ ಕೋಣೆಯಲ್ಲಿ ಸಂಸ್ಕೃತ ಹಾಗೂ ಕನ್ನಡ ಮೊದಲಾದ ಭಾಷೆಗಳ ಪುಸ್ತಕಗಳನ್ನು ಅಧ್ಯಯನ ಮಾಡಲು, ಗ್ರಂಥಾಲಯವನ್ನು ಅತ್ಯಾಧುನಿಕ ರೀತಿಯಲ್ಲಿ ಆರಂಭಿಸಲು ಯೋಚಿಸಲಾಗಿದೆ. ಅಲ್ಲಿ ಧರ್ಮಾಸಕ್ತರು ಹಾಗೂ ಯುವಜನತೆ ಸಂಶೋಧನೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘25 ಅಡಿ ಎತ್ತರದ ಗರ್ಭಗುಡಿಯನ್ನು ಅರಭಾವಿಯ ಕೆಂಪು ಕಲ್ಲಿನಿಂದ ಪುರಾತನ ಶೈಲಿಯಲ್ಲಿ ಕಾರ್ಕಳದ ವಾಸ್ತುಶಿಲ್ಪಿಗಳು ನಿರ್ಮಿಸಿದ್ದಾರೆ. ನೇಪಾಳ ದೇಶದ ಗಂಡಕಿ ನದಿಯಲ್ಲಿ ದೊರೆಯುವ ಅಪರೂಪದ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ 6 ಕ್ವಿಂಟಲ್‌ ಭಾರದ ಹಾಗೂ 6 ಅಡಿ ಎತ್ತರದ ವೆಂಕಟೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !