ಮತ ಬೇಟೆಗಾಗಿ ಪಕ್ಷೇತರರಾಗಿ ಕಣಕ್ಕೆ..!

7
ಮುದ್ದೇಬಿಹಾಳ ಪುರಸಭೆ ಚುನಾವಣೆ; 108 ಸ್ಪರ್ಧಾಕಾಂಕ್ಷಿಗಳಿಂದ ನಾಮಪತ್ರ ಸಲ್ಲಿಕೆ

ಮತ ಬೇಟೆಗಾಗಿ ಪಕ್ಷೇತರರಾಗಿ ಕಣಕ್ಕೆ..!

Published:
Updated:
Deccan Herald

ಮುದ್ದೇಬಿಹಾಳ:  ಮುದ್ದೇಬಿಹಾಳ ಪುರಸಭೆಯ 23 ವಾರ್ಡ್‌ಗಳಿಗೆ ಇದೇ 31ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧೆ ಬಯಸಿ, 108 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಪಕ್ಷೇತರರ ಸ್ಪರ್ಧೆಯೇ ಹೆಚ್ಚಿದೆ.

ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿ 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದು ಮಾಜಿ ಸಚಿವ ಸಿ.ಎಸ್‌.ನಾಡಗೌಡರ ತಲೆ ಬಿಸಿ ಮಾಡಿದ್ದರೆ; ಬಿಜೆಪಿ 22 ವಾರ್ಡ್‌ಗಳಲ್ಲಷ್ಟೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದ್ದ ಜೆಡಿಎಸ್‌ ಎಲ್ಲಾ ವಾರ್ಡ್‌ನಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಡೆಸಿದ ಕಸರತ್ತು ಯಶಸ್ವಿಯಾಗದಿದ್ದರಿಂದ, ಕೇವಲ 16 ವಾರ್ಡ್‌ಗಳಿಗಷ್ಟೇ ಪಕ್ಷದ ಬಿಫಾರ್ಮ್‌ ನೀಡಿದೆ. ಉಳಿದೆಡೆ ಪಕ್ಷೇತರರಿಗೆ ಬಾಹ್ಯ ಬೆಂಬಲ ಘೋಷಿಸಿದೆ.

43 ಪಕ್ಷೇತರರು ಬಹುತೇಕ ವಾರ್ಡ್‌ಗಳಿಂದ ಕಣಕ್ಕಿಳಿದಿದ್ದು, 23 ವಾರ್ಡ್‌ಗಳಲ್ಲೂ ಪಕ್ಷಗಳ ಪೈಪೋಟಿಯ ನಡುವೆಯೇ ಪಕ್ಷೇತರರ ಪ್ರಾಬಲ್ಯವೂ ಹೆಚ್ಚಿದೆ. ಈ ಹಿಂದಿನ ಚುನಾವಣೆಗಳಂತೆ ಮುದ್ದೇಬಿಹಾಳ ಪಟ್ಟಣದ ಮತದಾರರು ಪಕ್ಷೇತರರಿಗೆ ಮಣೆ ಹಾಕುತ್ತಾರೋ ? ಇಲ್ಲವೇ ಈ ಬಾರಿ ಪಕ್ಷ ಪಾರಮ್ಯಕ್ಕೆ ಒಲವು ತೋರಲಿದ್ದಾರೋ ಎಂಬುದು ಕುತೂಹಲ ಕೆರಳಿಸಿದೆ.

‘ಮುದ್ದೇಬಿಹಾಳ ಪಟ್ಟಣದ 23 ವಾರ್ಡ್‌ಗಳಲ್ಲಿ ಎರಡ್ಮೂರು ವಾರ್ಡ್‌ ಹೊರತುಪಡಿಸಿದರೆ ಉಳಿದ ಎಲ್ಲಾ ವಾರ್ಡ್‌ಗಳಲ್ಲೂ ಮುಸ್ಲಿಂ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಫಲಿತಾಂಶ ಬದಲಿಸುವ ಶಕ್ತಿ ಹೊಂದಿದ್ದಾರೆ.

ಇದನ್ನು ಅರಿತಿರುವ ಸ್ಥಳೀಯ ಮುಖಂಡರು ಬಿಜೆಪಿಯಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಾರೆ. ಆದರೂ ಈ ಬಾರಿ 22 ವಾರ್ಡ್‌ಗಳಿಂದ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಕೆಲವೆಡೆ ಹೊಂದಾಣಿಕೆ ಮಾಡಿಕೊಂಡಿದ್ದು, ಪಕ್ಷೇತರರನ್ನು ಬೆಂಬಲಿಸಿದ್ದೇವೆ.

ಕಾಂಗ್ರೆಸ್‌, ಜೆಡಿಎಸ್‌ನಲ್ಲಿನ ವಾತಾವರಣವೂ ಇದಕ್ಕಿಂತ ಭಿನ್ನವಿಲ್ಲ. ಪಕ್ಷದ ಚಿಹ್ನೆಯಡಿ ನಿಂತರೆ ಯುವ ಸಮೂಹ ಸೇರಿದಂತೆ ಅಭಿವೃದ್ಧಿ ಪರ ಒಲವು ಹೊಂದಿರುವವರು ತಮಗೆ ಮತ ಹಾಕಲ್ಲ ಎಂದು ಎರಡೂ ಪಕ್ಷಗಳ ಬೆಂಬಲದಿಂದ ಕೆಲ ವಾರ್ಡ್‌ಗಳಲ್ಲಿ ಕಣಕ್ಕಿಳಿದಿದ್ದಾರೆ.

ಇದು ಮುದ್ದೇಬಿಹಾಳ ಪುರಸಭೆಯ ವಾಸ್ತವ ಚಿತ್ರಣ. ಮತ ಬೇಟೆಗಾಗಿ ಪಕ್ಷೇತರರಾಗಿ ಪ್ರಮುಖರೇ ಕಣಕ್ಕಿಳಿಯಲಿದ್ದಾರೆ. ಚುನಾವಣೆಯಲ್ಲಿ ವಿಜಯಿಯೂ ಆಗಲಿದ್ದಾರೆ. ನಂತರ ರಾಜಕೀಯ ಚಿತ್ರಣ ಗಮನಿಸಿ ತಮಗೆ ಅನುಕೂಲಕರ ವಾತಾವರಣ ಕಂಡು ಬಂದ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ’ ಎಂದು ಮೂರು ಪಕ್ಷಗಳ ಮುಖಂಡರು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುದ್ದೇಬಿಹಾಳ ಪುರಸಭೆಯಲ್ಲಿ ಒಂದೇ ಪಕ್ಷದ ಆಡಳಿತ ಚುಕ್ಕಾಣಿ ಹಿಡಿದ ನಿದರ್ಶನ ಈಚೆಗಿನ ವರ್ಷಗಳಲ್ಲಿ ಅಪರೂಪ. ಈ ಅವಕಾಶವನ್ನೇ ಬಳಸಿಕೊಳ್ಳುವ ಪಕ್ಷಾಂತರಿಗಳು ಅಧ್ಯಕ್ಷ–ಉಪಾಧ್ಯಕ್ಷ ಆಯ್ಕೆ ಸಂದರ್ಭ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸಲು ಹಿಂದೇಟು ಹಾಕುತ್ತಾರೆ’ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದರು.

‘ಈ ಹಿಂದಿನ ಚುನಾವಣೆಗಳಲ್ಲೂ ಪಕ್ಷದಿಂದ ಸ್ಪರ್ಧಿಸಲು ಹಿಂದೇಟು ಹಾಕಿದವರೇ ಹಲವರು. ಪಕ್ಷದ ಹಂಗಿಗಿಂತ ಸ್ವತಂತ್ರವಾಗಿ ಸ್ಪರ್ಧಿಸಿದರೇ ಎಲ್ಲಾ ಸಮುದಾಯದ ಬೆಂಬಲ, ಬಲದ ಜತೆಗೆ ಜಾತಿ, ನೆಂಟಸ್ತನ, ಮನೆತನದ ಪ್ರತಿಷ್ಠೆ ನೆರವಿಗೆ ಬರಲಿವೆ ಎಂಬ ಲೆಕ್ಕಾಚಾರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವವರೇ ಹೆಚ್ಚಿದ್ದಾರೆ. ಈ ಬಾರಿಯೂ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಸಂಖ್ಯೆ ಪರಿಶೀಲಿಸಿದರೆ 40% ಅಭ್ಯರ್ಥಿಗಳು ಪಕ್ಷೇತರರು ಎಂಬುದು ಖಚಿತಪಡಲಿದೆ’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್‌.ಪಾಟೀಲ ಕೂಚಬಾಳ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !