ಮತದಾನ ಜಾಗೃತಿ: ರೈತರಿಂದ ಬಹೃತ್ ಮೆರವಣಿಗೆ

ಶನಿವಾರ, ಏಪ್ರಿಲ್ 20, 2019
32 °C

ಮತದಾನ ಜಾಗೃತಿ: ರೈತರಿಂದ ಬಹೃತ್ ಮೆರವಣಿಗೆ

Published:
Updated:
Prajavani

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನದ ಅರಿವು ಮೂಡಿಸುವ ಉದ್ದೇಶದಿಂದ ಕೃಷಿ ಇಲಾಖೆ, ಸ್ವೀಪ್ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಪ್ರತಿನಿಧಿಗಳು, ಕೃಷಿ ಇಲಾಖೆ ಅಧಿಕಾರಿ ಸಿಬ್ಬಂದಿ ಮಂಗಳವಾರ ಬೃಹತ್‌ ಜಾಥಾ ನಡೆಸಿ ಗಮನ ಸೆಳೆದರು. ನಗರದ ಪ್ರವಾಸಿ ಮಂದಿರದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲೇಶ್ ಅವರು ಚಾಲನೆ ನೀಡಿದರು. 

ಭಿತ್ತಿಫಲಕ ಹಿಡಿದು ಅರಿವು: ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ನಿಮ್ಮಿಂದ, ನಮ್ಮ ನಡೆ ಸದೃಢ ಪ್ರಜಾಪ್ರಭುತ್ವವನ್ನು ಕಟ್ಟುವ ಕಡೆಗೆ, ನಿಮ್ಮ ಮತ ನಿಮ್ಮ ಭವಿಷ್ಯ ಎಂಬ ಭಿತ್ತಿಫಲಕಗಳನ್ನು ಹಿಡಿದು ಭುವನೇಶ್ವರಿ ವೃತ್ತಕ್ಕೆ ತೆರಳಿದರು. ಅಲ್ಲಿ ಮಾನವ ಸರಪಳಿ ರಚಿಸಿ ಮತದಾನದ ಹಿರಿಮೆಯನ್ನು ಎತ್ತಿ ಹಿಡಿಯುವಂತೆ ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆದರು. ಬಳಿಕ ಬಿ. ರಾಜಚಯ್ಯ ಜೋಡಿ ರಸ್ತೆಯಲ್ಲಿ ಸಾಗಿ ಬಂದರು.
ಜಿಲ್ಲಾಡಳಿತ ಭವನದಲ್ಲಿ ಸಮಾವೇಶಗೊಂಡು ಮತದಾನ ಮಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಪ್ರತಿಜ್ಞಾವಿಧಿ: ಇದೇ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್ ಲತಾಕುಮಾರಿ ಅವರು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ‘ರೈತರು ದೇಶದ ಬೆನ್ನೆಲುಬು. ದೇಶದ ಸಮಸ್ತ ಜನತೆಗೆ ಅನ್ನದಾತರಾಗಿದ್ದಾರೆ. ರೈತರ ಶ್ರಮ ಮತ್ತು ಕಾಯಕ ಶ್ಲಾಘನೀಯ’ ಎಂದರು.

ರೈತರು ಇಂದು ಜನರಲ್ಲಿ ವಿಶೇಷವಾದ ಮತದಾನ ಜಾಗೃತಿ ಮೂಡಿಸಲು ಜಾಥಾ ಏರ್ಪಡಿಸಿರುವುದು ಸಂತಸದ ಸಂಗತಿ. ಸದೃಢ ದೇಶ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್ ಮಾತನಾಡಿ, ‘ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಅನೇಕ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳ ಮಾಡಬೇಕು. ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು. ಮತದಾನ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಮತ್ತು ಗುರಿಯಾಗಿದೆ’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಬ್ಬವಿದ್ದಂತೆ. ಮತದಾನ ನಮ್ಮೆಲ್ಲರ ಹಕ್ಕು. ಮತದಾನದಿಂದ ಯಾರೂ ವಂಚಿತರಾಗಬಾರದು. ಪ್ರತಿಯೊಬ್ಬ ಮತದಾರರು ಮತದಾನ ಮಾಡಬೇಕು. ಯುವಕರು ದೇಶದ ಶಕ್ತಿ. ಇತರರಿಗೂ ಮತದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು. ರೈತ ಮುಖಂಡರಾದ ಸಿದ್ದರಾಜು, ಶಾಂತಮಲ್ಲಪ್ಪ, ಕೃಷಿ ಇಲಾಖೆ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !