ಕುಂಚದಲ್ಲಿ ಮೂಡಿದ ಮತದಾನ ಜಾಗೃತಿ ಸಂದೇಶ

ಮಂಗಳವಾರ, ಏಪ್ರಿಲ್ 23, 2019
25 °C
ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳ ಪ್ರದರ್ಶನ, ಮತದಾನದ ದಿನದವರೆಗೂ ಮುಂದುವರಿಕೆ

ಕುಂಚದಲ್ಲಿ ಮೂಡಿದ ಮತದಾನ ಜಾಗೃತಿ ಸಂದೇಶ

Published:
Updated:
Prajavani

ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನವನ್ನು ಪ್ರವೇಶಿಸಿದ ತಕ್ಷಣ ಈಗ ಜನರನ್ನು ಚುನಾವಣಾ ಪ್ರಕ್ರಿಯೆ, ಮತದಾನಕ್ಕೆ ಸಂಬಂಧಿಸಿದ ಚಿತ್ರಗಳು ಸ್ವಾಗತಿಸುತ್ತವೆ. ಭವನದ ನೆಲಮಹಡಿಯ ಎಡಭಾಗದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶಗಳನ್ನು ಹೊತ್ತ ಹತ್ತಾರು ಚಿತ್ರಪಟಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ವೀಪ್‌ ಸಮಿತಿಯ ಅಡಿಯಲ್ಲಿ ಜಿಲ್ಲಾ ಆಡಳಿತ ಕೇಂದ್ರದಲ್ಲಿ ‌ಚಿತ್ರಕಲಾ ಗ್ಯಾಲರಿಯೇ ಮೈತಳೆದಿದೆ. 

ಜನರಲ್ಲಿ ಮತದಾನ ಜಾಗೃತಿ ಮೂಡಿಸುವುದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನ ಮತದಾನದ ದಿನದವರೆಗೂ ಮುಂದುವರಿಯಲಿದೆ.  

ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಬಿಡಿಸಿರುವ ಮತದಾನ ಜಾಗೃತಿ ಸಂದೇಶ ಹೊತ್ತಿರುವ ನೂರಾರು ಚಿತ್ರಗಳನ್ನು ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿಯೊಂದು ಚಿತ್ರಪಟವೂ ಒಂದೊಂದು ಸಂದೇಶ ನೀಡುತ್ತಿವೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಅವರು ಗ್ಯಾಲರಿಯನ್ನು ಉದ್ಘಾಟಿಸಿದರು.

ಮಿನುಗಿದ ತ್ರಿವರ್ಣ: ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲಿ ‘ಪ್ರಜಾಪ್ರಭುತ್ವ ಒಂದು ಹಬ್ಬ ಸಂಭ್ರಮಿಸಿ’ ಎಂಬ ಸಂದೇಶದೊಂದಿಗೆ ಸ್ವಾಗತ ಕಮಾನು ಇರಿಸಲಾಗಿದೆ. ಒಳಗೆ ರಂಗೋಲಿ ಇಟ್ಟು ಸಿಂಗರಿಸಲಾಗಿತ್ತು. ಕೇಸರಿ, ಬಿಳಿ, ಹಸಿರು ಬಣ್ಣದ ಕಾಗದಗಳಿಂದ ವೃತ್ತಾಕಾರ ನಿರ್ಮಿಸಿ ನಡುವೆ ಶಾಯಿ ಹಾಕಲಾದ ಬಲಗೈ ಪ್ರತಿಕೃತಿಯನ್ನು ಇರಿಸಲಾಗಿದೆ. 

140ಕ್ಕೂ ಹೆಚ್ಚು ಚಿತ್ರಪಟ: ಗ್ಯಾಲರಿಯಲ್ಲಿ 140ಕ್ಕೂ ಹೆಚ್ಚು ಚಿತ್ರಪಟಗಳನ್ನು ಇರಿಸಲಾಗಿತ್ತು. ‘ಮತ ಪ್ರಚಾರ’ ಮತದಾನ ಆಡಲು ಹೋಗುತ್ತಿರುವುದು, ಮತದಾನ ಮಾಡುವ ಬೂತ್‌, ಮತ ಹಾಕುತ್ತಿರುವುದು, ಮತ ಎಣಿಕೆ ಪ್ರಕ್ರಿಯೆ, ಸ್ಥಳದಲ್ಲಿ ಗದ್ದಲ ಮಾಡದಿರುವುದು, ಜನಸಾಮಾನ್ಯರ ಶಕ್ತಿ ಮತ ಚಲಾವಣೆ, ಮತ ಚಲಾವಣೆ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಹಣ ಹಾಗೂ ಹೆಂಡ ಹಂಚುವವವರಿಗೆ ಮತ ನೀಡಿದರೆ ಮುಂದೆ ತೊಂದರೆ ನಮಗೆ, ಎಲ್ಲ ಕೆಲಸ ಬದಿಗಿಡಿ.. ತಪ್ಪದೇ ಮತದಾನ ಮಾಡಿ, ಪ್ರತಿ ಶತ ಮತದಾನ ಉತ್ತಮ ಸಮಾಜ ನಿರ್ಮಾಣ, ವ್ಯರ್ಥವಾಗದಿರಲಿ ಪ್ರತಿಯೊಂದು ಮತ; ಇದುವೇ ಪ್ರಜಾಪ್ರಭುತ್ವದ ಹಿತ, ಪ್ರಾಣಿಗಳ ಮೂಲಕ ರೈತರಿಗೆ ಸಂದೇಶ ನೀಡುವುದು ಸೇರಿದಂತೆ ವಿವಿಧ ಸಂದೇಶಗಳಿರುವ ಚಿತ್ರಗಳು ಪ್ರದರ್ಶನದಲ್ಲಿವೆ.

ಅಂಗವಿಕಲರು, ರೈತರು, ಮಹಿಳೆಯರು, ಗ್ರಾಮೀಣ ವಾತಾವರಣ, ಮಕ್ಕಳು, ಯುವಕರು, ವೃದ್ಧರು, ನವ ವಿವಾಹಿತ ಜೋಡಿ, ಪ್ರೇಮಿಗಳನ್ನು ಕುಂಚದಲ್ಲಿ ಅರಳಿಸಿ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಿದ್ದಾರೆ. 

ರಾಜ್ಯದಲ್ಲಿ ಹೊಸತು: ಗ್ಯಾಲರಿ ಉದ್ಘಾಟಿಸಿ ಮಾತನಾಡಿದ ಕೆ.ಎಸ್.ಲತಾಕುಮಾರಿ ಅವರು, ‘ಜಿಲ್ಲೆಯಲ್ಲಿ ನುರಿತ ಚಿತ್ರಕಲಾ ಶಿಕ್ಷಕರು ಚಿತ್ರಪಟಗಳಿಂದ ಜನರಲ್ಲಿ ಅರಿವು ಮೂಡಿಸುತ್ತಿರುವುದು ರಾಜ್ಯದಲ್ಲೇ ಹೊಸತು. ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಿಯಾತ್ಮಕವಾಗಿ ಯೋಚಿಸಿದೆ. ವಸ್ತುಪ್ರದರ್ಶನದಿಂದ ಜನರಿಗೆ ಅರಿವು ಮೂಡಬೇಕಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಪ್ರದರ್ಶನ ನೋಡಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹನುಮನರಸಯ್ಯ, ಯೋಜನಾಧಿಕಾರಿ ಪದ್ಮಶೇಖರ ಪಾಂಡೆ, ಬಸವರಾಜ ಓಲೇಕಾರ್, ರಾಜೇಂದ್ರಕುಮಾರ್‌, ತಿರುಮಲೇಶ್, ಶಂಕರ್‌, ರಮೇಶ್ ಇದ್ದರು.

ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳ ಚಿತ್ರಪಟಗಳು

ಗ್ಯಾಲರಿಯಲ್ಲಿ ಇಡಲಾಗಿರುವ ಎಲ್ಲ ಚಿತ್ರಪಟಗಳು ಜಿಲ್ಲೆಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕುಂಚದಿಂದ ಮೂಡಿಬಂದಿವೆ.

‘ಮತದಾನದ ದಿನ ಗ್ರಾಮೀಣ ಜನರು ತಮ್ಮದೇ ಕಾಯಕದಲ್ಲಿ ನಿರತರಾಗುತ್ತಾರೆ. ರೈತರು ಕೃಷಿಯಲ್ಲಿ, ಮಹಿಳೆಯರು ತಮ್ಮ ಅಡುಗೆ ಕೆಲಸದಲ್ಲಿ ಇನ್ನಿತರ ಕೆಲಸಗಳಲ್ಲಿ ನಿರತರಾಗುತ್ತಾರೆ. ಜೊತೆಗೆ ರಾಜಕಾರಣಿಗಳು ಮುಗ್ಧರಿಗೆ ಆಮಿಷ ಒಡ್ಡಿ ಓಲೈಕೆಗೆ ಮುಂದಾಗುತ್ತಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಚಿತ್ರಗಳನ್ನು ಬರೆಯಲಾಗಿದೆ. ಜಾನುವಾರುಗಳ ಮೂಲಕ ರೈತರಿಗೆ, ಮಕ್ಕಳ ಮೂಲಕ ಪೋಷಕರಿಗೆ ‘ತಪ್ಪದೇ ಮತ ಹಾಕಬೇಕು’ ಎಂಬ ಸಂದೇಶವನ್ನು ಹೇಳಿಸಲಾಗಿದೆ. ಚಿತ್ರಗಳು ಜನರಿಗೆ ಅರಿವು ಮೂಡಿಸುತ್ತದೆ’ ಎಂದು ಚಿತ್ರಕಲಾ ಶಿಕ್ಷಕ ತಾರಕೇಶ್‌ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !