ಭಾನುವಾರ, ನವೆಂಬರ್ 17, 2019
23 °C

15 ದಿನದಲ್ಲಿ ವಕ್ಫ್ ಮಂಡಳಿ ರಚಿಸಿ: ಕೋರ್ಟ್‌ ನಿರ್ದೇಶನ

Published:
Updated:

ಬೆಂಗಳೂರು: ‘ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವಿವಿಧ ಕೆಟಗರಿ ಅಡಿಯಲ್ಲಿ ಚುನಾಯಿತರಾದ ಸದಸ್ಯರ ಹೆಸರುಗಳನ್ನು 15 ದಿನಗಳಲ್ಲಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವ ಮೂಲಕ ಮಂಡಳಿ ರಚಿಸಬೇಕು’ ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಶಾಸಕ ತನ್ವೀರ್ ಸೇಠ್ ಸೇರಿ ಶಾಸನಸಭೆ, ಬಾರ್ ಕೌನ್ಸಿಲ್ ಹಾಗೂ ‘ಮುತವಲ್ಲಿ’ ಕೆಟಗರಿಯಲ್ಲಿ ಚುನಾಯಿತರಾದ 6 ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ಪೀಠ, ಅರ್ಜಿ ಇತ್ಯರ್ಥಪಡಿಸಿದೆ.

‘ರಾಜ್ಯ ವಕ್ಫ್ ಮಂಡಳಿಗೆ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ 7 ದಿನಗಳಲ್ಲಿ ಚುನಾಯಿತ ಸದಸ್ಯರ ಹೆಸರನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆದರೆ, ಚುನಾವಣೆ ನಡೆದು 6 ತಿಂಗಳಾದರೂ, ಸರ್ಕಾರ ಹಾಗೂ ಪ್ರಾದೇಶಿಕ ಆಯುಕ್ತರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ’ ಎಂದು ಅರ್ಜಿದಾರರು ಆರೋಪಿಸಿದ್ದರು.

2019ರ ಮಾ.7ರಂದು ನಡೆದ ಚುನಾವಣೆಯಲ್ಲಿ ಶಾಸನಸಭೆ ಕೆಟಗರಿಯಲ್ಲಿ ಸೈಯದ್ ನಾಸೀರ್ ಹುಸೇನ್, ಶಾಸಕರಾದ ತನ್ವೀರ್ ಸೇಠ್, ಕನೀಜ್ ಫಾತಿಮಾ, ‘ಮುತವಲ್ಲಿ’ (ನೋಂದಾಯಿತ ವಕ್ಫ್ ಸಂಸ್ಥೆಗಳ ಮುಖ್ಯಸ್ಥರು) ಕೆಟಗರಿಯಲ್ಲಿ ಮಹಮ್ಮದ್ ಯೂಸೂಫ್, ಕೆ. ಅನ್ವರ್ ಬಾಷಾ ಹಾಗೂ ರಾಜ್ಯ ವಕೀಲರ ಪರಿಷತ್ ಕೆಟಗರಿಯಲ್ಲಿ ಆಸೀಫ್ ಅಲಿ ಚುನಾಯಿತರಾಗಿದ್ದರು.

ಪ್ರತಿಕ್ರಿಯಿಸಿ (+)