ಕೊಂಚ ಮಳೆಗೂ ಜಲಾವೃತ; ತಪ್ಪದ ತ್ರಾಸು..!

ಬುಧವಾರ, ಜೂನ್ 19, 2019
31 °C
ಐತಿಹಾಸಿಕ ಅಡವಿ ಶಂಕರಲಿಂಗ ದೇಗುಲ; ಭೂತನಾಳ ಕೆರೆ ಹೊಂದಿರುವ ವಾರ್ಡಿದು

ಕೊಂಚ ಮಳೆಗೂ ಜಲಾವೃತ; ತಪ್ಪದ ತ್ರಾಸು..!

Published:
Updated:
Prajavani

ವಿಜಯಪುರ: ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಗೃಹ ಸಚಿವ ಎಂ.ಬಿ.ಪಾಟೀಲ, ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸೇರಿದಂತೆ ಹಲವು ಮಾಜಿ ಶಾಸಕರ ನಿವಾಸಗಳನ್ನೊಳಗೊಂಡಿರುವ ವಾರ್ಡಿದು.

ಐತಿಹಾಸಿಕ ಅಡವಿ ಶಂಕರಲಿಂಗ ದೇಗುಲ, ವಿಜಯಪುರ ನಗರದ ಕೆಲ ಭಾಗಕ್ಕೆ ನೀರೊದಗಿಸುವ ಶತಮಾನದ ನಂಟಿರುವ ಭೂತನಾಳ ಕೆರೆಯೂ ಇದೇ ವಾರ್ಡ್‌ ವ್ಯಾಪ್ತಿಗೆ ಬರಲಿದೆ.

ದರ್ಗಾ ಜೈಲು ರಸ್ತೆಯ ಕ್ರಾಸ್‌ನಿಂದ ಪೂರ್ವ ಭಾಗದ ಒಳಗಡೆ ಬರುವ ಸೊಲ್ಲಾಪುರ ನಾಕಾದಿಂದ ಎಂ.ಬಿ.ಪಾಟೀಲ ನಿವಾಸ, ಭೂತನಾಳ ತಾಂಡಾವರೆಗೂ ವ್ಯಾಪ್ತಿ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆಯ ನಾಲ್ಕನೇ ವಾರ್ಡಿದು. 12,500 ಮತದಾರರಿದ್ದಾರೆ.

ಪ್ರತಿಷ್ಠಿತರು ವಾಸವಿರುವ ವಾರ್ಡ್‌ ಆಗಿದ್ದರೂ; ಮೂಲ ಸೌಕರ್ಯಗಳ ಸಮಸ್ಯೆ ಕಾಡುತ್ತಿದೆ. ವಾರ್ಡ್‌ನೊಳಗೆ ಒಂದು ಸುತ್ತು ಸಂಚರಿಸಿದರೆ, ಸ್ಥಳೀಯ ನಿವಾಸಿಗಳಿಂದ ಸಮಸ್ಯೆಗಳ ಮಹಾಪೂರವೇ ಹರಿದು ಬಂತು.

ಕಾಡುತ್ತಿರುವ 24X7

‘ವಾರ್ಡ್‌ ವ್ಯಾಪ್ತಿಯ ಮುಖ್ಯ ರಸ್ತೆ ಸಮಸ್ಯೆಯಾಗಿಲ್ಲ. ಆದರೆ ಒಳ ಸಂಪರ್ಕ ರಸ್ತೆಗಳ ಸ್ಥಿತಿ ಆ ಭಗವಂತನಿಗೆ ಮೆಚ್ಚುಗೆಯಾಗಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅನಿಲ ಪಾಟೀಲ.

‘24X7 ಕುಡಿಯುವ ನೀರು ಸರಬರಾಜು ಯೋಜನೆ ನಮಗೆ ಇಂದಿಗೂ ಗಗನ ಕುಸುಮವಾಗಿದೆ. ಯೋಜನೆಯಡಿ ಪೈಪ್‌ಲೈನ್‌ ಅಳವಡಿಸಲು ತೆಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದಿರುವುದರಿಂದ ಸ್ಥಳೀಯರು ಸಮಸ್ಯೆಗಳ ನಡುವೆಯೇ ಸಂಚರಿಸಬೇಕಿದೆ.

ವಾರ್ಡ್‌ ವ್ಯಾಪ್ತಿಯಲ್ಲಿ ಹಸರೀಕರಣ ನಡೆಯಬೇಕು. ಉದ್ಯಾನಗಳ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದು, ಚುರುಕುಗೊಳ್ಳಬೇಕಿದೆ. ನಗರ ಸಾರಿಗೆ ಬಸ್‌ಗಳು ನಿಗದಿತ ಸಮಯಕ್ಕೆ ತಕ್ಕಂತೆ ತಮ್ಮ ಸಂಚಾರ ನಡೆಸಿದರೆ, ಈ ಭಾಗದ ಜನರಿಗೂ ಸಾಕಷ್ಟು ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ಸಾಧಾರಣ ವರ್ಷಧಾರೆಗೂ ವಾರ್ಡ್‌ ವ್ಯಾಪ್ತಿಯ ಬಂಜಾರ ನಗರ, ಆಲಕುಂಟೆ ನಗರ, ಕೆ.ಸಿ.ನಗರ, ಜೈ ಹನುಮಾನ ನಗರದ ವ್ಯಾಪ್ತಿಯಲ್ಲಿ ನೀರು ನಿಲ್ಲುತ್ತದೆ. ಜಲಾವೃತಗೊಂಡ ನೀರು ತೆರವುಗೊಳ್ಳಲು ಹಲವು ದಿನ ಬೇಕಾಗಲಿದೆ. ಅಲ್ಲಿಯ ತನಕವೂ ಈ ಭಾಗದ ಜನರು ತ್ರಾಸು ಪಡಬೇಕು’ ಎನ್ನುತ್ತಾರೆ ಖಾಸಗಿ ಸಂಸ್ಥೆಯ ಉದ್ಯೋಗಿ ಜ್ಯೋತಿ.

‘ಬೀದಿ ದೀಪಗಳಿಲ್ಲ. ಪ್ರಮುಖ ಸ್ಥಳಗಳಲ್ಲಿ ಸೋಡಿಯಂ ಲೈಟ್‌ ಅಳವಡಿಸಿಲ್ಲ. ವಾರ್ಡ್‌ನ ಯಾವ ಭಾಗದಲ್ಲೂ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಇನ್ನೂ ಹಲ ಮೂಲ ಸೌಕರ್ಯಗಳು ಬೇಕಿವೆ’ ಎಂದು ಅವರು ಹೇಳಿದರು.

ಹಲವು ಸೌಕರ್ಯಗಳನ್ನು ಕಲ್ಪಿಸಿರುವೆ; ಪ್ರೇಮಸಿಂಗ್

‘ನನ್ನದು ದೊಡ್ಡ ವಾರ್ಡ್‌. 80% ಗುಂಟಾ ಪ್ಲಾಟ್, ಅಭಿವೃದ್ಧಿ ಹೊಂದದ ಬಡಾವಣೆಗಳು, ತಾಂಡಾಗಳಿವೆ. ಇಲ್ಲಿಗೆ 1964 ಬಿ ಕಾಯ್ದೆ ಪ್ರಕಾರ ಮಹಾನಗರ ಪಾಲಿಕೆ ಆಡಳಿತದ ವತಿಯಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಅವಕಾಶವಿಲ್ಲ. ಇದನ್ನು ಮೀರಿಯೂ ಸ್ಥಳೀಯ ಜನರ ಅನುಕೂಲಕ್ಕಾಗಿ ಹಲವು ಕಾಮಗಾರಿ ಮಾಡಿರುವೆ’ ಎಂದು ಮೊದಲ ಬಾರಿ ಕಾರ್ಪೊರೇಟರ್ ಆಗಿರುವ ವಾರ್ಡ್‌ನ ಸದಸ್ಯ ಪ್ರೇಮಸಿಂಗ್ ಚವ್ಹಾಣ ತಿಳಿಸಿದರು.

‘ವಾರ್ಡ್‌ನ ಬಹುತೇಕ ಬಡಾವಣೆಯ ನಿವಾಸಿಗಳು ಪಾಲಿಕೆಗೆ ಇಂದಿಗೂ ತೆರಿಗೆ ಕಟ್ಟಲ್ಲ. ಆದರೂ ಎಲ್ಲೆಡೆ 42 ಕಿ.ಮೀ. ಯುಜಿಡಿ ಮಾಡಿಸಿರುವೆ. ತಾಂಡಾದಲ್ಲಿ 24X7 ಕುಡಿಯುವ ನೀರಿನ ಯೋಜನೆಯಡಿ 900 ನಳ ಸಂಪರ್ಕ ಮಾಡಿಸಿಕೊಟ್ಟಿರುವೆ.

ನಗರೋತ್ಥಾನ ಯೋಜನೆಯಡಿ ₹ 6 ಕೋಟಿ ಮೊತ್ತದಲ್ಲಿ ಸಿಮೆಂಟ್, ಡಾಂಬರೀಕರಣ ರಸ್ತೆ ಮಾಡಿರುವೆ. 14ನೇ ಹಣಕಾಸು ಯೋಜನೆಯಡಿಯೂ ₹ 1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ₹ 6 ಕೋಟಿ ಮೊತ್ತದ ರಸ್ತೆ, ಎಸ್‌ಸಿಪಿ–ಟಿಎಸ್‌ಪಿ ಯೋಜನೆಯಡಿ ₹ 80 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ.

ಎಸ್‌ಸಿಪಿ–ಟಿಎಸ್‌ಪಿ ಸೇರಿದಂತೆ ಒಟ್ಟು ₹ 25 ಲಕ್ಷ ಮೊತ್ತದ ಬೀದಿ ದೀಪಗಳನ್ನು ಅವಶ್ಯವಿರುವ ಎಲ್ಲೆಡೆ ಅಳವಡಿಸಿದ್ದೇನೆ. ನನ್ನ ಐದು ವರ್ಷದ ಅವಧಿಯಲ್ಲಿ ತೃಪ್ತಿಯಿಂದ ಕಾರ್ಯ ನಿರ್ವಹಿಸಿರುವೆ’ ಎಂದು ಪ್ರೇಮಸಿಂಗ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !