ಮಂಗಳವಾರ, ನವೆಂಬರ್ 12, 2019
28 °C
ಪುರುಷ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ವಾರ್ಡರ್‌ಗಳಾದ 289 ಎಂಜಿನಿಯರಿಂಗ್ ಪದವೀಧರರು..!

Published:
Updated:
Prajavani

ಮೈಸೂರು: ‘ಎಸ್ಸೆಸ್ಸೆಲ್ಸಿ‌ ವಿದ್ಯಾರ್ಹತೆಯ ಕಾರಾಗೃಹ ವಾರ್ಡರ್ ಹುದ್ದೆಗೆ 1,070 ಮಂದಿಯನ್ನು ನೇಮಿಸಿದ್ದು, ಇವರಲ್ಲಿ 289 ಮಂದಿ ಎಂಜಿನಿಯರ್ ಪದವಿ ಪಡೆದವರಿದ್ದಾರೆ’ ಎಂದು ರಾಜ್ಯ ಪೊಲೀಸ್‌ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ತಿಳಿಸಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಗುರುವಾರ ನಡೆದ ಒಂದನೇ ತಂಡದ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಪುರುಷ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಅವರು ಮಾತನಾಡಿದರು.

ಮೈಸೂರಿನಲ್ಲಿ ತರಬೇತಿ ಪಡೆದು ಕರ್ತವ್ಯಕ್ಕೆ ಹಾಜರಾಗುತ್ತಿರುವ 85 ಪ್ರಶಿಕ್ಷಣಾರ್ಥಿಗಳಲ್ಲಿ 11 ಮಂದಿ ಎಂಜಿನಿಯರ್‌ಗಳಿದ್ದರೆ, 9 ಮಂದಿ ಎಂಎ, ಎಂಎಸ್ಸಿ ಮತ್ತು ಎಂಕಾಂ ಸ್ನಾತಕೋತ್ತರ ಪದವೀಧರರಿದ್ದಾರೆ. 51 ಮಂದಿ ಪದವೀಧರರಾಗಿದ್ದು, ಉಳಿದ 14 ಮಂದಿ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ ಎಂದು ಅವರು ಹೇಳಿದರು.

‘ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಮೇಘರಿಕ್‌ ತಿಳಿಸಿದರು.

‘ಕನಿಷ್ಠ ವಿದ್ಯಾರ್ಹತೆಯ ಜೈಲ್ ವಾರ್ಡರ್ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ವ್ಯಾಸಂಗ ಪಡೆದಿರುವರು ಆಯ್ಕೆಯಾಗಿ ತರಬೇತಿ ಪಡೆದಿದ್ದು; ಇವರ ಅಭಿರುಚಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಸಮಾಲೋಚಕ ಎಚ್.ಎಸ್.ರೇವಣ್ಣ ಮಾತನಾಡಿದರು. ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಸ್.ಕೆ.ವಂಟಿಗೋಡಿ, ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್‌ಪಿ ರಿಷ್ಯಂತ್, ಕಾರಾಗೃಹ ಇಲಾಖೆಯ ಅಧಿಕಾರಿಗಳಾದ ಟಿ.ಪಿ.ಶೇಷ, ಆನಂದ ರೆಡ್ಡಿ, ಕೆ.ಪಿ.ದಿವ್ಯಾಶ್ರೀ, ಡಿಸಿಪಿಗಳಾದ ಎಂ.ಮುತ್ತುರಾಜು, ಬಿ.ಟಿ.ಕವಿತಾ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾದ ಚನ್ನಯ್ಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)